ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ಲೂ ಸ್ಟಾರ್‌ ಕಾರ್ಯಾಚರಣೆ ದಾಖಲೆ ಬಹಿರಂಗಗೊಳಿಸಿ’

ಇಂಗ್ಲೆಂಡ್‌ ನ್ಯಾಯಾಧೀಶ ಮುರ್ರೆ ಶಾಂಕ್ಸ್‌ ಆದೇಶ
Last Updated 13 ಜೂನ್ 2018, 11:31 IST
ಅಕ್ಷರ ಗಾತ್ರ

ಲಂಡನ್‌: 1984ರ ‘ಬ್ಲೂ ಸ್ಟಾರ್‌’ ಕಾರ್ಯಾಚರಣೆಯ ದಾಖಲೆಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಇಂಗ್ಲೆಂಡ್‌ನ ನ್ಯಾಯಾಧೀಶ ಮುರ‍್ರೆ ಶಾಂಕ್ಸ್‌ ಆದೇಶಿಸಿದ್ದಾರೆ.

ಈ ಕಾರ್ಯಾಚರಣೆಯ ದಾಖಲೆಯನ್ನು ಬಿಡುಗಡೆಗೊಳಿಸಿದರೆ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಕ್ಕೆ ಧಕ್ಕೆ ಆಗುತ್ತದೆ ಎಂಬ ಬ್ರಿಟನ್‌ ಸರ್ಕಾರದ ವಾದವನ್ನು ತಳ್ಳಿ ಹಾಕಿರುವ ಅವರು, ಈ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಹಿರಂಗಗೊಳಿಸಬೇಕು ಎಂದು ಹೇಳಿದ್ದಾರೆ.

‘ಆಪರೇಷನ್‌ ಬ್ಲೂಸ್ಟಾರ್‌’ನಲ್ಲಿ ಬ್ರಿಟನ್‌ನ ಪಾತ್ರದ ಕುರಿತಂತೆ ಎದ್ದಿರುವ ವಿವಾದ ಕುರಿತು ಅವರು ಈ ಆದೇಶ ನೀಡಿದ್ದಾರೆ.

‘ಭಾರತೀಯ ಇತಿಹಾಸದಲ್ಲಿ ಈ ಅವಧಿಯು (1984) ತೀರಾ ಸೂಕ್ಷ್ಮವಾದುದಾಗಿದೆ. ಈಗ ರಹಸ್ಯವಾಗಿ ಇಟ್ಟಿರುವ ದಾಖಲೆಯನ್ನು ಬಿಡುಗಡೆಗೊಳಿಸುವುದರಿಂದ ಈ ಸಂಬಂಧ ಇರುವ ಪೂರ್ವಗ್ರಹಗಳು ನಿವಾರಣೆಯಾಗುತ್ತವೆ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

‘ಅಂದು ಬ್ರಿಟನ್‌ನ ಸ್ಪೆಷಲ್‌ ಏರ್‌ ಸರ್ವೀಸಸ್‌ ಸಂಸ್ಥೆ ಕಾರ್ಯಾಚರಣೆಗೆ ಕೇವಲ ಸಲಹೆ ನೀಡಿತ್ತು ಹಾಗೂ ಈ ಸಲಹೆಯು ತೀರಾ ಸೀಮಿತವಾಗಿತ್ತು’ ಎಂದು ಬ್ರಿಟನ್‌ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಹೇಳಿದ್ದಾರೆ.

‘ಈ ಕಾರ್ಯಾಚರಣೆ ಸಂಬಂಧ ಸಾರ್ವಜನಿಕ ವಿಚಾರಣೆ ನಡೆಯಬೇಕು ಎಂದು ಸಿಖ್‌ ಸಮುದಾಯ ಮೊದಲಿನಿಂದಲೂ ಒತ್ತಾಯ ಮಾಡುತ್ತಿರುವುದರಿಂದ ನ್ಯಾಯಾಲಯದ ಆದೇಶದಿಂದ ಅಚ್ಚರಿಯೇನೂ ಆಗಿಲ್ಲ’ ಎಂದು ಕ್ಯಾಮರೂನ್‌ ಪ್ರತಿಕ್ರಿಯಿಸಿದ್ದಾರೆ.

ಪ್ರತ್ಯೇಕ ಖಲಿಸ್ತಾನ ರಾಷ್ಟ್ರಕ್ಕಾಗಿ ವಿಧ್ವಂಸಕ ಮಾರ್ಗ ಹಿಡಿದಿದ್ದ ಬಂಡುಕೋರರ ನಾಯಕ ಭಿಂದ್ರನ್‌ವಾಲೆ, ಸಿಖ್ಖರ ಪವಿತ್ರ ಕ್ಷೇತ್ರ ಅಮೃತಸರದ ಸ್ವರ್ಣಮಂದಿರವನ್ನೇ ಆಶ್ರಯ ತಾಣವಾಗಿಸಿಕೊಂಡಿದ್ದ.

ಶಸ್ತ್ರಾಸ್ತ್ರಗಳೊಂದಿಗೆ ಅಡಗಿಕೊಂಡಿದ್ದ ಬಂಡುಕೋರರನ್ನು ಹೊರದಬ್ಬಲು ಭಾರತೀಯ ಸೇನೆಯು 1984ರ ಜೂನ್‌ 3ರಿಂದ 8ರವರೆಗೆ ಕೈಗೊಂಡಿದ್ದ ಕಾರ್ಯಾಚರಣೆಗೆ ‘ಆಪರೇಷನ್‌ ಬ್ಲೂಸ್ಟಾರ್‌’ ಎಂದು ಹೆಸರಿಸಲಾಗಿತ್ತು. ಆಗಿನ ಪ್ರಧಾನಿ ಇಂದಿರಾಗಾಂಧಿ ಕಾರ್ಯಾಚರಣೆಗೆ ಆದೇಶ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT