ಮೆಹಂದಿ ಸಂಭ್ರಮ

7

ಮೆಹಂದಿ ಸಂಭ್ರಮ

Published:
Updated:
ಮೆಹಂದಿ ಸಂಭ್ರಮ

ರಂಜಾನ್‌ ಹಬ್ಬ ಸಮೀಪಿಸುತ್ತಿದೆ! ಹಬ್ಬದ ಸಂಭ್ರಮ, ತಯಾರಿ ಈಗಾಗಲೇ ಆರಂಭವಾಗಿದ್ದು, ನಗರದ ಕಮರ್ಷಿಯಲ್ ಸ್ಟ್ರೀಟ್, ಇಬ್ರಾಹಿಂ ಸ್ಟ್ರೀಟ್, ಮಸೀದಿ ರಸ್ತೆಯ ಗಲ್ಲಿಗಳಲ್ಲಿ ಬಟ್ಟೆ ಬರೆ, ಕೈಬಳೆ, ಚಪ್ಪಲಿ ಖರೀದಿ ಭರಾಟೆ ಆರಂಭವಾಗಿದೆ. ರಂಜಾನ್‌ ಹಬ್ಬ ಎಂದಾಗ ಕೈಯಲ್ಲಿ ಮೂಡಿದ ಮೆಹಂದಿ ಚಿತ್ತಾರ ನೆನಪಾಗದಿರದು. ಮುಸ್ಲಿಂ ಹೆಣ್ಣುಮಕ್ಕಳು ಪ್ರತಿ ಹಬ್ಬಕ್ಕೂ ಕೈ ತುಂಬಾ ಮೆಹಂದಿ ಬಿಡಿಸಿಕೊಂಡು ಹಬ್ಬದ ಕಳೆಯನ್ನು ಹೆಚ್ಚಿಸುತ್ತಾರೆ. ರಂಜಾನ್‌ ಮುನ್ನಾದಿನ ಪ್ರತಿ ಮನೆಯಲ್ಲೂ ಮೆಹಂದಿ ಸಂಭ್ರಮ ಮೇಳೈಸಿರುತ್ತದೆ.

ಹಬ್ಬಕೆಂದೇ ಖರೀದಿಸಿರುವ ಚೂಡಿದಾರ್‌ ಅಥವಾ ಲೆಹೆಂಗಾದ ಅದ್ದೂರಿತನಕ್ಕೆ ಸರಿಯಾಗಿ ಕೈತುಂಬಾ ಮೆಹಂದಿ ಚಿತ್ತಾರ ಮೂಡಿಸಲು ವಾರಗಳ ಹಿಂದೆಯೇ ಹೆಣ್ಣುಮಕ್ಕಳ ತಯಾರಿ ಆರಂಭವಾಗಿರುತ್ತದೆ. ಆಕೆ ಯೂಟ್ಯೂಬ್‌, ಅಂತರ್ಜಾಲಗಳಲ್ಲಿ ತಡಕಾಡಿ ತನ್ನ ಕೈಗೊಪ್ಪುವ, ವಿಶೇಷವಾದ ವಿನ್ಯಾಸವನ್ನು ಆಯ್ಕೆ ಮಾಡಿಕೊಂಡಿರುತ್ತಾಳೆ. ಬಟ್ಟೆಗೆ ಒಪ್ಪುವ ಬಳೆ, ಹಾರ, ಕ್ಲಿಪ್, ಬುಗುಡಿ,  ಚಪ್ಪಲಿ ಜೊತೆಗೆ ಮೆಹಂದಿ ಕೂಡ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಚಿತ್ತಾರ ಬಿಡಿಸಲು ಗೊತ್ತಿರುವ ಹೆಣ್ಣುಮಕ್ಕಳು, ಅಮ್ಮ, ಅತ್ತೆ, ಅಕ್ಕಪಕ್ಕದ ಗೆಳತಿ ಅವರ ಸಂಬಂಧಿಕರಿಗೆಲ್ಲಾ ಕೈಯಲ್ಲಿ ಅಂದವಾಗಿ ಚಿತ್ತಾರ ಬಿಡಿಸುತ್ತಾರೆ.

ಕೋನ್‌ನಲ್ಲಿ ಅರಳುವ ಚಿತ್ತಾರವು ಮುಂಗೈ ಹರಡಿಕೊಂಡು, ನಂತರ ಅಂಗೈ ತುಂಬಾ ಬಿಡಿಸಿಕೊಳ್ಳುವುದನ್ನು ಕಣ್ತುಂಬಿಕೊಳ್ಳುವುದೇ ಆನಂದ. ಈಚೆಗೆ ಕೈ ಪೂರ್ತಿ ಮೆಹಂದಿ ಹಚ್ಚಿಕೊಳ್ಳುವುದೂ ಫ್ಯಾಷನ್‌ ಆಗಿದೆ. ಹಾಗೇ ಕಾಲಿಗೂ ಮೆಹಂದಿ ಹಾಕಿಕೊಳ್ಳುವವರೂ ಇದ್ದಾರೆ. ಯಾರ ಕೈಯಲ್ಲಿ ಮೆಹಂದಿ ಕೆಂಪಾಗಿದೆ, ವಿನ್ಯಾಸ ಯಾವುದು ಚೆನ್ನಾಗಿದೆ ಎಂಬುದು ಹಬ್ಬದ ದಿನದ ಚರ್ಚಾವಿಷಯವೂ ಆಗಿರುತ್ತದೆ.

‘ರಂಜಾನ್‌ಗೆ ಅರೇಬಿಕ್‌ ಮೆಹಂದಿ ವಿನ್ಯಾಸಗಳೇ ಜಾಸ್ತಿ ಹಾಕಿಸಿಕೊಳ್ಳುತ್ತಾರೆ. ಎಲೆ, ಹೂವು, ಬಳ್ಳಿಗಳಂತಹ ಬಗೆ ಬಗೆ ವಿನ್ಯಾಸದು ಅರೇಬಿಕ್‌ ವಿನ್ಯಾಸದ ಶೈಲಿ. ಮುಸ್ಲಿಂ ಹೆಣ್ಣುಮಕ್ಕಳು ಬಹುತೇಕ ಅರೇಬಿಕ್‌ ಮಾದರಿಯಲ್ಲೇ ಮೆಹಂದಿ ಬಿಡಿಸಿಕೊಳ್ಳುತ್ತಾರೆ. ಈಗ ಮೆಹಂದಿ ಚಿತ್ತಾರಗಳಲ್ಲೂ ಬದಲಾವಣೆಗಳು ಬಂದಿವೆ. ಸೂಕ್ಷ್ಮ ಎಳೆಗಳ ಚಿತ್ತಾರದ ಬದಲು ಢಾಳಾಗಿ ದಟ್ಟವಾಗಿ ಚಿತ್ತಾರ ಹಾಕಿಸಿಕೊಳ್ಳುವುದು ಈ ವರ್ಷದ ಟ್ರೆಂಡ್‌’ ಎನ್ನುತ್ತಾರೆ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಮೆಹಂದಿ ಚಿತ್ತಾರ ಬಿಡಿಸುವ ಉತ್ತರ ಪ್ರದೇಶದ ಮನೀಷ್‌ ಅಗರ್ವಾಲ್‌. 

ನಗರದ ಕಮರ್ಷಿಯಲ್‌ ಸ್ಟ್ರೀಟ್‌, ಶಿವಾಜಿನಗರ, ಮಲ್ಲೇಶ್ವರ, ರಾಜಾಜಿನಗರ, ಇಂದಿರಾನಗರ, ಜಯನಗರದಂತಹ ಶಾಪಿಂಗ್‌ ಪ್ರದೇಶಗಳಲ್ಲಿ ಮೆಹೆಂದಿ ಅಚ್ಚು ಮತ್ತು ಕೋನ್ ಮಾರಾಟ ಮಾಡುವುದರ ಜತೆಗೆ ಉತ್ತರ ಪ್ರದೇಶ, ಬಿಹಾರ, ರಾಜಸ್ತಾನ ಭಾಗದ ಯುವಕರು ಫಟಾಫಟ್ ಅಂತ ಕೈಗಳಿಗೆ ವಿನ್ಯಾಸವನ್ನೂ ಮಾಡುತ್ತಾರೆ. ರಂಜಾನ್‌ ಶಾಪಿಂಗ್‌ಗೆ ಬಂದವರು ಕೈಯಲ್ಲಿ ಚಿತ್ತಾರ ಬಿಡಿಸಿಕೊಂಡು ಹೋಗುತ್ತಾರೆ. ‘ರಂಜಾನ್‌ ಸಮಯದಲ್ಲಿ ಮೆಹಂದಿ ಚಿತ್ತಾರ ಹಾಕಿಸಲು ತುಂಬಾ ಜನ ಬರುತ್ತಾರೆ. ಉಳಿದ ಅವಧಿಗಿಂತ ರಂಜಾನ್‌ ವೇಳೆ ವ್ಯಾಪಾರ ಚೆನ್ನಾಗಿರುತ್ತದೆ. ಹಬ್ಬದ ಮುನ್ನಾದಿನ ಅಥವಾ ಎರಡು ದಿನಗಳ ಮುಂಚೆ ಮೆಹಂದಿ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚು. ಅರೇಬಿಕ್‌ ವಿನ್ಯಾಸಗಳನ್ನೇ ಜಾಸ್ತಿ ಹಾಕಿಸಿಕೊಳ್ಳುತ್ತಾರೆ’ ಎಂದು ಹೇಳುತ್ತಾರೆ ಮನೀಷ್‌.

‘ಮುಂಗೈನಿಂದ ಬೆರಳ ತುದಿ ತನಕ ವಿನ್ಯಾಸ ಮಾಡಿಕೊಂಡರೆ ₹200, ಬರೀ ಅಂಗೈ ಮೇಲೆ ಮಾತ್ರ ಆದರೆ ₹100. ರಂಜಾನ್‌ ಸಮಯದಲ್ಲೂ ಇಷ್ಟೇ’ ಎಂದು ವ್ಯಾಪಾರದ ಬಗ್ಗೆ ಮಾತನಾಡುತ್ತಾರೆ ಉತ್ತರಪ್ರದೇಶ ಮೂಲದ ಸಾಹಿಲ್‌.

‘ಪ್ರತಿ ವರ್ಷ ವಿನ್ಯಾಸಗಳಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ನಾವೂ ಇಂಟರ್‌ನೆಟ್‌ ನೋಡಿ, ಹೊಸ ವಿನ್ಯಾಸಗಳನ್ನೇ ಗ್ರಾಹಕರಿಗೆ ಹಾಕುತ್ತೇವೆ. ಇದರಿಂದ ಅವರಿಗೂ ಖುಷಿಯಾಗುತ್ತದೆ. ಕುಟುಂಬದ ಐದು ಜನ ಸದಸ್ಯರು ಒಟ್ಟಾಗಿ ಬಂದರೆ ಅವರೆಲ್ಲರೂ ಬೇರೆ ಬೇರೆ ವಿನ್ಯಾಸ ಹಾಕಿಸಿಕೊಳ್ಳುತ್ತಾರೆ’ ಎನ್ನುತ್ತಾರೆ ಸಾಹೀಲ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry