ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 10 ಸಾವಿರ ಬೀಜದುಂಡೆ ತಯಾರು

ನವೋದಯ ಶಾಲೆಯ ವಿದ್ಯಾರ್ಥಿಗಳ ಶ್ರಮ
Last Updated 12 ಜೂನ್ 2018, 11:58 IST
ಅಕ್ಷರ ಗಾತ್ರ

ಹಾನಗಲ್: ತಾಲ್ಲೂಕಿನ ಮಹಾರಾಜ ಪೇಟೆ ಸಮೀಪದ ಜಿಲ್ಲಾ ಜವಾಹರ ನವೋದಯ ಶಾಲೆಯಲ್ಲಿ ವಿದ್ಯಾರ್ಥಿಗಳು ಬೀಜದುಂಡೆ ತಯಾರಿಕೆಯಲ್ಲಿ ತೊಡಗಿದ್ದು, ಭಾನುವಾರ 10 ಸಾವಿರ ಬೀಜದುಂಡೆ ಸಿದ್ಧಗೊಂಡಿವೆ.

ಶಾಲೆಯ 600 ವಿದ್ಯಾರ್ಥಿಗಳು ಭಾನುವಾರ ಇಡೀ ದಿನ ಶಾಲೆಯ ಆವರಣದಲ್ಲಿ ಬೀಜದುಂಡೆ ತಯಾರಿಕೆಯಲ್ಲಿ ಉತ್ಸಾಹದಿಂದ ತೊಡಗಿಕೊಂಡಿದ್ದರು. ಹಾನಗಲ್‌ ವಲಯ ಅರಣ್ಯ ಇಲಾಖೆ ಪೂರೈಕೆ ಮಾಡಿದ್ದ ಹೊಂಗೆ, ಬೇವು, ನೇರಲೆ ಬೀಜಗಳನ್ನು ಮಣ್ಣಿನ ಉಂಡೆಯಲ್ಲಿ ಸೇರಿಸುವ ಕಾರ್ಯ ಪೂರ್ಣಗೊಳಿಸಿದರು.

ಕಳೆದ ವರ್ಷ ಅರಣ್ಯ ಇಲಾಖೆಯ ಕರೆಯ ಮೇರೆಗೆ ಒಂದು ಲಕ್ಷ ಬೀಜದುಂಡೆ ತಯಾರಿದ್ದ ಜವಾಹರ ನವೋದಯ ಶಾಲೆ ವಿದ್ಯಾರ್ಥಿಗಳು ಈ ಬಾರಿಯೂ ಪರಿಸರ ಸಂರಕ್ಷಣೆಯಲ್ಲಿ ತಮ್ಮ ಸೇವೆ ಮುಂದುವರೆಸಿದ್ದಾರೆ.

ಕಳೆದ ಬಾರಿ ಸಿದ್ಧಗೊಂಡಿದ್ದ 1 ಲಕ್ಷ ಬೀಜದುಂಡೆಗಳನ್ನು ತಾಲ್ಲೂಕಿನ ಅರಣ್ಯ ವ್ಯಾಪ್ತಿಯಲ್ಲಿ ಬಿತ್ತನೆ ಮಾಡಲಾಗಿತ್ತು, ವಿದ್ಯಾರ್ಥಿಗಳಿಂದಲೇ ಬೀಜದುಂಡೆ ಬಿತ್ತನೆ ಮೂಲಕ ಮಕ್ಕಳಿಗೆ ‘ಅರಣ್ಯ ದರ್ಶನ’ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಕೈಗೊಂಡಿತ್ತು.

ಚಾಲನೆ: ಬೀಜದುಂಡೆ ತಯಾರಿಕೆಗೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ.ಎಸ್‌.ಸಿ ಚಾಲನೆ ನೀಡಿ ‘ಪರಿಸರ ಸಂರಕ್ಷಣೆಗಾಗಿ ಗಿಡ, ಮರ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ, ಬೀಜದುಂಡೆ ತಯಾರಿಕೆಯ ಮೂಲಕ ವಿದ್ಯಾರ್ಥಿಗಳು ಉತ್ತಮ ಕಾರ್ಯ ಮಾಡುತ್ತಿದ್ದಾರೆ’ ಎಂದು ಪ್ರಶಂಸಿಸಿದರು.

ಬೀಜದುಂಡೆ ತಯಾರಿಕೆ ಬಗ್ಗೆ ಮಾಹಿತಿ ನೀಡಿದ ವಲಯ ಅರಣ್ಯಾಧಿಕಾರಿ ಶಿವರಾತ್ರೇಶ್ವರಸ್ವಾಮಿ, ‘ಇಲ್ಲಿ ಸಿದ್ಧಗೊಂಡ ಬೀಜದುಂಡೆಗಳನ್ನು ಅರಣ್ಯದಲ್ಲಿನ ನೀರು ಮತ್ತು ಮಣ್ಣು ಸಂರಕ್ಷಣಾ ಗುಂಡಿಗಳ ಬದಿಯಲ್ಲಿ ಬಿತ್ತನೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

ಪ್ರಾಚಾರ್ಯ ಕೆ.ರಾಮಿರೆಡ್ಡಿ ಮಾತನಾಡಿ, ‘ಪ್ರತಿ ವಿದ್ಯಾರ್ಥಿ 25 ಬೀಜದುಂಡೆ ತಯಾರಿಕೆಗೆ ವ್ಯವಸ್ಥೆ ಮಾಡಲಾಗಿದೆ. ನಮಗೆ ಎಲ್ಲವನ್ನೂ ನೀಡುವ ಪರಿಸರವನ್ನು ನಾವು ಉಳಿಸಬೇಕಿದೆ’ ಎಂದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದುದಗಿ, ಶಿಕ್ಷಕರಾದ ಎಂ.ಚೆಲ್ಲಪ್ಪ, ಸಿ.ಜಿ.ಚಲ್ಲಾಳ, ಮಾಯಾ ಹೆಗಡೆ, ಸಲ್ಮಾ, ಸರಿತಾ, ವಿಜಯಲಕ್ಷ್ಮೀ, ಸಾಬು ಜೋಷ್‌, ರವೀದ್ರ ಗೋಟಿ, ಗಣಪತಿ ಭಟ್‌ ಮಾರ್ಗದರ್ಶನ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT