2 ವರ್ಷಗಳ ಬಳಿಕ ಲಭಿಸಿದ ಸಬ್ಸಿಡಿ!

7
2016–17ನೇ ಸಾಲಿನ ಮುಂಗಾರು, ಹಿಂಗಾರು ಹಂಗಾಮಿನ ಬೆಳೆ ಪರಿಹಾರ ಬಿಡುಗಡೆ

2 ವರ್ಷಗಳ ಬಳಿಕ ಲಭಿಸಿದ ಸಬ್ಸಿಡಿ!

Published:
Updated:
2 ವರ್ಷಗಳ ಬಳಿಕ ಲಭಿಸಿದ ಸಬ್ಸಿಡಿ!

ಗದಗ: ತಾಂತ್ರಿಕ ಕಾರಣಗಳಿಂದ ಜಿಲ್ಲೆಯಲ್ಲಿ 2016–17ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ತಡೆ ಹಿಡಿಯಲಾಗಿದ್ದ ಒಟ್ಟು ₹ 1.13 ಕೋಟಿ ಇನ್‌ಪುಟ್‌ ಸಬ್ಸಿಡಿ ಬಿಡುಗಡೆ ಆಗಿದೆ. ‘ಪರಿಹಾರ’ ತಂತ್ರಾಂಶದಲ್ಲಿನ ಮಾಹಿತಿ ಆಧರಿಸಿ, ಜಿಲ್ಲಾಡಳಿತ ನೇರವಾಗಿ ಫಲಾನುಭವಿ ರೈತರ ಬ್ಯಾಂಕ್‌ ಖಾತೆಗಳಿಗೆ ಪರಿಹಾರ ಮೊತ್ತ ಜಮಾ ಮಾಡುತ್ತಿದೆ.

ಬ್ಯಾಂಕ್‌ ಖಾತೆ ಜತೆಗೆ ಆಧಾರ್‌ ಸಂಖ್ಯೆ ಜೋಡಣೆ ಆಗದಿರುವುದು, ಪಹಣಿ ಪತ್ರದಲ್ಲಿನ ಹೆಸರಿನ ವ್ಯತ್ಯಾಸ, ಬ್ಯಾಂಕ್‌ಖಾತೆ ಸಂಖ್ಯೆ ಮತ್ತು ರೈತರ ಹೆಸರಿನ ನಡುವಿನ ವ್ಯತ್ಯಾಸ ಸೇರಿದಂತೆ ಹಲವು ತಾಂತ್ರಿಕ ಕಾರಣಗಳಿಂದ ಜಿಲ್ಲೆಯಲ್ಲಿ 1547 ರೈತರ ಖಾತೆಗೆ ಇನ್‌ಪುಟ್‌ ಸಬ್ಸಿಡಿ ವರ್ಗಾವಣೆ ಆಗಿರಲಿಲ್ಲ. ಇದೀಗ ಈ ರೈತರಿಗೆ 2 ವರ್ಷಗಳ ಬಳಿಕ ಇನ್‌ಪುಟ್‌ ಸಬ್ಸಿಡಿ ಭಾಗ್ಯ ಲಭಿಸುತ್ತಿದೆ.

ಜಿಲ್ಲೆಯಲ್ಲಿ 2016–17ನೇ ಸಾಲಿನ ಮುಂಗಾರು, ಹಿಂಗಾರಿನಲ್ಲಿ ಆಗಿರುವ ಬೆಳೆಹಾನಿ ಕುರಿತು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿತ್ತು. ಜಿಲ್ಲಾಡಳಿತ ಇನ್‌ಪುಟ್‌ ಸಬ್ಸಿಡಿಗಾಗಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿತ್ತು.

ಜಿಲ್ಲೆಯಲ್ಲಿ 2016–17ನೇ ಸಾಲಿನಲ್ಲಿ ಒಟ್ಟು 1.80 ಲಕ್ಷ ರೈತರ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ಅಡಕಗೊಳಿಸಲಾಗಿತ್ತು. ಈ ತಂತ್ರಾಂಶದಲ್ಲಿ ರೈತರ ಹೆಸರು, ಜಮೀನಿನ ಸರ್ವೆ ನಂಬರ್, ಕ್ಷೇತ್ರ, ಬೆಳೆದ ಬೆಳೆ, ಆಧಾರ್, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ ಸೇರಿಸಲಾಗಿತ್ತು. ಆದರೆ, ಕೆಲವು ರೈತರ ಬ್ಯಾಂಕ್‌ ಖಾತೆ ಜತೆಗೆ ಆಧಾರ್‌ ಸಂಖ್ಯೆ ಜೋಡಣೆ ಆಗಿರಲಿಲ್ಲ.

ಜೂನ್‌ 8ರಂದು ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ, ಬಾಕಿ ಉಳಿದಿರುವ ಇನ್‌ಪುಟ್‌ ಸಬ್ಸಿಡಿಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಹಂಚಿಕೆ ಮಾಡಿ, ತಕ್ಷಣವೇ ಫಲಾನುಭವಿ ರೈತರ ಖಾತೆಗೆ ಆರ್‌ಟಿಜಿಎಸ್‌/ಎನ್‌ಇಎಫ್‌ಟಿ ಮೂಲಕ ಪಾವತಿಸಲು ಸೂಚಿಸಲಾಯಿತು.

26 ಜಿಲ್ಲೆಗಳಿಗೆ ಒಟ್ಟ ₹ 26.85 ಕೋಟಿ ಬಿಡುಗಡೆ

2016–17ನೇ ಸಾಲಿನ ಮುಂಗಾರು ಮತ್ತು ಹಿಂಗಾರಿನ ಬೆಳೆ ಪರಿಹಾರವಾಗಿ ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ ನಿಧಿಯಿಂದ ರಾಜ್ಯಕ್ಕೆ ಬಿಡುಗಡೆ ಮಾಡಿದ್ದ ಒಟ್ಟು ₹ 26.85ಕೋಟಿ ಮೊತ್ತವನ್ನು ತಾಂತ್ರಿಕ ಕಾರಣಗಳಿಂದ ತಡೆಹಿಡಿಯಲಾಗಿತ್ತು. ರಾಜ್ಯದ ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾವೇರಿ, ಧಾರವಾಡ, ಬಳ್ಳಾರಿ ಸೇರಿ ಒಟ್ಟು 26 ಜಿಲ್ಲೆಗಳ 37,271 ರೈತರ ಖಾತೆಗಳಿಗೆ ಇನ್‌ಪುಟ್‌ ಸಬ್ಸಿಡಿ ವರ್ಗಾವಣೆ ಆಗಿರಲಿಲ್ಲ.

ಗರಿಷ್ಠ 2 ಹೆಕ್ಟೇರ್‌ಗೆ ಇನ್‌ಪುಟ್ ಸಬ್ಸಿಡಿ

ಫಲಾನುಭವಿ ರೈತರಿಗೆ ಗರಿಷ್ಠ 2 ಹೆಕ್ಟೇರ್‌ಗೆ ಇನ್‌ಪುಟ್‌ ಸಬ್ಸಿಡಿ ಲಭಿಸಲಿದೆ. ಒಣಬೇಸಾಯ ಆಧಾರಿತ ಪ್ರದೇಶಕ್ಕೆ ಪ್ರತಿ ಹೆಕ್ಟೇರ್‌ಗೆ ಗರಿಷ್ಠ ₹ 13,500 ಹಾಗೂ ನೀರಾವರಿ ಪ್ರದೇಶಕ್ಕೆ ಪ್ರತಿ ಹೆಕ್ಟೇರ್‌ಗೆ ಗರಿಷ್ಠ ₹ 6,800 ಪರಿಹಾರ ನಿಗದಿಪಡಿಸಲಾಗಿದ್ದು,ಬೆಳೆ ಮತ್ತು ಹಾನಿ ಆಧರಿಸಿ ಈ ಮೊತ್ತದಲ್ಲಿ ವ್ಯತ್ಯಾಸ ಇರುತ್ತದೆ. ಸಾಮಾನ್ಯವಾಗಿ ‘ಪರಿಹಾರ’ ತಂತ್ರಾಂಶದಲ್ಲಿನ ಮಾಹಿತಿ ಆಧರಿಸಿ, ನ್ಯಾಷನಲ್‌ ಪೇಮೆಂಟ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ನೇರವಾಗಿ, ಫಲಾನುಭವಿ ರೈತರ ಬ್ಯಾಂಕ್‌ ಖಾತೆಗಳಿಗೆ ಪರಿಹಾರ ಧನ ಜಮಾ ಮಾಡುತ್ತದೆ.

ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ ₹ 1.13 ಕೋಟಿ ಇನ್‌ಪುಟ್‌ ಸಬ್ಸಿಡಿ ರೈತರ ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ

ಶಿವಾನಂದ ಕರಾಳೆ, ಹೆಚ್ಚುವರಿ ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry