ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ

ಭಾಗ್ಯ ನಗರ ಪಟ್ಟಣ ಪಂಚಾಯಿತಿ ಅಧಿಕಾರ ಸೂತ್ರ ಹಂಚಿಕೆಗೆ ವಿರೋಧ
Last Updated 12 ಜೂನ್ 2018, 12:22 IST
ಅಕ್ಷರ ಗಾತ್ರ

ಕೊಪ್ಪಳ: ಭಾಗ್ಯ ನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದಿದ್ದು, ಅಧಿಕಾರ ಹಂಚಿಕೆ ಸೂತ್ರದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ನಿರಾಕರಿಸಿದ್ದು, ಸದಸ್ಯರಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಪಟ್ಟಣ ಪಂಚಾಯಿತಿ ಅಧಿಕಾರ ಬಿಜೆಪಿ ತೆಕ್ಕೆಯಲ್ಲಿದ್ದು, ಅಧ್ಯಕ್ಷ ಸ್ಥಾನ ಎಸ್.ಸಿ.ಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 10 ತಿಂಗಳು ಎಂದು ಅಧಿಕಾರ ಹಂಚಿಕೊಳ್ಳಲಾಗಿತ್ತು. ಎಸ್.ಸಿ ಮೀಸಲು ಕೋಟಾದಲ್ಲಿ ಮೂವರು ಸದಸ್ಯರು ಇದ್ದು, ಹಂಚಿಕೆ ಸೂತ್ರದಡಿ ಈಗ ಒಬ್ಬರು ಕಾರ್ಯ ನಿರ್ವಹಿಸಿ, ಇನ್ನೊಬ್ಬರಿಗೆ ಅವಕಾಶ ನೀಡಿದ್ದಾರೆ. ಹಾಲಿ ಅಧ್ಯಕ್ಷೆ ದೇವವ್ವ ಮಾಲಗತ್ತಿ ಹಾಗೂ ಉಪಾಧ್ಯಕ್ಷೆ ಕವಿತಾ ಚಳಮರದ ಅವರ ಅಧಿಕಾರ ಅವಧಿ 10 ತಿಂಗಳು ಕೊನೆಗೊಂಡಿದ್ದು, ಅವರಿಗೆ ರಾಜೀನಾಮೆ ನೀಡುವಂತೆ ಸದಸ್ಯರು ಒತ್ತಡ ಹಾಕಿದ್ದಾರೆ.

ಆದರೆ, ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದು, ಇದರಿಂದ ಪಕ್ಷದಲ್ಲಿ ಭಿನ್ನಮತ ಉಂಟಾಗಿದೆ. ಸಂಸದ ಸಂಗಣ್ಣ ಕರಡಿ ಇಬ್ಬರನ್ನು ಭೇಟಿ ಮಾಡಿ 'ಅಧಿಕಾರ ಹಂಚಿಕೆ ಸೂತ್ರ ಪಾಲಿಸುವಂತೆ ಮತ್ತು ಪಟ್ಟಣದ ಅಭಿವೃದ್ಧಿಗೆ ಸಹಕರಿಸುವಂತೆ' ಖುದ್ದು ಮನವಿ ಮಾಡಿದರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡದೇ ಇರುವುದು ಸದಸ್ಯರನ್ನು ಕೆರಳಿಸಿದೆ.

ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿಯ 11 ಸದಸ್ಯರು, ಕಾಂಗ್ರೆಸ್‌ನ 8 ಸದಸ್ಯರು ಇದ್ದಾರೆ. ಅವಿಶ್ವಾಸ ನಿರ್ಣಯ ಮಂಡಿಸಲು ಸಭೆ ಕರೆಯುವಂತೆ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದ್ದು, ಏಳು ದಿನದ ಒಳಗೆ ಸಭೆ ಕರೆಯಬೇಕು, ಇಲ್ಲದಿದ್ದರೆ ಉಪಾಧ್ಯಕ್ಷರು ಸಭೆ ಕರೆಯಬೇಕು, ಇಬ್ಬರು ಈ ಕೆಲಸ ಮಾಡದಿದ್ದರೆ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಭೆ ಕರೆಯುವಂತೆ ಆಗ್ರಹಿಸಲಾಗುವುದು ಎಂದು ಬಿಜೆಪಿಯ ನಾಮನಿರ್ದೇಶನ ಸದಸ್ಯ ಗಿರೀಶ ಪಾನಗಟ್ಟಿ ತಿಳಿಸಿದರು.

‘ಹಲವಾರು ತಿಂಗಳಿನಿಂದ ಸದಸ್ಯ ರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದ ರಿಂದ ನಗರದ ಅಭಿವೃದ್ಧಿ ಕಾರ್ಯ ನನೆಗುದಿಗೆ ಬಿದ್ದಿವೆ' ಎನ್ನುತ್ತಾರೆ ಸದಸ್ಯ ವಿಜಯಕುಮಾರ ಪಾಟೀಲ.

ಕಾಣದ ಅಭಿವೃದ್ಧಿ

ಕೊಪ್ಪಳ ಜಿಲ್ಲೆಯಲ್ಲಿಯೇ ದೊಡ್ಡ ಪಟ್ಟಣ ಭಾಗ್ಯನಗರ, ನೇಕಾರಿಕೆ ಹಾಗೂ ಕೂದಲು ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಮೂಲ ಸೌಕರ್ಯಗಳ ಕೊರತೆ ಇದೆ. ಚರಂಡಿ ನಿರ್ಮಾಣ, ಸ್ವಚ್ಛತೆ ನಿರೀಕ್ಷಿತ ಪ್ರಮಾಣದಲ್ಲಿ ಕಾಮಗಾರಿ ನಡೆಯುತ್ತಿಲ್ಲ.

ಕಳೆದ ಬಾರಿ ನಗರೋತ್ಥಾನ ಯೋಜನೆ ಅಡಿ ₹ 5 ಕೋಟಿಯನ್ನು ಭಾಗ್ಯನಗರ ಪಟ್ಟಣ ಪಂಚಾಯಿತಿಗೆ ತರಲಾಗಿದೆ. ಅಲ್ಲದೆ ಶಾಸಕರ, ಪಟ್ಟಣ ಪಂಚಾಯ್ತಿ ನಿಧಿಯನ್ನು ಬಳಸಿಕೊಂಡು ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಅಧ್ಯಕ್ಷರ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ ಎಂದು ಪಕ್ಷದ ಮುಖಂಡ ಕೃಷ್ಣ ಮೇಗಳಮನಿ ಅಸಮಾಧಾನ ವ್ಯಕ್ತಪಡಿಸಿದರು. ಕೊಪ್ಪಳಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮೇಲ್ಸೇತುವೆ ನಿರ್ಮಾಣ ಕೊನೆಯ ಹಂತದಲ್ಲಿದ್ದು, ಈ ಸೇತುವೆ ಶೀಘ್ರ ಉದ್ಘಾಟನೆಯಾದರೆ ಹೆಚ್ಚಿನ ಅನುಕೂಲ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT