ಬೆಳೆ ವಿಮೆ ವ್ಯಾಪ್ತಿಗೆ ಹೆಚ್ಚಿನ ರೈತರು ಸೇರ್ಪಡೆಯಾಗಲಿ

6
ಫಸಲ್‌ ಬಿಮಾ ಯೋಜನೆಯ ಅರಿವು ಮೂಡಿಸಲು ಜಿ.ಪಂ. ಸಿಇಒ ರಾಕೇಶ್‌ ಕುಮಾರ್‌ ಸೂಚನೆ

ಬೆಳೆ ವಿಮೆ ವ್ಯಾಪ್ತಿಗೆ ಹೆಚ್ಚಿನ ರೈತರು ಸೇರ್ಪಡೆಯಾಗಲಿ

Published:
Updated:

ಶಿವಮೊಗ್ಗ: ಫಸಲ್ ಬಿಮಾ (ವಿಮಾ) ಯೋಜನೆ ಕುರಿತು ರೈತರಿಗೆ ಅರಿವು ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಬೆಳೆ ವಿಮೆ ಯೋಜನೆ ಅನುಷ್ಠಾನ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಅನಿಶ್ಚಿತ ಕೃಷಿಯಲ್ಲಿ ನಿಶ್ಚಿತ ಆದಾಯ ಖಾತ್ರಿಪಡಿಸುವ ಉದ್ದೇಶದಿಂದ ಫಸಲ್ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಈ ಕುರಿತು ರೈತರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಹವಾಮಾನ ಆಧಾರಿತ ಬೆಳೆಯನ್ನು ವಿಮೆ ವ್ಯಾಪ್ತಿಗೆ ಒಳಪಸಿಸಲು ರೈತರು ಆಸಕ್ತಿ ತೋರಬೇಕು. ಜಿಲ್ಲೆಯ ರೈತರು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿ ಗರಿಷ್ಠ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಂ.ಕಿರಣ್‌ಕುಮಾರ್‌ ಸಭೆಗೆ ಮಾಹಿತಿ ನೀಡಿ, ‘2016ರಲ್ಲಿ ಜಿಲ್ಲೆಯಲ್ಲಿ 21,041 ರೈತರಿಗೆ ₹ 38.60 ಕೋಟಿ ವಿಮೆ ಪಾವತಿಸಲಾಗಿದ್ದು, ಇನ್ನೂ 1,540 ಪ್ರಕರಣಗಳು ಪಾವತಿಗೆ ಬಾಕಿ ಇವೆ. 2017ನೇ ಸಾಲಿನಲ್ಲಿ 24,600 ರೈತ ಫಲಾನುಭವಿಗಳ ₹ 35.86 ಕೋಟಿ ವಿಮಾ ಮೊತ್ತ ಪಾವತಿಸಬೇಕಾಗಿದೆ’ ಮಾಹಿತಿ ನೀಡಿದರು.

ಭತ್ತ (ನೀರಾವರಿ) ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ ₹ 86 ಸಾವಿರ ವಿಮಾ ಮೊತ್ತಕ್ಕೆ ₹ 1,720 ವಿಮಾ ಕಂತನ್ನು ರೈತರು ಪಾವತಿಸಬೇಕು. ಮಳೆ ಆಶ್ರಿತ ಭತ್ತಕ್ಕೆ ರೈತರು ₹ 1,080 ವಿಮಾ ಕಂತು ಪಾವತಿಸಬೇಕಾಗಿದೆ. ಆಗಸ್ಟ್ 14 ನೋಂದಣಿಗೆ ಅಂತಿಮ ದಿನವಾಗಿರುತ್ತದೆ. ಮುಸುಕಿನ ಜೋಳ (ನೀ) ₹ 1,180 ವಿಮಾ ಕಂತಿನ ದರ ನಿಗದಿಯಾಗಿದೆ. ಮುಸುಕಿನ ಜೋಳ (ಮಳೆ ಆಶ್ರಿತ) ಒಂದು ಸಾವಿರ ರೂಪಾಯಿ ವಿಮಾ ಕಂತು, ಜುಲೈ 31 ಅಂತಿಮ ದಿನ. ಜೋಳ (ಮ.ಆ) ₹ 680 ವಿಮಾ ಕಂತು ಹಾಗೂ ಆಗಸ್ಟ್ 14 ಅಂತಿಮ ದಿನ ಹಾಗೂ ರಾಗಿ (ಮ.ಆ) ₹ 760 ವಿಮಾ ಕಂತು ಹಾಗೂ ಆಗಸ್ಟ್ 14 ನೋಂದಾಯಿಸಲು ಅಂತಿಮ ದಿನ ನಿಗದಿಪಡಿಸಲಾಗಿದೆ ಎಂದರು.

ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಸೀದಿ ಸಲ್ಲಿಸಬೇಕು. ಪ್ರಸಕ್ತ ಸಾಲು ಹಾಗೂ ಹಂಗಾಮಿನಲ್ಲಿ ಅಧಿಸೂಚಿತ ಬೆಳೆಗಳಿಗೆ ಸಾಲ ಮಂಜೂರಾಗಿದ್ದರೆ ಅಂತಹ ರೈತರು ಕಡ್ಡಾಯವಾಗಿ ಯೋಜನೆಗೆ ಒಳಪಡುತ್ತಾರೆ. ಮುಂಗಾರು ಹಂಗಾಮಿನಲ್ಲಿ ನಷ್ಟ ಪರಿಹಾರ ಮೊತ್ತವನ್ನು ನೀರಾವರಿ ಬೆಳೆಗಳಿಗೆ ಶೇ 90 ಹಾಗೂ ಮಳೆ ಆಶ್ರಿತ ಬೆಳೆಗಳಿಗೆ ಶೇ 80 ನಿಗದಿಪಡಿಸಲಾಗಿದೆ.

ಆಲಿಕಲ್ಲು ಮಳೆ, ಭೂಕುಸಿತ ಮತ್ತು ಬೆಳೆ ಮುಳುಗಡೆ ಸಂದರ್ಭಗಳಲ್ಲಿ ಬೆಳೆ ನಷ್ಟ ಉಂಟಾದರೆ ರೈತರು ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆ ಕಚೇರಿಗೆ 48 ಗಂಟೆ ಒಳಗಾಗಿ ಮಾಹಿತಿ ನೀಡಬೇಕು. ಹೆಚ್ಚಿನ ವಿವರಗಳಿಗೆ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ ಅಥವಾ ಬ್ಯಾಂಕ್, ಸಹಕಾರಿ ಬ್ಯಾಂಕುಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಅಂಕಿ ಅಂಶಗಳು

13 ಜಿಲ್ಲೆಯಲ್ಲಿ ಹೋಬಳಿಗಳು

627 ಗ್ರಾಮ ಪಂಚಾಯಿತಿಗಳು

30,500 ಹೆಕ್ಟೇರ್ ಬೆಳೆ ವಿಮೆ ವ್ಯಾಪ್ತಿಗೆ ತರುವ ಗುರಿ

₹ 205 ಕೋಟಿ ಅಂದಾಜು ವಿಮೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry