ಟ್ರಂಪ್‌–ಕಿಮ್‌ ಶಾಂತಿಮಂತ್ರ

7
ಅಮೆರಿಕ–ಉತ್ತರ ಕೊರಿಯಾ ನಡುವೆ ಐತಿಹಾಸಿಕ ಶೃಂಗಸಭೆ

ಟ್ರಂಪ್‌–ಕಿಮ್‌ ಶಾಂತಿಮಂತ್ರ

Published:
Updated:
ಟ್ರಂಪ್‌–ಕಿಮ್‌ ಶಾಂತಿಮಂತ್ರ

ಸಿಂಗಪುರ: ದಶಕಗಳ ದ್ವೇಷ ಮರೆತಿರುವ ಅಮೆರಿಕ ಮತ್ತು ಉತ್ತರ ಕೊರಿಯಾ, ಅಣು ನಿಶ್ಶಸ್ತ್ರೀಕರಣ ಹಾಗೂ ಭದ್ರತೆ ಖಾತರಿಯ ಒಪ್ಪಂದಕ್ಕೆ ಸಹಿ ಹಾಕಿವೆ.

ಹಳೆಯದನ್ನೆಲ್ಲ ಮರೆತು ಕೊರಿಯಾ ಪರ್ಯಾಯ ದ್ವೀಪದ ‘ಸಂಪೂರ್ಣ ಅಣು ನಿಶ್ಶಸ್ತ್ರೀಕರಣ’ಕ್ಕಾಗಿ ಕೆಲಸ ಮಾಡುವುದಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಭರವಸೆ ನೀಡಿದ್ದಾರೆ. ಉತ್ತರ ಕೊರಿಯಾಕ್ಕೆ ಭದ್ರತೆ ಒದಗಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತು

ಕೊಟ್ಟಿದ್ದಾರೆ.

ತಟಸ್ಥ ದೇಶವಾದ ಸಿಂಗಪುರದ ಹೋಟೆಲೊಂದರಲ್ಲಿ ನಡೆದ ಚಾರಿತ್ರಿಕ ಶೃಂಗಸಭೆಯಲ್ಲಿ ಭಾಗಿಯಾದ ಟ್ರಂಪ್‌ ಮತ್ತು ಕಿಮ್‌ ಜಂಟಿ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ.

ಎರಡೂ ದೇಶಗಳ ನಡುವೆ ಹೊಸ ಸಂಬಂಧ ಸ್ಥಾಪನೆಯ ಕುರಿತಾದ ಸಮಗ್ರ, ಗಾಢ ಮತ್ತು ಪ್ರಾಮಾಣಿಕ ಅನಿಸಿಕೆಗಳನ್ನು ಇಬ್ಬರು ನಾಯಕರು ಹಂಚಿಕೊಂಡರು. ಸುದೀರ್ಘ, ಸುದೃಢ ಮತ್ತು ಶಾಂತಿಯುತ ನಂಟು ಬೆಳೆಸಿಕೊಳ್ಳಲು ಬದ್ಧ ಎಂದು ಎರಡೂ ದೇಶಗಳು ಹೇಳಿವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಉತ್ತರ ಕೊರಿಯಾದ ಅಣು ನಿಶ್ಶಸ್ತ್ರೀಕರಣ ಪ್ರಕ್ರಿಯೆ ಅತ್ಯಂತ ಬೇಗನೆ ಆರಂಭವಾಗಲಿದೆ. ಒಪ್ಪಂದ ಸಾಧ್ಯವಾದ ಬಗ್ಗೆ ಬಹಳ ಹೆಮ್ಮೆ ಇದೆ. ಇಬ್ಬರು ನಾಯಕರು ಸೇರಿ ಜಗತ್ತಿನ ಅತ್ಯಂತ ಅಪಾಯಕಾರಿ ಸಮಸ್ಯೆಯೊಂದನ್ನು ಪರಿಹರಿಸಿದ್ದೇವೆ’ ಎಂದು ಟ್ರಂಪ್‌ ಹೇಳಿದರು.

ಶೃಂಗಸಭೆಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. 34 ವರ್ಷದ ಕಿಮ್‌ ಜತೆಗೆ ಬಹಳ ವಿಶೇಷ ನಂಟು ಸಾಧ್ಯವಾಗಿದೆ ಎಂದು 71 ವರ್ಷದ ಟ್ರಂಪ್‌ ತಿಳಿಸಿದರು.

ನೇರ ಮುಖಾಮುಖಿ

ಸಿಂಗಪುರದ ಸೆಂಟೋಸಾ ದ್ವೀಪದ ಕ್ಯಾಪೆಲ್ಲಾ ಹೋಟೆಲ್‌ನಲ್ಲಿ ಶೃಂಗಸಭೆ

ಶೃಂಗಸಭೆಯಲ್ಲಿ ಭಾಷಾಂತರಕಾರರು ಬಿಟ್ಟರೆ ಬೇರೆ ಯಾರೂ ಇರಲಿಲ್ಲ

ಇದು ಅಮೆರಿಕ–ಉತ್ತರ ಕೊರಿಯಾ ಮುಖ್ಯಸ್ಥರ ನಡುವಣ ಮೊದಲ ಸಭೆ

ಬಳಿಕ, ಎರಡೂ ದೇಶಗಳ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದರು

ಹಲವು ತಿಂಗಳ ಏರಿಳಿತಗಳ ಬಳಿಕ ‘ಬದ್ಧ ವೈರಿ’ಗಳ ನಡುವಣ ಸಭೆ ನಡೆಯಿತು

ಉತ್ತರ ಕೊರಿಯಾಕ್ಕೇನು ಲಾಭ?

ದಕ್ಷಿಣ ಕೊರಿಯಾದಲ್ಲಿ ಅಮೆರಿಕ ನಡೆಸುತ್ತಿರುವ ಸೇನಾ ಸಮರಾಭ್ಯಾಸವನ್ನು ನಿಲ್ಲಿಸುವುದಾಗಿ ಟ್ರಂಪ್‌ ಘೋಷಿಸಿದ್ದಾರೆ. ಈ ಸಮರಾಭ್ಯಾಸ ಅತಿಕ್ರಮಣದ ತಾಲೀಮು ಎಂದು ಉತ್ತರ ಕೊರಿಯಾ ಬಹಳ ಹಿಂದಿನಿಂದಲೂ ಹೇಳುತ್ತಾ ಬಂದಿತ್ತು.

ಆದರೆ, ಅಣ್ವಸ್ತ್ರ ಪರೀಕ್ಷೆ ನಡೆಸಿದ್ದಕ್ಕಾಗಿ ಉತ್ತರ ಕೊರಿಯಾ ಮೇಲೆ ಹೇರಿರುವ ನಿರ್ಬಂಧಗಳನ್ನು ಸದ್ಯಕ್ಕೆ ತೆರವು ಮಾಡಲಾಗುವುದಿಲ್ಲ ಎಂದೂ ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ.

* ನಿನ್ನೆಯ ಸಂಘರ್ಷ ನಾಳೆಯ ಯುದ್ಧವಾಗಬೇಕಿಲ್ಲ. ಎರಡು ದೇಶಗಳ ನಡುವೆ ಹೊಸ ಅಧ್ಯಾಯ ಬರೆಯಲು ನಾವು ಸಜ್ಜಾಗಿದ್ದೇವೆ

- ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷ

ಮುಂದೆ ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ಅದಕ್ಕಾಗಿ ಟ್ರಂಪ್‌ ಜತೆಗೆ ಕೆಲಸ ಮಾಡುತ್ತೇವೆ. ಎಲ್ಲ ಸಂದೇಹಗಳನ್ನು ಪರಿಹರಿಸುತ್ತೇವೆ 

-ಕಿಮ್‌ ಜಾಂಗ್‌ ಉನ್‌ , ಉತ್ತರ ಕೊರಿಯಾ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry