ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಕೆಲಸ ಮಾಡಬಲ್ಲ ಆರೋಗ್ಯಪಟ್ಟಿ

Last Updated 13 ಜೂನ್ 2018, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಗ್ಯಾಜೆಟ್‌ಗಳಲ್ಲಿ ಆರೋಗ್ಯಪಟ್ಟಿಗಳೂ ಸೇರಿವೆ. ಇವುಗಳನ್ನು ಕೈಗಡಿಯಾರದ ಮಾದರಿಯಲ್ಲಿ ಕೈಗೆ ಕಟ್ಟಿಕೊಳ್ಳಲಾಗುತ್ತದೆ. ಇವು ಸೋಮಾರಿಗಳಾದವರನ್ನು ಎಚ್ಚರಿಸಿ ಅವರಿಂದ ಕೆಲಸಗಳನ್ನು ಮಾಡಿಸಿ, ಅವರಿಗೆ ನಡೆಯಲು ಎಚ್ಚರಿಸಿ, ಎಷ್ಟು ನಡೆದಿದ್ದೀರಿ, ಎಷ್ಟು ಓಡಿದ್ದೀರಿ, ಎಷ್ಟು ನಿದ್ರಿಸಿದ್ದೀರಿ ಎಂದೆಲ್ಲ ಮಾಹಿತಿ ನೀಡುತ್ತವೆ. ಈ ಪಟ್ಟಿಗಳು ಎಲ್ಲ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ ಸೂಕ್ತ ಕಿರುತಂತ್ರಾಂಶದ ಮೂಲಕ ಸ್ಮಾರ್ಟ್‌ಫೋನಿಗೆ ವರ್ಗಾಯಿಸುತ್ತವೆ.

ಬಹುತೇಕ ಆರೋಗ್ಯಪಟ್ಟಿಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿರುವಂತಹ ಎಕ್ಸೆಲೆರೋಮೀಟರ್ ಮತ್ತು ಇನ್ನು ಕೆಲವು ಪಟ್ಟಿಗಳಲ್ಲಿ ಹೃದಯ ಬಡಿತವನ್ನು ದಾಖಲಿಸುವ ಸಂವೇದಕವೂ ಇರುತ್ತವೆ. ಈ ಸಂವೇದಕವು ಪಟ್ಟಿಯು ಸ್ಥಿರವಾಗಿದೆಯೇ, ಚಲಿಸುತ್ತಿದೆಯೇ, ಯಾವ ದಿಕ್ಕಿಗೆ ಎಷ್ಟು ವೇಗದಿಂದ ಚಲಿಸುತ್ತಿದೆ, ಭೂಮಿ ಯಾವ ಕಡೆಗೆ ಇದೆ, ಎಂದೆಲ್ಲ ಗ್ರಹಿಸಿ ಸಂಗ್ರಹಿಸಿದ ಮಾಹಿತಿಗಳನ್ನು ವಿಶ್ಲೇಷಿಸಿ ಸಾಧನವನ್ನು ಧರಿಸಿದವನು ನಿದ್ರಿಸುತ್ತಿದ್ದಾನೆಯೇ, ನಡೆಯುತ್ತಿದ್ದಾನೆಯೇ, ಓಡುತ್ತಿದ್ದಾನೆಯೇ ಎಂದು ಲೆಕ್ಕ ಹಾಕುತ್ತದೆ. ಜೊತೆಗೆ ಎಷ್ಟು ಹೆಜ್ಜೆ ನಡೆದಿದ್ದಾನೆ ಅಥವಾ ಓಡಿದ್ದಾನೆ ಎಂದೂ ಲೆಕ್ಕಹಾಕುತ್ತದೆ. ಇಂತಹ ಪಟ್ಟಿಗಳು ಮಾರುಕಟ್ಟೆಯಲ್ಲಿ ಹಲವಾರಿವೆ. ಈ ಸಲ ನಾವು ವಿಮರ್ಶಿಸುತ್ತಿರುವ ಸ್ಮಾರ್ಟ್ರೋನ್ ಟಿ.ಬ್ಯಾಂಡ್ (Smartron t.Band) ಆರೋಗ್ಯಪಟ್ಟಿ ಇವೆಲ್ಲವುಗಳಿಗಿಂತ ಸ್ವಲ್ಪ ಹೆಚ್ಚಿನದು. ಇದರಲ್ಲಿ ರಕ್ತದೊತ್ತಡ ಮತ್ತು ಇಸಿಜಿ ಮಾಪನ ಕೂಡ ಇದೆ.

ಗುಣವೈಶಿಷ್ಟ್ಯಗಳು
ಪರದೆ PM-OLED, 128 X 64 ಪಿಕ್ಸೆಲ್ ರೆಸೊಲೂಶನ್, 0.96 ಇಂಚು ಗಾತ್ರ ಬ್ಯಾಟರಿ 100 mAh ಸ್ಪರ್ಶಸಂವೇದನೆ ಇದೆ ಸಂಪರ್ಕ ಬ್ಲೂಟೂತ್ ಸಂವೇದಕಗಳು ಎಕ್ಸೆಲೆರೋಮೀಟರ್, ಹೃದಯಬಡಿತ, ಇಸಿಜಿ ನೀರು ನಿರೋಧಕ IP67 ಬೆಲ್ಟ್ ಬದಲಾವಣೆ ಸಾಧ್ಯ ತೂಕ 25 ಗ್ರಾಂ ಗಾತ್ರ 45 x 20 x 12 ಮಿ.ಮೀ. ಬೆಲೆ ₹4,999 (ಫ್ಲಿಪ್‌ಕಾರ್ಟ್‌) ಈ ಟಿ.ಬ್ಯಾಂಡ್ ತಯಾರಿಸಿದ್ದು ನಮ್ಮ ದೇಶದ ಹೈದರಾಬಾದ್ ಮೂಲದ ಸ್ಮಾರ್ಟ್ರೋನ್ ಕಂಪೆನಿ. ಈ ಕಂಪೆನಿಯ ಕೆಲವು ಫೋನ್‌ಗಳ ವಿಮರ್ಶೆಯನ್ನು ಈ ಅಂಕಣದಲ್ಲಿ ನೀಡಲಾಗಿತ್ತು.

ಈ ಆರೋಗ್ಯಪಟ್ಟಿ ನೋಡಲು ಒಂದು ಆಯತಾಕಾರದ ಕಪ್ಪು ಬಣ್ಣದ ಕೈಗಡಿಯಾರದಂತೆ ಕಾಣಿಸುತ್ತದೆ. ಇದು ಸ್ವಲ್ಪ ದಪ್ಪ (12 ಮಿ.ಮೀ.) ಇದೆ. ಇತರೆ ಆರೋಗ್ಯಪಟ್ಟಿಗಳಿಗೂ ಇದಕ್ಕೂ ಒಂದು ಪ್ರಮುಖ ವ್ಯತ್ಯಾಸ ಇದೆ. ಇದರ ಪರದೆಯ ಕೆಳಗಿನ ಭಾಗದಲ್ಲಿ 8 ಮಿ.ಮೀ. ಅಗಲದ ಉಕ್ಕಿನ ಪಟ್ಟಿಯಿದೆ.

ಹೃದಯಬಡಿತ ಮತ್ತು ಇಸಿಜಿ ಅಳತೆ ಮಾಡಲು ಬೆರಳನ್ನು ಇದರ ಮೇಲೆ ಇಡಬೇಕು. ಪರದೆಯಲ್ಲಿ ಕಪ್ಪು ಬಣ್ಣದಲ್ಲಿ ಅಕ್ಷರಗಳು ಮೂಡಿಬರುತ್ತವೆ. ಪರದೆ ಬಣ್ಣದಲ್ಲಿರದೆ ಕಪ್ಪು ಬಿಳುಪಿನಲ್ಲಿರುವುದು ಒಂದು ಕೊರತೆ ಎನ್ನಬಹುದು. ಇದರ ಜೊತೆ ರಬ್ಬರ್ ಬೆಲ್ಟ್ ನೀಡಿದ್ದಾರೆ. ಈ ಬೆಲ್ಟ್ ಬದಲಿಸಬಹುದು.

ಇದನ್ನು ಚಾರ್ಜ್ ಮಾಡಲು ಇದರ ಜೊತೆ ಒಂದು ಜೋಡಣೆ ನೀಡಿದ್ದಾರೆ. ಅದರಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಯಿದೆ. ಅದನ್ನು ಈ ಸಾದನದ ಅಡಿಭಾಗದಲ್ಲಿ ಅಯಸ್ಕಾಂತದ ಮೂಲಕ ಜೋಡಿಸಲಾಗುತ್ತದೆ. ಚಾರ್ಜ್ ಮಾಡಲು ನಿಮ್ಮಲ್ಲಿರುವ ಯಾವುದೇ ಯುಎಸ್‌ಬಿ ಚಾರ್ಜರ್ ಬಳಸಬಹುದು. ಕಂಪೆನಿಯವರು ಯಾವುದೇ ಚಾರ್ಜರ್ ನೀಡಿಲ್ಲ. ಸುಮಾರು ಒಂದು ಗಂಟೆಯಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಒಮ್ಮೆ ಪೂರ್ತಿ ಚಾರ್ಜ್ ಆದರೆ ಎರಡರಿಂದ ಮೂರು ದಿವಸ ಕೆಲಸ ಮಾಡುತ್ತದೆ.

ಇದರ ಪರದೆಯಲ್ಲಿ ನಾಲ್ಕು ಹಂತಗಳಿವೆ. ಮೊದಲನೆಯದಾಗಿ ಅದು ಗಂಟೆ ತೋರಿಸುತ್ತಿರುತ್ತದೆ. ಆಗ ಪರದೆಯ ಕೆಳಭಾಗದಲ್ಲಿರುವ ಉಕ್ಕಿನ ಭಾಗಕ್ಕೆ ಎರಡು ಸಲ ತಟ್ಟಿದರೆ ಬ್ಲೂಟೂತ್ ಜೋಡಣೆಯ ಸಂಖ್ಯೆ ಕಂಡುಬರುತ್ತದೆ. ಈ ಆರೋಗ್ಯಪಟ್ಟಿಯನ್ನು ಬಳಸಲು ನೀವು ಗೂಗ್ಲ್ ಪ್ಲೇ ಸ್ಟೋರ್ ಅಥವಾ ಐಫೋನ್ ಆಫ್ ಸ್ಟೋರಿನಲ್ಲಿ ದೊರೆಯುವ ಅವರದೇ THealth ಎಂಬ ಕಿರುತಂತ್ರಾಂಶವನ್ನು (ಆಪ್) ಹಾಕಿಕೊಳ್ಳಬೇಕು. ಅದರ ಜೊತೆ ಬ್ಲೂಟೂತ್ ಮೂಲಕ ಸಂಪರ್ಕ ಸಾಧಿಸಬೇಕು. ಮತ್ತೊಮ್ಮೆ ತಟ್ಟಿದರೆ ಆಗ ಪೆಡೋಮೀಟರ್ ಅಂದರೆ ನೀವು ಎಷ್ಟು ಹೆಜ್ಜೆ ನಡೆದಿದ್ದೀರಿ ಎಂಬುದನ್ನು ತೋರಿಸುತ್ತದೆ. ಈ ಹಂತದಲ್ಲಿ ಐದು ಸೆಕೆಂಡು ಕಾಲ ಒತ್ತಿ ಹಿಡಿದರೆ ನಡಿಗೆಯನ್ನು ಹೆಜ್ಜೆಗಳಲ್ಲಿ ಅಳೆಯುವ ಮಾಪನ ಮೂಡಿಬರುತ್ತದೆ. ನೀವು ವಾಕಿಂಗ್ ಹೋಗುವ ಮೊದಲು ಹೀಗೆ ಮಾಡಿ ವಾಕಿಂಗ್ ಮುಗಿದಾಗ ಅದನ್ನು ನಿಲ್ಲಿಸಿದರೆ ನೀವು ಎಷ್ಟು ಹೆಜ್ಜೆ ನಡೆದಿದ್ದೀರಿ, ಅದು ಅಂದಾಜು ಎಷ್ಟು ಕಿ.ಮೀ., ಎಷ್ಟು ಕ್ಯಾಲೊರಿ ಖರ್ಚು ಮಾಡಿದ್ದೀರಿ ಎಂಬ ಮಾಹಿತಿ ನೀಡುತ್ತದೆ.

ಮುಂದಿನ ಹಂತದಲ್ಲಿ ಈ ಆರೋಗ್ಯಪಟ್ಟಿ ನಿಮ್ಮ ಹೃದಯಬಡಿತವನ್ನು ಎಣಿಸಿ ತೋರಿಸುತ್ತದೆ. ಈ ಹಂತದಲ್ಲಿ ಐದು ಸೆಕೆಂಡು ಒತ್ತಿ ಹಿಡಿದರೆ ಇಸಿಜಿ ಅಳತೆ ಪ್ರಾರಂಭವಾಗುತ್ತದೆ. ನಂತರ 120 ಸೆಕೆಂಡು ಒತ್ತಿ ಹಿಡಿದುಕೊಳ್ಳಬೇಕು. ಕೊನೆಗೆ ಅದು HRV (Heart Rate Variability), ಆಯಾಸ (Fatigue) ಮತ್ತು ಒತ್ತಡಗಳನ್ನು (Stress) ಅಳತೆ ಮಾಡಿ ತೋರಿಸುತ್ತದೆ. ಮುಂದಿನ ಹಂತದಲ್ಲಿ ರಕ್ತದೊತ್ತಡವನ್ನು ಅಳತೆ ಮಾಡಲಾಗುತ್ತದೆ. ಇದಕ್ಕಾಗಿ 30 ಸೆಕೆಂಡು ಒತ್ತಿ ಹಿಡಿದುಕೊಳ್ಳಬೇಕು. ಈ ಹಂತದಲ್ಲಿ ರಕ್ತದೊತ್ತಡದ ಜೊತೆ ಹೃದಯಬಡಿತವನ್ನೂ ಎಣಿಸಿ ಹೇಳುತ್ತದೆ.

ಈ ಆರೋಗ್ಯಪಟ್ಟಿಯನ್ನು ಸ್ಮಾರ್ಟ್‌ಫೋನಿನ ಕಿರುತಂತ್ರಾಂಶದ ಜೊತೆ ಜೋಡಣೆ ಮಾಡಿದರೆ ಮಾತ್ರ ಇದರ ಸದುಪಯೋಗ ಮಾಡಿಕೊಳ್ಳಬಹುದು. ಅದು ನಿಮ್ಮ ನಡಿಗೆ, ಹೃದಯಬಡಿತ, ರಕ್ತದೊತ್ತಡ, ಇಸಿಜಿಗಳನ್ನೆಲ್ಲ ದಾಖಲಿಸಿ ತೋರಿಸುತ್ತದೆ. ಬೇರೆ ಬೇರೆ ದಿನ, ಸಮಯಗಳ ಅಳತೆಗಳನ್ನೆಲ್ಲ ತೋರಿಸುತ್ತದೆ. ಇಸಿಜಿಯನ್ನು ಬೇಕಿದ್ದರೆ ನೀವು ಇಮೈಲ್, ವಾಟ್ಸ್‌ಆಪ್, ಅಥವಾ ಇತರೆ ಯಾವುದೇ ವಿಧಾನದ ಮೂಲಕ ಹಂಚಿಕೊಳ್ಳಬಹುದು.

ಈ ಸಾಧನವು ರಕ್ತದೊತ್ತಡವನ್ನು ಅಷ್ಟು ನಿಖರವಾಗಿ ತೋರಿಸುತ್ತಿಲ್ಲ ಎಂದು ನನಗೆ ಅನ್ನಿಸಿತ್ತು. ಕಂಪೆನಿಯವರು ಸೂಚಿಸಿದಂತೆ ಆಸ್ಪತ್ರೆಗೆ ಹೋಗಿ ನನ್ನ ನಿಜವಾದ ರಕ್ತದೊತ್ತಡವನ್ನು ಅಳತೆ ಮಾಡಿ ಆ ಮೊತ್ತವನ್ನು ಕಿರುತಂತ್ರಾಂಶದ ಮೂಲಕ ದಾಖಲಿಸಿ ಈ ಆರೋಗ್ಯಪಟ್ಟಿಯ ಮಾಪನಾಂಕ ನಿರ್ಣಯ (Calibration) ಮಾಡಿದೆ. ನಂತರ ಸರಿಯಾಗಿ ತೋರಿಸಿತು. ಹೀಗೆ ಮಾಪನಾಂಕ ನಿರ್ಣಯವನ್ನು ಮಾಡಿ ನಂತರ ಈ ಪಟ್ಟಿಯನ್ನು ಆ ವ್ಯಕ್ತಿ ಮಾತ್ರ ಧರಿಸಬೇಕು. ಈ ಆರೋಗ್ಯಪಟ್ಟಿಯ ಕೆಳಭಾಗದಲ್ಲಿ ಸಂವೇದಕವಿದೆ. ಆ ಭಾಗವನ್ನು ಆಗಾಗ ಸ್ವಚ್ಛ ಮಾಡುತ್ತಿರಬೇಕು. ಹಾಗಿದ್ದರೆ ಮಾತ್ರ ಇದು ಸರಿಯಾಗಿ ಕೆಲಸ ಮಾಡುತ್ತದೆ.

ನೀಡುವ ಬೆಲೆಗೆ ಹೋಲಿಸಿದರೆ ಇದು ನಿಜಕ್ಕೂ ಉತ್ತಮ ಕೊಳ್ಳುವಿಕೆ ಎನ್ನಬಹುದು. ಅಂದ ಹಾಗೆ ಇದು ಅಪ್ಪಟ ಭಾರತೀಯ ಉತ್ಪನ್ನ. ಇದೇ ನಮೂನೆಯಲ್ಲಿ ಎಲ್ಲ ಕೆಲಸ ಮಾಡುವ ವಿದೇಶದಲ್ಲಿ ತಯಾರಾದ ಆರೋಗ್ಯಪಟ್ಟಿಗೆ ಸುಮಾರು ₹20 ಸಾವಿರ ಬೆಲೆಯಿದೆ.

*


ವಾರದ ಆಪ್ (app) ಔಷಧಿಗಳ ಮಾಹಿತಿ (Drugs Dictionary Offline: FREE)
ನಿಮಗೆ ವೈದ್ಯರು ಸೂಚಿಸಿದ ಔಷಧಿಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದು ನಿಮಗೆ ಯಾವತ್ತಾದರೂ ಅನಿಸಿತ್ತಾ? ಉದಾಹರಣೆಗೆ ನೀವು ವೈದ್ಯರ ಸಲಹೆ ಮೇರೆಗೆ ಕೊಂಡುಕೊಂಡ ಔಷಧಿಯ ಅಡ್ಡ ಪರಿಣಾಮಗಳೇನು ಎಂದು ನಿಮಗೆ ತಿಳಿದರೆ ಉತ್ತಮವಲ್ಲವೇ? ಯಾವ ಔಷಧಿ ಯಾವ ಸಂದರ್ಭದಲ್ಲಿ ಬಳಸಬೇಕು ಎಂಬ ಮಾಹಿತಿಯೂ ತಿಳಿದಿದ್ದರೆ ಉತ್ತಮ ತಾನೆ? ಅಂತಹ ಮಾಹಿತಿ ನೀಡುವ ಒಂದು ಕಿರುತಂತ್ರಾಂಶ ಬೇಕಿದ್ದರೆ ನೀವು ಗೂಗ್ಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ Drugs Dictionary Offline: FREE ಎಂದು ಹುಡುಕಬೇಕು ಅಥವಾ http://bit.ly/gadgetloka333 ಜಾಲತಾಣಕ್ಕೆ ಭೇಟಿ ನೀಡಬೇಕು. ಒಂದು ಉಪಯುಕ್ತ ಕಿರುತಂತ್ರಾಂಶ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಹಲವು ಔಷಧಿಗಳು ಬೇರೆ ಬೇರೆ ಹೆಸರಿನಲ್ಲಿ ಮಾರಾಟವಾಗುತ್ತವೆ. ಅಂತಹ ಬ್ರಾಂಡ್ ಹೆಸರುಗಳ ಪಟ್ಟಿಯೂ ಇದ್ದರೆ ಚೆನ್ನಾಗಿತ್ತು.

*
ಗ್ಯಾಜೆಟ್ ಪದ: Encryption = ಗೂಢಲಿಪೀಕರಣ
ಮಾಹಿತಿಯನ್ನು ಇನ್ನೊಬ್ಬರು ಓದದಂತೆ ಗೂಢವಾಗಿ ಅದರ ಸಂಕೇತಗಳನ್ನು ಬದಲಿಸಿ ಸಂಗ್ರಹಿಸಿಡುವುದು ಹಾಗೂ ವರ್ಗಾವಣೆ ಮಾಡುವುದು. ಸ್ಮಾರ್ಟ್‌ಫೋನಿನಲ್ಲಿರುವ ಮಾಹಿತಿಗಳನ್ನು ಗೂಢಲಿಪೀಕರಿಸಿಟ್ಟರೆ ಅದು ಇನ್ನೊಬ್ಬರಿಗೆ ದೊರೆತರೂ ಅವರಿಗೆ ಅದರಲ್ಲಿರುವ ಮಾಹಿತಿಯನ್ನು ಅರ್ಥೈಸಿಕೊಳ್ಳಲಾಗುವುದಿಲ್ಲ.

*
ಗ್ಯಾಜೆಟ್ ಸುದ್ದಿ: ಏಥರ್ ವಿದ್ಯುತ್ ಸ್ಕೂಟರ್ ಬಿಡುಗಡೆ
ಬೆಂಗಳೂರು ಮೂಲದ ಏಥರ್ ಎನರ್ಜಿ ಕಂಪೆನಿ ವಿದ್ಯುತ್ ಸ್ಕೂಟರ್ ತಯಾರಿಸುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಅವರು ತಮ್ಮ ಎರಡು ವಿದ್ಯುಚ್ಛಾಲಿತ ಸ್ಕೂಟರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. S340 ಮತ್ತು S450 ಮಾದರಿಯ ಈ ಎರಡು ಸ್ಕೂಟರುಗಳ ಬೆಲೆ ಕ್ರಮವಾಗಿ ₹1,09,750 ಮತ್ತು ₹1,24,750. ಇವುಗಳು ಆಗಸ್ಟ್ ತಿಂಗಳಿನಲ್ಲಿ ಗ್ರಾಹಕರಿಗೆ ದೊರೆಯಲಿವೆ. ಇವುಗಳನ್ನು ಈಗಾಗಲೇ ಬುಕಿಂಗ್ ಮಾಡಬಹುದು. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ S340 ಸುಮಾರು 60 ಕಿಮೀ. ಸಾಗಬಲ್ಲುದು ಮತ್ತು S450 ಸುಮಾರು 80 ಕಿಮೀ. ಸಾಗಬಲ್ಲುದು. ಈ ಸ್ಕೂಟರುಗಳನ್ನು ಚಾರ್ಜ್ ಮಾಡಲು ಏಥರ್ ಎನರ್ಜಿಯವರು ಬೆಂಗಳೂರಿನಲ್ಲಿ ಅಲ್ಲಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಏಥರ್ ಗ್ರಿಡ್ ಹೆಸರಿನಲ್ಲಿ ಪ್ರಾರಂಭಿಸಿದ್ದಾರೆ.

*
ಗ್ಯಾಜೆಟ್ ಸಲಹೆ
ಅರುಣಕುಮಾರರ ಪ್ರಶ್ನೆ: ನಾನು ಹುವಾವೆ ಪಿ20 ಫೋನ್ ಕೊಳ್ಳಬೇಕೆಂದುಕೊಂಡಿದ್ದೇನೆ. ದಯವಿಟ್ಟು ಈ ಫೋನಿನ ಗುಣಾವಗುಣಗಳನ್ನು ತಿಳಿಸಬೇಕಾಗಿ ವಿನಂತಿ. ಇದನ್ನು ಕೊಳ್ಳಬಹುದೇ?

ಉ: ಹುವಾವೆ ಪಿ20 ಫೋನ್ ನನಗೆ ವಿಮರ್ಶೆಗೆ ಬಂದಿಲ್ಲ. ಆದುದರಿಂದ ಅದರ ಬಗ್ಗೆ ನನಗೆ ತಿಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT