ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಕುಸಿತ: ಮಾವು ಕಟಾವು ಸ್ಥಗಿತ

ಖರೀದಿಗೆ ಮುಂದಾಗದ ಜ್ಯೂಸ್‌ ತಯಾರಿಕಾ ಕಂಪನಿಗಳು; ಬೆಳೆಗಾರರು, ವ್ಯಾಪಾರಿಗಳು ಕಂಗಾಲು
Last Updated 13 ಜೂನ್ 2018, 11:34 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವಿನ ಕಾಯಿಗೆ ಬೇಡಿಕೆ ಕುಸಿದ ಪರಿಣಾಮ ತಾಲ್ಲೂಕಿನಲ್ಲಿ ಸೋಮವಾರ ಕಾಯಿ ಕಟಾವು ಕಾರ್ಯ ಬಹುತೇಕ ಸ್ಥಗಿತಗೊಂಡಿತ್ತು. ಈ ಅನಿರೀಕ್ಷಿತ ಪರಿಸ್ಥಿತಿಯಿಂದಾಗಿ ಮಾವು ಬೆಳೆಗಾರರು ಹಾಗೂ ತೋಟಗಳ ಮೇಲೆ ಫಸಲು ಖರೀದಿಸಿದ್ದ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಇಷ್ಟು ದಿನ ಬೆಲೆ ಕಡಿಮೆಯಾದರೂ ಮಂಡಿಗಳಲ್ಲಿ ಕಾಯಿ ಉಳಿಯದೆ ಬಿಕರಿಯಾಗುತ್ತಿತ್ತು. ಆದರೆ ಎರಡು ದಿನಗಳಿಂದ ಈಚೆಗೆ ಖರೀದಿದಾರರು ಮಾರುಕಟ್ಟೆ ಕಡೆ ಮುಖ ಮಾಡಲಿಲ್ಲ. ಜ್ಯೂಸ್‌ ತಯಾರಿಕಾ ಕಂಪನಿಗಳು ಸಹ ಕಾಯಿ ಖರೀದಿಗೆ ಮುಂದಾಗಲಿಲ್ಲ. ಇದು ಬೆಳೆಗಾರರು ಹಾಗೂ ಸ್ಥಳೀಯ ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಬಾರಿ ತೋಟಗಳಲ್ಲಿ ಫಸಲು ಕಡಿಮೆಯಿ
ದ್ದರೂ ಬೆಳೆಯ ವಿಸ್ತೀರ್ಣ ಹೆಚ್ಚಾಗಿರುವುದರಿಂದ ಮಾರುಕಟ್ಟೆಗೆ ಮಾವಿನ ಆವಕ ಪ್ರಮಾಣ ಹೆಚ್ಚಿದೆ. ನೆರೆಯ ಚಿಂತಾಮಣಿ, ಕೋಲಾರ ಹಾಗೂ ಮುಳಬಾಗಿಲು ತಾಲ್ಲೂಕಿನ ರೈತರು ಸಹ ತಾವು ಬೆಳೆದಿರುವ ಮಾವನ್ನು ಇಲ್ಲಿನ ಮಾರುಕಟ್ಟೆಗೆ ತರುತ್ತಿದ್ದಾರೆ. ಇದು ಆವಕ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿದೆ.ಮಾವಿನ ಕಾಯಿಗೆ ಬೇಡಿಕೆ ಹಾಗೂ ಬೆಲೆ ಕುಸಿತ ಉಂಟಾಗಿರುವುದರಿಂದ ಬೇಸತ್ತು, ತೋಟದ ಮೇಲೆ ಮಾವಿನ ಫಸಲು ಖರೀದಿಸಿದ್ದ ವ್ಯಾಪಾರಿಗಳು ಮುಂಗಡ ಹಣವನ್ನು ತೊಟದ ಮಾಲೀಕರಿಗೆ ಬಿಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಪೂರ್ಣ ಮೊತ್ತ ಕೊಟ್ಟಿರುವ ವ್ಯಾಪಾರಿಗಳು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ನಷ್ಟದ ಭಯದಿಂದ ಕುಸಿದುಹೋಗಿದ್ದಾರೆ.

ಈ ಮಧ್ಯೆ ತಾಲ್ಲೂಕಿನಲ್ಲಿ ಆಗಾಗ ಮಳೆಯಾಗುತ್ತಿದ್ದು, ತೋಟಗಳಲ್ಲಿ ತೇವಾಂಶ ಹೆಚ್ಚಿದೆ. ಅದರ ಪರಿಣಾಮ ಕಾಯಿಗೆ ಕಪ್ಪು ಮಚ್ಚೆ ರೋಗ ತಗುಲಿದೆ. ಅದು ವೇಗವಾಗಿ ಹರಡುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಕಾಯಿ ಕೊಳೆಯುತ್ತಿದೆ. ನೀರಿನ ಪ್ರಮಾಣ ಹೆಚ್ಚಿರುವುದರಿಂದ ಕಾಯಿ ಒಡೆಯುತ್ತಿದೆ. ಇದು ಬೆಳೆಗಾರರ ನಿದ್ದೆಗೆಡಿಸಿದೆ.

ವಾತಾವರಣ ವೈಪರೀತ್ಯದಿಂದಾಗಿ ಈ ಬಾರಿ ಒಂದು ತಿಂಗಳು ತಡವಾಗಿ ಹೂ ಬಂದಿತು. ಇದರ ಪರಿಣಾಮ ಮಾವಿನ ಸುಗ್ಗಿ ಒಂದು ತಿಂಗಳು ತಡವಾಗಿ ಆರಂಭವಾಯಿತು. ಇದೇ ಸಮಯಕ್ಕೆ ಸರಿಯಾಗಿ ರಾಜ್ಯದ ಬೇರೆ ಕಡೆ ಮಾತ್ರವಲ್ಲದೆ, ಪಕ್ಕದ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಮಾವಿನ ಕೊಯಿಲು ಶುರುವಾಗಿದೆ. ಜ್ಯೂಸ್ ತಯಾರಿಕಾ ಕಂಪನಿಗಳಿಗೆ ಎಲ್ಲ ಕಡೆಯಿಂದಲೂ ಮಾವು ಹರಿದು ಬರುತ್ತಿದೆ. ಅವು ಅಗತ್ಯಕ್ಕಿಂತ ಹೆಚ್ಚು ಮಾವು ಖರೀದಿಗೆ ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಸಹಜವಾಗಿಯೇ ಮಾವಿನ ಹಣ್ಣಿಗೆ ಬೇಡಿಕೆ ಕುಸಿದಿದೆ. ಇದು ಬೆಲೆ ಕುಸಿತಕ್ಕೂ ಕಾರಣವಾಗಿದೆ ಎಂದು ಹೇಳಲಾಗಿದೆ.

ಇಷ್ಟು ಸಾಲದೆಂಬಂತೆ ಇಲ್ಲಿ ಖರೀದಿಸಿದ ಮಾವನ್ನು ಹೊರ ರಾಜ್ಯಗಳಿಗೆ ಕೊಂಡೊಯ್ಯಲು ಅಗತ್ಯವಾದ ಲಾರಿಗಳು ಸಿಗುತ್ತಿಲ್ಲ. ಹಿಂದಿನ ವರ್ಷಗಳಲ್ಲಿ ಮಹಾರಾಷ್ಟ್ರ, ದೆಹಲಿ ಮತ್ತಿತರ ರಾಜ್ಯಗಳಿಂದ ಬಂದ ಲಾರಿಗಳು ಕಾಯಿಗಾಗಿ ಕಾದು ನಿಲ್ಲುತ್ತಿದ್ದವು. ಆದರೆ ಈಗ ಬೆರಳೆಣಿಕೆಯಷ್ಟು ಲಾರಿಗಳು ಮಾತ್ರ ಬರುತ್ತಿವೆ. ಇಲ್ಲಿಗೆ ಬರುತ್ತಿದ್ದ ಲಾರಿಗಳು ಬೇರೆ ಮಾರುಕಟ್ಟೆಗಳಿಗೆ ಹೋಗುತ್ತಿವೆ ಎಂದು ಹೇಳಲಾಗುತ್ತಿದೆ. ಇದು ಸಹ ಸಮಸ್ಯೆಯ ಆಳವನ್ನು ಹೆಚ್ಚಿಸಿದೆ.

ಇಂದಿನ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದ ಬಹುತೇಕ ಮಂಡಿ ಮಾಲೀಕರು, ಪರಿಸ್ಥಿತಿ ಸ್ವಲ್ಪ ಸುಧಾರಿಸುವ ತನಕ ಕಾಯಿ ಕೀಳದಂತೆ ಮಾವು ಬೆಳೆಗಾರರಿಗೆ ತಿಳಿಸಿದ್ದಾರೆ. ಇದರಿಂದ ಮಂಡಿ ಕಾರ್ಮಿಕರು ಹಾಗೂ ಕಾಯಿ ಕೊಯಿಲು ಮಾಡುವ ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ.

ಕೊಳೆಯುತ್ತಿರುವ ಮಾವು

ಇಂದಿನ ಬೆಲೆಯಲ್ಲಿ ಮಾವಿನ ಕಾಯಿ ಕಿತ್ತು ಮಾರುಕಟ್ಟೆಗೆ ಸಾಗಿಸಿದ ಖರ್ಚೂ ಸಹ ಹೊರಡುತ್ತಿಲ್ಲ. ಮಂಡಿಗೆ ಹಾಕಿದ ರಾಜಗೀರ ಜಾತಿಯ ಮಾವಿನ ಕಾಯಿ ಬಿಕರಿಯಾಗದೆ ಕೊಳೆಯುತ್ತಿದೆ. ನಮ್ಮನ್ನು ದೇವರೇ ಕಾಪಾಡಬೇಕು ಎಂದು ಪನಸಮಾಕನಹಳ್ಳಿ ಮಾವು ಬೆಳೆಗಾರ ನಾರಾಯಣರೆಡ್ಡಿ ಅಳಲು ತೋಡಿಕೊಂಡರು.

ಅಧಿಕ ಫಸಲೇ ಸಮಸ್ಯೆ

ಇಲ್ಲಿನ ಮಾವು ಮಾರುಕಟ್ಟೆಯಲ್ಲಿ ಇಂಥ ಪರಿಸ್ಥಿತಿ ನಿರ್ಮಾಣವಾಗಿರುವುದು ಇದೇ ಮೊದಲು. ಅಧಿಕ ಫಸಲು ಸಮಸ್ಯೆಯ ಮೂಲವಾಗಿದೆ. ಎಲ್ಲ ಕಡೆ ಒಂದೇ ಸಲ ಶುರುವಾಗಿರುವ ಸುಗ್ಗಿಯಿಂದಾಗಿ ಮಾವು ಬೆಳೆಗಾರರು ನಷ್ಟ ಅನುಭವಿಸಬೇಕಾಗಿದೆ ಎಂದು ಶ್ರೀನಿವಾಸಪುರ ಮಂಡಿ ಮಾಲೀಕ ಮಂಜುನಾಥರೆಡ್ಡಿ ತಿಳಿಸಿದರು.

-ಆರ್‌.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT