ತಂತ್ರಜ್ಞಾನ ಬಳಕೆ: ರೈತರಿಗೆ ತರಬೇತಿ ನೀಡಿ

7
ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆ: ಸಂಸದ ಸೂಚನೆ

ತಂತ್ರಜ್ಞಾನ ಬಳಕೆ: ರೈತರಿಗೆ ತರಬೇತಿ ನೀಡಿ

Published:
Updated:

ಕೊಪ್ಪಳ: ತೋಟಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು, ರೈತರು ಆರ್ಥಿಕ ಲಾಭ ಪಡೆಯುವಂತಾಗಲು ರೈತರಿಗೆ ತರಬೇತಿ ನೀಡುವ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು ಎಂದು ಸಂಸದ ಕರಡಿ ಸಂಗಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೃಷಿ ಇಲಾಖೆ ಸಭಾ ಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಹೊಸ ತೋಟಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಅಲ್ಪಸಂಖ್ಯಾತ 50 ಫಲಾನುಭವಿಗಳಿಗೆ ಆರ್ಥಿಕ ಸೌಲಭ್ಯ ಒದಗಿಸಲಾಗಿದೆ. ಸಮಗ್ರ ಪೋಷಕಾಂಶ/ ಕೀಟ ನಿರ್ವಹಣೆಗೆ ಪ್ರೋತ್ಸಾಹ ನೀಡುವ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯದ 17 ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ರಚಿಸಲಾಗಿರುವ ಜೇನು ಬೆಳೆಗಾರರ ಸಂಘಗಳ ಸದಸ್ಯರುಗಳಿಗೆ ಹೆಚ್ಚಿನ ತರಬೇತಿ ಅಗತ್ಯವಿದೆ. ಜಿಲ್ಲೆಯಲ್ಲಿ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರಿಗೂ ಬೆಳೆಗಳ ಮೌಲ್ಯವರ್ಧನೆ ಕುರಿತು ಹೆಚ್ಚಿನ ತರಬೇತಿಯ ಅಗತ್ಯವಿದೆ. ರೈತರು ದ್ರಾಕ್ಷಿ ಸಂಸ್ಕರಣೆ ಮಾಡಲು ಮುಂದಾಗಬೇಕು. ಒಣ ದ್ರಾಕ್ಷಿ ಘಟಕ ಕೈಗೊಂಡಲ್ಲಿ ಒಳ್ಳೆಯ ಲಾಭ ದೊರೆಯುತ್ತದೆ. ಒಳ್ಳೆಯ ತಂತ್ರಜ್ಞಾನ ಬಳಸಿದಲ್ಲಿ ಒಣದ್ರಾಕ್ಷಿ ಗುಣಮಟ್ಟದ್ದಾಗಲಿದ್ದು, ಒಳ್ಳೆಯ ದರ ಮತ್ತು ಆರ್ಥಿಕ ಲಾಭ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.

ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ಸಭೆಗೆ ಮಾಹಿತಿ ನೀಡಿ, ಜೇನು ಕೃಷಿ ಮತ್ತು ಮಧುವನ ನಿರ್ಮಾಣಕ್ಕೂ ಉತ್ತೇಜನ ನೀಡಲಾಗುತ್ತಿದೆ. ಜೇನು ಬೆಳೆಗಾರರ ಸಂಘವನ್ನು ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ರಚಿಸಲಾಗಿದೆ. ಶುದ್ಧ ಜೇನುತುಪ್ಪಕ್ಕೆ ಸುಮಾರು ₹ 500 ಗಳಿಂದ ₹ 1000 ವರೆಗೂ ಲಭ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಜಾನುವಾರು ಸ್ಥಿತಿ ವರದಿ ನೀಡಿ: ಜಿಲ್ಲೆಯಲ್ಲಿ ಪಶುಸಂಗೋಪನೆ ಇಲಾಖೆ ವತಿಯಿಂದ ಹೈನುಗಾರಿಕೆ ಮತ್ತು ಕುರಿ, ಕೋಳಿ, ಮೇಕೆ ಸಾಕಾಣಿಕೆ ಕುರಿತಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪಶುಭಾಗ್ಯ, ಅಮೃತ ಯೋಜನೆ, ಕೋಳಿ ಸಾಕಾಣಿಕೆ ಯೋಜನೆಗಳಡಿ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುತ್ತಿದೆ. ಆದರೆ, ಇಂತಹ ಯೋಜನೆಗಳನ್ನು ಪಡೆದುಕೊಂಡ ಬಳಿಕ, ಜಿಲ್ಲೆಯಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಆಗಿರುವ ಸುಧಾರಣೆ, ಮಹಿಳಾ ರೈತರ ಆರ್ಥಿಕ ಸ್ಥಿತಿಗತಿಯ ಸುಧಾರಣೆ, ಜಾನುವಾರುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆಯೇ ಎನ್ನುವುದರ ಬಗ್ಗೆ ವರದಿ ನೀಡಿ ಎಂದು ಸಂಸದರು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ  ಪಶುಸಂಗೋಪನೆ ಇಲಾಖೆ ಅಧಿಕಾರಿ ಡಾ.ಸಾಲಿ, ಜಿಲ್ಲೆಯಲ್ಲಿ ಕಳೆದ ವರ್ಷ ಕೈಗೊಂಡ ಜಾನುವಾರು ಗಣತಿಯಲ್ಲಿ ಸುಮಾರು 2. 75 ಲಕ್ಷ ಜಾನುವಾರು ಹಾಗೂ 12 ಲಕ್ಷ ಕೋಳಿ ಇರುವ ಬಗ್ಗೆ ಸಮೀಕ್ಷೆ ಕೈಗೊಳ್ಳಲಾಗಿತ್ತು. ಈ ವರ್ಷದ ಜಾನುವಾರು ಗಣತಿ ಜುಲೈ ತಿಂಗಳಿನಲ್ಲಿ ಕೈಗೊಳ್ಳಲಾಗುತ್ತಿದ್ದು, ಸಮೀಕ್ಷೆ ಬಳಿಕ ವರದಿ ಸಲ್ಲಿಸಲಾಗುವುದು ಎಂದರು.

ವಿವಿಧ ಇಲಾಖೆಗಳಡಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಒದಗಿಸಲಾಗಿರುವ ಸೌಲಭ್ಯಗಳ ಕುರಿತು ಇದೇ ಸಂದರ್ಭದಲ್ಲಿ ಸಂಸದರು ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ, ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಸಿರಾಜ್ ಕರಮುಡಿ, ಮಹಮ್ಮದ್ ಸಿರಾಜ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೆಹಮೂದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕರಡಿ ಸಂಗಣ್ಣ ಅಸಮಾಧಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ 2017-18 ನೇ ಸಾಲಿನಲ್ಲಿ ನೀಡುವ ಸಾಲ ಯೋಜನೆಗಳಡಿ ಜಿಲ್ಲೆಯಲ್ಲಿ ಇದುವರೆಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳದಿ ರುವುದಕ್ಕೆ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ ಅಲ್ಪಸಂಖ್ಯಾತರರಿಗೆ ಕಳೆದ ವರ್ಷ 02 ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂಬುದಾಗಿ ಜೆಸ್ಕಾಂ ಅಧಿಕಾರಿಗಳು ನೀಡಿದ ವರದಿಗೆ ಕೋಪಗೊಂಡ ಸಂಸದರು, 271 ಫಲಾನುಭವಿ ಗಳಿಗೆ ಶೇ 15ರಂತೆ ಅಲ್ಪ ಸಂಖ್ಯಾತ ಸಮುದಾಯದ ಒಟ್ಟು 40 ಫಲಾನುಭವಿಗಳ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿತ್ತು. ಫಲಾನು ಭವಿಗಳಿಗೆ ಕೊಳವೆ ಬಾವಿ ಕೊರೆಯಿಸಿಲ್ಲ. ಈ ಕೆಲಸ ಯಾವಾಗ ಮಾಡುತ್ತೀರಿ ಎಂದು ಜೆಸ್ಕಾಂ ಮತ್ತು ನಿಗಮಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತೋಟಗಾರಿಕೆ ಇಲಾಖೆಯು ಬೆಳೆಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ, , ಮಾರುಕಟ್ಟೆ ವ್ಯವಸ್ಥೆ ಕುರಿತಂತೆ ರೈತರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು

  – ಕರಡಿ ಸಂಗಣ್ಣ, ಸಂಸದ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry