ಅಭ್ಯಾಸ ಪಂದ್ಯ: ಕೋಸ್ಟರಿಕಾ ಎದುರು ಗೆದ್ದ ಬೆಲ್ಜಿಯಂ

7
ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಅಭ್ಯಾಸ ಪಂದ್ಯ: ಮಿಂಚಿದ ರೊಮೆಲು ಲುಕಾಕು

ಅಭ್ಯಾಸ ಪಂದ್ಯ: ಕೋಸ್ಟರಿಕಾ ಎದುರು ಗೆದ್ದ ಬೆಲ್ಜಿಯಂ

Published:
Updated:
ಅಭ್ಯಾಸ ಪಂದ್ಯ: ಕೋಸ್ಟರಿಕಾ ಎದುರು ಗೆದ್ದ ಬೆಲ್ಜಿಯಂ

ಬ್ರಸೆಲ್ಸ್‌ (ಎಎಫ್‌ಪಿ): ರೊಮೆಲು ಲುಕಾಕು ಗಳಿಸಿದ ಎರಡು ಗೋಲುಗಳ ನೆರವಿನಿಂದ ಬೆಲ್ಜಿಯಂ ತಂಡ ಫಿಫಾ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.

ಹೇಸೆಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಬೆಲ್ಜಿಯಂ 4–1 ಗೋಲುಗಳಿಂದ ಕೋಸ್ಟರಿಕಾ ತಂಡವನ್ನು ಪರಾಭವಗೊಳಿಸಿತು.

3–4–2–1ರ ಯೋಜನೆಯೊಂದಿಗೆ ಕಣಕ್ಕಿಳಿದಿದ್ದ ಬೆಲ್ಜಿಯಂ ತಂಡ ಆರಂಭದಿಂದಲೇ ಎದುರಾಳಿಗಳ ರಕ್ಷಣಾ ವ್ಯೂಹ ಭೇದಿಸುವ ತಂತ್ರ ಅನುಸರಿಸಿತು.

3–4–3ರ ರಣನೀತಿ ಹೆಣೆದು ಅಂಗಳಕ್ಕಿಳಿದಿದ್ದ ಕೋಸ್ಟರಿಕಾ ತಂಡದ ಆಟಗಾರರೂ ಕಾಲ್ಚಳಕ ತೋರಿದರು. ಹೀಗಾಗಿ ಆರಂಭದ 20 ನಿಮಿಷಗಳ ಆಟ ಗೋಲು ರಹಿತವಾಗಿತ್ತು. ನಂತರ ಕೋಸ್ಟರಿಕಾ ಮೇಲುಗೈ ಸಾಧಿಸಿತು. 24ನೇ ನಿಮಿಷದಲ್ಲಿ ಬ್ರಯಾನ್‌ ರುಯಿಜ್‌ ಚೆಂಡನ್ನು ಗುರಿ ಮುಟ್ಟಿಸಿ ಕೋಸ್ಟರಿಕಾ ಪಾಳಯದಲ್ಲಿ ಖುಷಿಯ ಅಲೆ ಏಳುವಂತೆ ಮಾಡಿದರು.

ಬಳಿಕ ಬೆಲ್ಜಿಯಂ ತಂಡ ಉತ್ತಮ ಆಟ ಆಡಿತು. 31ನೇ ನಿಮಿಷದಲ್ಲಿ ಡ್ರಿಯಾಸ್‌ ಮೆರ್ಟೆನ್ಸ್‌ ಗೋಲು ದಾಖಲಿಸಿ 1–1ರ ಸಮಬಲಕ್ಕೆ ಕಾರಣರಾದರು. 42ನೇ ನಿಮಿಷದಲ್ಲಿ ರೊಮೆಲು ಲುಕಾಕು ಗೋಲು ಬಾರಿಸಿ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು. ಇದರೊಂದಿಗೆ ಬೆಲ್ಜಿಯಂ 2–1ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲೂ ಬೆಲ್ಜಿಯಂ ಆಟ ರಂಗೇರಿತು. 50ನೇ ನಿಮಿಷದಲ್ಲಿ ಮುಂಚೂಣಿ ವಿಭಾಗದ ಆಟಗಾರ ಲುಕಾಕು ಮೋಡಿ ಮಾಡಿದರು. ಸಹ ಆಟಗಾರ ಒದ್ದು ಕಳುಹಿಸಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ಅವರು ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಕೋಸ್ಟರಿಕಾ ತಂಡದ ಗೋಲುಪೆಟ್ಟಿಗೆಯೊಳಗೆ ತೂರಿಸಿದರು.

ಹೀಗಿದ್ದರೂ ಕೋಸ್ಟರಿಕಾ ತಂಡದ ಆಟಗಾರರು ಎದೆಗುಂದಲಿಲ್ಲ. ವಿಶ್ವಾಸದಿಂದ ಸೆಣಸಿದ ಈ ತಂಡದವರು ಚೆಂಡಿನೊಂದಿಗೆ ಎದುರಾಳಿ ಆವರಣ ಪ್ರವೇಶಿಸುವುದನ್ನು ಮುಂದುವರಿಸಿದರು.ಆದರೆ ಗೋಲು ಗಳಿಸಲು ಮಾತ್ರ ಆಗಲಿಲ್ಲ.

64ನೇ ನಿಮಿಷದಲ್ಲಿ ಬೆಲ್ಜಿಯಂ ತಂಡ ಮುನ್ನಡೆ ಹೆಚ್ಚಿಸಿಕೊಂಡು ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿಕೊಂಡಿತು. ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ತಂಡದ ಆವರಣ ಪ್ರವೇಶಿಸಿದ ಮಿಚಿ ಬತ್ಸುಯಾಯಿ ಅದನ್ನು 30 ಗಜ ದೂರದಿಂದ ಮಿಂಚಿನ ಗತಿಯಲ್ಲಿ ಒದ್ದು ಗುರಿ ಮುಟ್ಟಿಸಿದರು.  ನಂತರದ ಅವಧಿಯಲ್ಲಿ ಈ ತಂಡ ರಕ್ಷಣಾ ವಿಭಾಗದಲ್ಲಿ ಎಚ್ಚರಿಕೆಯ ಆಟ ಆಡಿ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry