ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚರಿಯ ಲೋಕವಿದು!

Last Updated 13 ಜೂನ್ 2018, 19:30 IST
ಅಕ್ಷರ ಗಾತ್ರ

1. ನ್ಯಾಟ್ರಾನ್ ಸರೋವರ
ತಾಂಜೇನೀಯಾದಲ್ಲಿರುವ ಈ ಸರೋವರ ನಿಜಕ್ಕೂ ಭಯಾನಕ ಸರೋವರವೇ ಸರಿ. ಇಲ್ಲಿ ಎಲ್ಲಿ ನೋಡಿದ್ರೂ ಅಲ್ಲಿ ಪ್ರಾಣಿ, ಪಕ್ಷಿಗಳ ಪ್ರತಿಮೆಗಳೇ ಕಾಣುತ್ತವೆ. ಹಾಗಾದರೆ ಇಲ್ಲಿ ಯಾರಾದರೂ ಪ್ರತಿಮೆ ನಿರ್ಮಿಸಿರಬೇಕೇನೋ ಎಂದು ಯೋಚಿಸಬೇಡಿ. ಆ ಸರೋವರದಲ್ಲಿ ಸತ್ತ ಪ್ರಾಣಿಗಳೆಲ್ಲವೂ ಕ್ಯಾಲ್ಸಿಯೇಶನ್ ಮೂಲಕ ವಿಗ್ರಹಗಳಾಗುತ್ತವೆ. ಅವುಗಳ ನೋಡಲು ಭಯ ಹುಟ್ಟಿಸುತ್ತವೆ ಕೂಡ. ಆ ಸಮುದ್ರದಲ್ಲಿ ಬೃಹತ್ ಗಾತ್ರದಲ್ಲಿ ಸೋಡಿಯಂ ಬೈ ಕಾರ್ಬೋನೇಟ್ ಇರುವುದು ಈ ಪ್ರಾಣಿಗಳು ಮಮ್ಮಿಗಳಾಗುವುದಕ್ಕೆ ಕಾರಣವಾಗಿದೆ ಅಂತೆ.

*

2. ಚುಕ್ಕಿಗಳ ಸರೋವರ ಖಿಲುಕ್
ಪ್ರಪಂಚದಲ್ಲೇ ಅತಿ ಹೆಚ್ಚು ಖನಿಜಾಂಶ ಹೊಂದಿರುವ ಸರೋವರ ಎಂದು ಇದನ್ನು ಕರೆಯುತ್ತಾರೆ. ಈ ಸರೋವರ ಪ್ರತ್ಯೇಕ 365 ಹೊಂಡಗಳನ್ನು ಹೊಂದಿದ್ದು ಪ್ರತಿ ಹೊಂಡದಲ್ಲೂ ವಿಭಿನ್ನ ರಾಸಾಯನಿಕ ಅಂಶಗಳು ತುಂಬಿವೆ. ಅಲ್ಲದೆ ಅವುಗಳಲ್ಲಿ ಕೆಲವು ಕಾಯಿಲೆಗಳನ್ನು ಗುಣಪಡಿಸುವ ಅಂಶವನ್ನು ಹೊಂದಿದೆ.

*

3. ಜ್ವಾಲೆಯ ಜಲಪಾತ
ನ್ಯೂಯಾರ್ಕ್‌ನಲ್ಲಿರುವ ಈ ಜಲಪಾತದ ವಿಶೇಷ ಎಂದರೆ ಜಲಪಾತದ ಒಳಗೆ ಜ್ವಾಲೆಯೊಂದು ಪ್ರಜ್ವಲಿಸುತ್ತಿರುತ್ತದೆ. ಎತ್ತರದಿಂದ ನೀರು ಬೀಳುವಾಗ ಮಧ್ಯದಲ್ಲಿ ಹೊಳೆಯುವ ಜ್ವಾಲೆಯು ನೀರಿನ ಮೇಲೆ ಪ್ರತಿಫಲಿಸಿ ನೀರಿನ ಮೇಲೆ ರಂಗು ಮೂಡಿಸುತ್ತದೆ. ನೀರಿನಲ್ಲಿ ಬೆಂಕಿ ಹೇಗೆ ಉರಿಯಲು ಸಾಧ್ಯ ಎಂಬುದಕ್ಕೆ ಮಾತ್ರ ಉತ್ತರವಿಲ್ಲ.

*

4. ರಕ್ತದ ಜಲಪಾತ
ರಕ್ತದ ಜಲಪಾತ ಇರುವುದು ಆಂಟಾರ್ಟಿಕಾದಲ್ಲಿ. ಶಾಶ್ವತವಾಗಿ ಹೆಪ್ಪುಗಟ್ಟಿರುವ ಬಿಳಿಹಿಮದ ನಡುವೆ ಕೊಂಚ ಜಾಗ ಮಾಡಿಕೊಂಡು ಈ ರಕ್ತಸುಂದರಿ ಹರಿದು ಬರುತ್ತಾಳೆ. ಅದೇನಪ್ಪಾ ಅಲ್ಲಿ ರಕ್ತ‍ಪಾತ ನಡೆಯುತ್ತದಾ! ಎಂದು ಯೋಚಿಸಬೇಡಿ. ಅಲ್ಲಿ ಹರಿಯುವ ನೀರಿನಲ್ಲಿ ಕಬ್ಬಿಣಾಂಶ ಅಧಿಕವಾಗಿರುವುದರಿಂದ ನೀರು ರಕ್ತದಂತೆ ಹರಿಯುತ್ತದೆ. ಹಾಲು ಹಿಮದ ನಡುವೆ ಕೆಂಪು ನೀರು ರಕ್ತದಂತೆ ಹರಿಯುವ ಕಾರಣಕ್ಕೆ ಇದಕ್ಕೆ ರಕ್ತದ ಜಲಪಾತ ಎಂದಿರಬಹುದೇನೋ...

*

5. ವಿನಿಕ್ಕುನಾ ಕಾಮನಬಿಲ್ಲಿನ ಪರ್ವತ
‌ಪೆರುವಿನಲ್ಲಿರುವ ಈ ಕಾಮನಬಿಲ್ಲಿನ ಪರ್ವತದ ವಿಶೇಷವೇ ಬಣ್ಣ. ಸಾಮಾನ್ಯವಾಗಿ ಪರ್ವತಕ್ಕೆ ನಿರ್ದಿಷ್ಟ ಬಣ್ಣವಿರುವುದಿಲ್ಲ. ಆದರೆ ಈ ಪರ್ವತ ಕಾಮನಬಿಲ್ಲಿನ ಅಷ್ಟೂ ಬಣ್ಣವನ್ನು ತನ್ನ ಮೈ ಮೇಲೆ ಹೊದ್ದಿದೆ. ಆ ಕಾರಣದಿಂದ ಇಡೀ ಪರ್ವತ ಆಗಸದಲ್ಲಿ ಕಾಮನಬಿಲ್ಲು ಹರಡುವಂತೆ ಕಾಣುತ್ತದೆ. ಆದರೆ ಈ ವಿದ್ಯಾಮಾನಕ್ಕೆ ಇಲ್ಲಿಯವರೆಗೆ ಯಾವುದೇ ವೈಜ್ಞಾನಿಕ ಕಾರಣ ತಿಳಿದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT