ದಕ್ಷಿಣ ಶಿಕ್ಷಕರ ಕ್ಷೇತ್ರ ಮತ್ತೆ ಜೆಡಿಎಸ್‌ ವಶ

7
ನೈರುತ್ಯ ಪದವೀಧರರ, ನೈರುತ್ಯ ಶಿಕ್ಷಕರ ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿ

ದಕ್ಷಿಣ ಶಿಕ್ಷಕರ ಕ್ಷೇತ್ರ ಮತ್ತೆ ಜೆಡಿಎಸ್‌ ವಶ

Published:
Updated:
ದಕ್ಷಿಣ ಶಿಕ್ಷಕರ ಕ್ಷೇತ್ರ ಮತ್ತೆ ಜೆಡಿಎಸ್‌ ವಶ

ಮೈಸೂರು: ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್‌ ಗೆಲುವು ಸಾಧಿಸಿದೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌, ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿವೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮರಿತಿಬ್ಬೇಗೌಡ ಅವರಿಗೆ ಸತತ ನಾಲ್ಕನೇ ಬಾರಿ ಗೆಲುವು ಒಲಿದಿದೆ.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವಿಗಾಗಿ 7,933 ಮತಗಳ ಕೋಟಾ ನಿಗದಿಪಡಿಸಲಾಗಿತ್ತು. ಮೊದಲನೇ ಪ್ರಾಶಸ್ತ್ಯದ ಮತ ಎಣಿಕೆ ಮುಗಿದಾಗ ಮರಿತಿಬ್ಬೇಗೌಡ 6,003, ಕಾಂಗ್ರೆಸ್‌ನ ಎಂ.ಲಕ್ಷ್ಮಣ್‌ 5,514, ಬಿಜೆಪಿಯ ಬಿ.ನಿರಂಜನಮೂರ್ತಿ 3,931 ಮತ ಪಡೆದಿದ್ದರು.

ಎಲಿಮಿನೇಷನ್‌ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಹೊರಬಿದ್ದ ಬಳಿಕ ಮರಿತಿಬ್ಬೇಗೌಡ 7,170 ಹಾಗೂ ಲಕ್ಷ್ಮಣ್‌ 6,805 ಮತ ಪಡೆದಿದ್ದು, ಇಬ್ಬರ ನಡುವೆ ಬಿರುಸಿನ ಪೈಪೋಟಿ ಕಂಡು ಬಂತು. ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಅಂತ್ಯಕ್ಕೆ 11022 ಮತಗಳನ್ನು ಪಡೆದು

ಮರಿತಿಬ್ಬೇಗೌಡ ಗೆಲುವಿನ ದಡ ಮುಟ್ಟಿದರು. ಅವರು 2000ದಲ್ಲಿ ಕಾಂಗ್ರೆಸ್‌ನಿಂದ, 2006ರಲ್ಲಿ ಪಕ್ಷೇತರರಾಗಿ, 2012ರಲ್ಲಿ ಜೆಡಿಎಸ್‌ನಿಂದ ವಿಧಾನ ಪರಿಷತ್‌ ಪ್ರವೇಶಿಸಿದ್ದರು.

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಎಸ್.ಎಲ್‌.ಭೋಜೇಗೌಡ, ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್‌ ಮುನ್ನಡೆ ಸಾಧಿಸಿದ್ದಾರೆ. ಈ ಕ್ಷೇತ್ರದ ಮತ ಎಣಿಕೆ ಪ್ರಗತಿಯಲ್ಲಿದ್ದು, ತಡರಾತ್ರಿ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಶಿಕ್ಷಕರ 1,591 ಮತಗಳು ತಿರಸ್ಕೃತ

ಮೈಸೂರು: ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ 1,591 ಮತಗಳು ತಿರಸ್ಕೃತಗೊಂಡಿವೆ.

ಶಿಕ್ಷಕ ಕ್ಷೇತ್ರದ ಮತದಾರರು ವಿದ್ಯಾವಂತರು, ಪ್ರಜ್ಞಾವಂತರು. ಆದರೆ, ಅವರೇ ತಪ್ಪಾಗಿ ನಮೂದಿಸಿರುವ ಕಾರಣ ಇಷ್ಟೊಂದು ಪ್ರಮಾಣದ ಮತಗಳು ಅಸಿಂಧುವಾಗಿವೆ. ದಕ್ಷಿಣ ಶಿಕ್ಷಕರ ಕ್ಷೇತ್ರದ 819 ಮತದಾರರು ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ 772 ಮತದಾರರು ಎಡವಟ್ಟು ಮಾಡಿರುವುದು ಮಂಗಳವಾರ ಮತ ಎಣಿಕೆಯಲ್ಲಿ ಕಂಡುಬಂತು.

ಬ್ಯಾಲೆಟ್‌ ಪೇಪರ್‌ನಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ ಪ್ರಾಶಸ್ತ್ಯದ ಅಂಕಿ ಬರೆಯುವ ಬದಲು ಕೆಲವರು ಸಹಿ ಮಾಡಿದ್ದರು. ಇನ್ನು ಕೆಲವರು ಅಕ್ಷರ ಬರೆದಿದ್ದರು. ಒಂದಿಷ್ಟು ಮಂದಿ ರೈಟ್‌ ಚಿಹ್ನೆ ಹಾಕಿ ಕುಲಗೆಡಿಸಿದ್ದರು.

ಈ ಅಸಿಂಧು ಮತಗಳನ್ನು ಬದಿಗಿರಿಸಿ ಅಭ್ಯರ್ಥಿ ಗೆಲುವಿಗೆ ಕೋಟಾ ನಿಗದಿಪಡಿಸಲಾಯಿತು. ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 22,677 ಮತದಾರರಿದ್ದು, 16,707 ಮಂದಿ (ಶೇ 80.80) ಮತ ಚಲಾಯಿಸಿದ್ದರು. ಕೇವಲ 13 ನೋಟಾ ಮತ ಚಲಾವಣೆ ಆಗಿದ್ದವು. ಕಳೆದ ಬಾರಿಗೆ ಹೋಲಿಸಿದರೆ ನೋಟಾ ಮತ ಚಲಾವಣೆ ಕಡಿಮೆ ಆಗಿದೆ.

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 20,481 ಮತದಾರರಿದ್ದು, 16,477 ಮಂದಿ (ಶೇ 80.45) ಮತ ಚಲಾಯಿಸಿದ್ದರು. 16 ನೋಟಾ ಮತ ಚಲಾವಣೆ ಆಗಿವೆ.

* ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಮೈತ್ರಿ ಸರ್ಕಾರದಲ್ಲಿ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ

- ಮರಿತಿಬ್ಬೇಗೌಡ, ವಿಧಾನ ಪರಿಷತ್‌ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry