ಟ್ರಕ್‌ ಟರ್ಮಿನಲ್‌ ಸ್ಥಾಪನೆ ಗುರಿ

7
ಕನಸುಗಳು ಬಿಚ್ಚಿಟ್ಟ ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್

ಟ್ರಕ್‌ ಟರ್ಮಿನಲ್‌ ಸ್ಥಾಪನೆ ಗುರಿ

Published:
Updated:
ಟ್ರಕ್‌ ಟರ್ಮಿನಲ್‌ ಸ್ಥಾಪನೆ ಗುರಿ

ಬಸವಕಲ್ಯಾಣ: 56 ವರ್ಷದ ಬಿ.ನಾರಾಯಣರಾವ್ ಅವರು 35 ವರ್ಷಗಳ ರಾಜಕೀಯ ಹೋರಾಟದ ಫಲವಾಗಿ ಮೊದಲ ಬಾರಿಗೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಒಂದು ಸಲ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರಿಗೆ ಜಿಲ್ಲೆಯ ರಾಜಕೀಯದ ಸಂಪೂರ್ಣ ಅರಿವಿದೆ. ರಾಜ್ಯ ಸಾಕ್ಷರತಾ ಮಿಷನ್ ಅಧ್ಯಕ್ಷರಾಗಿಯೂ ಅವರು ಕೆಲಸ ನಿರ್ವಹಿಸಿದ್ದಾರೆ. ಜನತಾ ಪಕ್ಷದಿಂದ ಸ್ಪರ್ಧಿಸಿದ್ದಾಗ ಯಶ ದೊರೆತಿರಲಿಲ್ಲ. ಒಮ್ಮೆ ಕಾಂಗ್ರೆಸ್ ಟಿಕೆಟ್ ಪಡೆದು ಕಣಕ್ಕಿಳಿದರೂ ಸೋಲು ಅನುಭವಿಸಿದರು. ಈ ಬಾರಿ ಪ್ರಬಲ ಎದುರಾಳಿಗಳನ್ನು ಮಣಿಸಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿರುವ ಅವರು ‘ಪ್ರಜಾವಾಣಿ‘ಯೊಂದಿಗೆ ತಮ್ಮ ಮುಂದಿನ ಯೋಜನೆಗಳ ಕುರಿತು ಮಾತನಾಡಿದ್ದಾರೆ.

ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ್ದ ಭರವಸೆಯನ್ನು ಯಾವ ರೀತಿ ಈಡೇರಿಸುವಿರಿ?

ಬಸವಕಲ್ಯಾಣ ತಾಲ್ಲೂಕಿನ ಜನ ಆಸ್ಪತ್ರೆಗಾಗಿ ಮಹಾರಾಷ್ಟ್ರದ ಉಮರ್ಗಾಕ್ಕೆ, ತೊಗರಿ, ಜೋಳ ಮಾರಾಟಕ್ಕೆ ಲಾತೂರಗೆ ಹೋಗುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ದೂರದ ಬೆಂಗಳೂರು, ಮಂಗಳೂರಿನತ್ತ ಮುಖ ಮಾಡುತ್ತಾರೆ. ಆದರೆ, ಈಗ ಇಲ್ಲಿಯೇ ಎಲ್ಲ ವ್ಯವಸ್ಥೆ ಮಾಡಲಾಗುವುದು. ಎಲ್ಲ ಗ್ರಾಮಗಳಿಗೂ ಕುಡಿಯುವ ನೀರು, ಉತ್ತಮ ರಸ್ತೆ, ಸಾರಿಗೆ ವ್ಯವಸ್ಥೆ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಏನು ಯೋಜನೆ ರೂಪಿಸಿದ್ದೀರಿ?

ನಗರದಲ್ಲಿ ವರ್ತುಲ ರಸ್ತೆ ನಿರ್ಮಿಸಬೇಕಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಧೀನದ ಕೆಲ ಶರಣರ ಸ್ಮಾರಕಗಳ ಅಭಿವೃದ್ಧಿ ಕೆಲಸ ಅರ್ಧಕ್ಕೆ ನಿಂತಿದೆ. ಅನುಭವ ಮಂಟಪ ನಿರ್ಮಾಣಕ್ಕೆ ಹಿಂದಿನ ಮುಖ್ಯಮಂತ್ರಿಯವರು ಅನುದಾನ ಬಿಡುಗಡೆ ಮಾಡಿದ್ದಾರೆ. ಅದರ ಶಂಕುಸ್ಥಾಪನೆ ನೆರವೇರಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸಲು ಪ್ರಯತ್ನಿಸುತ್ತೇನೆ. ಕೊಂಗಳಿ ಬ್ಯಾರೇಜ್‌ನಿಂದ 12 ಕೆರೆಗಳಿಗೆ ನೀರು ಭರ್ತಿ ಮಾಡುವ ಯೋಜನೆಗೆ ಚಾಲನೆ ನೀಡಬೇಕಿದೆ. ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಇನ್ನಷ್ಟು ಅನುದಾನ ತಂದು ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳುತ್ತೇನೆ.

 ಹುಲಸೂರು ತಾಲ್ಲೂಕು ಅಭಿವೃದ್ಧಿಗೆ ನಿಮ್ಮ ಯೋಜನೆಗಳು ಏನು?

ಹಿಂದಿನ ಕಾಂಗ್ರೆಸ್ ಸರ್ಕಾರವೇ ಹುಲಸೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿದೆ. ಮಿನಿ ವಿಧಾನಸೌಧ ನಿರ್ಮಿಸಿ ಒಂದೇ ಕಟ್ಟಡದಲ್ಲಿ ಸರ್ಕಾರಿ ಇಲಾಖೆಗಳ ಕಚೇರಿಗಳು ಇರುವಂತೆ ನೋಡಿಕೊಳ್ಳುತ್ತೇನೆ. ಕಂದಾಯ ಸಚಿವರನ್ನು ಭೇಟಿಯಾಗಿ ಹೆಚ್ಚಿನ ಅನುದಾನ ತಂದು ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳುವೆ.

ಪ್ರಥಮ ಬಾರಿ ಶಾಸಕರಾಗಿರುವ ನೀವು ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಸಿಕೊಳ್ಳುತ್ತೀರಿ?

ಈ ಮೊದಲು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಸಬೇಕು ಎಂಬ ಅನುಭವ ನನಗಿದೆ. ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ನನ್ನ ಗುರಿ.

ತಜ್ಞರ, ಗಣ್ಯರ, ಚಿಂತಕರ ಸಲಹೆ ಪಡೆದು ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಯಾವುದೇ ರೀತಿಯ ಸಂಕಷ್ಟ ಎದುರಾಗಲಾರದು.

ಅಟೊ ನಗರದಲ್ಲಿನ ಸಮಸ್ಯೆ ಬಗೆಹರಿಸಲು ಏನು ಮಾಡುತ್ತೀರಿ?

ಪಟ್ಟಣದಲ್ಲಿ ಲಾರಿಗಳ ಸಂಖ್ಯೆ ಹೆಚ್ಚಿದೆ. ಸಾವಿರಾರು ಜನರ ಬದುಕು ಸಾರಿಗೆ ಉದ್ಯಮದ ಮೇಲೆ ಅವಲಂಬಿಸಿದೆ. ಅಟೊನಗರದಲ್ಲಿ ಮೂಲಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬಸವಕಲ್ಯಾಣದಲ್ಲಿ ಲಾರಿ ಟರ್ಮಿನಲ್ ನಿರ್ಮಿಸಬೇಕು ಎಂಬುದು ನನ್ನ ಬಹುದಿನಗಳ ಕನಸು. ಅದನ್ನು ಸಾಕಾರಗೊಳಿಸುವ ದಿಸೆಯಲ್ಲಿ ಪ್ರಯತ್ನಿಸುವೆ.

35 ವರ್ಷಗಳ ನಂತರ ಮತದಾರರು ಕಾಂಗ್ರೆಸ್‌ಗೆ ಅವಕಾಶ ಕಲ್ಪಿಸಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಕಾಲಮಿತಿ ಹಾಕಿಕೊಂಡಿದ್ದೀರಾ?

35 ವರ್ಷ ಸಾಕಷ್ಟು ನೋವು ಅನುಭವಿಸಿದ್ದೇನೆ. ಕಾಂಗ್ರೆಸ್‌ ಮೇಲೆ ಭರವಸೆ ಇಟ್ಟು ಮತದಾರರು ನನ್ನನ್ನು ಚುನಾಯಿಸಿದ್ದಾರೆ. ಅವರ ಋಣ ತೀರಿಸುವುದು ನನ್ನ ಕರ್ತವ್ಯ. ಸಮ್ಮಿಶ್ರ ಸರ್ಕಾರ ಇದ್ದರೂ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಯಾವುದೇ ಅಡಚಣೆಯಾಗಲಾರದು. ಹೊಸ ಯೋಜನೆಗಳನ್ನು 5 ವರ್ಷಗಳ ಅವಧಿಯಲ್ಲೇ ಪೂರ್ಣಗೊಳ್ಳುವಂತೆ ನೋಡಿಕೊಳ್ಳುತ್ತೇನೆ.

– ಮಾಣಿಕ ಆರ್.ಭುರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry