ಗ್ರಾಹಕರ ವಂಚಿಸುವ ನಕಲಿ ಉತ್ಪನ್ನ

5
ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ ವರದಿ

ಗ್ರಾಹಕರ ವಂಚಿಸುವ ನಕಲಿ ಉತ್ಪನ್ನ

Published:
Updated:
ಗ್ರಾಹಕರ ವಂಚಿಸುವ ನಕಲಿ ಉತ್ಪನ್ನ

ನವದೆಹಲಿ: ನಕಲಿ ಉತ್ಪನ್ನಗಳನ್ನೂ ಬಳಸುತ್ತಿದ್ದರೂ, ಶೇ 80ರಷ್ಟು ಗ್ರಾಹಕರು ತಾವು ಅಸಲಿ ಉತ್ಪನ್ನಗಳನ್ನೇ ಬಳಸುತ್ತಿರುವುದಾಗಿ ಬಲವಾಗಿ ನಂಬಿರುತ್ತಾರೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ವರದಿಯು ತಿಳಿಸಿದೆ.

ಶೇ 20ರಷ್ಟು ರಸ್ತೆ ಅಪಘಾತಗಳಿಗೆ ವಾಹನಗಳ ನಕಲಿ ಬಿಡಿಭಾಗಗಳೇ ಕಾರಣ. ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ಮಾರಾಟದಲ್ಲಿ ಶೇ 30ರಷ್ಟು ನಕಲಿ ಇರುತ್ತವೆ ಎಂದು ‘ಫಿಕ್ಕಿ’ಯ ಸಮಿತಿಯೊಂದು ಸಿದ್ಧಪಡಿಸಿದ ವರದಿಯಲ್ಲಿ ಹೇಳಲಾಗಿದೆ. ಆರ್ಥಿಕತೆ ಹಾಳು ಮಾಡುವ ನಕಲಿ ಉತ್ಪನ್ನ ಮತ್ತು ಕಳ್ಳಸಾಗಣೆ ತಡೆ ಸಮಿತಿಯು ಈ ವರದಿ ಸಿದ್ಧಪಡಿಸಿದೆ.

ಕಾನೂನುಬಾಹಿರವಾಗಿ ತಯಾರಿಸಿದ ನಕಲಿ ಉತ್ಪನ್ನಗಳು ಗ್ರಾಹಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಬಳಕೆದಾರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ, ಜನಪ್ರತಿನಿಧಿಗಳು ಮತ್ತು ಕಾಯ್ದೆ ಜಾರಿ ಸಂಸ್ಥೆಗಳಲ್ಲೂ ಎಚ್ಚರ ಮೂಡಿಸುವ ಅಗತ್ಯ ಇದೆ ಎಂದು ಕಾನೂನುಬಾಹಿರ ವಾಣಿಜ್ಯ ಚಟುವಟಿಕೆಗಳನ್ನು ತಡೆಗಟ್ಟಲು ಶ್ರಮಿಸುತ್ತಿರುವ ಈ ಸಮಿತಿಯು ಅಭಿಪ್ರಾಯಪಟ್ಟಿದೆ.

ನಕಲಿ ಉತ್ಪನ್ನಗಳ ತಯಾರಿಕೆ, ಮಾರಾಟ ಮತ್ತು ಅಕ್ರಮ ವ್ಯಾಪಾರ ಚಟುವಟಿಕೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ಹಾನಿ ಉಂಟಾಗುತ್ತಿದೆ ಎಂದೂ ಸಮಿತಿ ತಿಳಿಸಿದೆ.

ದುಷ್ಪರಿಣಾಮ: ನಕಲಿ ಉತ್ಪನ್ನಗಳು ಮತ್ತು ಕಳ್ಳಸಾಗಣೆ ಚಟುವಟಿಕೆಗಳ ಪ್ರಮಾಣ ಮತ್ತು ವ್ಯಾಪ್ತಿಯು ದಿನೇ ದಿನೇ ಹೆಚ್ಚುತ್ತಿದೆ. ಇದು ಕೈಗಾರಿಕೆಗಳು, ಸರ್ಕಾರ, ಆರ್ಥಿಕತೆ, ಬಳಕೆದಾರರ ಆರೋಗ್ಯ ಮತ್ತು ಸುರಕ್ಷತೆ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ.

ನಷ್ಟ: ಏಳು ತಯಾರಿಕಾ ವಲಯಗಳಲ್ಲಿನ ಕಾಯ್ದೆಬಾಹಿರ ಮಾರಾಟ ವಹಿವಾಟಿನಿಂದ ವರ್ಷಕ್ಕೆ ಸರ್ಕಾರದ ಬೊಕ್ಕಸಕ್ಕೆ ₹ 39 ಸಾವಿರ ಕೋಟಿಗಳಷ್ಟು ನಷ್ಟ ಉಂಟಾಗುತ್ತಿದೆ. ಈ ನಷ್ಟದಲ್ಲಿ ನಕಲಿ ತಂಬಾಕು ಉತ್ಪನ್ನಗಳ ಕೊಡುಗೆ ಗರಿಷ್ಠ ಮಟ್ಟದಲ್ಲಿ ಇದೆ ಎಂದು ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry