ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ತರುವುದು ಹೇಗೆ...

Last Updated 12 ಜೂನ್ 2018, 20:33 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಪರ್ಧೆಯಲ್ಲಿ ಮೊದಲ ಸ್ಥಾನ ಬಂದವನಿಗೆ ಕಂಚು, ಎರಡನೇ ಸ್ಥಾನದವನಿಗೆ ಬೆಳ್ಳಿ, ಮೂರನೇ ಸ್ಥಾನದವನಿಗೆ ಚಿನ್ನದ ಪದಕ ನೀಡಿದರೆ ಹೇಗಿರಬಹುದು? ಹಾಗಿದೆ ನೋಡಿ ಇಂದು ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರ್ಕಾರ...’

ಹೀಗೆಂದು ಬಹುಮತವಿದ್ದೂ ಅಧಿಕಾರಕ್ಕೆ ಬರಲಾಗದ ಬಿಜೆಪಿಯ ಅಸಹಾಯಕತೆ, ಕಡಿಮೆ ಸ್ಥಾನ ಗಳಿಸಿದ ಕಾಂಗ್ರೆಸ್‌ ಜೆಡಿಎಸ್‌ಗೆ ಶರಣಾದ ಅನಿವಾರ್ಯತೆಯನ್ನು ವಿಡಂಬನೆ ಮಾಡಿದರು ರಾಜಾಜಿನಗರದ ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್‌.

‘ಹೌದು, ನಾವು ಸ್ವಲ್ಪ ಪ್ರಯತ್ನಪಟ್ಟಿದ್ದರೆ ಇನ್ನೂ 10 ಸ್ಥಾನ ಪಡೆಯಬಹುದಿತ್ತು. ಆಡಳಿತದ ಚಿತ್ರಣವೇ ಬೇರೆ ಎಂದು ತೋರಿಸಬಹುದಿತ್ತು. ಯಾಕೆ ಹೀಗಾಯಿತು ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ’ ಎಂದು ಅವರು ಅಂತರಂಗ ತೆರೆದಿಟ್ಟರು. ಇತಿಮಿತಿಗಳ ಮಧ್ಯೆಯೂ ಇರಿಸಿಕೊಂಡ ಗುರಿಯ ಬಗ್ಗೆ ಅವರು ಮಾತನಾಡಿದ್ದು ಹೀಗೆ.

*ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ರೀತಿ ಬಗ್ಗೆ ಏನನ್ನಿಸುತ್ತದೆ?

ಇದು ಆಡಳಿತ ಮಾಡಬೇಕು ಎಂಬ ಒಳ್ಳೆ ಉದ್ದೇಶದಿಂದ ಮಾಡಿದ ಸರ್ಕಾರ ಅಲ್ಲ. ಬಿಜೆಪಿಯನ್ನು ದೂರ ಇಡಬೇಕು ಎಂಬ ಒಂದೇ ದೃಷ್ಟಿ, ವೈಯಕ್ತಿಕ ಲಾಭ, ಅಧಿಕಾರ ಲಾಲಸೆಗೋಸ್ಕರ ಋಣಾತ್ಮಕ ಉದ್ದೇಶ ಇಟ್ಟುಕೊಂಡು ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇನ್ನು ಇದರ ಸ್ಥಿರತೆ ಬಗ್ಗೆ ಏನನ್ನೂ ಹೇಳಲಿಕ್ಕಾಗದು.

*ಚುನಾವಣೆ ಸಂದರ್ಭ ಸಾಕಷ್ಟು ಆರೋಪಗಳನ್ನು ಎದುರಿಸಿದಿರಿ

ಹೌದು. ನನ್ನ ಪುತ್ರಿಯ ಬಳಿ ಹಣ ಸಿಕ್ಕಿದೆ, ಆದಾಯಕ್ಕಿಂತ ಹೆಚ್ಚು ಆಸ್ತಿ ಇದೆ ಎಂದೆಲ್ಲಾ ಆರೋಪ ಮಾಡಿದ್ದರು. ಇಷ್ಟು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಶುದ್ಧ ಚಾರಿತ್ರ್ಯಕ್ಕೆ ಹೀಗೆಲ್ಲಾ ಹೇಳುವಾಗ ಒಂದು ಕ್ಷಣ ತೀವ್ರ ಖಿನ್ನತೆಗೆ ಒಳಗಾದೆ. ಆ ಹಣ ನನ್ನ ಮಗಳದ್ದಲ್ಲ ಎಂಬುದು ಆರೋಪ ಮಾಡಿದವರಿಗೂ ಗೊತ್ತಿತ್ತು. ಹಣಕ್ಕೆ ಸಂಬಂಧಿಸಿದವರು ಈಗಲೂ ಕಾನೂನು ಹೋರಾಟ ಮಾಡುತ್ತಿದ್ದಾರೆ. ವಾಸ್ತವ ಗೊತ್ತಾಗಿದೆ. ಹೀಗಿದ್ದೂ ಇಂಥದ್ದಕ್ಕೆಲ್ಲಾ ಪುಷ್ಟಿ ಕೊಟ್ಟು ದೃಶ್ಯ ಮಾಧ್ಯಮದವರು ಈ ಘಟನೆಯನ್ನು ತೀರಾ ವೈಭವೀಕರಿಸಿದರು. ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ಅವರು ಯಾರೂ ಮುಂದಾಲೋಚನೆ ಮಾಡಲೇ ಇಲ್ಲ. ಆಗೆಲ್ಲಾ ತುಂಬಾ ಬೇಸರಗೊಂಡಿದ್ದೆ. ಈಗಲೂ ನನ್ನ ಇತಿಮಿತಿಯಲ್ಲಿ ಒಳ್ಳೆಯ ಜೀವನ ನಡೆಸುತ್ತಿದ್ದೇನೆ.

* ಶಾಸಕರಿಗೆ ಕಚೇರಿಯೇ ಇಲ್ಲ ಎಂದು ರಾಜಕೀಯ ವಿರೋಧಿಗಳು ಟೀಕಿಸುತ್ತಿದ್ದಾರಲ್ಲಾ?

ನಾನು ಪ್ರತ್ಯೇಕ ಕಚೇರಿ ಮಾಡಿಕೊಂಡಿಲ್ಲ. ಬಿಬಿಎಂಪಿ ಕಚೇರಿಯಲ್ಲಿ ಸುಂದರವಾದ ಶಾಸಕರ ಕಚೇರಿ ನನಗಿದೆ. ಜನರೆಲ್ಲಾ ಅಲ್ಲಿ ಬಂದು ಭೇಟಿಯಾಗುತ್ತಾರೆ. ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್‌ ಸಂಸ್ಥೆ ನಡೆಸುತ್ತಿದ್ದೇನೆ. ಅಲ್ಲಿಗೆ ಸಂಬಂಧಪಟ್ಟ ಪೋಷಕರೆಲ್ಲಾ ಆ ಕಚೇರಿಗೇ ಬಂದು ಭೇಟಿಯಾಗುತ್ತಿದ್ದಾರೆ. ಎಲ್ಲ ಜನರಿಗೂ ದೂರವಾಣಿಯಲ್ಲಿ ಸಿಗುತ್ತೇನೆ. ಇನ್ನೇನು ಬೇಕು?

*ಕ್ಷೇತ್ರ ಅಭಿವೃದ್ಧಿಯ ಕನಸುಗಳೇನು?

ನನ್ನ ಮೇಲೆ ಹೊಸ ಜವಾಬ್ದಾರಿ ಬಂದಿದೆ. ಕೇವಲ ನನ್ನದೊಂದೇ ಕ್ಷೇತ್ರ ಅಲ್ಲ. ಪಕ್ಕದಲ್ಲಿರುವ ಓಕಳಿಪುರ ವೃತ್ತವನ್ನು ಸಿಗ್ನಲ್‌ರಹಿತ ಕಾರಿಡಾರ್‌ ಮಾಡಬೇಕು. ಅಲ್ಲಿಗೆ ಇದ್ದ ತಾಂತ್ರಿಕ ಅಡಚಣೆಗಳನ್ನೆಲ್ಲಾ ನಿವಾರಿಸಿದ್ದೇನೆ. ಕಾಮಗಾರಿ ಅನುಷ್ಠಾನ ಮಾತ್ರ ಬಾಕಿ ಇದೆ. ಕಾರ್ಡ್‌ ರಸ್ತೆಯನ್ನು ಕೂಡಾ ಸಿಗ್ನಲ್‌ ರಹಿತ ಕಾರಿಡಾರ್‌ ಮಾಡಬೇಕು. ಕೆಳಮಧ್ಯಮ ವರ್ಗದವರು ತಮ್ಮ ಕೈಯಲ್ಲಾಗದ ಶುಲ್ಕ ಕಟ್ಟಿ ಮಕ್ಕಳನ್ನು ಶಾಲೆಗೆ ಸೇರಿಸಲು ಪರದಾಡುತ್ತಿದ್ದಾರೆ. ನನ್ನ ಕ್ಷೇತ್ರದ ಸರ್ಕಾರಿ ಶಾಲೆಗಳ ಸಬಲೀಕರಣ ಮಾಡಬೇಕು. ನೇತಾಜಿ ಕ್ರೀಡಾಂಗಣ ಮತ್ತು ಕೆಂಪೇಗೌಡ
ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಏರಿಸಬೇಕು.

*ಸವಾಲುಗಳೇನು?

ಹೌದು ಕನಸುಗಳೇನೋ ಇವೆ. ಇವಕ್ಕೆಲ್ಲಾ ಅನುದಾನ ತರುವುದು ಹೇಗೆ ಎಂಬ ಚಿಂತೆ ಇದೆ. ಸದ್ಯದ ಸರ್ಕಾರ, ಅಧಿಕಾರಿಗಳು ಸ್ಪಂದಿಸಬೇಕು. ಕ್ಷೇತ್ರದ ಜನ ಗೌರವವಿರಿಸಿ ಐದನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಗಳೂ ಸಾಕಷ್ಟಿವೆ.

*ರಾಜಕೀಯದಲ್ಲಿ ಶುದ್ಧತೆ ಉಳಿಸಿಕೊಳ್ಳುವ ಸವಾಲುಗಳೇನು?

‌ಈಗ ರಾಜಕಾರಣಿಗಳನ್ನು ಜನರು ನೋಡುವ ಭಾವನೆಯೇ ಬದಲಾಗಿದೆ. ರಾಜಕಾರಣಿಗಳೆಂದರೆ ಎಲ್ಲರೂ ದುಡ್ಡು ಮಾಡುವವರು, ದುರಹಂಕಾರಿಗಳು... ಹೀಗೆ ನಾವು ಅಂದುಕೊಂಡದ್ದಕ್ಕಿಂತಲು ಕೆಳಮಟ್ಟದಲ್ಲಿ ಜನ ಭಾವಿಸಿದ್ದಾರೆ. ಇನ್ನು ಕೆಲವರಿಗೆ ರಾಜಕೀಯ ಎಂದರೆ ಹೆಸರು, ಖ್ಯಾತಿ ಗಳಿಸುವ ವೇದಿಕೆ. ಇನ್ನು ಹಲವರಿಗೆ  ತಾವು ಮಾಡುವ ‘ಕೆಲಸ’ಗಳ ರಕ್ಷಣೆಗಿರುವ ಬೇಲಿ ಅಥವಾ ಪಾಸ್‌ಪೋರ್ಟ್‌. ಹೀಗೆ ಹಲವಾರು ತರಹದವರಿದ್ದಾರೆ. ಚಳವಳಿ ಹಿನ್ನೆಲೆಯಿಂದ ಬಂದವರು ಕಡಿಮೆ. ಅಧಿಕಾರ ಬೇಡ ಎನ್ನುತ್ತಲೇ ಆಯ್ಕೆಯಾದವರು, ಜಾತ್ಯತೀತರು ಎಂದು ಹೇಳಿಕೊಂಡವರು ಇಂದು ಜಾತಿಯ ಹೆಸರಲ್ಲೇ ಅಧಿಕಾರದ ಗದ್ದುಗೆ ಬೇಕು ಎಂದು ಪ್ರತಿಪಾದಿಸುವಾಗ ಬೇಸರವೆನಿಸುತ್ತದೆ. ಶುದ್ಧೀಕರಣ ಎಲ್ಲ ಆಯಾಮಗಳಲ್ಲೂ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT