ಇನ್‌ಸ್ಟಾಗ್ರಾಂಗೆ ಕಮಲ್

7

ಇನ್‌ಸ್ಟಾಗ್ರಾಂಗೆ ಕಮಲ್

Published:
Updated:
ಇನ್‌ಸ್ಟಾಗ್ರಾಂಗೆ ಕಮಲ್

ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಈಚೆಗೆ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಖಾತೆ ಆರಂಭಿಸಿದ್ದಾರೆ. ಈಗಾಗಲೇ ಫೇಸ್‌ಬುಕ್, ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ಕಮಲ್, ಸೋಮವಾರ ತಮ್ಮ ಹೊಸ ಚಿತ್ರ ’ವಿಶ್ವರೂಪಂ–2’ ಟ್ರೇಲರ್ ಬಿಡುಗಡೆ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಂನಲ್ಲಿ ಖಾತೆ ಆರಂಭಿಸಿದ್ದಾರೆ.

2016ರಲ್ಲಿ ಟ್ವಿಟರ್‌ ಖಾತೆ ಆರಂಭಿಸಿದ್ದ ಕಮಲ್ ಅದರಲ್ಲಿ ಜಲ್ಲಿಕಟ್ಟು ನಿಷೇಧ ಹಾಗೂ ಇತ್ತೀಚೆಗೆ ತೂತುಕುಡಿಯಲ್ಲಿ ಪೊಲೀಸರು ನಡೆಸಿದ ದೌರ್ಜನ್ಯದ ಕುರಿತು ಚರ್ಚೆ ಹುಟ್ಟುಹಾಕಿದ್ದರು.

‘ವಿಶ್ವರೂಪಂ’ ಮೊದಲ ಭಾಗ 2013ರಲ್ಲಿ ಬಿಡುಗಡೆಯಾಗಿತ್ತು. ಹತ್ತು ರೂಪಗಳಲ್ಲಿ ಕಮಲ್‌ ಹಾಸನ್‌ ನಟಿಸಿ, ದಾಖಲೆ ಸೃಷ್ಟಿಸಿದ್ದರು. ವಿಷ್ಣುವಿನ ದಶಾವತಾರವನ್ನು ನೆನಪಿಸುವಂಥ ಪಾತ್ರಗಳು ಅವಾಗಿದ್ದವು.

ಹತ್ತು ವಿವಿಧ ಪಾತ್ರಗಳನ್ನು ನಿಭಾಯಿಸಿದ ಕಮಲ್‌ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದರೂ ಬಾಕ್ಸ್‌ ಆಫೀಸಿನಲ್ಲಿ ಗಳಿಕೆ ಅಷ್ಟಕ್ಕಷ್ಟೆ ಆಗಿತ್ತು. ಸಿನಿವಿಮರ್ಷಕರೂ ಹೆಚ್ಚು ಅಂಕಗಳನ್ನು ನೀಡಿರಲಿಲ್ಲ.

ಇದೀಗ ವಿಶ್ವರೂಪಂ–2 ಬಿಡುಗಡೆಗೆ ಸಿದ್ಧವಾಗಿದೆ. ಪ್ರಚಾರಕ್ಕಾಗಿ ಕಮಲ್‌ ಇನ್‌ಸ್ಟ್ರಾ ಗ್ರಾಂ ಅನ್ನೂ ಬಳಸಿಕೊಂಡಿದ್ದಾರೆ.

ಕಮಲ್ ಮೊದಲ ಪೋಸ್ಟ್‌ರೂಪದಲ್ಲಿ ‘ವಿಶ್ವರೂಪಂ–2’ ಚಿತ್ರದ ಟ್ರೇಲರ್‌ನ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಖಾತೆ ಆರಂಭಿಸಿದ ಒಂದು ಗಂಟೆಯೊಳಗೆ 20 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ಕಮಲ್ ದಾಖಲೆಯನ್ನೂ ಸೃಷ್ಟಿಸಿದ್ದಾರೆ. ‘ವಿಶ್ವರೂಪಂ–2’ ಟ್ರೇಲರ್ ಕಮಲ್ ಮಗಳು ಶ್ರುತಿ ಹಾಸನ್ ಯೂಟ್ಯೂಬ್‌ಗೆ ಬಿಡುಗಡೆ ಮಾಡಿದ್ದು, ಮೊದಲ ದಿನವೇ 30 ಲಕ್ಷಕ್ಕೂ ಹೆಚ್ಚು ಮಂದಿ ಟ್ರೇಲರ್ ಅನ್ನು ವೀಕ್ಷಿಸಿದ್ದಾರೆ. ಒಂದು ನಿಮಿಷ 45 ಸೆಕೆಂಡ್‌ ಕಾಲ ಇರುವ ಚಿತ್ರದ ಟ್ರೇಲರ್‌ನಲ್ಲಿ ಹೊಡೆದಾಟದ ದೃಶ್ಯಗಳೇ ಹೆಚ್ಚಾಗಿದ್ದು, ಕಮಲ್ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಪಣ ತೊಟ್ಟವರಂತೆ ಹೊಡೆದಾಡಿದ್ದಾರೆ.

‘ವಿಶ್ವರೂಪಂ–2’, ಮೊದಲ ಭಾಗಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ ಎನ್ನುವುದು ಕಮಲ್ ವಿಶ್ವಾಸ.

2014ರಲ್ಲೇ ‘ವಿಶ್ವರೂಪಂ–2’ ಸೀಕ್ವೆಲ್ ಬಿಡುಗಡೆ ಮಾಡಲಾಗಿತ್ತು. ಆದರೆ, ಹಣಕಾಸಿನ ಸಮಸ್ಯೆ ಕಾರಣದಿಂದ ಸಿನಿಮಾ ಅಂದುಕೊಂಡ ದಿನದಂದು ತೆರೆ ಕಂಡಿರಲಿಲ್ಲ. ಇದಕ್ಕೆಲ್ಲಾ ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆ ಕಾರಣವಲ್ಲ ಎಂದೂ ಕಮಲ್ ಸ್ಪಷ್ಟಪಡಿಸಿದ್ದಾರೆ.

ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಆಗಸ್ಟ್ 10ರಂದು ‘ವಿಶ್ವರೂಪಂ–2’ ಸಿನಿಮಾ ಬಿಡುಗಡೆಯಾಗುತ್ತಿದ್ದು, ರಾಜ್‌ಕಮಲ್ ಇಂಟರ್‌ನ್ಯಾಷನಲ್ ಮತ್ತು ಆಸ್ಕರ್ ಫಿಲಂ ಸಂಸ್ಥೆಗಳು ಚಿತ್ರವನ್ನು ನಿರ್ಮಿಸಿವೆ. ಕಮಲ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಪೂಜಾಕುಮಾರ್, ರಾಹುಲ್ ಬೋಸ್, ಶೇಖರ್ ಕಪೂರ್, ವಹೀದಾ ರೆಹಮಾನ್ ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry