7
ಸ್ಥಳೀಯ ಸಂಸ್ಥೆಗಳ ಚುನಾವಣೆ: ಚುನಾವಣಾ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ವಾರ್ಡ್‌ವಾರು ಮೀಸಲಾತಿ ಬದಲಿಸಲು ಆಗ್ರಹ

Published:
Updated:

ಕಾರವಾರ:  ನಗರಸಭೆಯ ಚುನಾವಣೆಗೆ ವಾರ್ಡ್‌ವಾರು ಮೀಸಲಾತಿಗೆ ಕರಡು ಅಧಿಸೂಚನೆ ಪ್ರಕಟವಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿ ಕಚೇರಿಗೆ ಆಕ್ಷೇಪಣೆಗಳು ಸಲ್ಲಿಕೆಯಾಗುತ್ತಿವೆ. ನಗರದ ಏಳನೇ ವಾರ್ಡ್ ಮತ್ತು 24ನೇ ವಾರ್ಡ್‌ನ ಮೀಸಲಾತಿಯನ್ನು ಬದಲಾಯಿಸಬೇಕು ಎಂದು ಸ್ಥಳೀಯ ಮುಖಂಡರು ಮತ್ತು ಬೆಂಬಲಿಗರು ಒತ್ತಾಯಿಸಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ಅವರಿಗೆ ಸೋಮವಾರ ಆಕ್ಷೇಪಣೆ ಸಲ್ಲಿಸಿ ನಗರಸಭೆ ಸದಸ್ಯ ದೇವಿದಾಸ ನಾಯ್ಕ ಮಾತನಾಡಿದರು.

‘ಏಳನೇ ವಾರ್ಡ್‌ನಲ್ಲಿ 15 ವರ್ಷಗಳಿಂದ ಸಾಮಾನ್ಯ ಸ್ಥಾನ ಎಂದು ನಿಗದಿಯಾಗಿತ್ತು. ಆದರೆ, ಕರಡು ಅಧಿಸೂಚನೆಯಲ್ಲ ಹಿಂದುಳಿದ ವರ್ಗ ‘ಬಿ’ ಎಂದು ನಿಗದಿಪಡಿಸಲಾಗಿದೆ. ಇದು ಸರಿಯಲ್ಲ. ಈ ವಾರ್ಡ್‌ನಲ್ಲಿ ಹಿಂದುಳಿದ ವರ್ಗ ‘ಎ’ಯನ್ನು ಕೈಬಿಟ್ಟು ಅಧಿಸೂಚನೆ ಪ್ರಕಟಿಸಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಒಂದುವೇಳೆ ಬದಲಾಯಿಸದಿದ್ದರೆ ಕಾನೂನು ಹೋರಾಟದ ಬಗ್ಗೆ ಚಿಂತಿಸಲಾಗುವುದು’ ಎಂದು ಹೇಳಿದರು.

‘ಚುನಾವಣಾ ಆಯೋಗದ ನಿರ್ಧಾರಕ್ಕೆ ಕಾನೂನಿನ ಮಾನ್ಯತೆ ದೊರೆಯಲಾರದು. 2002ರಿಂದಲೂ ಈ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಯಾವತ್ತೂ ಹಿಂದುಳಿದ ವರ್ಗ ‘ಎ’ಗೆ ಮೀಸಲಾತಿ ನೀಡಿಲ್ಲ. ನಗರಸಭೆಯ 31 ವಾರ್ಡ್‌ಗಳ ಪೈಕಿ 10ರಲ್ಲಿ ಹಿಂದುಳಿದ ವರ್ಗ ‘ಬಿ’ ಸಮುದಾಯಗಳ ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಆದರೆ, ಮೀಸಲಾತಿ ಬದಲಾಯಿಸಲಾಗಿರುವ ವಾರ್ಡ್ ಸಂಖ್ಯೆ ಏಳರಲ್ಲಿ ಈ ಸಮುದಾಯದ ಜನರಿಲ್ಲ. 24ನೇ ವಾರ್ಡ್‌ನಲ್ಲಿ ಹಿಂದುಳಿದ ವರ್ಗ ‘ಬಿ’ ಸಮುದಾಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಲ್ಲಿಗೆ ಮೀಸಲಾತಿ ನೀಡಬೇಕು. ಏಳನೇ ವಾರ್ಡ್‌ಗೆ ಬದಲಾಯಿಸಬೇಕು’ ಎಂದು ಅವರು ಆಗ್ರಹಿಸಿದರು.

ಇದೇವೇಳೆ, 24ನೇ ವಾರ್ಡ್‌ನ ಸದಸ್ಯ ನಂದಾ ಸಾವಂತ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಎರಡೂ ವಾರ್ಡ್‌ಗಳ ಸ್ಥಳೀಯರೂ ಈ ಸಂದರ್ಭದಲ್ಲಿ ಹಾಜರಿದ್ದರು.

ಆಕ್ಷೇಪಣೆ ಸಲ್ಲಿಸಲು 15 ಕೊನೇ ದಿನ

ಉತ್ತರ ಕನ್ನಡ ಜಿಲ್ಲೆಯ 11 ಸ್ಥಳೀಯ ಸಂಸ್ಥೆಗಳ ಪೈಕಿಎಂಟಕ್ಕೆ ಚುನಾವಣೆ ನಡೆಯಲಿದೆ. ಕಾರವಾರ, ಶಿರಸಿ ಮತ್ತು ದಾಂಡೇಲಿ ನಗರಸಭೆಗಳಿಗೆ, ಹಳಿಯಾಳ, ಕುಮಟಾ ಮತ್ತು ಅಂಕೋಲಾ ಪುರಸಭೆಗಳಿಗೆ, ಯಲ್ಲಾಪುರ ಹಾಗೂ ಮುಂಡಗೋಡ ಪಟ್ಟಣ ಪಂಚಾಯ್ತಿಗಳಿಗೆ ಮೀಸಲಾತಿ ನಿಗದಿ ಮಾಡಲಾಗಿದೆ.

ಈ ನಿಟ್ಟಿನಲ್ಲಿ ಜೂನ್ 8ರಂದು ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಜೂನ್ 15ರ ಒಳಗಾಗಿ ಸ್ಥಳೀಯ ಸಂಸ್ಥೆಗಳಲ್ಲೇ ಸಲ್ಲಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ತಿಳಿಸಿದ್ದಾರೆ.

ಕಾರವಾರ ನಗರಸಭೆಯ ಎಲ್ಲ 31 ವಾರ್ಡ್‌ಗಳನ್ನು ಈಗಾಗಲೇ ಮರು ವಿಂಗಡನೆ ಮಾಡಲಾಗಿದೆ. ಮೀಸಲಾತಿಗೆ ಸಂಬಂಧಿಸಿ ಪ್ರಕಟಿಸಿರುವ ಕರಡು ಅಧಿಸೂಚನೆಯ ಮಾಹಿತಿ ಇಂತಿದೆ.

1, 8, 11, 15, 16, 22, 23, 26, 30ನೇ ವಾರ್ಡ್‌ಗಳಿಗೆ (ಒಟ್ಟು 9) ಸಾಮಾನ್ಯ ವರ್ಗದವರು ಸ್ಪರ್ಧಿಸಬಹುದು. 4, 5, 13, 21, 25, 27, 28, 29, 31 (9 ವಾರ್ಡ್‌ಗಳು) ಸಾಮಾನ್ಯ ಮಹಿಳೆಗೆ ಮೀಸಲಾಗಿವೆ. 6, 12, 17 ಮತ್ತು 24ನೇ ವಾರ್ಡ್‌ಗಳು ಹಿಂದುಳಿದ ವರ್ಗಕ್ಕೆ (ಎ) ಮೀಸಲಾಗಿವೆ. 2, 9, 14, 20ನೇ ವಾರ್ಡ್‌ಗಳಲ್ಲಿ ಹಿಂದುಳಿದ ವರ್ಗ (ಎ) ಸಮುದಾಯಗಳ ಮಹಿಳೆಯರು ಕಣಕ್ಕಿಳಿಯಬಹುದು.

ಮೂರನೇ ವಾರ್ಡ್ ಹಿಂದುಳಿದ ವರ್ಗ (ಬಿ) ಮಹಿಳೆಗೆ, ಏಳನೇ ವಾರ್ಡ್ ಹಿಂದುಳಿದ ವರ್ಗಕ್ಕೆ (ಬಿ), 19ನೇ ವಾರ್ಡ್ ಪರಿಶಿಷ್ಟ ಪಂಗಡಕ್ಕೆ, 10ನೇ ವಾರ್ಡ್ ಪರಿಶಿಷ್ಟ ಜಾತಿಗೆ, 18ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry