ಜನರ ಸಂಕಷ್ಟಕ್ಕೆ ಮಾನವೀಯ ಸ್ಪಂದನ

7
ಚಾರ್ಮಾಡಿ ಘಾಟಿಯಲ್ಲಿ ಗುಡ್ಡಕುಸಿತ; ರಸ್ತೆ ಬಂದ್‌– ವಾಹನ ಸಂಚಾರ ಸ್ಥಗಿತ

ಜನರ ಸಂಕಷ್ಟಕ್ಕೆ ಮಾನವೀಯ ಸ್ಪಂದನ

Published:
Updated:
ಜನರ ಸಂಕಷ್ಟಕ್ಕೆ ಮಾನವೀಯ ಸ್ಪಂದನ

ಚಾರ್ಮಾಡಿ ಘಾಟ್‌ (ಚಿಕ್ಕಮ ಗಳೂರು): ಮುಂಗಾರು ಮಳೆಯ ರುದ್ರನರ್ತನಕ್ಕೆ ಚಾರ್ಮಾಡಿ ಘಾಟಿಯಲ್ಲಿ (ಕೊಟ್ಟಿಗೆಹಾರ–ಧರ್ಮಸ್ಥಳ–ಮಂಗಳೂರು ಮಾರ್ಗ) ಗುಡ್ಡಕುಸಿದು ರಸ್ತೆ ಬಂದ್‌ ಆಗಿ, ವಾಹನ ಸಂಚಾರಕ್ಕೆ ಸ್ಥಗಿತವಾಗಿ ಸಂಕಷ್ಟದಲ್ಲಿದ್ದ ಪ್ರಯಾಣಿಕರಿಗೆ ಜನಪ್ರತಿನಿಧಿಗಳು, ಸಮಾಜಸೇವಕರು, ಸಂಘಟನೆಗಳವರು ವಿವಿಧ ರೀತಿಯಲ್ಲಿ ನೆರವಾಗಿ ಮಾನವೀಯತೆ ಮೆರೆದರು.

ಚಾರ್ಮಾಡಿಯ ಔಷಧೀಯ ಸಸ್ಯ ಕೇಂದ್ರದಿಂದ ಅನತಿ ದೂರದಲ್ಲಿ ರಸ್ತೆ ಬಂದ್‌ ಆಗಿದ್ದರಿಂದ ಸೋಮವಾರ ರಾತ್ರಿ ಘಾಟಿಯಲ್ಲಿ ಬಸ್ಸುಗಳು, ಲಾರಿಗಳು, ಕಾರುಗಳು, ಜೀಪುಗಳು ಮೊದಲಾದ ವಾಹನಗಳು ಮಾರ್ಗದ ಎರಡೂ ಕಡೆಗಳಲ್ಲಿ ಕಿಲೋಮೀಟರ್‌ ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ವಾಹನಗಳಿದ್ದ ಪ್ರಯಾಣಿಕರು ಮಳೆ ಆರ್ಭಟ, ಕಗ್ಗತ್ತಲು, ಚಳಿಯ ನಡುವೆ ವನವಾಸ ಅನುಭವಿಸಿದರು.

ಕೊಟ್ಟಿಗೆಹಾರ, ಬಣಕಲ್‌, ಚಿಕ್ಕಮಗಳೂರು ಮತ್ತು ಇತರ ಕಡೆಗಳ ಸ್ವಯಂ ಸೇವಕರು, ಸಂಘಟನೆಗಳವರು, ಸಮಾಜಸೇವಕರು ವಾಹನಗಳಲ್ಲಿದ್ದ ಪ್ರಯಾಣಿಕರಿಗೆ ಉಪಾಹಾರ, ಬಿಸ್ಕತ್ತು, ಕುಡಿಯುವ ನೀರು, ಬ್ರೆಡ್ಡು ಮೊದಲಾದವನ್ನು ನೀಡಿದರು. ಅಗತ್ಯ ಇದ್ದ ಪ್ರಯಾಣಿಕರಿಗೆ ಔಷಧಗಳನ್ನು ನೀಡಿದರು. ಮಕ್ಕಳಿಗೆ ಹಾಲು, ಬಿಸ್ಕತ್ತು ನೀಡಲಾಯಿತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಸ್ಥಳಗಳಿಗೆ ಕಳುಹಿಸುವ ನಿಟ್ಟಿನಲ್ಲಿ ಕಾಳಜಿ ವಹಿಸಿದರು.

‘ಮಂಗಳೂರಿಗೆ ಆಸ್ಪತ್ರೆಗೆ ಹೋಗಿ ವಾಪಸ್‌ ಊರಿಗೆ ಹೊರಟಿದ್ದೆ. ಚಾರ್ಮಾಡಿ ಘಾಟಿಯ ಈ ಕಾಡಿನ ನಡುವೆ ಒಂದು ರಾತ್ರಿ ಕಳೆದೆವು. ರಾತ್ರಿ ಪೂರಾ ಭಯ ಆವರಿಸಿತ್ತು. ಬೆಳಿಗ್ಗೆ ಕೆಲವು ಪುಣ್ಯಾತ್ಮರು ಆಹಾರ, ನೀರು ಕೊಟ್ಟರು. ಈಗ ಸಂಚಾರಕ್ಕೆ ಅನುವು ಮಾಡಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ’ ಎಂದು ಚನ್ನಗಿರಿಯ ಬಸವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಗೊತ್ತಿಲ್ಲದೇ ಬಂದು ಮಧ್ಯದಲ್ಲಿ ಸಿಲುಕಿಕೊಂಡ ಬಗ್ಗೆ ಬಹಳಷ್ಟು ಮಂದಿ ಬೇಸರ ವ್ಯಕ್ತಪಡಿಸಿದರು. ಕೆಲವರಂತೂ ಪದೇ ಪದೇ ಚಾರ್ಮಾಡಿ ಘಾಟಿ ಸಂಚಾರವನ್ನು ಪರಿಪರಿಯಾಗಿ ಶಪಿಸಿದರು.

ಚಾರ್ಮಾಡಿ ಘಾಟಿಯಲ್ಲಿ ಕೆಲವು ಕಡೆ ಮಣ್ಣು ಕುಸಿದಿದೆ. ಮರಗಳು ಬಿದ್ದಿವೆ. ಜೆಸಿಬಿ ಸಹಾಯದಿಂದ ಅವುಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ.

ಕೊಟ್ಟಿಗೆಹಾರ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತ ಆದರ್ಶ್‌ ಮಾತನಾಡಿ, ‘ರಸ್ತೆ ಬಂದ್‌ ಆಗಿರುವ ವಿಷಯ ತಿಳಿದು ಬೆಳಿಗ್ಗೆ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿದೆವು. ವಿವಿಧ ಸಂಘಟನೆಗಳವರು, ‘ಗೆಳೆಯರು’ವಾಟ್ಸ್‌ ಗ್ರೂಪ್‌ನ ಸ್ನೇಹಿತರ ಎಲ್ಲ ಜತೆಗೂಡಿ ಪ್ರಯಾಣಿಕರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆವು’ ಎಂದು ತಿಳಿಸಿದರು.

ಪೊಲೀಸರು ವಾಹನಗಳ ಸಂಚಾರ ದಟ್ಟಣೆ ನಿರ್ವಹಣೆಗೆ ಹರ ಸಾಹಸಪಟ್ಟರು. ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಅಣ್ಣಾ ಮಲೈ ಅವರು ಮಳೆಯನ್ನು ಲೆಕ್ಕಿಸದೆ ಕಾರ್ಯಾಚರಣೆ ನಿಗಾ ವಹಿಸಿದರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಧರೆಗುರುಳಿದ್ದ ಮರಗಳನ್ನು ತೆರವುಗೊಳಿಸಿದರು.

ಇನ್ನು ಜೆಸಿಬಿಗಳನ್ನು ಬಳಸಿ ಮಣ್ಣನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಅನುವುಗೊಳಿಸಲಾಯಿತು. ವಾಹನ ಚಾಲಕರು ಉಸಿರು ಬಿಗಿ ಹಿಡಿದುಕೊಂಡೇ ಹಳ್ಳದೋಪಾದಿಯಲ್ಲಿ ಜಲಾವೃತ್ತವಾಗಿದ್ದ ರಸ್ತೆಯಲ್ಲಿ ವಾಹನಗಳನ್ನು ಚಾಲನೆ ಮಾಡಿದರು.

ರಸ್ತೆ ಬಂದ್‌ ಆಗಿದ್ದರಿಂದ ವಾಹನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಬೆಳಿಗ್ಗೆಯಿಂದಲೇ ಎರಡೂ ಕಡೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಬಣಕಲ್‌ನಲ್ಲಿ ಬ್ಯಾರಿಕೇಡ್‌ ಹಾಕಿ ವಾಹನಗಳು ಚಾರ್ಮಾಡಿ ಘಾಟಿ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಕುದುರೆಮುಖ, ಕಾರ್ಕಳ ಮಾರ್ಗದಲ್ಲಿ ಮಂಗಳೂರು ಕಡೆಗೆ ಸಾಗುವ ವಾಹನಗಳು ಸಂಚರಿಸಿದವು.

ವರುಣನ ಆರ್ಭಟಕ್ಕೆ ತತ್ತರಿಸಿದ ಜನರು

ಕೆಲ ವಾಹನಗಳು ಮಾರ್ಗ ಮಧ್ಯೆ ಕೆಟ್ಟು ನಿಂತಿದ್ದವು. ಅವುಗಳ ರಿಪೇರಿಗೆ ಕ್ಲೀನರ್‌ಗಳು, ಚಾಲಕರು ಹರ ಸಾಹಸಪಟ್ಟರು. ಮಳೆಯ ನಡುವೆಯೇ ಕಾರ್ಯಾಚರಣೆ ನಡೆಯಿತು. ವರುಣನ ಅಬ್ಬರಕ್ಕೆ ಕೆಲವು ಕಡೆ ರಸ್ತೆ ಕೊರಕಲು ಬಿದ್ದಿದೆ. ಇನ್ನು ಕೆಲವು ಕಡೆ ಮಣ್ಣು ಕುಸಿಯುವಂತಿದೆ. ಭಾರಿ ವಾಹನ ಚಾಲಕರ ಪಾಡು ಹೇಳತೀರದಾಗಿತ್ತು. ಕೆಲವು ಕಡೆ ಕೆಎಸ್‌ಆರ್‌ಟಿಸಿ ಬಸ್ಸುಗಳು ಖಾಲಿ ನಿಂತಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry