ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಡಬ್ಲ್ಯು ಮೋಟರ‍್ರಾಡ್‌ ಪ್ರೀ ಬುಕ್ಕಿಂಗ್ ಆರಂಭ

Last Updated 13 ಜೂನ್ 2018, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಅಡ್ವೆಂಚರ್‌ ಟೂರರ್ ಮೋಟರ್‌ ಸೈಕಲ್‌ಗಳ ಜನಪ್ರಿಯತೆ ಹೆಚ್ಚುತ್ತಿದೆ. ಮರಳುಗಾಡು, ಬೆಟ್ಟಗುಡ್ಡ, ಹಿಮಾಲಯ ಪ್ರದೇಶಗಳಿಂದ ಕೂಡಿರುವ ದೇಶದ ಉದ್ದಗಲಕ್ಕೂ ಸವಾರಿ ನಡೆಸುವ ಸಾಹಸಿ ಬೈಕರ್‌ಗಳು ಇತ್ತೀಚಿನವರೆಗೂ ಅಂಥ ಸಾಹಸಕ್ಕೆಲ್ಲಾ ಸುಧಾರಿತ (Modified) ಬೈಕ್‌ಗಳನ್ನೇ ಬಳಸುತ್ತಿದ್ದರು.

ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೈಕ್‌ಗಳನ್ನೇ ಖರೀದಿಸಿ, ತಮ್ಮ ಪಯಣದ ಅಗತ್ಯಕ್ಕೆ ಬೇಕಾದಂತೆ ಮಾರ್ಪಡಿಸುವುದೂ ಒಂದು ಸಾಹಸವೇ ಆಗಿತ್ತು. ಆದರೆ ಹಣ ಕೊಡುತ್ತೇವೆಂದರೂ ಮಾರಾಟ ಮಾಡಲು ಯಾವ ಕಂಪನಿಯ ಬಳಿಯೂ ಅಂಥ ಬೈಕ್ ಇರಲಿಲ್ಲ. ಅಂತಹದ್ದೊಂದು ಬೈಕ್ ಅನ್ನು ಮಾರುಕಟ್ಟೆಗೆ ಮೊದಲು ಬಿಡುಗಡೆ ಮಾಡಿದ್ದು, ಹೀರೊ ಮೋಟರ್ ಕಾರ್ಪ್.

ಹೀರೊ ಇಂಪಲ್ಸ್ ಭಾರತದ ಮೊದಲ ಅಡ್ವೆಂಚರ್ ಟೂರರ್. ಅದನ್ನು ಅನುಸರಿಸಿ ಬಂದ ರಾಯಲ್ ಎನ್‌ಫೀಲ್ಡ್‌ ಹಿಮಾಲಯನ್ ಈಗ ಭಾರಿ ಸದ್ದು ಮಾಡುತ್ತಿದೆ. ಅಡ್ವೆಂಚರ್ ಟೂರರ್ ಬೈಕ್‌ಗಳಿಗೆ ಭಾರತದಲ್ಲಿರುವ ಬೇಡಿಕೆಯನ್ನು ಗ್ರಹಿಸಿರುವ ವಿದೇಶಿ ಕಂಪನಿಗಳೂ ಇಲ್ಲಿ ಅಂಥ ಬೈಕ್‌ ಬಿಡುಗಡೆಗೆ ಮುಂದಾಗಿವೆ.

ಅತ್ಯಾಧುನಿಕ ಪ್ರವೇಶಮಟ್ಟದ ಅಡ್ವೆಂಚರ್ ಟೂರರ್‌ನ ಕೊರತೆ (Entry level Adventure Tour) ಇರುವುದನ್ನು ಗ್ರಹಿಸಿರುವ ಬಿಎಂಡಬ್ಲ್ಯು, ಅಂಥ ಎರಡು ಬೈಕ್‌ಗಳನ್ನು ಮುಂದಿನ ವಾರ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಆ ಬೈಕ್‌ಗಳ ಹೆಸರು ಬಿಎಂಡಬ್ಲ್ಯು ಜಿ 310ಆರ್ ಮತ್ತು ಜಿ210 ಜಿಎಸ್‌. ಈ ಬೈಕ್‌ಗಳಿಗೆ ಈಗಾಗಲೇ ಪ್ರೀ ಬುಕ್ಕಿಂಗ್ ಆರಂಭವಾಗಿದೆ.

ಭಾರತದ ರಸ್ತೆಗಳು ಮತ್ತು ಸಾಹಸಕ್ಕೆ ತುಡಿಯುವ ಭಾರತೀಯ ಮನಸುಗಳಿಗಾಗಿಯೇ ಈ ಬೈಕ್‌ಗಳನ್ನು ವಿನ್ಯಾಸ ಮಾಡಿದ್ದೇವೆ. 500 ಸಿ.ಸಿಗಿಂತ ಕಡಿಮೆ ಸಾಮರ್ಥ್ಯದ ಪ್ರೀಮಿಯಂ ಬೈಕ್ ವರ್ಗದಲ್ಲಿ ಜಿ210 ಆರ್ ಮತ್ತು ಜಿ 310 ಜಿಎಸ್‌ಗಳು ಹೊಸ ಭಾಷ್ಯ ಬರೆಯಲಿವೆ’ ಎಂದು ಕಂಪನಿ ಹೇಳಿಕೊಂಡಿದೆ. ಬಿಎಂಡಬ್ಲ್ಯು ತನ್ನ ಅಡ್ವೆಂಚರ್ ಟೂರರ್‌ ಬೈಕ್‌ಗಳನ್ನು ‘ಮೋಟರ‍್ರಾಡ್‌’ ಎಂದು ಕರೆಯುತ್ತದೆ. ಹೆಸರು ಎಷ್ಟು ಒರಟಾಗಿದೆಯೋ ಬೈಕ್‌ಗಳೂ ಅಷ್ಟೇ ಒರಟು ಮತ್ತು ಗಟ್ಟಿಮುಟ್ಟಾಗಿವೆ.

ಜಿ 310 ಆರ್ ಹೆದ್ದಾರಿ, ಹಳ್ಳಿ ರಸ್ತೆ ಮತ್ತು ಕಚ್ಚಾ ರಸ್ತೆಯಲ್ಲೂ ಆರಾಮದಾಯಕ ಸವಾರಿಗೆ ಹೇಳಿ ಮಾಡಿಸಿದಂತಿದೆ. ಕಂಪನಿಯೇ ಹೇಳಿರುವಂತೆ ‘ಇದು ಆಲ್‌ ಟೆರೇನ್ ಬೈಕ್’. ಇನ್ನು ಜಿ 310 ಜಿಎಸ್‌ ಆಲ್‌ ಟೆರೇನ್ ಬೈಕ್ ಆಗಿದ್ದರೂ, ಕಚ್ಚಾ ರಸ್ತೆಯ ಪಯಣಕ್ಕೇ ಹೇಳಿ ಮಾಡಿಸಿದ ಬೈಕ್. ಕಂಪನಿ ಪ್ರಕಾರ ಇದು ‘ಗೋ ಎನಿವೇರ್’ ಬೈಕ್.

ಈ ಬೈಕ್‌ಗಳು ಇನ್ನೂ ಬಿಡುಗಡೆಯಾಗಿಲ್ಲ. ಆದರೆ ₹50,000 ಪಾವತಿಸಿ ಪ್ರೀ ಬುಕ್ ಮಾಡಬಹುದು. ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ, ಪುಣೆ ಮತ್ತು ಕೊಚ್ಚಿಗಳಲ್ಲಿ ಬಿಎಂಡಬ್ಲ್ಯು ಅಧಿಕೃತ ಡೀಲರ್‌ಗಳ ಬಳಿ ಪ್ರೀ ಬುಕ್ಕಿಂಗ್ ಸೌಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT