ಸಿನಿಮೀಯ ಶೈಲಿಯಲ್ಲಿ ಎಟಿಎಂನಲ್ಲಿ ಹಣ ಕಳ್ಳತನ

7
ಹಣ ಕಳೆದುಕೊಂಡು ಪರದಾಡಿದ ಮಹಿಳೆ

ಸಿನಿಮೀಯ ಶೈಲಿಯಲ್ಲಿ ಎಟಿಎಂನಲ್ಲಿ ಹಣ ಕಳ್ಳತನ

Published:
Updated:

ಅಕ್ಕಿಆಲೂರ: ಮಹಿಳೆಯೊಬ್ಬರಿಗೆ ವಂಚಿಸಿ ಸಿನಿಮೀಯ ಶೈಲಿಯಲ್ಲಿ ಎಟಿಎಂ ಕಾರ್ಡ್‌ನಲ್ಲಿನ ಹಣ ಎಗರಿಸಿದ ಘಟನೆ ಇಲ್ಲಿ ನಡೆದಿದ್ದು, ಹಣ ಕಳೆದುಕೊಂಡಿರುವ ಮಹಿಳೆ ಪೊಲೀಸರ ಮೊರೆ ಹೋಗಿದ್ದಾರೆ. ಸಮೀಪದ ಹರಳಕೊಪ್ಪ ಗ್ರಾಮದ ಶಿವಲಿಂಗಮ್ಮ ಈರಪ್ಪ ಆಡೂರ ಎಂಬುವರೇ ಹಣ ಕಳೆದುಕೊಂಡವರು.

ಘಟನೆಯ ವಿವರ: ‘ಶಿವಲಿಂಗಮ್ಮ ಇಲ್ಲಿನ ಬಸ್ ನಿಲ್ದಾಣದ ಬಳಿಯ ಎಟಿಎಂಗೆ ಬಂದಿದ್ದರು. ಅಲ್ಲಿದ್ದ 25–26 ವರ್ಷ ಆಸುಪಾಸಿನ ವ್ಯಕ್ತಿಯ ಕೈಯಲ್ಲಿ ಎಟಿಎಂ ಕಾರ್ಡ್‌ ನೀಡಿ, ಪಾಸ್‌ವರ್ಡ್‌ ಹೇಳಿ ಹಣ ತೆಗೆದುಕೊಡುವಂತೆ ವಿನಂತಿಸಿದ್ದಾರೆ. ಕೆಲ ಸಮಯದ ಬಳಿಕ ಆ ವ್ಯಕ್ತಿ ಎಟಿಎಂನಲ್ಲಿ ಹಣ ಇಲ್ಲ, ಒಂದು ಗಂಟೆ ಇಲ್ಲಿಯೇ ಕಾಯಿರಿ. ಹಣ ಸಿಗುತ್ತೆ ಎಂದು ಹೇಳಿ ಮಹಿಳೆಗೆ ತನ್ನ ಬಳಿಯ ಎಟಿಎಂ ಕಾರ್ಡೊಂದನ್ನು ನೀಡಿ, ಮಹಿಳೆಯ ಕಾರ್ಡ್‌ನೊಂದಿಗೆ ಕಾಲ್ಕಿತ್ತಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ಸ್ವಲ್ಪ ಸಮಯದ ಬಳಿಕ ಹಾವೇರಿಯ ಕಾರ್ಪೋರೇಶನ್ ಬ್ಯಾಂಕಿನ ಎಟಿಎಂನಲ್ಲಿ ₹ 20 ಸಾವಿರ ಡ್ರಾ ಮಾಡಿಕೊಂಡಿರುವ ಆ ವ್ಯಕ್ತಿ, ಚಿನ್ನಾಭರಣ ಮಳಿಗೆಯೊಂದಕ್ಕೆ ತೆರಳಿ ₹ 24 ಸಾವಿರ ಮೌಲ್ಯದ ಚಿನ್ನದ ಸರ ಖರೀದಿಸಿ ಎಟಿಎಂ ಕಾರ್ಡ್ ಬಳಸಿದ್ದಾನೆ. ಅಷ್ಟರೊಳಗೆ ಮಹಿಳೆಗೆ ತಾನು ಮೋಸ ಹೋಗಿದ್ದು ಅರಿವಿಗೆ ಬಂದಿದ್ದು, ಬ್ಯಾಂಕ್‌ಗೆ ತೆರಳಿ ಕಾರ್ಡ್‌ ಲಾಕ್ ಮಾಡಿಸಿದ್ದಾರೆ. ಮರುದಿನವೂ ಅದೇ ಚಿನ್ನಾಭರಣ ಮಳಿಗೆಗೆ ತೆರಳಿ ₹ 5 ಸಾವಿರ ಮೌಲ್ಯದ ಚಿನ್ನ ಖರೀದಿಸಿ ಕಾರ್ಡ್‌ ಮೂಲಕವೇ ಹಣ ಪಾವತಿಸಿದ್ದಾನೆ. ಆಗ ಚಿನ್ನಾಭರಣ ಮಳಿಗೆಯವರು ಕಾರ್ಡ್‌ ಲಾಕ್ ಆಗಿರುವುದನ್ನು ಗಮನಕ್ಕೆ ತಂದ ಬಳಿಕ ಪದಕ ವಾಪಸ್ ನೀಡಿ ತೆರಳಿದ್ದಾನೆ’ ಎಂದು ಹೇಳಿದರು.

ಈ ಘಟನೆ ನಡೆದು ಎರಡು ತಿಂಗಳಾಗಿದೆ. ಮಹಿಳೆ ಹಣ ಕಳೆದುಕೊಂಡಿರುವುದನ್ನು ಪೊಲೀಸರ ಗಮನಕ್ಕೆ ಕೂಡ ತಂದಿದ್ದಾರೆ.  ಸೋಮವಾರ ಪ್ರಕರಣ ದಾಖಲಿಸಿಕೊಂಡಿರುವ ಹಾನಗಲ್ ಪೊಲೀಸರು ತನಿಖೆ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry