ಕಾಯುವ ಆಟದ ಮರ್ಮ ತಿಳಿಯದವರು...

7

ಕಾಯುವ ಆಟದ ಮರ್ಮ ತಿಳಿಯದವರು...

Published:
Updated:

ರಾಜಕೀಯ ಎನ್ನುವುದು ಕಾಯುವ ಆಟ. ಈ ಆಟದಲ್ಲಿ ಯಾರು ಎಷ್ಟು ದಿನ ಕಾಯಬೇಕಾಗುತ್ತದೆ ಎಂಬುದನ್ನು ಯಾರೂ ಬರೆದು ಕೊಡಲು ಆಗದು. ನಿಮಗೆ ಸಿಕ್ಕ ಅಧಿಕಾರ ಅದೃಷ್ಟವಾಗಿರಬಹುದು, ಅಥವಾ ಅದು ಹೈಕಮಾಂಡಿನಲ್ಲಿ ನಿಮಗೆ ಇರುವ ಪ್ರಭಾವದ ಫಲ ಆಗಿರಬಹುದು. ಎಷ್ಟೆಲ್ಲ ಪ್ರಭಾವ ಇದ್ದರೂ ಒಮ್ಮೊಮ್ಮೆ ನಿಮಗೆ ಅಧಿಕಾರ ಕೈ ತಪ್ಪಿ ಹೋಗಬಹುದು.

ಅಧಿಕಾರ ಸಿಗಲು ಕಾರಣಗಳು ಇರುವಂತೆ ಅದು ಸಿಗದೇ ಇರಲೂ ಕಾರಣಗಳು ಇರುತ್ತವೆ. ಹಾವು ಏಣಿಯ ಆಟದಲ್ಲಿ ಮೇಲೆ ಹೋದಾಗ ಸುಖ ಎನಿಸುತ್ತದೆ. ಕೆಳಗೆ ಬಂದಾಗ ದುಃಖ ಅನಿಸುತ್ತದೆ. ಇದೆಲ್ಲ ರಾಜಕಾರಣದ ಒಂದು ಭಾಗ ಎಂದು ತಿಳಿಯುವ ಸಮಾಧಾನ ನಿಮಗೆ ಇರಬೇಕು.

ಈ ಸಾರಿ ವಿಧಾನಸಭೆ ಚುನಾವಣೆಯ ಅತಂತ್ರ ಫಲಿತಾಂಶವೇ ಈಗಿನ ಬಿಕ್ಕಟ್ಟಿಗೆ ಕಾರಣ. ಈಗ ಒಂದು ರೀತಿ ಬ್ಲ್ಯಾಕ್‌ಮೇಲ್‌ ರಾಜಕಾರಣ ನಡೆದಿರುವಂತೆ ಕಾಣುತ್ತದೆ. ‘ನನ್ನನ್ನು ಸಚಿವನನ್ನಾಗಿ ಮಾಡದೇ ಇದ್ದರೆ ನಾನು ಮುಂದಿನ ದಾರಿ ನೋಡಿಕೊಳ್ಳುತ್ತೇನೆ’ ಎಂದು ಅಧಿಕಾರ ವಂಚಿತರು ಹೆದರಿಸುತ್ತಿದ್ದಾರೆ.

ಅಂದರೆ ಇನ್ನೊಂದು ಪಕ್ಷಕ್ಕೆ ಹೋಗಬಹುದು ಎಂದು ಇಂಗಿತ! ಇವರನ್ನು ಕಟ್ಟಿಕೊಂಡು ಆ ಇನ್ನೊಂದು ಪಕ್ಷವು ಸರ್ಕಾರ ರಚನೆ ಮಾಡಿದರೂ ಅಲ್ಲಿಯೂ ಅಧಿಕಾರ ವಂಚಿತರು ಇದೇ ರೀತಿ ಧಮಕಿ ಹಾಕುತ್ತಾರೆ. ಒಮ್ಮೆ ಇಂಥ ಬ್ಲ್ಯಾಕ್‌ಮೇಲ್‌ ತಂತ್ರಗಳಿಗೆ ಪಕ್ಷ ಮಣಿಯುತ್ತದೆ ಎಂದು ಗೊತ್ತಾದರೆ ಎಲ್ಲರೂ ಅದೇ ತಂತ್ರವನ್ನು ಬಳಸಿಕೊಳ್ಳುತ್ತಾರೆ. ಇಂಥ ಬೆದರಿಕೆಗಳಿಗೆ ಸೊಪ್ಪು ಹಾಕದೇ ಇರುವುದೇ ಇದಕ್ಕೆ ಇರುವ ಏಕೈಕ ಉತ್ತರ, ಪರಿಹಾರ.

ಸಂಪುಟ ರಚನೆ ಎಂಬುದು ಮುಖ್ಯಮಂತ್ರಿಯ ಪರಮಾಧಿಕಾರ. ರಾಜ್ಯದಲ್ಲಿ ಎರಡು ಪಕ್ಷಗಳು ಕೂಡಿ ಈಗ ಸರ್ಕಾರ ರಚನೆ ಮಾಡಿರುವುದರಿಂದ ಕಾಂಗ್ರೆಸ್‌ ಪಕ್ಷದ ಸಚಿವರನ್ನು ಆರಿಸುವುದು ಆ ಪಕ್ಷದ ಪರಮಾಧಿಕಾರ. ಅದರ ಆಯ್ಕೆಯಲ್ಲಿ ತಪ್ಪು ಇರಬಹುದು, ಕೆಲವರಿಗೆ ಅನ್ಯಾಯವಾಗಿರಬಹುದು. ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕೇ ಹೊರತು ಎಲ್ಲರೂ, ‘ನಾಲ್ಕು ದಿನ ಕಾಯುತ್ತೇನೆ’, ‘ಒಂದು ವಾರ ಕಾಯುತ್ತೇನೆ’ ಎಂದು ಬಹಿರಂಗವಾಗಿ ಗಡುವು ನೀಡುವುದು ಅಕ್ಷಮ್ಯ.

ಹಾಗೆ ಗಡುವು ನೀಡಿದವರಿಗೆಲ್ಲ ಸಂಪುಟದಲ್ಲಿ ಸ್ಥಾನ ಕೊಡಲು ಸಂವಿಧಾನದಲ್ಲಿ ಅವಕಾಶವಿಲ್ಲವಲ್ಲ? ಇದನ್ನು ಸಂಪುಟ ಸೇರಬೇಕು ಎನ್ನುವ ಆಕಾಂಕ್ಷಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು.

ಎಂ.ಬಿ. ಪಾಟೀಲರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಇರಲು ಅವರು ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನ ಒದಗಿಸುವ ಚಳವಳಿಯ ಮುಂಚೂಣಿಯಲ್ಲಿ ಇದ್ದುದೇ ಕಾರಣ ಎಂದು ಅನಿಸುತ್ತದೆ. ಅವರ ಜೊತೆಗೆ ಈ ಹೋರಾಟದಲ್ಲಿ ಇದ್ದವರು ಪರಾಜಿತರಾಗಿದ್ದಾರೆ.

ಅವರು ಗೆದ್ದಿದ್ದರೂ ಅವರಿಗೂ ಸಂಪುಟದಲ್ಲಿ ಸ್ಥಾನ ಸಿಗುತ್ತಿರಲಿಲ್ಲವೇನೋ! ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡಲು ಹೋಗಿ ತಾನು ತಪ್ಪು ಮಾಡಿದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಈಗ ಅನಿಸುತ್ತ ಇರಬಹುದು. ಅದಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಲು ಯಾರನ್ನಾದರೂ ಬಲಿಕೊಡಬೇಕು; ಅದು ತಾತ್ಕಾಲಿಕವಾಗಿಯಾದರೂ ಸರಿ. ಎಂ.ಬಿ.ಪಾಟೀಲ ಅಂಥ ಒಂದು ಬಲಿ.

ಅವರು ಮತ್ತೆ ಸಂಪುಟಕ್ಕೆ ಯಾವಾಗ ಸೇರುತ್ತಾರೆಂದು ತಿಳಿಯದು. ಸೇರಿದರೂ ಅವರಿಗೆ ಅವರು ಬಯಸುವ ಜಲಸಂಪನ್ಮೂಲ ಖಾತೆ ಮರಳಿ ಸಿಗುವುದಿಲ್ಲ. ಈಗ ಅದು ಡಿ.ಕೆ.ಶಿವಕುಮಾರ್‌ ಪಾಲಾಗಿದೆ.

ಪಾಟೀಲರು ಪಕ್ಷದ ವಿರುದ್ಧ ಬಂಡಾಯ ಸಾರಿದವರ ಮುಂಚೂಣಿಯಲ್ಲಿ ಇದ್ದಂತೆ ಭಾಸವಾಗುತ್ತದೆ. ಅವರ ಜೊತೆಗೆ ಎಷ್ಟು ಜನ ಶಾಸಕರು ಇದ್ದಾರೆ ಎಂಬುದು ಖಚಿತವಿಲ್ಲ. ಆದರೆ, ಅವರ ಹಾಗೆಯೇ ಸಚಿವ ಸ್ಥಾನ ಸಿಗದ, ಅವರಿಗಿಂತ ಸಂಪುಟದಲ್ಲಿ ಹಿರಿಯರಾಗಿದ್ದ ಎಚ್.ಕೆ.ಪಾಟೀಲರು, ತಮಗೆ ಸಚಿವ ಸ್ಥಾನ ಸಿಗುವುದಿಲ್ಲ ಎಂಬುದನ್ನು ಮನಗಂಡಂತೆ ಕಾಣುತ್ತದೆ. ಹಾಗೂ ‘ಸಚಿವ ಸ್ಥಾನಕ್ಕಾಗಿ ಹಾದಿರಂಪ, ಬೀದಿರಂಪ ಮಾಡುವುದು ಸಲ್ಲ’ ಎಂದು ಅವರು ಬಹಿರಂಗವಾಗಿ ಹೇಳಿದ್ದಾರೆ. ಪಕ್ಷದ ಪರಮಾಧಿಕಾರವು ತಮಗೆ ನ್ಯಾಯ ಒದಗಿಸಿಲ್ಲ ಎಂದು ಅನಿಸಿದಾಗಲೂ ಹೀಗೆ ಹೇಳುವುದು ರಾಜಕೀಯದಲ್ಲಿ ಬಹುಕಾಲ ‘ಬಾಳುವ’ ಲಕ್ಷಣ.

ಮಲ್ಲಿಕಾರ್ಜುನ ಖರ್ಗೆ ಅವರು ಹೀಗೆ ರಾಜಕೀಯದಲ್ಲಿ ಬಹುಕಾಲ ಬಾಳಿಕೊಂಡು ಬರಲು, ‘ರಾಜಕೀಯ ಒಂದು ಕಾಯುವ ಆಟ’ ಎಂದು ಅವರು ನಂಬಿದ್ದು ಕಾರಣ. ಕಳೆದ ಐದು ವರ್ಷಗಳಿಂದ ಖರ್ಗೆಯವರು ವಿರೋಧ ಪಕ್ಷದ ಮಾನ್ಯತೆ ಕೂಡ ಸಿಗದ ಒಂದು ಪಕ್ಷದ ನಾಯಕರಾಗಿ ಲೋಕಸಭೆಯಲ್ಲಿ ಕೆಲಸ ಮಾಡುತ್ತಿದ್ದಾರೆ. Absolute ಎನ್ನುವಂಥ ಬಹುಮತ ಇರುವ ಒಂದು ಪಕ್ಷದ ಸರ್ಕಾರ ಇರುವಾಗ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುವುದು ಬಹಳ ಕಷ್ಟ.

ಕರ್ನಾಟಕದ ರಾಜಕಾರಣದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಅವರಷ್ಟು ಅರ್ಹರಾದವರು ಬಹಳ ಕಡಿಮೆ ಇದ್ದಾರೆ. ಆದರೂ ಅವರು ಎಂದೂ ತಮ್ಮ ಆಸೆಯನ್ನು ಬಹಿರಂಗವಾಗಿ ತೋಡಿಕೊಂಡಿಲ್ಲ. ಹಾಗೆಂದು ಅವರಿಗೆ ಆಸೆಯಿಲ್ಲ ಎಂದು ಅಲ್ಲ. ಖರ್ಗೆ ಅವರದು ಎಂಥ ಪಕ್ಷ ನಿಷ್ಠೆ ಎಂದರೆ ಯಾರಾದರೂ ಬಂದು ಅವರ ತಲೆಗೆ ಪಿಸ್ತೂಲು ಇಟ್ಟು ‘ನೀನು ನಮ್ಮ ಪಕ್ಷಕ್ಕೆ ಸೇರದೇ ಇದ್ದರೆ ನಿನ್ನನ್ನು ಸಾಯಿಸಿಬಿಡುತ್ತೇನೆ’ ಎಂದರೆ ‘ಸಾಯಿಸು. ಆದರೆ, ನಾನು ನನ್ನ ಪಕ್ಷ ಬಿಡಲಾರೆ’ ಎನ್ನುವಂಥ ನಿಷ್ಠೆ. ಕಾಂಗ್ರೆಸ್ಸಿನ ಕಿರಿಯ ಶಾಸಕರಿಗೆ ಇದು ಪಾಠ ಅನಿಸುವುದಿಲ್ಲವೇ?

ವಿಧಾನಪರಿಷತ್ತಿಗೆ ಏಳು ಸಾರಿ ಗೆದ್ದು ‘ವಿಶ್ವದಾಖಲೆ’ಯನ್ನೇ ಸ್ಥಾಪಿಸಿರುವ ಬಸವರಾಜ ಹೊರಟ್ಟಿಯವರೂ ಪರಿಷತ್ತಿನ ಸಭಾಪತಿ ಸ್ಥಾನವನ್ನು ನಿರಾಕರಿಸುತ್ತಿರುವುದು ಆಶ್ಚರ್ಯಕರವಾಗಿದೆ. ಪರಿಷತ್ತಿನ ಅತ್ಯಂತ ಹಿರಿಯ ಸದಸ್ಯರಾದ ಹೊರಟ್ಟಿಯವರು ಅದೇ ಮನೆಯ ಅತ್ಯಂತ ಉನ್ನತ ಹುದ್ದೆಯನ್ನು ಒಲ್ಲೆ ಎನ್ನುತ್ತಿರುವುದು ಅಧಿಕಾರ ರಾಜಕಾರಣದ ವ್ಯಂಗ್ಯ ಎನ್ನಬೇಕೇ ಅಥವಾ ದುರಂತ ಎನ್ನಬೇಕೇ? ಕಾಗೋಡು ತಿಮ್ಮಪ್ಪನವರು ವಿಧಾನಸಭಾಧ್ಯಕ್ಷರಾಗಿದ್ದ ಕಾಲದುದ್ದಕ್ಕೂ ಅತೃಪ್ತ ಜೀವವಾಗಿದ್ದರು. ಕೊನೆಗೆ ತಾವು ಬಯಸಿದ ಖಾತೆಯನ್ನೇ ಪಡೆದ ನಂತರವೂ ಅವರಿಗೆ ತಾವು ಅಂದುಕೊಂಡುದನ್ನು ಮಾಡಲು ಆಗಲಿಲ್ಲ.

ಮಾಡಿದ್ದರೆ ಅವರು ಸಾಗರದಲ್ಲಿ ಸೋಲಬೇಕಿರಲಿಲ್ಲ. ರಾಜಕಾರಣದಲ್ಲಿ ಮಂತ್ರಿಯಾಗುವುದೇ ಪರಮ ಗುರಿ ಎಂದು ಎಲ್ಲ ಶಾಸಕರು ನಿರ್ಧರಿಸಿದರೆ ಪ್ರಜಾಪ್ರಭುತ್ವವನ್ನು ದೇವರೇ ಕಾಪಾಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry