ತಾಲ್ಲೂಕಿನಲ್ಲಿ ವೈದ್ಯರ ಕೊರತೆ

7
ವೈದ್ಯರ ನೇಮಕಕ್ಕೆ ತಾಲ್ಲೂಕು ಪಂಚಾಯಿತಿ ಸದಸ್ಯರ ಆಗ್ರಹ

ತಾಲ್ಲೂಕಿನಲ್ಲಿ ವೈದ್ಯರ ಕೊರತೆ

Published:
Updated:
ತಾಲ್ಲೂಕಿನಲ್ಲಿ ವೈದ್ಯರ ಕೊರತೆ

ಬಳ್ಳಾರಿ: ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದ್ದು, ಇರುವವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಹೊಸ ನೇಮಕಾತಿ ಆಗುವವರೆಗೂ ಗ್ರಾಮೀಣ ಪ್ರದೇಶದ ಜನರಿಗೆ ಸಮಸ್ಯೆ ತಪ್ಪಿದ್ದಲ್ಲ. ನಗರದ ತಾಲ್ಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಅಂಶ ಬೆಳಕಿಗೆ ಬಂತು.

‘ಹೋಬಳಿ ಕೇಂದ್ರವಾದ ರೂಪನಗುಡಿಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಲಭ್ಯವಿರುವುದಿಲ್ಲ. ರಾತ್ರಿ ವೇಳೆ ಯಾವ ವೈದ್ಯರೂ ಇರುವುದಿಲ್ಲ. ಆಂಬುಲೆನ್ಸ್‌ ಕೂಡ ಇಲ್ಲ’ ಎಂದು ದೂರಿದ ಆ ಕ್ಷೇತ್ರದ ಸದಸ್ಯ ಗೋವಿಂದ ಅವರಿಗೆ ವೈದ್ಯಾಧಿಕಾರಿ ಮೇಲಿನಂತೆ ಸ್ಪಷ್ಟನೆ ನೀಡಿದರು.

‘ರೂಪನಗುಡಿ ಆರೋಗ್ಯ ಕೇಂದ್ರದಲ್ಲಿ ನಾಲ್ವರು ವೈದ್ಯರಿದ್ದು, ಇಬ್ಬರನ್ನು ಇತರೆ ಕೇಂದ್ರಗಳಿಗೆ ನಿಯೋಜಿಸಲಾಗಿದೆ. ವೈದ್ಯರ ನೇಮಕಾತಿ ನಡೆದರೆ ಸಮಸ್ಯೆ ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.

‘ಪಿ.ಡಿ.ಹಳ್ಳಿಯು ಹೋಬಳಿಯ ಕೇಂದ್ರ ಗ್ರಾಮವಾಗಿರುವುದರಿಂದ ಅಲ್ಲಿಯೇ ಆಂಬುಲೆನ್ಸ್‌ ಇರುತ್ತದೆ. ಮುಂದಿನ ದಿನಗಳಲ್ಲಿ ರೂಪನಗುಡಿ ಕೇಂದ್ರಕ್ಕೂ ಆಂಬುಲೆನ್ಸ್‌ ಸೌಲಭ್ಯಕ್ಕಾಗಿ ಪ್ರಸ್ತಾವ ಸಲ್ಲಿಸಲಾಗುವುದು. ರಾತ್ರಿ ವೇಳೆ ವೈದ್ಯರ ಸೇವೆಗೆ ವ್ಯವಸ್ಥೆ ಮಾಡಲಾಗುವುದು’ ಎಂದರು.

ಜೆಸ್ಕಾಂ ಹೊಣೆಯಲ್ಲ: ‘ವಿದ್ಯುತ್‌ ತಂತಿಗಳ ಕೆಳಗೆ ಮನೆ ನಿರ್ಮಿಸಿಕೊಂಡರೆ ಆಗುವ ಅನಾಹುತಗಳಿಗೆ ಜೆಸ್ಕಾಂ ಹೊಣೆಯಾಗುವುದಿಲ್ಲ’ ಎಂದು ಜೆಸ್ಕಾಂ ಅಧಿಕಾರಿ ಬಾದನಹಟ್ಟಿ ಕ್ಷೇತ್ರದ ಸದಸ್ಯ ಗೋವಿಂದಪ್ಪ ಅವರಿಗೆ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.

‘ಇತ್ತೀಚೆಗೆ ಮಳೆ ಸುರಿದು ಮರಗಳು ವಿದ್ಯುತ್‌ ತಂತಿ ಮೇಲೆ ಬಿದ್ದು ಸಮಸ್ಯೆ ಉಂಟಾಗಿದ್ದ ಸಂದರ್ಭದಲ್ಲಿ ಕಿರಿಯ ಎಂಜಿನಿಯರ್‌ಗಳು ದೂರವಾಣಿ ಕರೆ ಸ್ವೀಕರಿಸಿದೇ ನಿರ್ಲಕ್ಷ್ಯ ವಹಿಸಿದರು. ಇಂದಿಗೂ ಗ್ರಾಮದಲ್ಲಿ ಕಂಬಗಳ ತೆರವು ಕಾರ್ಯ ನಡೆದಿಲ್ಲ. ಮನೆಗಳ ಕೆಳಗೆ ತಂತಿಗಳು ಹಾದುಹೋಗಿವೆ’ ಎಂದು ಗೋವಿಂದಪ್ಪ ದೂರಿದ್ದಕ್ಕೆ ಅಧಿಕಾರಿ ಮೇಲಿನಂತೆ ಸ್ಪಷ್ಟನೆ ನೀಡಿದರು.

‘ಕಿರಿಯ ಅಧಿಕಾರಿಗಳಿಂದ ಅಂದೇ ಸನ್ನಿವೇಶದ ಮಾಹಿತಿ ಪಡೆದು, ಕಂಬಗಳ ಸ್ಥಳಾಂತರ ಕಾರ್ಯ ನಡೆದಿದೆ’ ಎಂದರು.

ಪಂಚಾಯಿತಿ ಅಧ್ಯಕ್ಷೆ ರಮೀಜಾಬಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಇದ್ದರು.

‘2 ವರ್ಷದಿಂದ ಕಾಂಪೌಂಡ್‌ ಇಲ್ಲ’

ಬಳ್ಳಾರಿ: ‘ಗುಡದೂರು ಗ್ರಾಮದ ಸರ್ಕಾರಿ ಶಾಲೆಗೆ ಕಾಂಪೌಂಡ್‌ ಇಲ್ಲ ಎಂದು ಎರಡು ವರ್ಷದಿಂದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಹಂದಿ, ನಾಯಿಗಳ ಹಾವಳಿ ನಡುವೆಯೇ ಮಕ್ಕಳು ಊಟ ಮಾಡುತ್ತಿದ್ದಾರೆ’ ಎಂದು ಕೊರ್ಲಗುಂದಿ ಕ್ಷೇತ್ರದ ಸದಸ್ಯ ತಿಮ್ಮಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ಶಾಲೆಗೆ ಸೇರಿದ 3.68 ಎಕರೆ ಜಮೀನಿನಲ್ಲಿ ಗ್ರಾಮದ ಕೆಲವರು ಅತಿಕ್ರಮ ಪ್ರವೇಶ ಮಾಡಿದ್ದು, ಕಾಂಪೌಂಡ್‌ ನಿರ್ಮಾಣಕ್ಕೆ ಅವಕಾಶ ಕೊಡುತ್ತಿಲ್ಲ. ಅಕ್ರಮವಾಗಿ ಮನೆಗಳನ್ನೂ ನಿರ್ಮಿಸಿಕೊಳ್ಳಲಾಗಿದೆ’ ಎಂದು ಅಭಿವೃದ್ಧಿ ಅಧಿಕಾರಿ ಮಹಾಂತೇಶ್‌ ಅಸಹಾಯಕತೆ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಹಣಾಧಿಕಾರಿ ಈ.ಜಾನಕಿರಾಂ, ‘ಶಾಲೆಯ ಕಟ್ಟಡ ಎಷ್ಟಿದೆಯೋ ಅಷ್ಟಕ್ಕೆ ಮೊದಲು ಕಾಂಪೌಂಡ್‌ ನಿರ್ಮಿಸಿಕೊಡಿ. ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಒಮ್ಮೆ ಶಾಲೆಗೆ ಭೇಟಿ ಕೊಡುವೆ’ ಎಂದು ಭರವಸೆ ನೀಡಿದರು.

ಸಭಾಂಗಣ ಸ್ವರೂಪ: ಅಸಮಾಧಾನ

ಬಳ್ಳಾರಿ: ನವೀಕರಿಸಿದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮೊದಲ ಬಾರಿಗೆ ನಡೆದ ಸಭೆಯಲ್ಲಿ ಕುರ್ಚಿಗಳ ಜೋಡಣೆ ಕುರಿತು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಸದಸ್ಯರು ಮತ್ತು ಅಧಿಕಾರಿಗಳು ಒಂದೇ ದಿಕ್ಕಿಗೆ ಒಬ್ಬರ ಹಿಂದೆ ಒಬ್ಬರು ಕುಳಿತುಕೊಳ್ಳುವ ವ್ಯವಸ್ಥೆ ಸರಿಯಲ್ಲ. ಸದಸ್ಯರು ಮಾತನಾಡುವಾಗ ಹಿಂದೆ ಕುಳಿತ ಅಧಿಕಾರಿಗಳ ಕಡೆಗೆ ತಿರುಗಿ ಮಾತನಾಡಬೇಕು. ಅಧಿಕಾರಿಗಳು ಮಾತನಾಡುವಾಗಲೂ ಅವರನ್ನು ನೋಡಲು ಆಗುವುದಿಲ್ಲ’ ಎಂದು ಸದಸ್ಯರು ದೂರಿದರು.

ಅವ್ಯವಸ್ಥೆಯನ್ನು ಸರಿಪಡಿಸುವುದಾಗಿ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಂ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry