3
ಅಲ್ಪಸಂಖ್ಯಾತ ಆಯೋಗಕ್ಕೆ ಮುಸ್ಲಿಮರ ನೇಮಕ ರೂಢಿಗತ ಪದ್ಧತಿ

ಕಾರ್ಯದರ್ಶಿ ಅಭಿಪ್ರಾಯಕ್ಕೆ ಕೋರ್ಟ್ ಅಸಮಾಧಾನ

Published:
Updated:
ಕಾರ್ಯದರ್ಶಿ ಅಭಿಪ್ರಾಯಕ್ಕೆ ಕೋರ್ಟ್ ಅಸಮಾಧಾನ

ಬೆಂಗಳೂರು: ‘ರಾಜ್ಯದಲ್ಲಿರುವ ಆರು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನೇ ನೇಮಕ ಮಾಡುವುದು ರೂಢಿಗತ ಪದ್ಧತಿಯಾಗಿ ನಡೆದುಕೊಂಡು ಬಂದಿದೆ’ ಎಂಬ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅಭಿಪ್ರಾಯಕ್ಕೆ ಹೈಕೋರ್ಟ್ ಅತೃಪ್ತಿಯನ್ನು ವ್ಯಕ್ತಪಡಿಸಿದೆ.

ಈ ಕುರಿತಂತೆ ಶಿವಮೊಗ್ಗದ ವಕೀಲ ಬಿ.ವಿನೋದ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಅರುಣ್ ಶ್ಯಾಮ್, ‘ಆಯೋಗಕ್ಕೆ ಮುಸ್ಲಿಮರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿದೆ. ಸರತಿ ಆಧಾರದಲ್ಲಿ ಇತರೆ ಅಲ್ಪಸಂಖ್ಯಾತ ಸಮುದಾಯಗಳಿಗೂ ಅವಕಾಶ ಕಲ್ಪಿಸಲು ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನಿಮ್ಮ ವಾದಕ್ಕೆ ಏನು ಆಧಾರವಿದೆ. ಎಲ್ಲರಿಗೂ ಸಮಾನ ಪ್ರಾತಿನಿಧ್ಯ ಕೊಡಬೇಕು ಎಂಬ ಕಾಯ್ದೆ ಎಲ್ಲಿದೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಅರುಣ್ ಶ್ಯಾಮ್, ‘ರಾಜ್ಯ ಅಲ್ಪಸಂಖ್ಯಾತ ಆಯೋಗ ರಚನೆಯಾದ ಮೊದಲ ದಿನದಿಂದಲೂ ಮುಸ್ಲಿಮರೇ ಅಧ್ಯಕ್ಷರಾಗುತ್ತಾ ಬಂದಿದ್ದಾರೆ. ಇತರೆ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯವೇ ಇಲ್ಲದಂತಾಗಿದೆ. ಹಾಗಾಗಿ ಅವರಿಗೂ ರೊಟೇಶನ್‌ (ಸರತಿ) ಆಧಾರದಲ್ಲಿ ಅವಕಾಶ ನೀಡಬೇಕು’ ಎಂದು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಮನವಿ ಕೊಟ್ಟಿದ್ದೆವು’ ಎಂದು ಹೇಳಿದರು.

‘ಆಯೋಗ ರಚನೆಯಾದ ಮೊದಲ ದಿನದಿಂದಲೂ ಮುಸ್ಲಿಮ್ ಸಮುದಾಯದವರೇ  ಅಧ್ಯಕ್ಷರಾಗುತ್ತಾ ಬಂದಿದ್ದಾರೆ. ಸಮಾನ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಿ ಎಂಬುದಷ್ಟೇ ನಮ್ಮ ಮನವಿ. ಈ ಕುರಿತಂತೆ ನಾವು ಕೊಟ್ಟ ಮನವಿಯನ್ನು ತಿರಸ್ಕರಿಸುವಾಗ ಆಯೋಗದ ಕಾರ್ಯದರ್ಶಿ ನಮಗೆ ಸಮರ್ಪಕ ಕಾರಣ ಕೊಟ್ಟಿಲ್ಲ’ ಎಂದು ಹೇಳಿದರು.

‘ಕಾರ್ಯದರ್ಶಿ ಮೊಹಮದ್ ಮೊಹಿಸೀನ್‌ 2017ರ ಜುಲೈ 14ರಂದು ನೀಡಿರುವ ಆದೇಶದಲ್ಲಿ ಮುಸ್ಲಿಮರಿಗೇ ಕೊಡುವುದು ವಾಡಿಕೆಯಾಗಿದೆ ಎಂದು ತಿಳಿಸಿದ್ದಾರೆ’ ಎಂದು ವಿವರಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ಇದು ಸರ್ಕಾರದ ನಿಲುವೇ ಅಥವಾ ಕಾರ್ಯದರ್ಶಿ ಅಭಿಪ್ರಾಯವೇ’ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತು.

‘ಸರ್ಕಾರಿ ಇಲಾಖೆಯ ಒಬ್ಬ ಕಾರ್ಯದರ್ಶಿಯು ತಮ್ಮ ಮುಂದೆ ವಿಚಾರಣೆಗೆ ಬಂದ ಪ್ರಕರಣದಲ್ಲಿ ಈ ರೀತಿ ಅಭಿಪ್ರಾಯವನ್ನು ಆದೇಶ ರೂಪದಲ್ಲಿ ದಾಖಲಿಸುವುದು ಎಷ್ಟರ ಮಟ್ಟಿಗೆ ಸರಿ. ಇದಕ್ಕೆ ಸರ್ಕಾರದ ನಿಲುವೇನು’ ಎಂದು ಪ್ರಶ್ನಿಸಿದ್ದು ಪ್ರಕರಣವನ್ನು ಮೂರು ವಾರಗಳ ಕಾಲ ಮುಂದೂಡಿದೆ.

ಮುಸ್ಲಿಮರು ಹತ್ತು ಪಟ್ಟು ಹೆಚ್ಚಿದ್ದಾರೆ...

ಅರ್ಜಿದಾರರ ಮನವಿ ತಿರಸ್ಕರಿಸಿದ್ದ ಆಯೋಗದ ಕಾರ್ಯದರ್ಶಿಗಳು ತಮ್ಮ ಆದೇಶದಲ್ಲಿ, ‘2011ರ ಜನಗಣತಿ ಪ್ರಕಾರ ರಾಜ್ಯದಲ್ಲಿರುವ ಅಲ್ಪಸಂಖ್ಯಾತರಲ್ಲಿ ಮುಸ್ಲಿಮರು ಶೇ 12.91, ಕ್ರಿಶ್ಚಿಯನ್‌ 1.87, ಜೈನರು 0.72, ಸಿಖ್ಖರು 0.05, ಬೌದ್ಧರು 0.72 ಮತ್ತು ಪಾರ್ಸಿಗಳು 0.1ರಷ್ಟು ಇದ್ದಾರೆ’ ಎಂದು ತಿಳಿಸಿದ್ದಾರೆ.

‘ಈ ಸಂಖ್ಯೆಗೆ ಹೋಲಿಸಿದರೆ ಮುಸ್ಲಿಮರು ಇತರೆಲ್ಲಾ ಅಲ್ಪಸಂಖ್ಯಾತ ಸಮುದಾಯಕ್ಕಿಂತ ಹತ್ತು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾಯ್ದೆ–2011ರ ಪ್ರಕಾರ ಅಧ್ಯಕ್ಷರ ಆಯ್ಕೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸ್ವತಂತ್ರವಾಗಿದೆ’ ಎಂದೂ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry