ಬಾಡಿಗೆ ಪಾವತಿಸದ ಅಂಗಡಿಗಳಿಗೆ ವರ್ಷದಿಂದ ಬೀಗ!

7
ಗ್ರಾಮ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ನಷ್ಟ

ಬಾಡಿಗೆ ಪಾವತಿಸದ ಅಂಗಡಿಗಳಿಗೆ ವರ್ಷದಿಂದ ಬೀಗ!

Published:
Updated:

ಸಂತೇಮರಹಳ್ಳಿ: ಬಾಡಿಗೆದಾರರು ಸಮರ್ಪಕವಾಗಿ ಅಂಗಡಿ ಮಳಿಗೆಗಳಿಗೆ ಬಾಡಿಗೆ ಪಾವತಿಸದ ಪರಿಣಾಮ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಂಗಡಿ ಮಳಿಗೆಗಳಿಗೆ ಬೀಗ ಜಡಿದು ಒಂದು ವರ್ಷ ಕಳೆದಿದೆ.

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ಬಾಡಿಗೆಗೆ ಪಡೆದಿದ್ದವರು ಮೂರು ವರ್ಷಗಳಿಂದ ಬಾಡಿಗೆ ಪಾವತಿಸದೇ ಇರುವುದರಿಂದ ಗ್ರಾಮ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಇಲ್ಲಿನ ಚಾಮರಾಜನಗರ ರಸ್ತೆಯಲ್ಲಿ 2014ನೇ ಸಾಲಿನಲ್ಲಿ ಗ್ರಾಮ ಸ್ವರಾಜ್ ಯೋಜನೆಯಡಿಯಲ್ಲಿ ₹20 ಲಕ್ಷ ವೆಚ್ಚದಲ್ಲಿ 10 ಮಳಿಗೆ ಹಾಗೂ ಯಳಂದೂರು ರಸ್ತೆಯಲ್ಲಿ 2 ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಂತೇಮರಹಳ್ಳಿ, ಹೆಗ್ಗವಾಡಿಪುರ, ದೇಶವಳ್ಳಿ, ಬಸವಟ್ಟಿ, ಕಾವುದವಾಡಿ ಹಾಗೂ ತೆಳ್ಳನೂರು ಗ್ರಾಮಗಳ ಸ್ಥಳೀಯರಿಗೆ ಮಾತ್ರ ಬಾಡಿಗೆ ನೀಡಲು ಟೆಂಡರ್ ಕರೆಯಲಾಗಿತ್ತು. ಪಂಚಾಯಿತಿ ಮೂಲಕ ಟೆಂಡರ್ ಕರೆದು ಮುಂಗಡ ಹಣವನ್ನು ಕಟ್ಟಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಆದೇಶ ನೀಡಲಾಗಿತ್ತು. ಅದರಂತೆ ಹರಾಜಿನಲ್ಲಿ ಭಾಗವಹಿಸಿದವರು ಮುಂಗಡ ಹಣ ಕಟ್ಟಿ ₹9 ಸಾವಿರದಿಂದ ₹11 ಸಾವಿರದವರೆಗೆ ಪ್ರತಿ ಮಳಿಗೆಗೆ ಒಂದೊಂದು ರೀತಿ ಹಣ ನಿಗದಿ ಮಾಡಿ ಬಾಡಿಗೆ ಪಡೆದುಕೊಂಡಿದ್ದರು.

ಗ್ರಾಮ ಪಂಚಾಯಿತಿಯವರು ಅಂಗಡಿ ಬಾಡಿಗೆ ಪಡೆದ ಮಾಲೀಕರಿಂದ ಮುಂಗಡ ಹಣ ಪಾವತಿಸಿಕೊಂಡು ಮಾಲೀಕರ ಹೆಸರಿನಲ್ಲಿ ದಾಖಲೆ ಪಡೆದು ಖರಾರು ಪತ್ರ ಬರೆಸಿಕೊಡಬೇಕಾಗಿತ್ತು. ಆದರೆ, ಗ್ರಾಮ ಪಂಚಾಯಿತಿಯವರ ಉದಾಸೀನ ಹಾಗೂ ಬದಲಾದ ಅಭಿವೃದ್ಧಿ ಅಧಿಕಾರಿಗಳಿಂದ 2 ವರ್ಷಗಳಿಂದ ಅಂಗಡಿ ಮಾಲೀಕರು ಗ್ರಾಮ ಪಂಚಾಯಿತಿಗೆ ಬಾಡಿಗೆ ಪಾವತಿಸಿಲ್ಲ.

ಇದರಿಂದ ಗ್ರಾಮ ಪಂಚಾಯಿತಿಗೆ ಪ್ರತಿ ತಿಂಗಳಿಗೆ 10 ಮಳಿಗೆಗಳಿಗೆ ₹ 35,450ರಂತೆ ಮೂರು ವರ್ಷಕ್ಕೆ ₹12,76,200 ರಷ್ಟು ನಷ್ಟವಾಗಿದೆ. ಅಂಗಡಿ ಮಾಲೀಕರಿಗೆ ಗ್ರಾಮ ಪಂಚಾಯಿತಿ ವತಿಯಿಂದ 2–3 ಬಾರಿ ನೋಟಿಸ್ ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. 12 ಮಳಿಗೆಗಳ ಪೈಕಿ 2 ಅಂಗಡಿ ಮಾಲೀಕರಿಂದ ಮಾತ್ರ ಬಾಡಿಗೆ ಸಂದಾಯವಾಗುತ್ತಿದೆ.

ಬಹಿರ್ದೆಸೆಯ ತಾಣ: ಮಳಿಗೆಗಳ ನಿರ್ವಹಣೆ ಇಲ್ಲದ ಪರಿಣಾಮ ಅಂಗಡಿಗಳ ಕಟ್ಟಡದ ಮುಂಭಾಗ ಗಿಡಗಳು, ಜಾಲಿ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಬೀಡಾಡಿ ದನಗಳು, ನಾಯಿಗಳ ಆಶ್ರಯ ತಾಣವಾಗಿದೆ. ಅಂಗಡಿಗಳ ಸುತ್ತಲಿನ ಜಾಗ ಬಹಿರ್ದೆಸೆಯ ತಾಣವಾಗಿ ಮಾರ್ಪಟ್ಟಿದೆ.

ಪಂಚಾಯಿತಿ ಅಭಿವೃದ್ಧಿಗಾಗಿ ಮಳಿಗೆಗಳನ್ನು ನಿರ್ಮಿಸಿ ಬಂದ ಹಣದಲ್ಲಿ ಪಂಚಾಯಿತಿಯನ್ನು ಅಭಿವೃದ್ಧಿ ಪಡಿಸಬೇಕು. ಆದರೆ, ಲಕ್ಷಾಂತರ ಬಾಡಿಗೆ ಹಣ ಪಂಚಾಯಿತಿಗೆ ನಷ್ಟವಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಿ ಪಂಚಾಯಿತಿಯನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಮಹದೇವ್‌ ಹೆಗ್ಗವಾಡಿಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry