ಪೌರಕಾರ್ಮಿಕರ ಮೇಲೆ ದಿಢೀರ್‌ ಕಾಳಜಿ

7
ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರು ಜಿಲ್ಲೆಗೆ ಇಂದು

ಪೌರಕಾರ್ಮಿಕರ ಮೇಲೆ ದಿಢೀರ್‌ ಕಾಳಜಿ

Published:
Updated:

ಕೊಪ್ಪಳ:  ಪೌರಕಾರ್ಮಿಕರ ಬಗ್ಗೆ ನಗರಸಭೆಗೆ ದಿಢೀರ್‌ ಕಾಳಜಿ ಬಂದಿದೆ. ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರು ಜಿಲ್ಲೆಗೆ ಬರುತ್ತಿರುವುದರಿಂದ ಪೌರಕಾರ್ಮಿಕರಿಗೆ ರಕ್ಷಣಾ ಕವಚ ಹಾಗೂ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

2–3 ದಿನಗಳ ಹಿಂದೆ ಬಟ್ಟೆ, ಕೈ ಗವಸು, ಶೂ, ಜಾಕೆಟ್‌, ಜರ್ಕಿನ್‌, ತಲೆ ಗವಸು ಸೇರಿದ ಕಿಟ್‌ಗಳನ್ನು ಪೌರ ಕಾರ್ಮಿಕರಿಗೆ ನೀಡಲಾಗಿದೆ. ಜೂನ್‌ 11ರಂದು ಚುಚ್ಚುಮದ್ದು, ಲಸಿಕೆ ಹಾಕಿ, ಆರೋಗ್ಯ ತಪಾಸಣೆ ಮಾಡಲಾಗಿದೆ.

ದಿನನಿತ್ಯ ಬಳಕೆ ಇಲ್ಲ: ಪೌರಕಾರ್ಮಿಕರಿಗೆ ನೀಡಲಾದ ಕಿಟ್‌ ಅನ್ನು ಪ್ರತಿದಿನ ಬಳಕೆ ಮಾಡುವುದಿಲ್ಲ. ಸಫಾಯಿ ಕರ್ಮಚಾರಿಗಳ ಆಯೋಗ ಜಿಲ್ಲೆಗೆ ಬರುತ್ತದೆ ಎನ್ನುವ ಕಾರಣಕ್ಕೆ ಅವುಗಳನ್ನು ಬಳಕೆ ಮಾಡುತ್ತಿದ್ದಾರೆ. ಆಯೋಗ ಬಂದು ಹೋದ ಮೇಲೆ ಪೌರಕಾರ್ಮಿಕರು ಇವುಗಳನ್ನು ಬಳಕೆ ಮಾಡುವುದಿಲ್ಲ. ಈ ಕುರಿತು ಕಟ್ಟುನಿಟ್ಟಾಗಿ ನಗರಸಭೆ ಆದೇಶ ಸಹ ಹೊರಡಿಸುವುದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ನಾಗರಾಜ್.

ದಿಢೀರ್‌ ಕಾಳಜಿಗೆ ಕಾರಣ: ಸಫಾಯಿ ಕರ್ಮಚಾರಿಗಳಿಗೆ ಯಾವುದೇ ಕಾಯಿಲೆಗಳು ಬಾರದಂತೆ ತಡೆಗಟ್ಟಲು ಸರ್ಕಾರ  ರಕ್ಷಣಾ ಕಚವದ ಕಿಟ್‌ ನೀಡುತ್ತದೆ. ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಯಾವುದೇ ರೀತಿಯ ಕಾಯಿಲೆಗಳು ಬಾರದಂತೆ ವಿಶೇಷವಾದ ವೈದ್ಯಕೀಯ ಚಿಕಿತ್ಸೆ ಸೇವೆ ನೀಡಲಾಗುತ್ತದೆ.

ಆದರೆ, ಇವುಗಳನ್ನು ಸರಿಯಾದ ಸಮಯಕ್ಕೆ ನೀಡಬೇಕು. ಆರೋಗ್ಯ ತಪಾಸಣೆ ಮಾಡಬೇಕು. ಆದರೆ ಜೂನ್‌ 12ರಂದು ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರು ಜಿಲ್ಲೆಗೆ ಬರುತ್ತಿದ್ದಾರೆ ಎನ್ನುವ ಕಾರಣಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪೌರಕಾರ್ಮಿಕರ ಮೇಲೆ ದಿಢೀರ್‌ ಕಾಳಜಿ ಬಂದಿದೆ ಎನ್ನುತ್ತಾರೆ ಇಲ್ಲಿನ ನಾಗರಿಕರು.

ಈ ಕುರಿತು ನಗರಸಭೆ ಪೌರಾಯುಕ್ತ ಸುನೀಲ ಪಾಟೀಲ ಅವರನ್ನು ಸಂಪರ್ಕಿಸಿದಾಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಕಿಟ್‌ಗಳನ್ನು ವಿತರಿಸಲಾಗಿರಲಿಲ್ಲ. ಎರಡು ತಿಂಗಳ ಹಿಂದೆಯೇ ಎಲ್ಲ ಸಾಮಗ್ರಿಗಳನ್ನು ಖರೀದಿಸಲಾಗಿತ್ತು ಎಂದು ಸಮಜಾಯಿಷಿ ನೀಡಿದರು.

ಸಮಸ್ಯೆಗಳೇನು?

ಜಿಲ್ಲೆಯ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳಲ್ಲಿ ಕೊಪ್ಪಳ, ಕುಕನೂರು, ಕಾರಟಗಿ, ಕನಕಗಿರಿ, ತಾವರಗೇರಾ ಸೇರಿದಂತೆ 9 ನಗರ ಸ್ಥಳೀಯ ಸಂಸ್ಥೆಗಳು ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ. ಈ ಎಲ್ಲ ಕಡೆಗಳಲ್ಲಿ ಬಹುತೇಕ ಪೌರಕಾರ್ಮಿಕ ಸಿಬ್ಬಂದಿಗೆ ಸಂಬಳ ಸಮಸ್ಯೆ ಇದೆ.

ಇದರಲ್ಲಿ ಕುಕನೂರಿನ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರಿಗೆ ಹಾಗೂ ಕೊಪ್ಪಳ ನಗರಸಭೆಯ 25 ಜನ ನೀರು ಸರಬರಾಜು ಸಿಬ್ಬಂದಿಗೆ 7ರಿಂದ 8 ತಿಂಗಳಿನಿಂದ ಸಂಬಳ ಆಗಿಲ್ಲ. ಇದರಿಂದ ತುಂಬಾ ತೊಂದರೆ ಆಗಿದೆ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಲಾಲ್‌ಸಾಬ್‌ ಮನಿಯಾರ ತಿಳಿಸಿದರು.

ಜನವರಿ 21ರಿಂದ 26 ರವರೆಗೆ ಸತತ ಒಂದು ವಾರ ವಿವಿಧ ರೀತಿಯ ಪ್ರತಿಭಟನೆ ನಡೆಸಿದ್ದೇವೆ. ಕಳೆದ 2–3 ದಿನಗಳ ಹಿಂದೆ ಕಿಟ್‌ ವಿತರಿಸಿದ್ದಾರೆ ‌– ಲಾಲ್‌ಸಾಬ್‌ ಮನಿಯಾರ್‌, ಅಧ್ಯಕ್ಷ , ಪೌರ ಸೇವಾ ನೌಕರರ ಸಂಘ

      

ಅನಿಲ್ ಬಾಚನಹಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry