ನಿರಂತರ ವರ್ಷಧಾರೆ ಜನಜೀವನ ಅಸ್ತವ್ಯಸ್ತ

7
ಆಲೂರು, ಸಕಲೇಶಪುರ; ಶಾಲಾ, ಕಾಲೇಜಿಗೆ ರಜೆ

ನಿರಂತರ ವರ್ಷಧಾರೆ ಜನಜೀವನ ಅಸ್ತವ್ಯಸ್ತ

Published:
Updated:

ಹಾಸನ: ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಿಗ್ಗೆಯಿಂದ ಕಾರ್ಮೋಡ ಕವಿದಿದ್ದು, ಮಳೆನಾಡು ಭಾಗದಲ್ಲಿ ಜೋರು ಮಳೆಯಿಂದಾಗಿ ಸೋಮವಾರ ಆಲೂರು, ಸಕಲೇಶಪುರ ತಾಲ್ಲೂಕುಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಯಿತು.

ರಸ್ತೆ ಮೇಲೆ ಮರ ಉರುಳಿ ಬಿದ್ದು, ಬೆಳಗೋಡು ಮಾರ್ಗದಿಂದ ಬೇಲೂರಿಗೆ ಹೋಗುವ ರಸ್ತೆ ಸಂಪೂರ್ಣ ಬಂದ್‌ ಆಗಿ, ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಸಕಲೇಶಪುರ ಮತ್ತು ಮೂಡಿಗೆರೆ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹೇಮಾವತಿ ಜಲಾಶಯದ ಒಳ ಹರಿವು  9 ಸಾವಿರ ಕ್ಯುಸೆಕ್‌ ತಲುಪಿದೆ. ಅರಕಲಗೂಡು, ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ಭಾಗದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು.

ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರು ತೊಂದರೆ ಅನುಭವಿಸಿದರು. ಸಮಯಕ್ಕೆ ಸರಿಯಾಗಿ ಶಾಲಾ, ಕಾಲೇಜಿಗೆ ಹೋಗಲು ಆಗದೆ ವಿದ್ಯಾರ್ಥಿಗಳು ಪರದಾಡಿದರು.

ಮಿನಿವಿಧಾನಸೌಧದ ಎದುರಿನ ಬೇಕರಿ ಮಾಲೀಕ ಮಹೇಶ್‌ ಅವರ ಮನೆ ಗೋಡೆ ಕುಸಿದು ಬಿದ್ದಿದ್ದು, ಪ್ರಾಣಾಪಾಯ ಸಂಭವಿಸಿಲ್ಲ. ಹಾಸನ ನಗರ, ಸಾಲಗಾಮೆ, ಶಾಂತಿಗ್ರಾಮ, ಹಳೆಬೀಡು, ದುದ್ದ ಭಾಗದಲ್ಲೂ ಉತ್ತಮ ಮಳೆಯಾಗಿದೆ.

ಸಕಲೇಶಪುರ ಸಮೀಪದ ದೋಣಿಗಾಲ್ ಹಾಗೂ ಯಡಕುಮರಿ ರೈಲು ಮಾರ್ಗದ ಹಳಿ ಮೇಲೆ ಗುಡ್ಡದ ಮಣ್ಣು ಕುಸಿದು ಬಿದ್ದ ಪರಿಣಾಮ ಯಶವಂತಪುರ–ಕಾರವಾರ ಎಕ್ಸ್‌ಪ್ರೆಸ್‌ ರೈಲು ಸಂಚಾರ ಸ್ಥಗಿತಗೊಳಿಸಲಾಯಿತು.

ಬೆಳಿಗ್ಗೆ 7.10ಕ್ಕೆ ಬೆಂಗಳೂರಿನಿಂದ ಹೊರಟ ಕಾರವಾರ ಎಕ್ಸ್ ಪ್ರೆಸ್ 10.30ಕ್ಕೆ ಹಾಸನ ನಿಲ್ದಾಣಕ್ಕೆ ಬಂತು. ಮಣ್ಣು ಕುಸಿದ ವಿಚಾರ ತಿಳಿದಂತೆ ಹಾಸನ ನಿಲ್ದಾಣದಲ್ಲೇ ರೈಲು ನಿಲ್ಲಿಸಿ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಲಾಯಿತು.

ಅಂದಾಜು 700ಕ್ಕೂ ಹೆಚ್ಚು ಪ್ರಯಾ ಣಿಕರನ್ನು 9 ಸಾರಿಗೆ ಬಸ್ ಹಾಗೂ 5 ಟ್ಯಾಕ್ಸಿಗಳಲ್ಲಿ ಕಳುಹಿಸಲಾಯಿತು. ಟಿಕೆಟ್‌ ಪಡೆದಿದ್ದವರಿಗೆ ಹಾಸನ ನಿಲ್ದಾಣದಲ್ಲಿ ಹಣ ಮರುಪಾವತಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry