ಮರಳು ಅಕ್ರಮ ವಿಲೇವಾರಿ ತಡೆಗೆ ಆಗ್ರಹ

7
ಮುಂಡರಗಿ: ತಾಲ್ಲೂಕು ಪಂಚಾಯ್ತಿಯಲ್ಲಿ ಸಾಮಾನ್ಯ ಸಭೆ, ತಹಶೀಲ್ದಾರ್ ವಿರುದ್ಧ ಆಕ್ರೋಶ

ಮರಳು ಅಕ್ರಮ ವಿಲೇವಾರಿ ತಡೆಗೆ ಆಗ್ರಹ

Published:
Updated:

ಮುಂಡರಗಿ: ‘ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡ ಮರಳಿನ ವಿಲೇವಾರಿಯಲ್ಲಿ ಅಕ್ರಮ ನಡೆಯುತ್ತಿದೆ. ಅಕ್ರಮ ಮರಳು ಅಡ್ಡೆಗಳ ಮೇಲೆ ತಹಶೀಲ್ದಾರ್ ಒಬ್ಬರೆ ದಾಳಿ ಮಾಡದೇ ಟಾಸ್ಕ್‌ಫೋರ್ಸ್ ಬಳಸಿಕೊಂಡು ದಾಳಿ ನಡೆಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ರುದ್ರಗೌಡ ಪಾಟೀಲ ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ‘ತಹಶೀಲ್ದಾರ್ ಟಾಸ್ಕ್‌ಫೋರ್ಸ್ ಹಾಗೂ ಸಂಬಂಧಿಸಿದ ಯಾವ ಇಲಾಖೆಗೂ ಮಾಹಿತಿ ನೀಡದೆ ಅಕ್ರಮ ಮರಳು ಅಡ್ಡೆ ಮೇಲೆ ಏಕಾಏಕಿ ದಾಳಿ ಮಾಡುತ್ತಿದ್ದಾರೆ. ಅವರೊಬ್ಬರೇ ದಾಳಿ ಮಾಡುವುದನ್ನು ನೋಡಿದರೆ ಮೇಲ್ನೋಟಕ್ಕೆ ಅವರೂ ಸಹ ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಸಂಶಯ ಮೂಡುತ್ತದೆ’ ಎಂದು ಆರೋಪ ಮಾಡಿದರು.

ಬಿಇಒ ಎಸ್.ಎನ್.ಹಳ್ಳಿಗುಡಿ ಮಾತನಾಡಿ, ‘ತಾಲ್ಲೂಕಿನಲ್ಲಿರುವ ಎಲ್ಲ ಶಾಲೆಗಳಿಗೂ ಶುದ್ಧ ಕುಡಿಯುವ ನೀರಿನ ಅವಶ್ಯವಿದ್ದು, ಪ್ರತಿ ಶಾಲೆಯಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ತಾಲ್ಲೂಕಿನಾದ್ಯಂತ ಸುಮಾರು 80 ಶಾಲೆಗಳು ಶಿಥಿಲಗೊಂಡಿದ್ದು, ಅವುಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಅದಕ್ಕೆ ಜಿಲ್ಲಾ ಪಂಚಾಯ್ತಿ ಅನುಮೋದನೆ ನೀಡಬೇಕಿದೆ’ ಎಂದು ತಿಳಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ.ನೆಗಳೂರ ಮಾತನಾಡಿ, ತಮ್ಮ ಇಲಾಖೆಯ ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಹೇಮಾವತಿ ಕನ್ನಾರಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್‌.ಮುಂಡರಗಿ ಹಾಗೂ ಸರ್ವ ಸದಸ್ಯರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry