ಅಭಿವೃದ್ಧಿ ಚರ್ಚೆಗೆ ಅಧಿಕಾರಿಗಳ ಸಭೆ

7
ಎರಡು ದಿನಗಳ ಕಾಲ ಚರ್ಚೆ: ಸಚಿವ ಎಚ್‌.ಡಿ.ರೇವಣ್ಣ ಹೇಳಿಕೆ

ಅಭಿವೃದ್ಧಿ ಚರ್ಚೆಗೆ ಅಧಿಕಾರಿಗಳ ಸಭೆ

Published:
Updated:

ಹಾಸನ: ಜಿಲ್ಲೆಯ ಸಮಸ್ಯೆ ಬಗೆಹರಿಸುವುದು, ಹೊಸ ಅಭಿವೃದ್ಧಿ ಕಾಮಗಾರಿಗಳ ಚರ್ಚೆಗೆ ಗುರುವಾರ, ಶುಕ್ರವಾರ ನಗರದಲ್ಲಿ ಅಧಿಕಾರಿಗಳ ಸಭೆ ಆಯೋಜಿಸಲಾಗಿದೆ ಎಂದು ಸಚಿವ ಎಚ್.ಡಿ ರೇವಣ್ಣ ತಿಳಿಸಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಜೂನ್‌ 14, 15ರಂದು ಸಭೆ ಕರೆಯಲಾಗಿದೆ. ಇದರಲ್ಲಿ ತುರ್ತು ಸಮಸ್ಯೆಗಳ ಶೀಘ್ರ ಇತ್ಯರ್ಥ, ದೂರಗಾಮಿ ಚಿಂತನೆಗಳ ಯೋಜನೆಗಳ ಅನುಷ್ಠಾನ ಕುರಿತು ಚರ್ಚಿಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯ ಸಕಲೇಶಪುರ, ಆಲೂರು ತಾಲ್ಲೂಕುಗಳ ಮತ್ತು ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಆಗಿರುವ ಮಳೆಹಾನಿ ಕುರಿತು ಮಾಹಿತಿ ಪಡೆಯಲಾಗಿದೆ. ಈಗಾಗಲೇ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸಾಕಾರಗೊಂಡಿರುವ ವಿದ್ಯುತ್ ಪೂರೈಕೆಯನ್ನು ತಕ್ಷಣ ಸರಿಪಡಿಸಲು ಸೂಚಿಸಲಾಗಿದೆ ಎಂದರು.

ಮಳೆ ಹೆಚ್ಚು ಸುರಿಯುವ ಸ್ಥಳಗಳಲ್ಲಿ ವಿಪತ್ತು ಪರಿಹಾರ ತಂಡಗಳನ್ನು ಸ್ಥಾಪಿ ಸಲು ತಿಳಿಸಲಾಗಿದೆ. ರಸ್ತೆಗೆ ಅಡ್ಡಬಿದ್ದ ಮರಗಳನ್ನು ಕೂಡಲೇ ತುಂಡರಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ತಿಳಿಸಲಾಗಿದೆ. ಅಪಾಯಕಾರಿ ರಸ್ತೆಗಳಲ್ಲಿ ಸಂಚಾರ ನಿಯಂತ್ರಿಸುವುದು ಬ್ಯಾರಿಕೇಡ್ ನಿರ್ಮಾಣ, ಸೇತುವೆ, ಮೋರಿಗಳ ದುರಸ್ತಿ ಕಾರ್ಯಗಳನ್ನು ತಕ್ಷಣವೇ ಕೈಗೆತ್ತಿ ಕೊಳ್ಳಲು ಸೂಚಿಸಲಾಗಿದೆ ಎಂದರು.

ಸಕಲೇಶಪುರ ತಾಲ್ಲೂಕಿನ ಅನೇಕ ಕಡೆ ಸೇತುವೆ ನಿರ್ಮಾಣ ಮಾಡುವ ಅಗತ್ಯವಿದ್ದು, ಮಲೆನಾಡು ಪ್ರದೇಶದ ಬಹುತೇಕ ಕಡೆ ಈಗಲೂ ದೋಣಿ ಮತ್ತಿತರೆ ಪರ್ಯಾಯ ವ್ಯವಸ್ಥೆ ಮೂಲಕವೇ ಹೊಳೆ ದಾಟಬೇಕಾಗಿದೆ. ಆದ್ದರಿಂದ ಅಗತ್ಯವಿರುವ ಕಡೆ ಸೇತುವೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಾನಿ ಸಂಭವಿಸಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಜತೆ  ಸಭೆ ನಡೆಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

10 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಮರು ಚಾಲನೆ ನೀಡಲಾಗುತ್ತಿದೆ. ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು. ಹಾಸನ ನಗರ ವ್ಯಾಪ್ತಿಯ ನಾಲ್ಕು ರಸ್ತೆ ಸೇರಿ ಹಲವು ರಸ್ತೆ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, 2 ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದರು.

₹ 45 ಕೋಟಿ ಅಂದಾಜು ವೆಚ್ಚದ ದುದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಅನುಮೋದನೆ ನೀಡಲಾಗಿದೆ. ₹ 375 ಕೋಟಿ ವೆಚ್ಚದ ಹಾಸನ-ಎಡೆಗೌಡನಹಳ್ಳಿ ಕಾಮಗಾರಿ ಶೀಘ್ರ ಪ್ರಾರಂಭವಾಗಲಿದ್ದು, ಹಲವು ಮೇಲ್ಸೇತುವೆ ಮತ್ತು ತಿರುವು ನೇರಗೊಳಿಸುವ ಕಾಮಗಾರಿಗಳು ನಡೆಯಲಿವೆ ಎಂದು ಹೇಳಿದರು.

ಶಿರಾಡಿಘಾಟ್ ರಸ್ತೆ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದು, ಕೆಲವು ದಿನ ಕ್ಯೂರಿಂಗ್ ಅಗತ್ಯವಿದೆ. ಜುಲೈ ಮೊದಲ ವಾರ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ವಿವರಿಸಿದರು.

ಮುಂದಿನ ವಾರ ಸಾರಿಗೆ ಸಚಿವರನ್ನು ಹಾಸನಕ್ಕೆ ಕರೆಸಿ ನೂತನ ಬಸ್ ನಿಲ್ದಾಣದಿಂದ ಆಸ್ಪತ್ರೆವರೆಗೆ ರಸ್ತೆ ನಿರ್ಮಾಣ ಕೆಲಸದ ಬಗ್ಗೆ ತೀರ್ಮಾನಿಸಲಾಗುವುದು. ಕಾಫಿ, ಟೀ ಮಾರಾಟ , ಪಾರ್ಕಿಂಗ್. ಇತರೆ ಸಮಸ್ಯೆ ಬಗೆಹರಿಸಲಾಗುವುದು. 24*7 ಕೆಲಸಕ್ಕೆ ಅಧಿಕಾರಿಗಳು ಹೊಂದಿಕೊಳ್ಳಬೇಕು. ಹೇಮಾವತಿ ಜಲಾಶಯಕ್ಕೆ ಹೆಚ್ಚು ನೀರು ಬಂದರೆ ಬೆಳೆಗಳಿಗೆ ನೀರು ಬಿಡುವ ಬಗ್ಗೆ ಚಿಂತಿಸಲಾಗುವುದು ಎಂದರು.

ಸಾಲ ಮನ್ನಾ ಸಿ.ಎಂ ನಿರ್ಧಾರ

'ರೈತರ ಸಾಲ ಮನ್ನಾ ಕುರಿತು ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಸಚಿವರ ಖಾತೆ ಬದಲಾವಣೆ ಅವರಿಗೆ ಬಿಟ್ಟ ವಿಚಾರ. ರಾಮನಗರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆ ಬಗ್ಗೆ ಜನಾಭಿಪ್ರಾಯ ಪಡೆದು ಕುಮಾರಸ್ವಾಮಿ, ದೇವೇಗೌಡರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ' ಎಂದು ರೇವಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry