ಫೇಸ್‌ಬುಕ್ ಬಿಡಿ ಸಂಗಾತಿ ಮುಖ ನೋಡಿ

7

ಫೇಸ್‌ಬುಕ್ ಬಿಡಿ ಸಂಗಾತಿ ಮುಖ ನೋಡಿ

Published:
Updated:
ಫೇಸ್‌ಬುಕ್ ಬಿಡಿ ಸಂಗಾತಿ ಮುಖ ನೋಡಿ

‘ಬೆಳಿಗ್ಗೆ ಎದ್ದಾಗಿನಿಂದಲೂ ರಾತ್ರಿ ತನಕ ಬರೀ ಮೊಬೈಲ್‌ನಲ್ಲೇ ಇರ್ತೀಯಾ. ಊಟ–ತಿಂಡಿ ತಿನ್ನುವಾಗ್ಲೂ ಫೇಸ್‌ಬುಕ್ ನೋಡ್ತೀಯಾ. ಕನಿಷ್ಠ ಮನೆಗೆ ಬಂದ್ಮೇಲಾದ್ರೂ ಹೆಂಡ್ತಿ–ಮಕ್ಕಳ ಜತೆ ನಾಲ್ಕು ಮಾತು ಆಡಬಾರ್ದಾ?’...

–ಇದು ಯಾವುದೇ ಧಾರಾವಾಹಿ, ಸಿನಿಮಾದ ಸಂಭಾಷಣೆಯಲ್ಲ. ನಿತ್ಯವೂ ದಂಪತಿಗಳ ನಡುವೆ ನಡೆಯುwವ ಸಾಮಾನ್ಯ ಸಂಭಾಷಣೆ. ಬೆಳಿಗ್ಗೆ ಹೊರಟು ಸಂಜೆ ಸುಸ್ತಾಗಿ ಬರುವ ದಂಪತಿ, ರೀಲ್ಯಾಕ್ಸ್‌ಗಾಗಿ ಮೊರೆ ಹೋಗುವುದು ಮೊಬೈಲ್‌ಗೆ!. ಹತ್ತಿರವಿದ್ದರೂ ಪರಸ್ಪರರ ಮನಸನ್ನು ಅರಿಯಲಾಗದೇ ಅಂದಿನ ದಿನ ಮುಗಿದರೆ ಸಾಕಪ್ಪಾ ಎನ್ನುತ್ತಾ ಮೊಬೈಲ್ ಜತೆ ಏಕಾಂತಕ್ಕೆ ಮೊರೆ ಹೋಗುವವರ ಸಂಖ್ಯೆಯೇ ಹೆಚ್ಚು!

ಉದ್ಯೋಗ, ಕುಟುಂಬ, ವೈಯಕ್ತಿಕ ವಿಷಯಗಳ ಕುರಿತು ಮುಕ್ತ ವಾಗಿ ಕುಳಿತು ಚರ್ಚಿಸಲಾಗದಷ್ಟು ಜಾಗವನ್ನು ಮೊಬೈಲ್ ಫೋನ್ ಆಕ್ರಮಿಸಿಬಿಟ್ಟಿದೆ. ಎಷ್ಟೋ ಬಾರಿ ಗಂಡ, ಹೆಂಡತಿ ಆನ್‌ಲೈನ್‌ನಲ್ಲೇ ಮಾತಾಡಿಕೊಳ್ಳುವಂತಾಗಿದೆ. ಕೆಲವರು ತಮ್ಮ ಭಾವನೆಗಳನ್ನು ಸಂಗಾತಿಗಳ ಜತೆಗೆ ಹಂಚಿಕೊಳ್ಳುವ ಬದಲು ಸಾಮಾಜಿಕ ಮಾಧ್ಯಮಗಳಲ್ಲೇ ಹಂಚಿಕೊಳ್ಳುತ್ತಾರೆ. ಇದರಿಂದ ಸಂಗಾತಿಗಳಲ್ಲಿ ಪರಸ್ಪರ ಗೌರವ, ನಂಬಿಕೆ ಕಡಿಮೆಯಾಗುತ್ತಿದೆ. ಮೊಬೈಲ್ ಮೂಲಕ ಅಂತರ್ಜಾಲದ ಜಾಲದೊಳಗೆ ಬಂಧಿಯಾಗಿರುವ ಜೋಡಿಗಳ ದಾಂಪತ್ಯದಲ್ಲಿ ಬಿರುಕು ಮೂಡಲು ಮೂರನೇ ವ್ಯಕ್ತಿಯೇ ಬೇಕಿಲ್ಲ. ಸ್ಮಾರ್ಟ್‌ ಫೋನ್ ಇದ್ದರೆ ಸಾಕು. ‘ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ’ ಅನ್ನುವ ಗಾದೆ ಮಾತನ್ನೇ ಸುಳ್ಳು ಮಾಡಿರುವ ಅಂತರ್ಜಾಲ ಈಗ ಗಂಡ- ಹೆಂಡತಿಯ ಜಗಳ ಮಲಗಿದ ನಂತರವೂ ಎಂಬಂತಾಗಿದೆ... ಅನ್ನುತ್ತಾರೆ ಮನೋವೈದ್ಯರು.

‘ಫೇಸ್‌ಬುಕ್ ವಿಚಾರವಾಗಿ ಜಗಳವಾಡಿದ ದಂಪತಿ ಆತ್ಮಹತ್ಯೆಗೆ ಮೊರೆ ಹೊಕ್ಕ ಸುದ್ದಿ ಇದಕ್ಕೆ ತಾಜಾ ಉದಾಹರಣೆ (ಇನ್ನಿತರ ಕಾರಣಗಳೂ ಇರಬಹುದು). ಪರಸ್ಪರ ಅರ್ಥೈಸುವಿಕೆ, ಸಹಾಯ, ಪ್ರೀತಿ ಮೂಲಕ ಅರಳಬೇಕಿದ್ದ ದಾಂಪತ್ಯ ಅಂತರ್ಜಾಲದ ವಿಷದಿಂದ ಬಾಡಿಹೋಗುತ್ತಿದೆ. ಬಹುತೇಕ ದಂಪತಿಗಳು ಪರಸ್ಪರರ ಮುಖವನ್ನೇ ಸರಿಯಾಗಿ ನೋಡದಷ್ಟು ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿರುತ್ತಾರೆ. ಇದರಿಂದ ದಾಂಪತ್ಯದಲ್ಲಿ ಅನುಮಾನ, ಜಗಳ, ಸಿಟ್ಟು–ಕೋಪ ತಾಪ ಮೂಡಬಹುದು. ಹಾಗಾಗಿ, ಫೇಸ್‌ಬುಕ್ ಬಿಡಿ, ಸಂಗಾತಿಯ ಮುಖ ನೋಡಿ’ ಎಂದು ಸಲಹೆ ನೀಡುತ್ತಾರೆ ನಿಮ್ಹಾನ್ಸ್‌ನಲ್ಲಿ ಸರ್ವಿಸ್‌ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ (shut) ಕ್ಲಿನಿಕ್‌ನ ಸಂಯೋಜಕ ಮತ್ತು ಮನೋವೈದ್ಯ ಡಾ.ಮನೋಜ್‌ಕುಮಾರ್ ಶರ್ಮಾ.

‘ತಂತ್ರಜ್ಞಾನ ನಮ್ಮ ಹಿಡಿತದಲ್ಲಿರಬೇಕೇ ವಿನಾಃ ನಾವು ತಂತ್ರಜ್ಞಾನದ ಹಿಡಿತದಲ್ಲಿರಬಾರದು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲೆಂದೇ 2014ರಲ್ಲಿ ‘ಶಟ್’ ಕ್ಲಿನಿಕ್ ಆರಂಭಿಸಿದ್ದೇವೆ. 16 ವರ್ಷದಿಂದ 50ರ ವೃದ್ಧರ ತನಕ ಅಂತರ್ಜಾಲದ ಗೀಳಿಗೆ ಬಿದ್ದವರಿದ್ದಾರೆ. ವಿವಾಹಿತರಲ್ಲಿ ಈ ಗೀಳು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಅದರಲ್ಲಿ ಪುರುಷರ ಪ್ರಮಾಣವೇ ಹೆಚ್ಚು. ಏಕಾಂಗಿತನ, ಕುಟುಂಬ, ಕೆಲಸದ ಕಾರಣಕ್ಕಾಗಿ ಗ್ಯಾಜೆಟ್ ಬಳಸುತ್ತಾರೆ. ಆದರೆ, ಅದು ಗೀಳಾಗಬಾರದು. ಇದು ಮಾನಸಿಕ ಖಿನ್ನತೆಗೆ ಕಾರಣವಾಗಬಹುದು. ಆನ್‌ಲೈನ್‌ಗಿಂತ ಆಫ್‌ಲೈನ್‌ ಕಡೆಗೇ ಹೆಚ್ಚು ಗಮನ ಕೊಡಿ’ ಎನ್ನುತ್ತಾರೆ ಅವರು.

‘ಗಂಡ ಹೆಂಡತಿ ಇಬ್ಬರೂ ಒಟ್ಟಿಗೇ ಸಮಯ ಕಳೆಯಲು ಆದ್ಯತೆ ನೀಡಬೇಕು. ಅದರಲ್ಲೂ ಮೊಬೈಲ್ ಇಲ್ಲದೇ ಒಟ್ಟಿಗಿರಲು ಪ್ರಯತ್ನಿಸಬೇಕು. ಮಕ್ಕಳಿದ್ದರೆ ಅವರಿಗೆ ಮಾದರಿಯಾಗುವಂತೆ ನಿಮ್ಮ ನಡೆ ಇರಲಿ. ಮಕ್ಕಳಿಗೂ ತಂದೆ, ತಾಯಿ ತಮ್ಮ ಜತೆ ಇದ್ದಾರೆ ಎನ್ನುವ ಸುರಕ್ಷಾ ಭಾವ ಮೂಡಿಸಬೇಕು. ಪರಸ್ಪರರ ಕಾಳಜಿ ಮಾಡಿ, ಸಣ್ಣಪುಟ್ಟ ಸಹಾಯ ಮಾಡಿ. ಇದರಿಂದ ಗಂಡ–ಹೆಂಡತಿ ನಡುವೆ ಬಾಂಧವ್ಯ ವೃದ್ಧಿಸುತ್ತದೆ. ಇದು ದಾಂಪತ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಪರಸ್ಪರರ ಮನಸನ್ನು ಅರಿಯಲು ಸಹಾಯಕವಾಗುತ್ತದೆ. ಮುಖ್ಯವಾಗಿ ಮಲಗುವಾಗ ಹಾಸಿಗೆ ಪಕ್ಕದಲ್ಲಿ ಮೊಬೈಲ್ ಇಟ್ಟುಕೊಳ್ಳಬೇಡಿ’ ಎನ್ನುವ ಸಲಹೆ ಮನೋಜ್ ಅವರದ್ದು.

ಡಾ.ಮನೋಜ್‌ಕುಮಾರ್ ಶರ್ಮಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry