ರತ್ನಪ್ರಭಾ ವಿರುದ್ಧ ಎಸಿಬಿಗೆ ದೂರು

7
ಐಟಿಐ ಪ್ರಿನ್ಸಿಪಾಲರ ಮುಂಬಡ್ತಿ ಪ್ರಕರಣ

ರತ್ನಪ್ರಭಾ ವಿರುದ್ಧ ಎಸಿಬಿಗೆ ದೂರು

Published:
Updated:
ರತ್ನಪ್ರಭಾ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು: ಸರ್ಕಾರಿ ಐಟಿಐಗಳ ಕಿರಿಯ ತರಬೇತಿದಾರರ ಪೈಕಿ ಎಂಜಿನಿಯರಿಂಗ್‌ ಪದವಿ ಆಧಾರದಲ್ಲಿ ನೇರವಾಗಿ ಮುಂಬಡ್ತಿ ಹೊಂದಿರುವ ಪ್ರಿನ್ಸಿಪಾಲರ (ಗ್ರೇಡ್‌ 1 ಹಾಗೂ 2) ಹಿಂಬಡ್ತಿ ಸಂಬಂಧ ಸುಪ್ರೀಂ ಕೋರ್ಟ್‌ ಮಧ್ಯಂತರ ತೀರ್ಪು ಜಾರಿಯಾಗದಂತೆ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲಾಗಿದೆ.

ಪ್ರಿನ್ಸಿ‍ಪಾಲರ ಹುದ್ದೆಗಳಿಗೆ ನೇರ ಬಡ್ತಿ ಹೊಂದಿರುವವರನ್ನು ಹಿಂಬಡ್ತಿಗೊಳಿಸುವಂತೆ ಆರು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ ಮಧ್ಯಂತರ ತೀರ್ಪು ನೀಡಿದೆ. ಆದರೆ, ಅಂತಿಮ ತೀರ್ಪು ಬರುವವರೆಗೂ ಮಧ್ಯಂತರ ತೀರ್ಪು ಜಾರಿಗೆ ಕ್ರಮ ಕೈಗೊಳ್ಳಬಾರದು ಎಂದು ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಕೋರ್ಟ್‌ ತೀರ್ಪು ಜಾರಿಗೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಇಲಾಖೆ ಕಾರ್ಯದರ್ಶಿ ಕ್ರಮ ವಹಿಸಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ತೀರ್ಪು ಜಾರಿ ನೆನೆಗುದಿಗೆ ಬಿದ್ದಿದೆ ಎಂದು ದೂರಲಾಗಿದೆ.

‘ಒಂದೇ ಹುದ್ದೆ ಒಂದೇ ವೇತನ’ ತತ್ವದಡಿ ಕೆಲಸ ಮಾಡುತ್ತಿದ್ದ ನೌಕರರಲ್ಲಿ ಕೆಲವರಿಗೆ ಬಿ.ಇ ಪದವಿ ಮೇಲೆ ಮುಂಬಡ್ತಿ ನೀಡಲು ಅವಕಾಶ ಕಲ್ಪಿಸುವ ಸಂಬಂಧ ತಿದ್ದುಪಡಿ ಮಾಡಲಾಗಿತ್ತು. ತಿದ್ದುಪಡಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ನ್ಯಾಯಾಲಯದ ತೀರ್ಪು ಜಾರಿಗೊಳಿಸುವಂತೆ ಆಗಿನ ಅಡ್ವೊಕೇಟ್‌ ಜನರಲ್‌ ಸರ್ಕಾರಕ್ಕೆ ಸಲಹೆ ನೀಡಿದ್ದರು.

ಮುಖ್ಯ ಕಾರ್ಯದರ್ಶಿ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ತೀರ್ಪು ಜಾರಿಯಾಗದಂತೆ ತಡೆ ಹಿಡಿದಿದ್ದಾರೆ ಎಂದೂ ದೂರಿನಲ್ಲಿ ಹೇಳಲಾಗಿದೆ.

ಉದ್ಯೋಗ ತರಬೇತಿ ಇಲಾಖೆ ಕಾರ್ಯದರ್ಶಿ, ಕಮಿಷನರ್‌ ಕಾರ್ಯವೈಖರಿಯಲ್ಲಿ ಮುಖ್ಯ ಕಾರ್ಯದರ್ಶಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಐಟಿಐ ನಿವೃತ್ತ ನೌಕರ ಶಂಕರ ದೇವೇಗೌಡ ಎಂಬುವವರು ದೂರಿನಲ್ಲಿ ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry