ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮರಿತಿಬ್ಬೇಗೌಡ ಕೈಹಿಡಿದ ಮತದಾರರು

ದಕ್ಷಿಣ ಶಿಕ್ಷಕರ ಕ್ಷೇತ್ರ: ಜೆಡಿಎಸ್‌ಗೆ ಗೆಲುವು–ಸತತ 4ನೇ ಬಾರಿ ವಿಧಾನ ಪರಿಷತ್‌ಗೆ
Last Updated 13 ಜೂನ್ 2018, 10:02 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರು ಮತ್ತೆ ಜೆಡಿಎಸ್‌ನ ಮರಿತಿಬ್ಬೇಗೌಡ ಕೈ ಹಿಡಿದಿದ್ದಾರೆ. ಇದರೊಂದಿಗೆ ಸತತ ನಾಲ್ಕನೇ ಬಾರಿ ಅವರು ಜಯಭೇರಿ ಮೊಳಗಿಸಿದ್ದಾರೆ.

ವಿಧಾನ ಪರಿಷತ್‌ನ ಉಪಸಭಾಪತಿಯೂ ಆಗಿದ್ದ ಮರಿತಿಬ್ಬೇಗೌಡ ಅವರ ಗೆಲುವಿಗೆ ಬ್ರೇಕ್‌ ಹಾಕಲು ಕಾಂಗ್ರೆಸ್‌ನ ಎಂ.ಲಕ್ಷ್ಮಣ್‌ ಹಾಗೂ ಬಿಜೆಪಿಯ ಬಿ.ನಿರಂಜನಮೂರ್ತಿ ಹಲವು ತಿಂಗಳಿನಿಂದ ತಂತ್ರಗಾರಿಕೆ ರೂಪಿಸಿದ್ದರು. ಲಕ್ಷ್ಮಣ್‌ ಅವರಂತೂ ‘ಇದು ನನ್ನ ಕೊನೆಯ ಚುನಾವಣೆ’ ಎಂದುಕೊಂಡೇ ಮತಬೇಟೆಗೆ ಇಳಿದಿದ್ದರು. ಆದರೆ, 18 ವರ್ಷಗಳಿಂದ ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಮರಿತಿಬ್ಬೇಗೌಡ ಮತ್ತೆ ಮತದಾರರ ಮನಸ್ಸು ಗೆಲ್ಲುವಲ್ಲಿ ಸಫಲರಾಗಿದ್ದಾರೆ.

ಜೆಡಿಎಸ್‌ ಪಕ್ಷವು ಮೈತ್ರಿ ಸರ್ಕಾರದ ನೇತೃತ್ವ ವಹಿಸಿರುವುದು ಅವರ ನೆರವಿಗೆ ಬಂದಿದೆ. 2000ದಲ್ಲಿ ಕಾಂಗ್ರೆಸ್‌ನಿಂದ, 2006ರಲ್ಲಿ ಪಕ್ಷೇತರರಾಗಿ, 2012ರಲ್ಲಿ ಜೆಡಿಎಸ್‌ನಿಂದ ಅವರು ವಿಧಾನ ಪರಿಷತ್‌ ಪ್ರವೇಶಿಸಿದ್ದರು. ಆದರೆ, ಎಂ.ಲಕ್ಷ್ಮಣ್‌ ಮತ್ತೆ ನಿರಾಸೆಗೆ ಒಳಗಾದರು. ಅವರು ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಸೋಲು ಕಂಡಿದ್ದರು.

ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ಕ್ಷೇತ್ರದಲ್ಲಿ ಒಟ್ಟು 22,677 ಮತದಾರರಿದ್ದು, 16,707 ಶಿಕ್ಷಕರು (ಶೇ 80.80) ಮತ ಚಲಾಯಿಸಿದ್ದರು. ಗೆಲುವಿಗೆ 7,933 ಮತಗಳ ಕೋಟಾವನ್ನು ನಿಗದಿಪಡಿಸಲಾಯಿತು.

ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಯಾರೊಬ್ಬರೂ ಕೋಟಾ ತಲುಪಲಿಲ್ಲ. ಮರಿತಿಬ್ಬೇಗೌಡ 6,003, ಲಕ್ಷ್ಮಣ್‌ 5,514, ನಿರಂಜನಮೂರ್ತಿ 3,931 ಮತ ಪಡೆದರು. ಹೀಗಾಗಿ, ದ್ವಿತೀಯ ಪ್ರಾಶಸ್ತ್ಯದ ಮತ ಎಣಿಕೆ ಮೊರೆ ಹೋಗಲಾಯಿತು. ಕಡಿಮೆ ಮತ ಪಡೆದವರನ್ನು ಎಣಿಕೆಯಿಂದ ಹೊರಗಿಡಲಾಯಿತು. ಅವರ ಮತಗಳನ್ನು ಇನ್ನುಳಿದವರಿಗೆ ಹಂಚುತ್ತಾ ಸಾಗಿದರು. ಇದರಿಂದ ಕೊನೆಯ ಸ್ಥಾನದಲ್ಲಿದ್ದ ಡಿ.ಕೆ.ತುಳಸಪ್ಪ (2 ಮತ), ಎಂ.ಎನ್‌.ರವಿಶಂಕರ್‌ (4), ಪಿ.ಎ.ಶರತ್‌ರಾಜ್‌ (6), ಎ.ಎಚ್‌.ಗೋಪಾಲಕೃಷ್ಣ (7), ಡಾ.ಎಸ್‌.ಬಿ.ಎಂ.ಪ್ರಸನ್ನ (102), ಡಾ.ಮಹಾದೇವ (295) ಅವರು ಎಣಿಕೆಯಿಂದ ಹೊರಗುಳಿದರು.

ನಿರಂಜನಮೂರ್ತಿ ಹೊರಕ್ಕೆ: ಹೊರಬಿದ್ದ ಆರು ಅಭ್ಯರ್ಥಿಗಳ ಹಂಚಿಕೆಯಾದ ಮತ ಸೇರಿ ನಿರಂಜನಮೂರ್ತಿ ಬಳಿ 3,979ಮತಗಳು ಇದ್ದವು. ಆದರೆ, ಕೊನೆಯಲ್ಲಿ ಇವರ ಮತಗಳನ್ನು ಮರಿತಿಬ್ಬೇಗೌಡ ಹಾಗೂ ಲಕ್ಷ್ಮಣ್‌ಗೆ ಹಂಚಿಕೆ ಮಾಡಲಾಯಿತು. ಹೀಗಾಗಿ, ದ್ವಿತೀಯ ಪ್ರಾಶಸ್ತ್ಯದ ಮತ ಎಣಿಕೆಯ ಏಳನೇ ಸುತ್ತಿನಲ್ಲಿ ನಿರಂಜನಮೂರ್ತಿ ಸ್ಪರ್ಧಾ ಕಣದಿಂದ ಹೊರಬಿದ್ದರು.

ಈ ಹಂತದಲ್ಲಿ ಮರಿತಿಬ್ಬೇಗೌಡ (7,170) ಹಾಗೂ ಲಕ್ಷ್ಮಣ್‌ (6,805) ನಡುವೆ ಬಿರುಸಿನ ಪೈಪೋಟಿ ಕಂಡು ಬಂತು. ಮರಿತಿಬ್ಬೇಗೌಡ 365 ಮತಗಳ ಮುನ್ನಡೆ ಹೊಂದಿದ್ದರು. ಇಷ್ಟಾದರೂ ಕೋಟಾ ಮುಟ್ಟಲು ಸಾಧ್ಯವಾಗಲಿಲ್ಲ. ಹೀಗಾಗಿ, ಎರಡನೇ ಸ್ಥಾನದಲ್ಲಿರುವ ಲಕ್ಷ್ಮಣ್ ಅವರಿಂದ ಮತಗಳನ್ನು ವರ್ಗಾಯಿಸುವ ಪ್ರಕ್ರಿಯೆ ನಡೆಯಿತು. ಈ ಪ್ರಕ್ರಿಯೆ ಮುಗಿದಾಗ ಮರಿತಿಬ್ಬೇಗೌಡ 11,022 ಮತ ಪಡೆದು ಜಯ ಗಳಿಸಿದರು.

ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಕಾಲೇಜಿನ ನೂತನ ಕಟ್ಟಡದಲ್ಲಿ ಮಂಗಳವಾರ ಬೆಳಿಗ್ಗೆ ಮೊದಲಿಗೆ ಪದವೀಧರರ ಕ್ಷೇತ್ರದ ಅಂಚೆ ಮತ ಎಣಿಕೆ ಮಾಡಲಾಯಿತು. ಬಳಿಕ ಪ್ರತಿ ಕ್ಷೇತ್ರದ ಮತಗಳನ್ನು 14 ಟೇಬಲ್‌ಗಳಿಗೆ ವಿಂಗಡಿಸಿ ಮತ ಎಣಿಕೆ ಶುರು ಮಾಡಲಾಯಿತು. ಪ್ರತಿ ಟೇಬಲ್‌ಗೆ 1,250 ಮತಗಳನ್ನು ಹಂಚಲಾಯಿತು. ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಸುಮಾರು 435 ಸಿಬ್ಬಂದಿ ನಿಯೋಜಿಸಲಾಗಿತ್ತು.

ಗೆಲುವಿನ ಅಭ್ಯರ್ಥಿ

ದಕ್ಷಿಣ ಶಿಕ್ಷಕರ ಕ್ಷೇತ್ರ
ಮರಿತಿಬ್ಬೇಗೌಡ
ಪಡೆದ ಮತ: 11,022
ಪಕ್ಷ–ಜೆಡಿಎಸ್‌
ಎರಡನೇ ಸ್ಥಾನ: ಎಂ.ಲಕ್ಷ್ಮಣ್‌ (ಕಾಂಗ್ರೆಸ್‌)
ಕಳೆದ ಬಾರಿ ಗೆದ್ದ ಪಕ್ಷ–ಜೆಡಿಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT