ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶವಂತಪುರ ರೈಲು ಹಾಸನವರೆಗೆ ವಿಸ್ತರಣೆ

ಇಂದಿನಿಂದ ಜಾರಿ; ಕಲಬುರ್ಗಿಗೆ ಸೀಟು ಕಡಿತದ ಆತಂಕ
Last Updated 13 ಜೂನ್ 2018, 9:41 IST
ಅಕ್ಷರ ಗಾತ್ರ

ಕಲಬುರ್ಗಿ: ಸೊಲ್ಲಾಪುರ–ಯಶವಂತಪುರ ರೈಲನ್ನು ಹಾಸನದ ವರೆಗೆ ವಿಸ್ತರಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಜೂನ್‌ 13ರಿಂದ ಈ ರೈಲು ಹಾಸನದ ವರೆಗೆ ಸಂಚಾರ ಆರಂಭಿಸಲಿದೆ.

22133/22134 ಈ ರೈಲಿನ ಸಂಖ್ಯೆ 11311/11312 ಎಂದು ಬದಲಾಗಿದೆ.

ಹಾಸನದ ವರೆಗೆ ವಿಸ್ತರಿಸಿರುವುದರಿಂದ ಕಲಬುರ್ಗಿಗೆ ಈಗ ಲಭಿಸುತ್ತಿರುವ ಸೀಟುಗಳು ಕಡಿತವಾಗಲಿವೆ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸುತ್ತಿದ್ದರೆ, ಸೀಟುಗಳಲ್ಲಿ ಸದ್ಯ ಯಾವುದೇ ಕಡಿತ ಇಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

‘ಸೊಲ್ಲಾಪುರ– ಯಶವಂತಪುರ ರೈಲನ್ನು ಹಾಸನದ ವರೆಗೆ ವಿಸ್ತರಿಸಿದ್ದರೂ ಸಹ ಈ ರೈಲು ಚಲಿಸುವ ಸಮಯ ಮತ್ತು ನಿಲುಗಡೆಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಯಶವಂತಪುರಕ್ಕೆ ತೆರಳುವ ಪ್ರಯಾಣಿಕರಿಗೆ ಸೊಲ್ಲಾಪುರಕ್ಕೆ 66 ಹಾಗೂ ಕಲಬುರ್ಗಿಗೆ 194 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಯಶವಂತಪುರದಿಂದ ಬರುವಾಗ ಕಲಬುರ್ಗಿ ಮತ್ತು ಸೊಲ್ಲಾಪುರ ಸೇರಿ ಒಟ್ಟು 252 ಸೀಟುಗಳಿವೆ. ಈ ಕೋಟಾದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ’ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘120 ದಿನಗಳ ವರೆಗೆ ಈ ಕೋಟಾದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಹಾಸನದಿಂದ ಕಲಬುರ್ಗಿ, ಸೊಲ್ಲಾಪುರಕ್ಕೆ ಟಿಕೆಟ್‌ ಬುಕ್ಕಿಂಗ್‌ಗೆ ಇನ್ನೂ ಸೀಟು ಹಂಚಿಕೆ ಮಾಡಿಲ್ಲ. ಮುಂದೆ ಹಂಚಿಕೆ ಮಾಡಿದರೆ ಯಶವಂತಪುರದಿಂದ ಈಗ ಲಭ್ಯವಿರುವ 252 ಸೀಟುಗಳಲ್ಲಿ ಸ್ವಲ್ಪ ಕಡಿತವಾಗಬಹುದು. ಆದರೆ, ಸೊಲ್ಲಾಪುರ ಮತ್ತು ಕಲಬುರ್ಗಿಯಿಂದ ಯಶವಂತಪುರಕ್ಕೆ ಹೋಗಲು ಇರುವ ಸೀಟುಗಳ ಕೋಟಾದಲ್ಲಿ ಯಾವುದೇ ಕಡಿತವಾಗುವುದಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ಅನ್ಯಾಯದ ಪರಮಾವಧಿ: ‘ಬಸವ ಎಕ್ಸ್‌ಪ್ರೆಸ್‌ ರೈಲನ್ನು ವಿಜಯಪುರ– ಬಾಗಲಕೋಟೆ ವರೆಗೆ ವಿಸ್ತರಿಸಿದ್ದರಿಂದ ಆ ರೈಲಿನಲ್ಲಿ ಕಲಬುರ್ಗಿಗೆ 251ರ ಬದಲು ಕೇವಲ 10 ಸೀಟುಗಳ ಕೋಟಾ ನಿಗದಿ ಪಡಿಸಲಾಗಿದೆ. ಈ ರೈಲಿನ ಸ್ಥಿತಿಯೂ ಅದೇ ರೀತಿಯಾಗಲಿದೆ’ ಎಂದು ಹೈದರಾಬಾದ್‌ ಕರ್ನಾಟಕ ರೈಲ್ವೆ ಗ್ರಾಹಕರ ವೇದಿಕೆಯ ಅಧ್ಯಕ್ಷ ಸುನೀಲ ಕುಲಕರ್ಣಿ ಆತಂಕ ವ್ಯಕ್ತಪಡಿಸಿದರು.

‘ಬೀದರ್‌– ಯಶವಂತಪುರ ಹಾಗೂ ನಾಂದೇಡ– ಬೆಂಗಳೂರು ರೈಲುಗಳು ಚಿತ್ತಾಪುರ, ಸೇಡಂ ಮಾರ್ಗವಾಗಿ ಹೋಗುತ್ತಿವೆ. ಅವುಗಳನ್ನು ಕಲಬುರ್ಗಿ ಮಾರ್ಗವಾಗಿ ಓಡಿಸುವುದೇ ಪರಿಹಾರ’ ಎಂದು ಅವರು ಹೇಳಿದರು.

ಸಂಖ್ಯೆ ಬದಲು ಬೇಡ: ‘ಸೊಲ್ಲಾಪುರ– ಯಶವಂತಪುರ ರೈಲಿನ ಸಂಖ್ಯೆ ಬದಲಿಸುವುದು ಬೇಡ. ಯಶವಂತಪುರ– ಹಾಸನದವರೆಗೆ ಸಂಚರಿಸುವಾಗ ಹೊಸ ರೈಲು ಸಂಖ್ಯೆ ನೀಡಬೇಕು ಮತ್ತು ಆ ಮಾರ್ಗದಲ್ಲಿ ಸೂಪರ್‌ ಫಾಸ್ಟ್‌ ಪ್ಯಾಸೆಂಜರ್‌ ರೈಲನ್ನಾಗಿ ಮಾರ್ಪಡಿಸಬೇಕು’ ಎಂದು ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಅಮರನಾಥ ಸಿ.ಪಾಟೀಲ, ಗೌರವ ಕಾರ್ಯದರ್ಶಿ ಶಶಿಕಾಂತ ಬಿ. ಪಾಟೀಲ ಅವರು ಪ್ರಧಾನಿ ಹಾಗೂ ರೈಲ್ವೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

‘ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದು, ಕಲಬುರ್ಗಿಯಿಂದ ಬೆಂಗಳೂರು ಮತ್ತು ಮುಂಬೈಗೆ ಹೊಸ ರೈಲುಗಳನ್ನು ಆರಂಭಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ವೇಳಾಪಟ್ಟಿ

ಒಟ್ಟು 22 ಬೋಗಿಗಳನ್ನು ಈ ರೈಲು ಹೊಂದಿದೆ. ಸಂಜೆ 7.20ಕ್ಕೆ ಸೊಲ್ಲಾಪುರದಿಂದ ಹೊರಡುವ ಈ ರೈಲು ರಾತ್ರಿ 9.05ಕ್ಕೆ ಕಲಬುರ್ಗಿಗೆ ಬರಲಿದೆ. ಯಶವಂತಪುರವನ್ನು ಮರುದಿನ ಬೆಳಿಗ್ಗೆ 7.10ಕ್ಕೆ ತಲುಪಲಿದೆ. ಯಶವಂತಪುರದಿಂದ ರಾತ್ರಿ 8.50ಕ್ಕೆ ಹೊರಟು ಕಲಬುರ್ಗಿಗೆ ಮರುದಿನ ಬೆಳಿಗ್ಗೆ 6.25ಕ್ಕೆ ಬರಲಿದೆ. ಸೊಲ್ಲಾಪುರಕ್ಕೆ 8.40ಕ್ಕೆ ತಲುಪಲಿದೆ. ಈ ಸಮಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ನಿಲುಗಡೆ: ಯಶವಂತಪುರ–‌ ಹಾಸನ ಮಧ್ಯೆ ಚಿಕ್ಕಬಾಣಾವರ, ನೆಲಮಂಗಲ, ಸೋಲೂರು, ತಿಪ್ಪಸಂದ್ರ, ಕುಣಿಗಲ್‌, ಯಡಿಯೂರು, ಬಿ.ಜಿ.ನಗರ, ಹಿರಿಸಾವೆ, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಡಿ.ಸಮುದ್ರವಳ್ಳಿ, ಶಾಂತಿ ಗ್ರಾಮಗಳಿಗೆ ನಿಲುಗಡೆ ಕಲ್ಪಿಸಲಾಗಿದೆ.

ಯಶವಂತಪುರದಿಂದ ಬೆಳಿಗ್ಗೆ 7.40ಕ್ಕೆ ಹೊರಟು 11.25ಕ್ಕೆ ಹಾಸನ ತಲುಪಲಿದೆ. ಹಾಸನದಿಂದ ಸಂಜೆ 4.10ಕ್ಕೆ ಹೊರಟು ರಾತ್ರಿ 8.10ಕ್ಕೆ ಯಶವಂತಪುರಕ್ಕೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT