4

ಬೀಜದುಂಡೆ ತಯಾರಿಕೆಗೆ ಚಾಲನೆ

Published:
Updated:

ಕುಕನೂರು: ತಾಲ್ಲೂಕಿನ ಗುದ್ನೇಪ್ಪನ ಮಠದ ಜಿಲ್ಲಾ ಜವಾಹರ ನವೋದಯ ಶಾಲೆಯಲ್ಲಿ ಲಕ್ಷ ಬೀಜದುಂಡೆ ತಯಾರಿಸುವ ಅಭಿಯಾನಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್‌ ಈಚೆಗೆ ಚಾಲನೆ ನೀಡಿದರು.

‘ಅರಣ್ಯ ನಾಶದಿಂದ ಉಂಟಾಗುತ್ತಿರುವ ಪರಿಣಾಮಗಳ ಅರಿವು ಈಗ ಮೂಡುತ್ತಿದೆ. ನಿಸರ್ಗದ ಮುಂದೆ ಮಾನವ ಕುಬ್ಜ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ನೈಸರ್ಗಿಕ ವಿಪತ್ತುಗಳು ಸೇರಿದಂತೆ ನಿರಂತರವಾಗಿ ಎದುರಾಗುತ್ತಿರುವ ಬರ ಮಾನವ ಕುಲಕ್ಕೆ ಎಚ್ಚರಿಕೆ ಗಂಟೆಯಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ವಲಯ ಅರಣ್ಯಾಧಿಕಾರಿ ಎ. ಎಚ್‌ ಮುಲ್ಲಾ ಮಾತನಾಡಿ, ‘ಜನಸಂಖ್ಯೆ ಸ್ಫೋಟ ಸೇರಿದಂತೆ ಹಲವು ಕಾರಣಗಳಿಂದಾಗಿ ಅರಣ್ಯ ನಾಶವಾಗುತ್ತಿದೆ. ಬೀಜದುಂಡೆ ಪದ್ಧತಿ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಸಹಕಾರಿ ಆಗಲಿದೆ. ಶಾಲೆ, ಕಾಲೇಜು ಸೇರಿದಂತೆ ಆಸಕ್ತ ಸಂಘ–ಸಂಸ್ಥೆಗಳು ಮತ್ತು ಜನರ ಸಹಭಾಗಿತ್ವಕ್ಕೆ ಅರಣ್ಯ ಇಲಾಖೆ ಆದ್ಯತೆ ನೀಡುವ ಮೂಲಕ ವಿವಿಧ ತಳಿಯ ಬೀಜಗಳನ್ನು ಪೂರೈಸುತ್ತಿದೆ’ ಎಂದರು.

ನವೋದಯ ಶಾಲೆಯ ಪ್ರಾಚಾರ್ಯ ಬಿ.ಎನ್‌.ಟಿ ರೆಡ್ಡಿ ಮಾತನಾಡಿ, ‘ರಾಜ್ಯದಲ್ಲಿ ಒಟ್ಟು 28 ಜವಾಹರ ನವೋದಯ ಶಾಲೆಗಳಿವೆ. ಎಲ್ಲ ಶಾಲೆಗಳಲ್ಲಿ ಬೀಜದುಂಡೆ ತಯಾರಿಸುವ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಗಿದೆ. ಈ ಪೈಕಿ ನಮ್ಮ ಶಾಲೆ 50 ಸಾವಿರ ಬೀಜದುಂಡೆ ತಯಾರಿಸಲಿದೆ’ ಎಂದು ಹೇಳಿದರು.

ಕ್ಯಾಂಪಸ್‌ ಕಲರವ: ಭಾನುವಾರ ದಿಂದ ಆರಂಭಗೊಂಡ ಬೀಜದುಂಡೆ ತಯಾರಿಕೆ ಅಭಿಯಾನದಲ್ಲಿ ನವೋದಯ ಶಾಲೆಯ 450 ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಹೊಂಗೆ, ಬೇವು, ನೇರಲ, ಸೀಮೆತಂಗಡಿ, ಕರಿಜಾಲಿ, ಸೀತಾಫಲ ಮತ್ತಿತರ ತಳಿಯ 50 ಸಾವಿರ ಲಕ್ಷ ಬೀಜಗಳನ್ನು ಸೇರ್ಪಡಿಸಿ ಮಣ್ಣಿನ ಉಂಡೆ ಮಾಡುವ ಹುರುಪಿನಲ್ಲಿ ಕೈ ಕೆಸರು ಮಾಡಿಕೊಂಡು ವಿದ್ಯಾರ್ಥಿಗಳು ಬೀಜದುಂಡೆ ಕಟ್ಟಿದರು.

‘ಭಾನುವಾರ ಒಂದೇ ದಿನ 25 ಸಾವಿರ ಬೀಜದುಂಡೆ ಸಿದ್ಧ ಪಡಿಸಲಾಗಿದೆ. ನಾಲ್ಕು ದಿನಗಳಲ್ಲಿ 50ಸಾವಿರ ಬೀಜದುಂಡೆ ಗುರಿ ತಲುಪಲಾಗುತ್ತದೆ’ ಎಂದು ಅಭಿಯಾನದ ವ್ಯವಸ್ಥಾಪಕ ಶಿಕ್ಷಕ ಸುರ್ಯಕಾಂತ ವಿಶ್ವಕರ್ಮ ಹೇಳಿದರು.

ಬೀಜದುಂಡೆಗಳನ್ನು ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪಾಲಕರಿಗೆ ವಿತರಿಸಲಾಗುತ್ತದೆ. ಉಳಿಯುವ ಬೀಜದುಂಡೆಗಳನ್ನು ಜುಲೈ 1 ರಂದು ನೂರು ವಿದ್ಯಾರ್ಥಿಗಳ ತಂಡದೊಂದಿಗೆ ಸಮೀಪದ ಅರಣ್ಯದಲ್ಲಿ ನೆಡುವ ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ. ಇದರಿಂದ ವಿದ್ಯಾರ್ಥಿಗಳ ಅರಣ್ಯ ದರ್ಶನ ಮಾಡಿಸಿದಂತಾಗುತ್ತದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್‌ ‘ಪ್ರಜಾವಾಣಿ’ಗೆ ಹೇಳಿದರು.

ಆಧುನಿಕತೆ ನೆಪದಲ್ಲಿ ಹಸಿರು ಕಾಡು ನಾಶಗೊಂಡು ಕಾಂಕ್ರೀಟ್‌ ಕಾಡು ತಲೆ ಎತ್ತುತ್ತಿದೆ. ಇದೇ ಸ್ಥಿತಿ ಮುಂದುವರೆದರೆ ದುರಂತ ಸಂಭವಿಸಬಹುದು

ಯಶಪಾಲ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry