ಇಂದಿರಾ ಕ್ಯಾಂಟೀನ್‌; ಹೆಚ್ಚಿದ ಬೇಡಿಕೆ

7
ಜನನಿಬಿಡ ಪ್ರದೇಶಗಳಲ್ಲಿ ದಟ್ಟಣೆ ಹೆಚ್ಚು; ಮಹತ್ವಾಕಾಂಕ್ಷಿ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ

ಇಂದಿರಾ ಕ್ಯಾಂಟೀನ್‌; ಹೆಚ್ಚಿದ ಬೇಡಿಕೆ

Published:
Updated:
ಇಂದಿರಾ ಕ್ಯಾಂಟೀನ್‌; ಹೆಚ್ಚಿದ ಬೇಡಿಕೆ

ಬೆಂಗಳೂರು: ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿತ್ಯ ಆಹಾರ ಬೇಡಿಕೆ ಪ್ರಮಾಣ ಹೆಚ್ಚುತ್ತಲೇ ಇದೆ.

ಹಿಂದಿನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಮಹಾನಗರದ ಉದ್ಯೋಗಿಗಳಿಗೆ, ಅಲ್ಪವೇತನದಲ್ಲಿ ಬದುಕು ಕಟ್ಟಿಕೊಳ್ಳಲು ಬಂದ ಯುವಜನರ ಹಸಿವು ತಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರೆ ಕ್ಯಾಂಟೀನ್‌ಗಳ ಬಳಕೆದಾರರು.

ಮಹಾನಗರದ 198 ವಾರ್ಡ್‌ಗಳಲ್ಲಿಯೂ ಒಂದೊಂದು ಕ್ಯಾಂಟೀನ್‌ ಇದೆ. ₹10ಕ್ಕೆ ಇಡ್ಲಿ, ಪೊಂಗಲ್‌ ಅಥವಾ ಚಿತ್ರಾನ್ನ, ಪುಳಿಯೊಗರೆ, ಉಪ್ಪಿಟ್ಟು... ಹೀಗೆ ಪ್ರತಿದಿನ ಒಂದೊಂದು ತಿಂಡಿ ಒದಗಿಸಲಾಗುತ್ತದೆ.

‘ಆರಂಭದಲ್ಲಿ ಸಣ್ಣಪುಟ್ಟ ದೋಷಗಳಿದ್ದದ್ದು ನಿಜ. ಅದೆಲ್ಲವನ್ನೂ ಸರಿಪಡಿಸಿಕೊಂಡು ಕ್ಯಾಂಟೀನ್‌ ನಿರ್ವಹಿಸುತ್ತಿದ್ದೇವೆ. ಇದುವರೆಗೆ ಯಾವುದೇ ಗಂಭೀರ ದೂರು ಬಂದಿಲ್ಲ’ ಎಂದು ಮೆಜೆಸ್ಟಿಕ್‌ ನಿಲ್ದಾಣದ ಸಮೀಪದ ಕ್ಯಾಂಟೀನ್‌ ನಿರ್ವಾಹಕರು ಹೇಳಿದರು.

ಹೆಚ್ಚು ಬೇಡಿಕೆ ಇರುವ ಕ್ಯಾಂಟೀನ್‌ಗಳು:  ‘ಮೆಜೆಸ್ಟಿಕ್‌, ಚಿಕ್ಕಪೇಟೆ, ಕೆ.ಆರ್‌.ಮಾರುಕಟ್ಟೆಯಂಥ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ಬೆಳಿಗ್ಗೆ ಉಪಾಹಾರಕ್ಕೆ ಸುಮಾರು 800ರಿಂದ 1 ಸಾವಿರ ಜನ ಬರುತ್ತಾರೆ. ಮಧ್ಯಾಹ್ನ 5 ಸಾವಿರ ಜನ ಊಟ ಮಾಡಿದ್ದೂ ಇದೆ. ಮಿತ ದರದಲ್ಲಿ ಹಿತವಾದ ಆಹಾರ ಕೊಡುತ್ತಿರುವುದೇ ಈ ಪರಿಕಲ್ಪನೆಯ ಪ್ಲಸ್‌ ಪಾಯಿಂಟ್‌’ ಎಂದರು ಈ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಚೆಫ್‌ಟಾಕ್‌ ಸಂಸ್ಥೆಯ ಬಾಲು.

‘ವಿಜಯನಗರ, ಅಗ್ರಹಾರ ದಾಸರಹಳ್ಳಿ ಪ್ರದೇಶದ ಕ್ಯಾಂಟೀನ್‌ಗಳಿಗೆ ಸಾಮಾನ್ಯ ಪ್ರಮಾಣದ ಬೇಡಿಕೆಯೇ ಇದೆ. ವಿಜಯನಗರದಲ್ಲಿ ಮೆಟ್ರೊ ರೈಲು ಸೇತುವೆಯ ಕೆಳಗಿರುವ ಕ್ಯಾಂಟೀನ್‌ ಮುಂಭಾಗ ಸಾಲು ಸಾಲು ದರ್ಶಿನಿ ಹೋಟೆಲ್‌ಗಳೇ ಇವೆ. ಹೀಗಾಗಿ ಇಲ್ಲಿ ಬೇಡಿಕೆ ಸಾಮಾನ್ಯ ಪ್ರಮಾಣದಲ್ಲಿ ಇದೆ’ ಎನ್ನುತ್ತಾರೆ ಗ್ರಾಹಕರು.

ಹೋಟೆಲ್‌ಗಳಿಗೆ ಧಕ್ಕೆ ಇಲ್ಲ: ‘ಇಂದಿರಾ ಕ್ಯಾಂಟೀನ್‌ ಬಂದರೂ ನಮ್ಮ ವ್ಯಾಪಾರಕ್ಕೆ ಇದುವರೆಗೆ ಯಾವುದೇ ತೊಂದರೆ ಆಗಿಲ್ಲ. ಏಕೆಂದರೆ ನಾವೂ ಮಿತದರದಲ್ಲೇ ಆಹಾರ ಪೂರೈಸುತ್ತೇವೆ. ಪರಿಪೂರ್ಣವಾದ ಉಪಾಹಾರವನ್ನು ನಾವು ಕೊಡುತ್ತೇವೆ (ಬಗೆಬಗೆಯ ತಿಂಡಿ ಮತ್ತು ಪೇಯಗಳು). ಕುಳಿತುಕೊಂಡು ಆರಾಮವಾಗಿ ತಿನ್ನುವ ವ್ಯವಸ್ಥೆಯೂ ಇದೆ. ಹೀಗಾಗಿ ನಮ್ಮ ಗ್ರಾಹಕರ ಆಯ್ಕೆಯಲ್ಲಿ ಬದಲಾಗಿಲ್ಲ’ ಎಂದು ಅಗ್ರಹಾರ ದಾಸರಹಳ್ಳಿ ಸಮೀಪದ ದರ್ಶಿನಿ ಮಾಲೀಕರೊಬ್ಬರು ಹೇಳಿದರು.

ಬದಲಾವಣೆಯ ತುಡಿತ...

‘ಉಪಾಹಾರದ ತಿಂಡಿಗಳಲ್ಲಿ ಐಟಂ ಹೆಚ್ಚಿಸಬೇಕು. ಇಡ್ಲಿ ಮತ್ತು ಪೊಂಗಲ್‌ನಲ್ಲಿ ರುಚಿಗೆ ಆದ್ಯತೆ ನೀಡಬೇಕು. ಬೆಳಿಗ್ಗೆ ಮತ್ತು ರಾತ್ರಿ ತಿಂಡಿಯ ಜತೆಗೆ ಚಹಾ/ ಕಾಫಿ/ ಹಾಲು ಇಂಥ ಪೇಯಗಳು ಸಿಗುವಂತಾಗಬೇಕು. ಬೆಳಿಗ್ಗೆ 10 ಗಂಟೆಗೆ ಕ್ಯಾಂಟೀನನ್ನು ಬಂದ್‌ ಮಾಡಲಾಗುತ್ತದೆ. ಆ ಸಮಯವನ್ನು ವಿಸ್ತರಿಸಬೇಕು’ ಎಂದು ಕೇಳುತ್ತಾರೆ ವಿಜಯನಗರದ ವಿದ್ಯಾರ್ಥಿಗಳಾದ ವಿಜಯ್‌ ಮತ್ತು ರಮೇಶ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry