ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈಬರ್ ಕಲೆಯ ಪ್ರವೀಣ !

Last Updated 13 ಜೂನ್ 2018, 19:30 IST
ಅಕ್ಷರ ಗಾತ್ರ

ಮಂಗಳೂರು- ಮೈಸೂರು ಹೆದ್ದಾರಿಯಲ್ಲಿ ಮಂಗಳೂರಿನಿಂದ ಹೊರಟು ಹತ್ತಿಪ್ಪತ್ತು ಕಿಲೊಮೀಟರ್ ದೂರ ತಲುಪಿದಾಗ ಸಿಗುವ ಪೇಟೆ ಬಂಟ್ವಾಳ ಕ್ರಾಸ್ ರೋಡ್ ಅಥವಾ ಬಿ. ಸಿ. ರೋಡ್. ಇಲ್ಲಿಂದ ಮೈಸೂರು ರಸ್ತೆ ಬಂಟ್ವಾಳಕ್ಕೆ ತಿರುವು ಪಡೆಯುವ ಜಾಗದಲ್ಲಿ ಒಂದು ಮಿನಿ ಉದ್ಯಾನವಿದೆ. ಅಲ್ಲಿ ಮನ ಸೆಳೆಯುವುದು ಗರಿ ಬಿಚ್ಚಿ ಕುಣಿಯುವ ನವಿಲು. ಹಾಯಲು ಸಿದ್ಧವಾದ ಎತ್ತು. ಹೂವಿನ ಮೇಲೆ ಕುಳಿತ ಭ್ರಮರ. ನೋಡಿದ ತಕ್ಷಣಕ್ಕೆ ಇವೆಲ್ಲ ಜೀವಂತವಾಗಿವೆ ಎಂದು ಕಾಣುತ್ತವೆ. ಹತ್ತಿರ ಹೋಗಿ ನೋಡಿದಾಗ ಮಾತ್ರ, ಇವೆಲ್ಲ ಫೈಬರ್ ಪ್ರತಿಕೃತಿಗಳು ಎಂದು ಖಚಿತವಾಗುತ್ತದೆ. ಅಂಥ ಜೀವಕಳೆಯೊಂದಿಗೆ ಕಾಣುವಂತೆ ಪ್ರತಿಕೃತಿಗಳನ್ನು ಅಲ್ಲಿ ಸೃಷ್ಟಿಸಲಾಗಿದೆ.

ಅದು ಫೈಬರ್ ಆರ್ಟ್ ಎನ್ನುವ ವಿಶಿಷ್ಟ ಕಲೆಯಿಂದ ರೂಪುಗೊಂಡ ಪ್ರತಿಕೃತಿಗಳು. ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ ಯುವ ಕಲಾವಿದ ಮನೋಜ್ ಕನಪಾಡಿ ಈ ಫೈಬರ್ ಪ್ರತಿಕೃತಿಗಳ ಸೃಷ್ಟಿಕರ್ತ. ಬಿ.ಸಿ ರಸ್ತೆಯಿಂದ ಮಂಗಳೂರಿನತ್ತ ಹೆದ್ದಾರಿಯಲ್ಲಿ ಸಾಗಿದರೆ ಒಂದು ಟೋಲ್‍ಗೇಟ್ ಸಿಗುತ್ತದೆ. ಅದರ ಸಮೀಪದಲ್ಲಿ ಒಂದು ಫೈಬರ್ ಕಲೆಯ ಕಾರ್ಯಾಗಾರವೇ ನಮ್ಮನ್ನು ಸ್ವಾಗತಿಸುತ್ತದೆ. ಅದೇ ಮನೋಜ್ ಅವರ ಕಾರ್ಯಕ್ಷೇತ್ರ. ಆ ಕಾರ್ಯಾಗಾರದ ಒಳಗೆ ಅಡಿಯಿಟ್ಟರೆ, ಗಾಂಧಿ, ಮೋದಿ ಸೇರಿದಂತೆ ಹಲವು ರಾಷ್ಟ್ರ ನಾಯಕರು ಪ್ರತಿಕೃತಿಗಳು ಕಾಣುತ್ತವೆ. ಯಕ್ಷಗಾನ ವೇಷಗಳು, ಹುಲಿವೇಷಗಳಂತಹ ಪ್ರತಿಕೃತಿಗಳು ಅನಾವರಣಗೊಳ್ಳುತ್ತವೆ. ಎಲ್ಲವೂ ನೈಜತೆಯನ್ನೇ ನಾಚಿಸುವಷ್ಟು ಸುಂದರವಾಗಿ ಕಾಣುತ್ತವೆ.

ಕಲಾವಿದರ ನೆಲೆಯಲ್ಲ: ಮನೋಜ್, ಕಲಾವಿದರ ಕುಟುಂಬದ ಕುಡಿ ಅಲ್ಲ. ಆದರೆ, ಕೃಷಿಯ ಒಡನಾಟ ಇತ್ತು. ಬಾಲ್ಯದಲ್ಲಿಯೇ ಕೃಷಿ ಪರಿಕರಗಳ ತಯಾರಿಕೆಯಲ್ಲಿ ಅಮಿತ ಆಸಕ್ತಿ. ಅದರೊಂದಿಗೇ ತಾನೂ ಚಿತ್ರ ಕಲಾವಿದನಾಗಬೇಕೆಂಬ ಹೆಬ್ಬಯಕೆ ಸದಾ ಕಾಡುತ್ತಿತ್ತು. ಮಗನ ಈ ಆಸೆಗೆ ಪ್ರೋತ್ಸಾಹದ ನೀರೆರೆದು ಪೋಷಿಸಿದರು ತಂದೆ ಶೀನ ಪೂಜಾರಿ, ತಾಯಿ ಮೋಹಿನಿ.

ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗ ಚಿತ್ರಕಲಾ ಶಿಕ್ಷಕರು ಆಸಕ್ತಿಯಿಂದ ಗೆರೆಗಳನ್ನು ಹೇಳಿಕೊಟ್ಟರು. ಮನೋಜ್‍ಗೆ ಹಲವು ಚಿತ್ರಕಲಾ ಸ್ಪರ್ಧೆಗಳಲ್ಲಿ ಬಹುಮಾನಗಳೂ ಬಂದವು. ಕರಕುಶಲ ಸಾಮಗ್ರಿಗಳು, ಇನ್ನಿತರ ಕಲೆಯ ಮಾದರಿಗಳನ್ನು ತಯಾರಿಸುವುದರಲ್ಲೂ ಆಸಕ್ತಿ ಬೆಳೆಯಿತು. ಮನೋಜ್‌ಗೆ ಒಮ್ಮೆ ಕಣ್ಣಿನಿಂದ ನೋಡಿದ ವಸ್ತುಗಳನ್ನು ಹಾಗೇ ಗ್ರಹಿಸಿ, ಅದರ ಪ್ರತಿರೂಪವನ್ನು ಸೃಷ್ಟಿಸುವಂತಹ ವಿಶೇಷ ಗುಣವಿದೆ. ಇದು ತಾನಾಗಿ ಒಲಿದು ಬಂದ ಕಾರಣ ರಟ್ಟು, ಬಿದಿರು, ತಾಳೆಗರಿಗಳಿಂದ ಹಲವು ಕಲಾ ವೈವಿಧ್ಯಗಳನ್ನು ತಯಾರಿಸಲು ಆರಂಭಿಸಿದರು.

ಖ್ಯಾತಿ ನೀಡಿದ 'ಫೈಬರ್ ಕಲೆ'
ಪದವಿ ಪೂರ್ವ ಶಿಕ್ಷಣದ ಬಳಿಕ ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯಲ್ಲಿ ವಿಧಿಯುಕ್ತವಾಗಿ ಚಿತ್ರಕಲೆಯ ಕಲಿಕೆ ಆರಂಭಿಸಿದರು. ಕಲಾಶಾಲೆಯ ಕಲಿಕೆ ಹಾಗೂ ಸ್ವಂತ ಪರಿಶ್ರಮದಿಂದಾಗಿ ಅವರು ಜಲವರ್ಣ ಶೈಲಿಯ ಚಿತ್ರಗಳ ರಚನೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಜತೆಗೆ, ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆಯಲ್ಲೂ ಪರಿಣತಿ ಪಡೆದಿದ್ದಾರೆ. ಸ್ವಯಂ ಪ್ರತಿಭೆಯಿಂದ ’ಸ್ಪ್ರೇ ಪೆಯಿಂಟಿಂಗ್‍’ನಲ್ಲೂ ನೈಪುಣ್ಯ. ಇಂಥ ಕಲೆಗಳೇ ಮನೋಜ್‍ಗೆ ಬದುಕು ನೀಡಿದೆ.

ಅನುಭವ, ಪರಿಣತಿ ನೆರವಿನೊಂದಿಗೆ ಈಗ ಮನೋಜ್ ಅಲಂಕಾರಿಕ ವಸ್ತುಗಳ ವಿನೂತನ ಶೈಲಿಯನ್ನೇ ಆರಂಭಿಸಿದ್ದಾರೆ. ಸಮಾರಂಭಗಳಿಗೆ ಆಕರ್ಷಕವಾದ ವೇದಿಕೆಗಳನ್ನು ನಿರ್ಮಿಸುತ್ತಿದ್ದಾರೆ. ಶೋಭಾಯಾತ್ರೆ ಇನ್ನಿತರ ಮೆರವಣಿಗೆಗಳಿಗೆ ಬೇಕಾದ ಸ್ತಬ್ಧಚಿತ್ರಗಳ ರಚನೆಯಲ್ಲೂ ಹೆಸರು ಗಳಿಸಿದ್ದಾರೆ. ಇಂಥ ಕಲಾ ಪ್ರೌಢಿಮೆಯಿರುವ ಮನೋಜ್, ಫೈಬರ್ ಕಲಾಕೃತಿಗಳ ನಿರ್ಮಾಣದಲ್ಲಿ ಪ್ರಸಿದ್ಧಿಪಡೆದಿದ್ದಾರೆ. ಮನೆ, ವಿಶ್ರಾಂತಿಧಾಮಗಳು, ಉದ್ಯಾನಗಳಿಗೆ ಬೇಕಾದ ವಿನ್ಯಾಸಗಳ ಜೊತೆಗೆ ಜಲಪಾತಗಳು, ಕಾರಂಜಿಗಳು ಫೈಬರ್ ಕಲಾಕೃತಿಯಲ್ಲಿ ಸೃಷ್ಟಿಯಾಗಿವೆ.

ಸ್ಮಾರಕಗಳಿಗೆ ಅಗತ್ಯವಾದ ರಾಷ್ಟ್ರೀಯ ನಾಯಕರ ಪ್ರತಿಕೃತಿಗಳು, ಗೊಮ್ಮಟೇಶ್ವರನಂತಹ ದೇವರ ವಿಗ್ರಹಗಳು ನಿರ್ಮಾಣವಾಗಿವೆ. ಮನ ಸೆಳೆಯುವ ಫೈಬರ್ ಮಂಟಪಗಳೂ ಎದ್ದು ನಿಂತಿವೆ. ಕಾಂಕ್ರಿಟ್ ಅಥವಾ ಪ್ಲಾಸ್ಟರ್ ಆಫ್ ಪ್ಯಾರೀಸ್ ಕಲಾಕೃತಿಗಳಿಗಿಂತ ಫೈಬರ್ ಕಲಾಕೃತಿಗಳು ಬೇಕಾದಲ್ಲಿಗೆ ಒಯ್ಯಲು ಹಗುರವಾಗಿದ್ದು, ಅದಕ್ಕಿಂತಲೂ ಆಕರ್ಷಕವಾಗಿದೆಯೆಂದು ಕಂಡವರು ಮೆಚ್ಚಿಕೊಳ್ಳುತ್ತಾರೆ.

ವೈವಿಧ್ಯಮಯ ಕಲಾಕೃತಿಗಳು: ಪುಟ್ಟ ಹಕ್ಕಿಯಿಂದ ಆರಂಭಿಸಿ ಏಳು ಅಡಿ ಎತ್ತರದ ಆನೆಯ ತನಕ ಮನೋಜ್ ಕಲಾಕೃತಿಗಳನ್ನು ತಯಾರಿಸುತ್ತಾರೆ. ಕಬ್ಬಿಣದ ತಂತಿಯಿಂದ ಪ್ರತಿಕೃತಿ ತಯಾರಿಕೆ, ಅದಕ್ಕೆ ಒಣಹುಲ್ಲಿನ ಹೊದಿಕೆ, ಆವೆ ಮಣ್ಣಿನ ಲೇಪನ, ಗೋಣಿ ನಾರೂ ಬೇಕಾಗುತ್ತದೆ. ಅಂತಿಮ ಹಂತದಲ್ಲಿ ಫೈಬರ್ ಹೊದಿಕೆ. ಬೇಕಾದ ಬಣ್ಣಗಳ ಲೇಪನ ಮಾಡಿದಾಗ ಕಲಾಕೃತಿ ಜೀವಂತವಾಗಿ ನಿಲ್ಲುತ್ತದೆ. ಈ ಸಲಕರಣೆಗಳಲ್ಲದೆ ಕೆಲವು ರಾಸಾಯನಿಕಗಳೂ ಬೇಕಾಗುತ್ತವೆ. ಒಂದು ಆನೆ ತಯಾರಿಕೆಗೆ 25 ದಿನಗಳು ಬೇಕು. ಮನೋಜ್ ಈಗ ನೈಜ ಆನೆಯಷ್ಟೇ ದೊಡ್ಡದಿರುವ ಫೈಬರ್ ಆನೆಯನ್ನು ತಯಾರಿಸಿದ್ದಾರೆ. ಇದು ಅವರ ಸಾಧನೆ.

ತಮ್ಮ ವಿಶಿಷ್ಟ ಕಲಾಕೃತಿಗಳಿಗೆ ಸಾಕಷ್ಟು ಬೇಡಿಕೆ ಪಡೆದಿರುವ ಮನೋಜ್ ಅವರು ಬಂಟ್ವಾಳದ ಬ್ರಹ್ಮರಕೂಟ್ಲುವಿನಲ್ಲಿ ಫೈಬರ್ ಕ್ರಾಫ್ಟ್ ಕಲಾ ಕುಟೀರ ಸ್ಥಾಪಿಸಿದ್ದಾರೆ. ಮನೋಜ್ ಕಲಾ ಸೇವೆಗೆ ಪತ್ನಿ ಸೌಮ್ಯ ನೆರವಾಗುತ್ತಾರೆ.

ಮನೋಜ್ ಅವರ ಸಂಪರ್ಕ ಸಂಖ್ಯೆ 9740290978 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT