ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟಲ್‌ ಪಿಂಚಣಿ ಮೊತ್ತ ಹೆಚ್ಚಳ ಸಾಧ್ಯತೆ

ತಿಂಗಳಿಗೆ ₹ 10 ಸಾವಿರ ನೀಡಲು ಸರ್ಕಾರಕ್ಕೆ ಪ್ರಸ್ತಾವ
Last Updated 12 ಜೂನ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಅಟಲ್‌ ಪಿಂಚಣಿ ಯೋಜನೆ (ಎಪಿವೈ) ಅಡಿಯಲ್ಲಿ ತಿಂಗಳ ಪಿಂಚಣಿ ಮೊತ್ತವನ್ನು ₹ 5 ಸಾವಿರದಿಂದ ₹ 10 ಸಾವಿರಕ್ಕೆ ಹೆಚ್ಚಿಸುವ
ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.

‘ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಅಗತ್ಯ ಇದೆ. ಈ ಕುರಿತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಕಳುಹಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ’ ಎಂದು ಹಣಕಾಸು ಸೇವೆಗಳ ವಿಭಾಗದ ಜಂಟಿ ಕಾರ್ಯದರ್ಶಿ ಮದನೇಶ್‌ ಕುಮಾರ್‌ ಮಿಶ್ರಾ ತಿಳಿಸಿದ್ದಾರೆ. ಪಿಎಫ್‌ಆರ್‌ಡಿಎ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯೋಜನೆಯ ಚಂದಾದಾರರನ್ನು ಹೆಚ್ಚಿಸುವ ಉದ್ದೇಶದಿಂದ ಪಿಂಚಣಿ ಮೊತ್ತದಲ್ಲಿ ಏರಿಕೆ ಮಾಡುವಂತೆ ಕೋರಿ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ’ ಎಂದು ಪಿಎಫ್‌ಆರ್‌ಡಿಎ ಅಧ್ಯಕ್ಷ ಹೇಮಂತ್‌ ಜಿ. ಕಾಂಟ್ರ್ಯಾಕ್ಟರ್‌ ತಿಳಿಸಿದ್ದಾರೆ.

‘ಸದ್ಯ ತಿಂಗಳಿಗೆ ₹ 1 ಸಾವಿರದಿಂದ ₹ 5 ಸಾವಿರದವರೆಗಿನ ಐದು ಹಂತಗಳ ಪಿಂಚಣಿ ಮಿತಿ ಇದೆ. ಆದರೆ 60 ವರ್ಷ ವಯಸ್ಸಿನಲ್ಲಿ ತಿಂಗಳಿಗೆ ₹ 5 ಸಾವಿರ ಪಿಂಚಣಿ ಮೊತ್ತ ಸಾಕಾಗುವುದಿಲ್ಲ ಎಂದು ಬಹಳಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ತಿಂಗಳ ಪಿಂಚಣಿ ಮೊತ್ತವನ್ನು ₹ 10 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವವನ್ನು ಸರ್ಕಾರದ ಮುಂದಿಡಲಾಗಿದೆ’ ಎಂದು ಕಾಂಟ್ರ್ಯಾಕ್ಟರ್‌ ವಿವರಿಸಿದ್ದಾರೆ.

ಅಟಲ್‌ ಪಿಂಚಣಿ ಯೋಜನೆಗೆ ವಯಸ್ಸಿನ ಮಿತಿಯನ್ನು ಈಗಿರುವ 40 ವರ್ಷದಿಂದ 50 ವರ್ಷಕ್ಕೆ ಹೆಚ್ಚಿಸುವಂತೆಯೂ ಪ್ರಾಧಿಕಾರವು ಸಚಿವಾಲಯಕ್ಕೆ ಮನವಿ ಮಾಡಿದೆ.

2017–18ರಲ್ಲಿ ಹೊಸದಾಗಿ 50 ಲಕ್ಷ ಜನರು ಯೋಜನೆಗೆ ಸೇರಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 60 ರಿಂದ 70 ಲಕ್ಷ ಜನರು ಯೋಜನೆಗೆ ಸೇರುವ ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT