ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ದಿನದಿಂದ ನೀರು ಪೂರೈಕೆ ಸ್ಥಗಿತ

ಶಹಾಪುರ: ನಗರಸಭೆ– ಜೆಸ್ಕಾಂ ಅಧಿಕಾರಿಗಳ ನಡುವೆ ತಿಕ್ಕಾಟ
Last Updated 13 ಜೂನ್ 2018, 10:55 IST
ಅಕ್ಷರ ಗಾತ್ರ

ಶಹಾಪುರ: ನಗರಸಭೆ ಹಾಗೂ ಜೆಸ್ಕಾಂ ಅಧಿಕಾರಿಗಳ ನಡುವಿನ ತಿಕ್ಕಾಟದಿಂದ ನಗರದಲ್ಲಿ 6 ದಿನದಿಂದ ನೀರು ಪೂರೈಕೆ ಸ್ಥಗಿತವಾಗಿದ್ದು, ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

‘ಆರು ದಿನದಿಂದ ಬೇರೆ ಕಡೆಯಿಂದ ನೀರು ತರುತ್ತಿದ್ದೇವೆ. ಯಾವ ಅಧಿಕಾರಿಗಳೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನಮ್ಮ ಗೋಳು ಕೇಳುವವರಿಲ್ಲ’ ಎಂದು ನಗರದ ನಿವಾಸಿ ಮಹ್ಮದ ಜಲಾಲ್ ಅಳಲು ತೋಂಡಿಕೊಂಡರು.

‘ನಗರದ ಹೊರವಲಯದ ಫಿಲ್ಟರ್ ಬೆಡ್ ಕೆರೆಯಲ್ಲಿ ಸಂಗ್ರಹವಾಗಿದ್ದ ನೀರನ್ನು ಮೂರು ದಿನಕ್ಕೆ ಒಮ್ಮೆ ಪೂರೈಸಲಾಗುತ್ತಿತ್ತು. ವಿದ್ಯುತ್ ಸಮಸ್ಯೆಯಿಂದ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಆಗುತ್ತಿಲ್ಲ. ಮಳೆಗೆ ಕಂಬಗಳು ಬಿದ್ದಿವೆ.  ವಿದ್ಯುತ್ ತಂತಿಗೆ ತಾಗಿದ ಮರಗಳನ್ನು ಕತ್ತರಿಸಲು ಅರಣ್ಯ ಇಲಾಖೆಯ ಪರವಾನಗಿ ಬೇಕು. ಹೀಗೆ ಹಲವು ಸಬೂಬುಗಳನ್ನು ಜೆಸ್ಕಾಂ ಎಂಜಿನಿಯರ್ ಹೇಳುತ್ತಾರೆ.
ಇದರಿಂದ  ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಸಿದರೆ ಸಮಸ್ಯೆ ಉಂಟಾಗುವುದಿಲ್ಲ. ಇದಕ್ಕೆ ನೇರ ಹೊಣೆ ಜೆಸ್ಕಾಂ ಅಧಿಕಾರಿ’ ಎಂದು ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ ತಿಳಿಸಿದರು.

ಎರಡು ದಿನ ಮಾತ್ರ ತುಸು ವಿದ್ಯುತ್ ಸಮಸ್ಯೆ ಉಂಟಾಗಿತ್ತು.  ಸಿಬ್ಬಂದಿಯ ನೆರವಿನಿಂದ ಮತ್ತೆ ವಿದ್ಯುತ್  ಸರಬರಾಜು ಮಾಡಿದ್ದೇವೆ. ರಸ್ತೆ ಮಧ್ಯದಲ್ಲಿ ಮರ ಹಾಗೂ ಜಾಲಿ ಗಿಡಗಳು ಇವೆ. ಅವುಗಳನ್ನು ತೆರವುಗೊಳಿಸಿ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಅವಕಾಶ ನೀಡಿ ಎಂದು ನಗರಸಭೆಯ ಪೌರಾಯುಕ್ತರಿಗೆ ಮನವಿ ಮಾಡಿದರೂ  ಗಮನಹರಿಸುತ್ತಿಲ್ಲ. ನೀರು ಪೂರೈಕೆ ಸ್ಥಗಿತವಾಗಿರುವುದಕ್ಕೆ ವಿದ್ಯುತ್ ಸಮಸ್ಯೆ ಕಾರಣ ಅಲ್ಲ. ಒಡೆದು ಹೋದ ಪೈಪ್‌ ದುರಸ್ತಿ ನೆಪದಲ್ಲಿ ಸಮಸ್ಯೆ ಉಂಟು ಮಾಡಿದ್ದಾರೆ ಎಂದು ಜೆಸ್ಕಾಂ ಎ.ಇ.ಇ ಶಾಂತಪ್ಪ ಪೂಜಾರಿ ತಿಳಿಸಿದರು.

ಕಡತ ನಾಪತ್ತೆ: ನಿರಂತರವಾಗಿ ವಿದ್ಯತ್ ಪ್ರಸರಣ ಕೇಂದ್ರದಿಂದ ನೀರು ಸರಬರಾಜು ಮಾಡುವ ಕೇಂದ್ರಕ್ಕೆ ಪ್ರತ್ಯೇಕ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ವರ್ಷದ ಹಿಂದೆ ₹28 ಲಕ್ಷವನ್ನು ಜೆಸ್ಕಾಂ ಕಚೇರಿಗೆ ನಗರಸಭೆ ಪಾವತಿಸಿದೆ. ಕಡತ ನಾಪತ್ತೆಯಾಗಿದೆ. ಹಣ ಪಾವತಿಸಿದ ಬಗ್ಗೆ ಜೆಸ್ಕಾಂ ಬಳಿ ಕಡತವಿಲ್ಲ ಎಂದು ನಗರಸಭೆಯ ಎ.ಇ.ಇ ಶರಣು ಪೂಜಾರಿ ತಿಳಿಸಿದರು.

ನೀರು ಪೂರೈಕೆಗೆ ಕ್ರಮ ಕೈಗೊಳ್ಳದಿದ್ದರೆ  ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಾಗರಿಕರು ಎಚ್ಚರಿಕೆ ನೀಡಿದ್ದಾರೆ.

ನಗರಸಭೆ ಹಾಗೂ ಜೆಸ್ಕಾಂ ಅಧಿಕಾರಿಗಳ ಸಭೆಯನ್ನು ಬುಧವಾರ ಕರೆದಿದ್ದೇನೆ. ನಿಷ್ಕಾಳಜಿ ವಹಿಸಿದವರ ವಿರುದ್ಧ ಕ್ರಮ ಜರುಗಿಸಲು ಸೂಚಿಸಲಾಗುವುದು‌
– ಶರಣಬಸಪ್ಪ ದರ್ಶನಾಪುರ, ಶಾಸಕ

ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT