ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಾ 3 ಸಚಿವ, ನಿಗಮ–ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಎಚ್‌ಕೆ ಬಣ ಪಟ್ಟು

ಪಕ್ಷದ ರಾಜ್ಯ ಸಹ ಉಸ್ತುವಾರಿಗಳಿಂದ ಅತೃಪ್ತ ಶಾಸಕರ ಜೊತೆ ಚರ್ಚೆ
Last Updated 12 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಅವಕಾಶ ಸಿಗದೇ ಬಂಡಾಯದ ಬಾವುಟ ಹಾರಿಸಿರುವ ಹಿರಿಯ ಶಾಸಕ ಎಚ್.ಕೆ. ಪಾಟೀಲ ಜೊತೆಗಿರುವ ಅತೃಪ್ತ ಶಾಸಕರ ಬಣ, ತಮಗೆ ಮೂರು ಸಚಿವ ಸ್ಥಾನಗಳನ್ನು ನೀಡುವಂತೆ ಪಟ್ಟು ಹಿಡಿದಿದೆ.

ಪಾಟೀಲರ ನಿವಾಸದಲ್ಲಿ ಮಂಗಳವಾರ ಸಭೆ ಸೇರಿದ ಈ ಶಾಸಕರು, ಸಚಿವ ಸ್ಥಾನದ ಜೊತೆಗೆ ಮೂವರಿಗೆ ನಿಗಮ–ಮಂಡಳಿ ಅಧ್ಯಕ್ಷ ಪಟ್ಟ, ಕನಿಷ್ಠ ಇಬ್ಬರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.

ಸಭೆಯಲ್ಲಿ ಶಾಸಕರಾದ ಎಚ್‌.ಕೆ. ಪಾಟೀಲ (ಗದಗ), ಈಶ್ವರ ಖಂಡ್ರೆ (ಭಾಲ್ಕಿ), ಬಿ. ನಾರಾಯಣರಾವ್‌ (ಬಸವಕಲ್ಯಾಣ), ರಹೀಂ ಖಾನ್‌ (ಬೀದರ್‌ ನಗರ), ಉಮೇಶ ಜಾಧವ್‌ (ಚಿಂಚೋಳಿ), ಶರಣಬಸಪ್ಪದರ್ಶನಾಪುರ (ಶಹಾಪುರ), ಸುಬ್ಬಾರೆಡ್ಡಿ (ಬಾಗೇಪಲ್ಲಿ), ವಿಧಾನಪರಿಷತ್‌ ಸದಸ್ಯರಾದ ಬಸವರಾಜ ಪಾಟೀಲ ಇಟಗಿ, ಅಬ್ದುಲ್‌ ಜಬ್ಬಾರ್‌, ಶ್ರೀನಿವಾಸ ಮಾನೆ ಇದ್ದರು.

ಅತೃಪ್ತ ಶಾಸಕರನ್ನು ಪಕ್ಷದ ರಾಜ್ಯ ಸಹ ಉಸ್ತುವಾರಿಗಳಾದ ಮಾಣಿಕಂ ಠಾಗೋರ್‌ ಮತ್ತು ವಿಷ್ಣುನಾಥ್ ಮನವೊಲಿಸುವ ಪ್ರಯತ್ನ ನಡೆಸಿದರು. ಅತೃ
ಪ್ತರ ಬೇಡಿಕೆಯನ್ನು ಪಕ್ಷದ ಹೈಕಮಾಂಡ್‌ ಗಮನಕ್ಕೆ ತರುವುದಾಗಿ ಈ ಇಬ್ಬರು ನಾಯಕರು ಭರವಸೆ ನೀಡಿದ್ದಾರೆ.

ಬೆಳಿಗ್ಗೆ 11.30ಕ್ಕೆ ಆರಂಭಗೊಂಡ ಸಭೆ ಸಂಜೆ 6 ಗಂಟೆವರೆಗೂ ನಡೆಯಿತು. ಅತೃಪ್ತ ಶಾಸಕರು ಸಭೆ ಸೇರಿರುವ ಮಾಹಿತಿ ಅರಿತು ಹೈಕಮಾಂಡ್‌ ಸೂಚನೆ
ಯಂತೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಾಟೀಲರ ನಿವಾಸಕ್ಕೆ ಬಂದ ಈ ಇಬ್ಬರು ನಾಯಕರು, ಎಲ್ಲರನ್ನು ಪ್ರತ್ಯೇಕವಾಗಿ ಕರೆದು ಮಾತುಕತೆ ನಡೆಸಿದರು. ಈ ವೇಳೆ, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹಿರಿಯ ಶಾಸಕರನ್ನು ಕಡೆಗಣಿಸಿರುವ ಬಗ್ಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಲಂಬಾಣಿ ಕೋಟಾದಲ್ಲಿ ಪಿ.ಟಿ. ಪರಮೇಶ್ವರ ನಾಯಕ ಮತ್ತು ಉಮೇಶ್ ಜಾಧವ್‌ ಚುನಾಯಿತರಾಗಿದ್ದಾರೆ. ಪರಮೇಶ್ವರ ನಾಯಕ ಈ ಹಿಂದಿನ ಅವ
ಧಿಯಲ್ಲಿ ಸಚಿವ ಸ್ಥಾನ ಪಡೆದಿದ್ದರು. ಹೀಗಾಗಿ, ಈ ಬಾರಿ ಜಾಧವ್‌ ಅವರನ್ನು ಪರಿಗಣಿಸಬೇಕು. ಅಲ್ಲದೆ, ಉತ್ತರ ಕರ್ನಾಟಕ ಭಾಗಕ್ಕೆ ಎರಡು ಸಚಿವ ಸ್ಥಾನ ನೀಡಬೇಕು ಎಂದು ಅತೃಪ್ತರು ಬೇಡಿಕೆ ಮುಂದಿಟ್ಟಿದ್ದಾರೆ.

ಸಚಿವ ಸ್ಥಾನ ಸಿಗದ ಹಿರಿಯ ಶಾಸಕರಿಗೆ ‘ಪ್ರಭಾವಿ’ ನಿಗಮ– ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ನ್ಯಾಯ ಒದಗಿಸಬೇಕು. ಅಲ್ಲದೆ, ಕನಿಷ್ಠ ಇಬ್ಬರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಬೇಕು ಎಂದು ಈ ಬಣ ಒತ್ತಾಯಿಸಿದೆ.

ಉಳಿದವರ ಜೊತೆ ಇಂದು ಚರ್ಚೆ

ಅತೃಪ್ತರ ಬಣದಲ್ಲಿರುವ ತನ್ವೀರ್‌ ಸೇಠ್‌ (ನರಸಿಂಹರಾಜ), ಅಮರೇಗೌಡ ಬಯ್ಯಾಪುರ (ಕುಷ್ಟಗಿ), ಪಿ.ಟಿ. ಪರಮೇಶ್ವರ ನಾಯಕ (ಹೂವಿನ ಹಡಗಲಿ) ಮತ್ತು ರೋಷನ್‌ ಬೇಗ್‌ (ಶಿವಾಜಿನಗರ) ಜೊತೆ ಮಾಣಿಕಂ ಠಾಗೋರ್‌ ಮತ್ತು ವಿಷ್ಣುನಾಥ್ ಬುಧವಾರ ಮಾತುಕತೆ ನಡೆಸಲಿದ್ದಾರೆ.

ಭಾವನೆ ಹಂಚಿಕೊಂಡ ಅತೃಪ್ತ ಶಾಸಕರು

ಲಂಬಾಣಿ ಕೋಟಾದಲ್ಲೂ ಸಚಿವ ಸ್ಥಾನಕ್ಕೆ ಆಗ್ರಹ

ಕನಿಷ್ಠ 2 ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೂ ಬೇಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT