‘ಬಾಲಕಾರ್ಮಿಕರ ರಕ್ಷಣೆಗೆ ಸಹಕರಿಸಿ’

7
ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾನಂದ ಎನ್. ನಾಯಕ ಅಭಿಮತ

‘ಬಾಲಕಾರ್ಮಿಕರ ರಕ್ಷಣೆಗೆ ಸಹಕರಿಸಿ’

Published:
Updated:

ಯಾದಗಿರಿ: ‘ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾನಂದ ಎನ್.ನಾಯಕ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಕಚೇರಿ ಹಾಗೂ ಜಿಲ್ಲಾ ವಕೀಲರ ಸಂಘ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಸಂವಿಧಾನದ ಮೂಲಭೂತ ಹಕ್ಕುಗಳು, ಸಮಾನತೆ, ವ್ಯಕ್ತಿ ಸ್ವಾತಂತ್ರ್ಯ, ಶೋಷಣೆ ವಿರುದ್ಧ ರಕ್ಷಣೆಯನ್ನು ನೀಡಿದೆ. ಜತೆಗೆ ಹೆಣ್ಣುಮಕ್ಕಳು ಹಾಗೂ ಮಕ್ಕಳಿಗಾಗಿ ವಿಶೇಷ ಕಾನೂನು ರಚಿಸುವ ಅವಕಾಶ ನೀಡಲಾಗಿದೆ. ಆದರೆ, ಮನುಷ್ಯ ತನ್ನ ಮನಸ್ಸನ್ನು ಬದಲಾಯಿಸಿಕೊಂಡರೆ ಮಾತ್ರ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯವಿದೆ’ ಎಂದರು.

‘ಕುಟುಂಬದ ನಿರ್ವಹಣೆಗಾಗಿ ಪಾಲಕರು ಮಕ್ಕಳನ್ನು ದುಡಿಮೆಗೆ ಕಳುಹಿಸುತ್ತಿದ್ದಾರೆ. ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಊಟ, ವಸತಿ, ಸಮವಸ್ತ್ರ, ಆರೋಗ್ಯ ಮುಂತಾದ ಸೌಲಭ್ಯಗಳನ್ನು ನೀಡಿದ್ದು, ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಮಾತನಾಡಿ, ‘ಪ್ರತಿ ಮಗುವು ಶಿಕ್ಷಣದ ಹಕ್ಕನ್ನು ಸಮರ್ಥವಾಗಿ ಬಳಸಿಕೊಂಡಾಗ ಜಿಲ್ಲೆಯ ಪ್ರಗತಿಯೊಂದಿಗೆ ದೇಶದ ಅಭಿವೃದ್ಧಿ ಸಾಧ್ಯ. ದೇಶದಲ್ಲಿ ಹಿಂದುಳಿದ 115 ಜಿಲ್ಲೆಗಳಲ್ಲಿ ರಾಜ್ಯದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಹೆಸರು ಇದ್ದು, ಸಾರ್ವಜನಿಕರ ಸಹಕಾರದಿಂದ ಜಿಲ್ಲೆಯನ್ನು ಹಿಂದುಳಿದ ಪಟ್ಟಿಯಿಂದ ಹೊರತರಲು ಸಾಧ್ಯವಿದೆ’ ಎಂದರು.

‘ಮಕ್ಕಳಿಗೆ ಸ್ವತಂತ್ರವಾದ ವಾತಾವರಣ ನಿರ್ಮಾಣ ಮಾಡಬೇಕು. ಮಕ್ಕಳು ಭವಿಷ್ಯದ ಆಸ್ತಿಯಾಗಿದ್ದು, ಮರಳಿ ಶಾಲೆಗೆ ಹೋಗುವ ವಾತಾವರಣ ನಿರ್ಮಿಸಿ, ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸಬೇಕು. ಇಂದು ಮಕ್ಕಳು ಕುಟುಂಬದ ಆರ್ಥಿಕ ಸಮಸ್ಯೆಯಿಂದ, ಪೋಷಕರ ನಿರ್ಲಕ್ಷ್ಯದಿಂದ ಶಾಲೆ ಬಿಟ್ಟು ಬಾಲಕಾರ್ಮಿಕರಾಗುತ್ತಿದ್ದಾರೆ. ಅದರ ಬಗ್ಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸುವುದು ಅವಶ್ಯವಿದೆ’ ಎಂದು  ಹೇಳಿದರು.

ವಕೀಲ ಆರ್.ಎಸ್. ಪಾಟೀ ಮಾತನಾಡಿ, ‘ವರದಕ್ಷಿಣೆ, ಭಿಕ್ಷಾಟನೆ ಹಾಗೂ ಬಾಲಕಾರ್ಮಿಕ ಪದ್ಧತಿಯಂತಹ ಹಲವು ಸಾಮಾಜಿಕ ಪಿಡುಗುಗಳು ದೇಶದ ಅಭಿವೃದ್ಧಿಗೆ ಮಾರಕವಾಗಿವೆ. ಇದರಿಂದಾಗಿ 1986ರಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಕಾಯ್ದೆಯನ್ನು ಜಾರಿಗೆ ತಂದು 6–14 ವರ್ಷದೊಳಗಿನ ಮಕ್ಕಳು ಯಾವುದೇ ಕ್ಷೇತ್ರದ ಕೆಲಸದಲ್ಲಿ ತೊಡಗುವಂತಿಲ್ಲ. ಒಂದು ವೇಳೆ ಕೆಲಸದಲ್ಲಿ ತೊಡಗಿದ್ದರೆ ಅಂತಹ ಮಕ್ಕಳನ್ನು ಕೆಲಸದಿಂದ ಬಿಡುಗಡೆ ಮಾಡಿ ಶಾಲೆಯಲ್ಲಿ ಶಿಕ್ಷಣ ಪಡೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಬಸವರಾಜ ಪಾಟೀಲ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೋಡೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಚಂದ್ರಶೇಖರ ಅಲ್ಲಿಪುರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಡಾ.ಹಣಮಂತರಾಯ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಭೀಮರಾಯ ಬಿ.ಕಿಲ್ಲನಕೇರಾ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಸಿ.ಎಸ್. ಮಾಲಿಪಾಟೀಲ್, ಡಿಡಿಪಿಐ ಬಸವರಾಜ ಗೌನಳ್ಳಿ, ಕಾರ್ಮಿಕ ನಿರೀಕ್ಷಕ ಶಿವಶಂಕರ ಬಿ.ತಳವಾರ, ಡಾನ್ ಬಾಸ್ಕೊ ಸಮಾಜ ಸೇವಾ ಕೇಂದ್ರದ ನಿರ್ದೇಶಕ ಫಾದರ್ ಜಿ., ಜಿಲ್ಲಾ ಮೆಕ್ಯಾನಿಕ್ ಸೇವಾ ಸಂಘದ ಅಧ್ಯಕ್ಷ ಪ್ರಕಾಶ ಚವ್ಹಾಣ, ಜಿಲ್ಲಾ ಮೆಕ್ಯಾನಿಕ್ ಸೇವಾ ಸಂಘದ ಕಾರ್ಯದರ್ಶಿ ಇಮ್ರಾನ್ ಖಾಜಿ ಡೈಮಂಡ್ ಇದ್ದರು.

ಡಾನ್ ಬಾಸ್ಕೊ ಸಮಾಜ ಸೇವಾ ಕೇಂದ್ರದ ವತಿಯಿಂದ ಕಂಪ್ಯೂಟರ್ ಮೂಲಕ ಸಾಕ್ಷರತಾ ತರಬೇತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ‘ಬಾ ಮಗು ಮರಳಿ ಶಾಲೆಗೆ’ ಯೋಜನೆಯಡಿ ಹತ್ತು ಜನ ಬಾಲ ಕಾರ್ಮಿಕ ಮಕ್ಕಳನ್ನು ಶಾಲೆಗೆ ಸೇರ್ಪಡೆಗೊಳಿಸಲಾಯಿತು. ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಇದ್ದರು.

ಜಾಗೃತಿ ಜಾಥಾ

ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿ ವಿಶ್ವ ಬಾಲ ಕಾರ್ಮಿಕ ದಿನಾಚರಣೆ ಅಂಗವಾಗಿ ಬಾಲಕಾರ್ಮಿಕ ಪದ್ಧತಿ ನಿಷೇಧ ಕುರಿತ ಜಾಗೃತಿ ಜಾಥಾಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾನಂದ ಎನ್. ನಾಯಕ ಚಾಲನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry