ಬನ್ನೇರುಘಟ್ಟ: 10 ಗಣಿಗಳ ಚಟುವಟಿಕೆ ಸ್ಥಗಿತ

7
ಗಣಿ ನಿಯಮ ಉಲ್ಲಂಘನೆ:ಮಾಲೀಕರಿಗೆ ₹80 ಕೋಟಿ ದಂಡ–ಇಲಾಖೆ ನಿರ್ಧಾರ

ಬನ್ನೇರುಘಟ್ಟ: 10 ಗಣಿಗಳ ಚಟುವಟಿಕೆ ಸ್ಥಗಿತ

Published:
Updated:

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ 10 ಗಣಿಗಳ ಚಟುವಟಿಕೆ ಸ್ಥಗಿತಗೊಳಿಸಲು ಗಣಿ ಹಾಗೂ ಭೂವಿಜ್ಞಾನ ಇಲಾಖೆ ಆದೇಶಿಸಿದೆ.

ತಮ್ಮನಾಯಕನಹಳ್ಳಿಯಲ್ಲಿರುವ ಈ ಗಣಿಗಳು ಮಂಗಳವಾರದಿಂದಲೇ ಚಟುವಟಿಕೆ ಸ್ಥಗಿತಗೊಳಿಸಿವೆ. ಗಣಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಗಣಿಗಳ ಮಾಲೀಕರಿಗೆ ₹80 ಕೋಟಿ ದಂಡ ವಿಧಿಸಲು ಇಲಾಖೆ ನಿರ್ಧರಿಸಿದೆ. ಒಂದೆರಡು ದಿನಗಳಲ್ಲಿ ಈ ಪ್ರಕ್ರಿಯೆ ಆರಂಭವಾಗಲಿದೆ. ಶಿವನಹಳ್ಳಿಯ ಗಣಿ ಮಾಲೀಕರಿಗೆ ದಂಡದ ಪ್ರಮಾಣವನ್ನು ಇನ್ನಷ್ಟೇ ನಿರ್ಧಾರ ಮಾಡಬೇಕಿದೆ.

ಪರಿಸರ ಸೂಕ್ಷ್ಮ ಪ್ರದೇಶದ 1 ಕಿ.ಮೀ. ವ್ಯಾಪ್ತಿಯಲ್ಲಿರುವ ಕಲ್ಲಿನ ಕ್ವಾರಿಗಳು ಹಾಗೂ ಕ್ರಷರ್‌ಗಳ ಸ್ಥಗಿತಗೊಳಿಸಬೇಕು ಎಂದು ವಿನಂತಿಸಿ ಅರಣ್ಯ ಇಲಾಖೆಯು ಗಣಿ ಇಲಾಖೆಗೆ ಎರಡು ತಿಂಗಳ ಹಿಂದೆ ಪತ್ರ ಬರೆದಿತ್ತು. ಇದರ ಆಧಾರದಲ್ಲಿ ಶಿವನಹಳ್ಳಿ ಗ್ರಾಮದಲ್ಲಿದ್ದ ಕುಶಲ ಸ್ಟೋನ್ಸ್‌ ಕಂಪನಿಯ ಮೂರು ಗುತ್ತಿಗೆಗಳು, ಅಶೋಕ ಹಾಗೂ ಸುರೇಶ ಎಂಬುವರ ಗಣಿಗಳ ಗುತ್ತಿಗೆಯನ್ನು ಅಮಾನತುಗೊಳಿಸಿ ಏಪ್ರಿಲ್‌ 26ರಂದು ಇಲಾಖೆ ಆದೇಶಿಸಿತ್ತು.

ಪರಿಸರ ಸೂಕ್ಷ್ಮ ಪ್ರದೇಶದ 10 ಕಿ.ಮೀ. ವ್ಯಾಪ್ತಿಯೊಳಗಿರುವ ಗಣಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆ ಪತ್ರ ಬರೆದಿತ್ತು. ಬಳಿಕ 10 ಕ್ವಾರಿಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿತ್ತು. ಆ ನಂತರ ಅರಣ್ಯ, ಗಣಿ ಹಾಗೂ ಕಂದಾಯ ಇಲಾಖೆಯ ಸಹಯೋಗದಲ್ಲಿ ಜಂಟಿ ಸರ್ವೆ ನಡೆಸಲಾಗಿತ್ತು.

‘ಗಣಿ ಕಂಪನಿಗಳ ಮಾಲೀಕರ ಅಕ್ರಮವನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಆನೆ ಕಾರಿಡಾರ್‌ನಲ್ಲಿ ರಸ್ತೆಗಳನ್ನು ನಿರ್ಮಿಸಿ ನಿಯಮ ಉಲ್ಲಂಘಿಸಿದ್ದಾರೆ. ಗಣಿಗಾರಿಕೆ ನಡೆಸುವ ಮುನ್ನ ಕೇಂದ್ರ ವನ್ಯಜೀವಿ ಮಂಡಳಿಯಿಂದಲೂ ಪರಿಸರ ಅನುಮತಿ ಪಡೆದಿಲ್ಲ. ಹೀಗಾಗಿ, ಗಣಿಗಾರಿಕೆ ಸ್ಥಗಿತಗೊಳಿಸಲು ಆದೇಶ ನೀಡಿದ್ದೇನೆ’ ಎಂದು ಗಣಿ ಇಲಾಖೆಯ ನಿರ್ದೇಶಕ ಎನ್‌.ಎಸ್‌.ಪ್ರಸನ್ನ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾಲೀಕರು ಗುತ್ತಿಗೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅಲ್ಲಿ ಗಡಿ ರೇಖೆಗಳೇ ಇಲ್ಲ. ನೆಲಕ್ಕೆ ಮನಸೋ ಇಚ್ಛೆ ಕನ್ನ ಹಾಕಿದ್ದಾರೆ. ಗಣಿಗಳ ಮೀಸಲು ಪ್ರದೇಶ ಕನಿಷ್ಠ 5 ಮೀಟರ್‌ ಬಿಡಬೇಕಿತ್ತು. ಇಲ್ಲಿ ಆ ಕೆಲಸವೂ ಆಗಿಲ್ಲ. ಒಂದು ಲಕ್ಷ ಟನ್‌ ತೆಗೆಯಲು ಅನುಮತಿ ಕೋರಿ 20 ಲಕ್ಷ ಟನ್‌ನಷ್ಟು ತೆಗೆದ ಉದಾಹರಣೆಗಳೂ ಇವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಆದೇಶ ಹೊರಡಿಸಿದ್ದೇನೆ’ ಎಂದು ಅವರು ಮಾಹಿತಿ ನೀಡಿದರು.

ರಾಷ್ಟ್ರೀಯ ಉದ್ಯಾನವನ್ನು ಸಮೃದ್ಧ ಸಸ್ಯ ಮತ್ತು ಪ್ರಾಣಿ ವೈವಿಧ್ಯವನ್ನು ಹೊಂದಿರುವ ಪ್ರದೇಶ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ 2016ರಲ್ಲಿ ಗುರುತಿಸಿದೆ. ‘ಉದ್ಯಾನದ ರಾಗಿಹಳ್ಳಿ ಬಳಿ ನಿಯಮಗಳನ್ನು ಗಾಳಿಗೆ ತೂರಿ ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವನ್ಯಜೀವಿಗಳಿಗೆ ತೊಂದರೆ ಉಂಟಾಗುತ್ತಿದೆ’ ಎಂದು ಆರೋಪಿಸಿ ಕೇಂದ್ರ ಪರಿಸರ ಸಚಿವ ಡಾ.ಹರ್ಷವರ್ಧನ ಅವರಿಗೆ ‘ವೃಕ್ಷಾ ಪ್ರತಿಷ್ಠಾನ’ವು ಇತ್ತೀಚೆಗೆ ದೂರು ಸಲ್ಲಿಸಿತ್ತು.

ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಚೇಂಜ್‌ ಡಾಟ್‌ ಆರ್ಗ್‌ ವೆಬ್‌ಸೈಟ್‌ನಲ್ಲಿ (www.change.org) ಅಭಿಯಾನ ನಡೆದಿತ್ತು. ಇದಕ್ಕೆ 15 ಸಾವಿರ ಮಂದಿ ಸಹಿ ಹಾಕಿದ್ದರು. ಗಣಿಗಾರಿಕೆ ಸ್ಥಗಿತಕ್ಕೆ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಪ್ರೊ.ಟಿ.ವಿ.ರಾಮಚಂದ್ರ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎಫ್‌.ಸಲ್ಡಾನ, ‘ವೈಲ್ಡ್‌ ಲೈಫ್‌ ಫಸ್ಟ್‌’ನ ವ್ಯವಸ್ಥಾಪಕ ಟ್ರಸ್ಟಿ ಪ್ರವೀಣ್‌ ಭಾರ್ಗವ್‌, ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಸೇರಿದಂತೆ ಹಲವರು ಒತ್ತಾಯಿಸಿದ್ದರು.

‘ನಮ್ಮ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಪ್ರಾಣಿಗಳ ಸಂಚಾರಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಪರಿಸರ ಮಾಲಿನ್ಯದಿಂದ ಗ್ರಾಮಗಳ ಜನರು ಕಂಗೆಟ್ಟಿದ್ದರು. ಇದಕ್ಕೂ ಮುಕ್ತಿ ಸಿಕ್ಕಿದೆ. ಈ ಭಾಗ ವೇಗವಾಗಿ ನಗರೀಕರಣಗೊಳ್ಳುತ್ತಿದೆ. ಪ್ರಾಣಿಗಳ ಆವಾಸಸ್ಥಾನ ಕಾಪಾಡುವುದು ದೊಡ್ಡ ಸವಾಲು’ ಎಂದು ‘ವೃಕ್ಷಾ ಪ್ರತಿಷ್ಠಾನ’ದ ವಿಜಯ್‌ ನಿಶಾಂತ್‌ ತಿಳಿಸಿದರು.

ಅಂಕಿ ಅಂಶಗಳು

268.96 ಚದರ ಕಿ.ಮಿ.

ಬನ್ನೇರುಘಟ್ಟ ಸಂರಕ್ಷಿತ ಪ್ರದೇಶದ ವ್ಯಾಪ್ತಿ

77

ಗ್ರಾಮಗಳು ಇಲ್ಲಿವೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry