ಮೆಸ್ಕಾಂ ಸಿಬ್ಬಂದಿ ಕೊರತೆ; ಕತ್ತಲು ಭಾಗ್ಯ...

7
ಮರಗಳ ತೆರವು, ತಂತಿಜಾಲ ನಿರ್ವಹಣೆಗೂ ಪರದಾಟ

ಮೆಸ್ಕಾಂ ಸಿಬ್ಬಂದಿ ಕೊರತೆ; ಕತ್ತಲು ಭಾಗ್ಯ...

Published:
Updated:

ಪುತ್ತೂರು: ಮಳೆಗಾಲ ಆರಂಭಗೊಂಡ ಬಳಿಕ ಎಲ್ಲೆಡೆ ವಿದ್ಯುತ್ ವ್ಯತ್ಯಯ ಆಗುತ್ತಿದೆ.  ಮರಗಳು ಉರುಳಿಬಿದ್ದು ವಿದ್ಯುತ್ ಸರಬರಾಜು ವ್ಯವಸ್ಥೆಗೆ ಹಾನಿಯಾಗಿದೆ. ಪುತ್ತೂರು ಮೆಸ್ಕಾಂ ವಿಭಾಗ ವ್ಯಾಪ್ತಿಯ ಪುತ್ತೂರು ಹಾಗೂ ಸುಳ್ಯ ತಾಲ್ಲೂಕು ವ್ಯಾಪ್ತಿಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ಕತ್ತಲೆ ಆವರಿಸಿದ್ದು, ಹಳ್ಳಿ ಪ್ರದೇಶದ ಜನತೆಗಂತೂ ಸಾಂಪ್ರದಾಯಿಕ ಚಿಮಿಣಿ ದೀಪಗಳೇ ಗತಿಯಾಗಿವೆ.

ಹೆಚ್ಚಿನ ಕಡೆಗಳಲ್ಲಿ ರಸ್ತೆ ಪಕ್ಕದಲ್ಲಿಯೇ ವಿದ್ಯುತ್ ಲೈನ್ ಹಾದು ಹೋಗುತ್ತಿದೆ. ಮಳೆಗಾಲದ ಮೊದಲು ರಸ್ತೆ ಬದಿಯಲ್ಲಿ ಅಪಾಯದಲ್ಲಿರುವ ಮರಗಳು, ಕೊಂಬೆಗಳನ್ನು ಕಡಿಯುವ ಕೆಲಸ ಮೆಸ್ಕಾಂ ಮತ್ತು ಅರಣ್ಯ ಇಲಾಖೆಯ ಜಂಟಿ ನೇತೃತ್ವದ ಕೆಲಸ ಸಮರ್ಪಕವಾಗಿ ನಡೆಯದಿರುವುದೇ ಈಗ ಸಮಸ್ಯೆಗೆ ಕಾರಣವಾಗಿದೆ.

ಭಾರಿ ಮಳೆಗೆ ಈ ಬಾರಿ  ಬಹುತೇಕ ಕಡೆಗಳಲ್ಲಿ ಮರಗಳು ಬುಡಸಮೇತ ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಸರಬರಾಜಿಗೆ ಅಡ್ಡಿಯಾಗಿದೆ. ಇಲಾಖೆಗೆ ನಷ್ಟವನ್ನುಂಟು ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕ್ಷಿಪ್ರ ದುರಸ್ತಿ ವ್ಯವಸ್ಥೆ ಇಲ್ಲ. ‘ಮೆಸ್ಕಾಂ' ನಿಂದ ಬೆಳಕು, ನೀರು ಇಲ್ಲದೆ, ಸ್ನಾನ ನಿತ್ಯ ಕರ್ಮಗಳಿಗಾಗಿ ಒದ್ದಾಡುವ ಸ್ಥಿತಿ ಇದೆ.

ಸಿಬ್ಬಂದಿ ಕೊರತೆ: ಜನತೆಗೆ ವಿದ್ಯುತ್ ಸಮಸ್ಯೆಯಾದರೆ ಮೆಸ್ಕಾಂನಲ್ಲಿ ಸಮರ್ಪಕವಾಗಿ ಕೆಲಸ ಮಾಡಲು ಸಿಬ್ಬಂದಿ ಕೊರತೆ ಸಮಸ್ಯೆಯಾಗಿ ಕಾಡುತ್ತಿದೆ.  ಉಪವಿಭಾಗದಲ್ಲಿ ಒಟ್ಟು 19  ಕೇಂದ್ರಗಳಿದ್ದು, ಬೆಳ್ಳಾರೆ ಹಾಗೂ ಅರಂತೋಡು ಕೇಂದ್ರಗಳಲ್ಲಿ ಶಾಖಾಧಿಕಾರಿಗಳೇ ಇಲ್ಲ. 33 ಕೆವಿ ಸಬ್‌ಸ್ಟೇಷನ್‌ಗೆ ನಿಗದಿತ ನೋಡಲ್ ಅಧಿಕಾರಿ ನೇಮಕವಾಗಿಲ್ಲ. ಸಹಾಯಕ ಕಾರ್ಯನಿರ್ವಹಣಾ ಅಧಿಕಾರಿಗಳ 6 ಹುದ್ದೆ ಖಾಲಿ ಇವೆ.

ಉಪವಿಭಾಗದ ಮೆಸ್ಕಾಂ ಕಚೇರಿಯಲ್ಲಿ ಒಬ್ಬರು ಸಹಾಯಕ ಕಾರ್ಯನಿರ್ವಹಣಾ ಅಧಿಕಾರಿ ಹುದ್ದೆ, ಕಡಬ, ಸುಳ್ಯ, ಸುಬ್ರಹ್ಮಣ್ಯ ಸೆಕ್ಷನ್ ಸೇರಿದಂತೆ 6 ಅಧಿಕಾರಿಗಳ ಹುದ್ದೆ ಖಾಲಿ ಇವೆ. ಜನರ ನಿರೀಕ್ಷೆಗೆ ತಕ್ಕಂತೆ ಗುಣಮಟ್ಟದ ವಿದ್ಯುತ್ ಒದಗಿಸಲು ಸಮಸ್ಯೆಯಾಗುತ್ತಿದೆ.

ಪುತ್ತೂರಿನ ಮುಖ್ಯ ಕೇಂದ್ರದಿಂದ ಸುಬ್ರಹ್ಮಣ್ಯದ ಸುಮಾರು 50 ಕಿಮೀ ದೂರದವರೆಗೆ ವಿದ್ಯುತ್ ತಂತಿ ಅಳವಡಿಕೆಯಾಗಿದ್ದು, ಇಲ್ಲಿ ಅಡಚಣೆ ಆದರೆ, ಉಪ್ಪಿನಂಗಡಿ, ಕಡಬ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಸಬ್‌ಸ್ಷೇಷನ್‌ ಕೊರತೆ ಮೆಸ್ಕಾಂ ಇಲಾಖೆಯನ್ನು ಕಾಡುತ್ತಿದೆ. ಉಪ್ಪಿನಂಗಡಿಯ ಮಠ ಎಂಬಲ್ಲಿ ಸಬ್‌ ಸ್ಟೇಷನ್‌ ನಿರ್ಮಾಣದ ಪ್ರಸ್ತಾಪ ನನೆಗುದಿಗೆ ಬಿದ್ದಿದೆ.

ಕೆಯ್ಯೂರು ಗ್ರಾಮದ ಮಾಡಾವು ಎಂಬಲ್ಲಿ 110/11 ಕೆವಿ ಸ್ಟೇಷನ್ ನಿರ್ಮಾಣ, 9 ವರ್ಷಗಳ ಹಿಂದೆ ಮಂಜೂರಾದ ಕಾವು ಸಮೀಪದ ಕೋಟೆಗುಡ್ಡೆ  33ಕೆವಿ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿ ಕುಂಟು ತ್ತಿದೆ. ಉಪವಿಭಾಗದ ನಗರ,ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್‌ ನೀಡಬೇಕೆಂಬುದು ಜನರ ಒತ್ತಾಯವಾಗಿದೆ.

'ಜಂಗಲ್ ಕಟ್ಟಿಂಗ್'ಗೆ ತಂಡ ಸಜ್ಜು

ಉಪವಿಭಾಗದ ವಿದ್ಯುತ್ ಲೈನ್ ಹಾದುಹೋಗುವ ಭಾಗದಲ್ಲಿ ಮಳೆಗಾಲದ ಅವಧಿಗೆ ಜಂಗಲ್ ಕಟ್ಟಿಂಗ್ ನಡೆಸಲು 50 ಮಂದಿಯ ತಂಡವನ್ನು ಟೆಂಡರ್ ಮೂಲಕ ಸಿದ್ಧಪಡಿಸಲಾಗಿದೆ. ಎರಡು ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ಲೈನ್‌ಗಳ ಬದಿಯಲ್ಲಿರುವ ಮರ ಹಾಗೂ ಗೆಲ್ಲುಗಳನ್ನು ಸವರುವ ಕೆಲಸ ಮಾಡಲಿದ್ದು, ಸಮಸ್ಯೆ ಪರಿಹಾರ ಆಗಲಿದೆ’ ಎಂದು ಮೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ನರಸಿಂಹ ಅವರು ಹೇಳಿದರು.

‌ರಾತ್ರಿ ಪಾಳಿ: ಪುತ್ತೂರು ಮೆಸ್ಕಾಂ ಉಪವಿಭಾಗದಲ್ಲಿ ಒಟ್ಟು 19 ಶಾಖೆಗಳಿದ್ದು, ಪುತ್ತೂರು ಕೇಂದ್ರ ಕಚೇರಿ ಸೇರಿದಂತೆ ಈ ಎಲ್ಲಾ ಶಾಖೆಗಳಲ್ಲೂ ರಾತ್ರಿ ಪಾಳಿ ಸಿಬ್ಬಂದಿ ಇಲ್ಲ. ಸರ್ಕಾರ ಸಿಬ್ಬಂದಿ ನೇಮಿಸಿದರೆ ಇನ್ನಷ್ಟು ಸಮರ್ಥವಾಗಿ ವಿದ್ಯುತ್  ಸರಬರಾಜು ಮಾಡಲಾಗುವುದು’ ಎಂದರು.

ಮೆಸ್ಕಾಂಗೆ ₹16 ಲಕ್ಷ ನಷ್ಟ

‘ಈ ಉಪವಿಭಾಗದ ವ್ಯಾಪ್ತಿಯಲ್ಲಿ ಮಳೆಯ ಅಬ್ಬರಕ್ಕೆ 101 ವಿದ್ಯುತ್ ಕಂಬಗಳು ಮುರಿದು ಬಿದ್ದು, ಸುಮಾರು ₹16 ಲಕ್ಷ ನಷ್ಟ ಸಂಭವಿಸಿದೆ ’ ಎಂದು ನರಸಿಂಹ ಹೇಳಿದರು. ‘ಪುತ್ತೂರು ಉಪವಿಭಾಗದಲ್ಲಿ ಅತ್ಯಂತ ಉದ್ದದ ವಿದ್ಯುತ್ ಲೈನ್‌ಗಳಿದ್ದು, ಪುತ್ತೂರಿನಿಂದ ಸುಬ್ರಹ್ಮಣ್ಯದ ಸುಮಾರು 50 ಕಿ.ಮೀ, ಪುತ್ತೂರಿನಿಂದ ಸುಳ್ಯ ತಾಲ್ಲೂಕಿನ ಮಡಪ್ಪಾಡಿಗೆ 40ಕಿಮೀ ದೂರಕ್ಕೂ ವಿದ್ಯುತ್ ಲೈನ್‌ ಎಳೆಯಲಾಗಿದೆ.  ಕಾಡಿನ ಮಧ್ಯೆಯೇ ಹಾದು ಹೋಗಿವೆ. ಹೀಗಾಗಿ ವಿದ್ಯುತ್ ವ್ಯತ್ಯಯವಾಗುತ್ತಿದೆ. ಆದರೆ ಇದನ್ನು ಸಮರ್ಪಕಗೊಳಿಸಲು ಎಲ್ಲಾ ಬಗೆಯ ಶ್ರಮ ವಹಿಸಲಾಗುತ್ತಿದೆ’ ಎಂದು ನರಸಿಂಹ ತಿಳಿಸಿದ್ದಾರೆ.

ಶಶಿಧರ ರೈ ಕುತ್ಯಾಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry