ರೈತರನ್ನು ನಿರ್ಕ್ಷಿಸಿದರೆ ಕಠಿಣ ಕ್ರಮ: ಎಚ್ಚರಿಕೆ

7
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನಿಲ್‌ಕುಮಾರ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

ರೈತರನ್ನು ನಿರ್ಕ್ಷಿಸಿದರೆ ಕಠಿಣ ಕ್ರಮ: ಎಚ್ಚರಿಕೆ

Published:
Updated:

ಯಾದಗಿರಿ: ‘ರೈತರ ಯಾವುದೇ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ನಿರ್ಕ್ಷಿಸಿದರೆ ಕಠಿಣ ಎದುರಿಸಬೇಕಾಗುತ್ತದೆ’ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೈಸರ್ಗಿಕ ವಿಪತ್ತು ನಿರ್ವಹಣೆ, ಪರಿಹಾರ, ಅತಿವೃಷ್ಟಿಯಿಂದ ಜನ-ಜಾನುವಾರು, ಬೆಳೆಹಾನಿ ಹಾಗೂ ರೈತರ ಆತ್ಮಹತ್ಯೆಗೆ ನೀಡಬೇಕಾದ ಪರಿಹಾರ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

‘ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ವೈಯಕ್ತಿಕವಾಗಿ ಗಮನಹರಿಸಿ ಅವರ ಕುಟುಂಬಗಳಿಗೆ ಪರಿಹಾರ ನೀಡಬೇಕು’ ಎಂದು ಅವರು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘2017-18ನೇ ಸಾಲಿನಲ್ಲಿ 54 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪೈಕಿ 45 ಮಂದಿಗೆ ಪರಿಹಾರ ನೀಡಲಾಗಿದೆ. ಉಳಿದ 9 ಮಂದಿಯಲ್ಲಿ 5 ಜನರ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕಿದೆ. ಉಳಿದ 4 ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲಾತಿ ಸಲ್ಲಿಸಿಲ್ಲ. 2018-19ನೇ ಸಾಲಿನಲ್ಲಿ 4 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕಿದೆ’ ಎಂದು ಜಂಟಿ ಕೃಷಿ ನಿರ್ದೇಶಕಿ ಆರ್.ದೇವಿಕಾ ಮಾಹಿತಿ ನೀಡಿದರು.

‘ಎರಡು ದಿನಗಳಲ್ಲಿ ಜಿಲ್ಲಾ ಉಪ ವಿಭಾಗಾಧಿಕಾರಿಯವರ ನೇತೃತ್ವದ ಸಮಿತಿ ತೀರ್ಮಾನ ಕೈಗೊಂಡು ಅರ್ಹರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ವಿಳಂಬವಾದಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ಬೆಳೆ ವಿಮೆ ಕುರಿತಂತೆ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೂಚನೆ ನೀಡಲಾಗಿದ್ದು, ಬೆಳೆ ವಿಮೆ ಮಾಡಿಸಲು ಜುಲೈ 31ಕೊನೆ ದಿನವಾಗಿದೆ. 52,500 ಹೆಕ್ಟೇರ್ ಪ್ರದೇಶದ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರಲು ಗುರಿ ಹೊಂದಲಾಗಿದ್ದು, ಈ ಗುರಿ ತಲುಪಲು ಹೆಚ್ಚಿನ ಶ್ರಮ ವಹಿಸಬೇಕು’ ಎಂದರು.

‘2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 8,555 ರೈತರಿಗೆ ₹6.71 ಕೋಟಿ ವಿಮೆ ಪರಿಹಾರ ನೀಡುವುದು ಬಾಕಿ ಇದ್ದು, ಸರ್ಕಾರ ಒಂದು ವಾರದಲ್ಲಿ ಬಗೆಹರಿಸುವುದಾಗಿ ತಿಳಿಸಿದೆ. ಈ ಬಗ್ಗೆ ಆದೇಶ ಬಂದ ಕೂಡಲೇ ರೈತರಿಗೆ ಪರಿಹಾರ ಹಣ ವಿತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಈ ಬಾರಿ 2,69,224 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ಶೇ 10ರಷ್ಟು  ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.  58,400 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲು ಗುರಿ ಹೊಂದಲಾಗಿದ್ದು, ಈ ಪೈಕಿ 17,355 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅದರಂತೆ ಹೆಸರು 41,000 ಹೆಕ್ಟೇರ್ ಪೈಕಿ 7,200 ಹೆಕ್ಟೇರ್ ಹಾಗೂ ಸಜ್ಜೆ 2,500 ಹೆಕ್ಟೇರ್ ಪೈಕಿ 225 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ’ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಕಾರ್ಯದರ್ಶಿಗಳು, ಜಿಲ್ಲೆಯಲ್ಲಿ ದಾಸ್ತಾನು ಇರುವ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಪ್ರಮಾಣದ ಬಗ್ಗೆ ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ ತಾವು ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಮಾಹಿತಿ ನೀಡಿದರು.

‘ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಮಂಗಳ ಡಿಎಪಿ ರಸಗೊಬ್ಬರದ ಬೇಡಿಕೆ ಇಟ್ಟಿದ್ದಾರೆ. ಆದರೆ, ಮಂಗಳ ಡಿಎಪಿ ರಸಗೊಬ್ಬರದಲ್ಲಿರುವ ಪೋಷಕಾಂಶಗಳೇ ಇತರೆ ಖಾಸಗಿ ಕಂಪೆನಿಗಳ ಡಿಎಪಿ ರಸಗೊಬ್ಬರಗಳಲ್ಲಿ ಇದೆ. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

6 ಕುಟುಂಬಗಳಿಗೆ ಪರಿಹಾರ ವಿತರಣೆ

‘ಜಿಲ್ಲೆಯಲ್ಲಿ ಏ.1ರಿಂದ ಇದುವರೆಗೆ ಸಿಡಿಲು ಬಡಿದು 7 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ 6 ಕುಟುಂಬಗಳಿಗೆ ₹ 25 ಲಕ್ಷ ಪರಿಹಾರ ಧನ ವಿತರಿಸಲಾಗಿದೆ. ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು.

55 ಜಾನುವಾರುಗಳು ಸಾವನ್ನಪ್ಪಿವೆ. ₹4.59 ಲಕ್ಷ ಪರಿಹಾರ ನೀಡಲಾಗಿದೆ. ಜಿಲ್ಲೆಯ 2,785.40 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಅದರ ಮೌಲ್ಯ ₹2.84 ಕೋಟಿ ಎಂದು ಅಂದಾಜಿಸಲಾಗಿದೆ. ಮಳೆಯಿಂದ ಹಾನಿಗೊಳಗಾದ 32 ಕಚ್ಚಾ ಮನೆಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದ ಎಂದು ವಿವರಿಸಿದರು.

ಇನ್ನೂ ಮೂರು ತಿಂಗಳು ಭಾರಿ ಮಳೆ ಸುರಿಯುವ ಸಂಭವವಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳು ಸೇರಿ  ಸ್ಥಳೀಯ ಅಧಿಕಾರಿಗಳ ನೆರವಿನೊಂದಿಗೆ ಪ್ರಾಕೃತಿಕ ವಿಪತ್ತು ನಿರ್ವಹಿಸಬೇಕು. ತಪ್ಪಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಳೆಗಾಲದಲ್ಲಿ ಸಂಭವಿಸುವ ಜೀವಹಾನಿಗಳಂತಹ ಪ್ರಕರಣಗಳನ್ನು ವಿಳಂಬ ಮಾಡದೆ ತತಕ್ಷಣ ಇತ್ಯರ್ಥಪಡಿಸಿ ಫಲಾನುಭವಿಗಳಿಗೆ ನೆರವಾಗಬೇಕು.

ಟಿ.ಕೆ.ಅನಿಲ್‌ಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry