ಶುಕ್ರವಾರ, ಏಪ್ರಿಲ್ 3, 2020
19 °C

ಬೆಣ್ಣೆಯಂತೆ ಕರಗುವ ದೋಸೆ

ಎಸ್. ಸಂಪತ್ Updated:

ಅಕ್ಷರ ಗಾತ್ರ : | |

ಬೆಣ್ಣೆಯಂತೆ ಕರಗುವ ದೋಸೆ

ಮಗಳಿಗೆ ಡ್ರೈಫ್ರೂಟ್ಸ್‌ ಖರೀದಿಸಲು ಪತ್ನಿಯ ಜತೆಗೆ ರಾಜರಾಜೇಶ್ವರಿ ನಗರದ ಬಿಇಎಂಎಲ್‌ ಬಡಾವಣೆಯಲ್ಲಿ ಹೋಗುತ್ತಿದ್ದಾಗ ಅಲ್ಲಿ ಬೆಣ್ಣೆಯ ಸುವಾಸನೆಯ ಗಮಲು ಮೂಗಿಗೆ ಬಡಿಯಿತು. ಸಮೀಪದಲ್ಲಿಯೇ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್‌ ಇತ್ತು. ದಾವಣಗೆರೆ ಪಕ್ಕದ ಚಿತ್ರದುರ್ಗ ಜಿಲ್ಲೆಯವನಾದ ನನ್ನನ್ನು ಅದು ಸೆಳೆಯಿತು. ಡ್ರೈಫ್ರೂಟ್ಸ್‌ ಖರೀದಿ ವಿಚಾರವನ್ನು ಬದಿಗಿಟ್ಟು, ಕುಟುಂಬ ಸಮೇತ ಹೋಟೆಲ್‌ಗೆ ಹೊಕ್ಕಿದೆ.

ಮೋಡ ಕವಿದ ವಾತಾವರಣ ಇದ್ದರೂ, ಅಲ್ಲಿ ಧಗೆಯಿತ್ತು. ತಗಡಿನ ಶೀಟಿನ ಮೇಲ್ಛಾವಣಿಯಾದ್ದರಿಂದ ಹೋಟೆಲ್‌ನಲ್ಲಿ ಕಾವು ಹೆಚ್ಚಿತ್ತು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅಲ್ಲಿದ್ದವರು ದೋಸೆ ಸವಿದು, ರುಚಿಯನ್ನು ಆಸ್ವಾದಿಸುವುದರಲ್ಲಿ ತಲ್ಲೀನರಾಗಿದ್ದರು.

ಅದನ್ನು ನೋಡಿದ ಕೂಡಲೇ ನನ್ನ ಬಾಯಿಯಲ್ಲೂ ಲಾಲಾರಸ ಹರಿದಂತಾಯಿತು. ಕೂಡಲೇ ಮೂರು ಬೆಣ್ಣೆ ಮಸಾಲೆ ದೋಸೆಗೆ ಹಣ ಪಾವತಿಸಿ ಟೋಕನ್‌ ತೆಗೆದುಕೊಂಡೆ. ಸೌದೆ ಒಲೆಯ ಮೇಲೆ ದೋಸೆ ಹಿಟ್ಟು ಸುರಿಯುತ್ತಿದ್ದ ಬಾಣಸಿಗ, ಹಿಟ್ಟಿನ ಮೇಲೆ ಅಲ್ಲಲ್ಲಿ ಬೆಣ್ಣೆಯಿಟ್ಟ. ಹೆಂಚಿನ ಬಿಸಿಗೆ ಅವು ಕರಗುತ್ತಿದ್ದಂತೆ ಬರುತ್ತಿದ್ದ ಸುವಾಸನೆ ಮೂಗಿನ ಹೊಳ್ಳೆಗಳ ಮೂಲಕ ಒಳಗೋದಾಗ ಆದ ಅನುಭವ ಅಷ್ಟಿಷ್ಟಲ್ಲ.

ನಂತರ ಅರಿಶಿನ ಬೆರೆಸದ ಆಲೂಗಡ್ಡೆ ಪಲ್ಯವನ್ನು ದೋಸೆಯೊಳಗಿಟ್ಟು ಸುರಳಿ ಮಾಡಿ, ನನ್ನ ಕೈಗಿಟ್ಟರು. ಇಷ್ಟು ಪ್ರಕ್ರಿಯೆಗೆ ತೆಗೆದುಕೊಂಡದ್ದು ಕೇವಲ ಮೂರು ನಿಮಿಷ! ದೋಸೆ ಕೈ ಸೇರುತ್ತಿದ್ದಂತೆ ಅಷ್ಟೇ ಬೇಗನೆ ನನ್ನ ಕೈ ಮತ್ತು ಬಾಯಿಗೆ ಕೆಲಸ ಸಿಕ್ಕಿತು. ಮೊದಲ ತುತ್ತು ಬಾಯಿ ಹೊಕ್ಕುತ್ತಿದ್ದಂತೇ, ಅದರ ರುಚಿಗೆ ನಾಲಿಗೆಯಲ್ಲಿ ರಸ ಹರಿದಾಡಿತು. ಬೆಣ್ಣೆ ದೋಸೆಯ ರುಚಿಯನ್ನು ಆಲೂಗಡ್ಡೆ ಪಲ್ಯ ಮತ್ತು ಚೆಟ್ನಿ ಹೆಚ್ಚಿಸಿತ್ತು. ಕೆಲವೇ ನಿಮಿಷಗಳಲ್ಲಿ ಪ್ಲೇಟಿನಲ್ಲಿದ್ದ ದೋಸೆ ಖಾಲಿ. ನಂತರ ಮತ್ತೊಂದು ದೋಸೆ ತೆಗೆದುಕೊಂಡು ತಿಂದಾಗ ತೇಗು ಬಂದಿತು. ಅಲ್ಲಿಗೆ ಹೊಟ್ಟೆಯೂ ತುಂಬಿತು, ತೃಪ್ತಿಯೂ ಆಯಿತು. ನನ್ನ ಪತ್ನಿ ಎರಡು, ಮಗಳು ಒಂದು ದೋಸೆ ತಿಂದಿದ್ದಲ್ಲದೆ, ಮನೆಗೊಂದು ಪಾರ್ಸೆಲ್‌ ಕಟ್ಟಿಸಿಕೊಂಡೆವು.

ಎಂಟು ವರ್ಷದಿಂದ ಬೆಣ್ಣೆ ದೋಸೆ: ದಾವಣಗೆರೆಯ ಆನೆಕೊಂಡದ ವಿ. ನಾಗರಾಜ್‌ ಈ ಹೋಟೆಲ್‌ನ ಮಾಲೀಕರು. 13 ವರ್ಷದ ಹಿಂದೆ ಬೆಂಗಳೂರಿಗೆ ಬಂದ ಅವರು, ಎಂಟು ವರ್ಷದಿಂದ ಬೆಣ್ಣೆ ದೋಸೆ ಕೈಂಕರ್ಯದಲ್ಲಿ ತೊಡಗಿದ್ದಾರೆ. ಇಲ್ಲಿ ಬೆಣ್ಣೆ ದೋಸೆ ಸಿದ್ಧಪಡಿಸುವ ಬಾಣಸಿಗರೂ ಇವರೇ. 2010ರಲ್ಲಿ 10X10 ಅಡಿ ವಿಸ್ತೀರ್ಣದಲ್ಲಿ ಆರಂಭವಾದ ಈ ಹೋಟೆಲ್‌ ಈಗ 1000 ಚ.ಅಡಿಗೆ ವಿಸ್ತರಿಸಿಕೊಂಡಿದೆ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ನಾಗರಾಜ್‌ ಇಲ್ಲಿ ಐವರಿಗೆ ಉದ್ಯೋಗ ನೀಡಿದ್ದಾರೆ. ಅವರ ಸಹೋದರ ಮಂಜುನಾಥ್‌ ಕೂಡ ಕೈಜೋಡಿಸಿದ್ದಾರೆ.

ನಾಗರಾಜ್‌ ಅವರ ತಂದೆ ವೀರಭದ್ರಪ್ಪ ಮತ್ತು ಚಿಕ್ಕಪ್ಪ ಕರಿಬಸಪ್ಪ ಇಬ್ಬರೂ ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಹೋಟೆಲ್‌ ನಡೆಸುತ್ತಿರುವವರು. ಅಪ್ಪ, ಚಿಕ್ಕಪ್ಪರಿಂದ ಬೆಣ್ಣೆ ದೋಸೆ ಸಿದ್ಧಪಡಿಸುವ ಕಲೆ ಕರಗತ ಮಾಡಿಕೊಂಡಿರುವ ಅವರು, ರಾಜರಾಜೇಶ್ವರಿ ನಗರದಲ್ಲಿ ಈ ಹೋಟೆಲ್ ತೆರೆದು, ಅಪ್ಪಟ ದಾವಣಗೆರೆ ಶೈಲಿಯಲ್ಲಿಯೇ ಬೆಣ್ಣೆ ದೋಸೆ ತಯಾರಿಸಿ ಗ್ರಾಹಕರಿಗೆ ಉಣಬಡಿಸುತ್ತಿದ್ದಾರೆ.

ಚಾಲಕನಿಂದ ಬಾಣಸಿಗ: ‘ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಆರಂಭದಲ್ಲಿ ಚಾಲಕ ವೃತ್ತಿ ನಿರ್ವಹಿಸಿದೆ. ಅದರಲ್ಲಿ ನೆಮ್ಮದಿ ಸಿಗಲಿಲ್ಲ. ಅಪ್ಪನ ವೃತ್ತಿಯನ್ನೇ ಮುಂದುವರೆಸಲು ಬಯಸಿ, ಆರ್‌.ಆರ್‌.ನಗರದಲ್ಲಿ ಕೇಟರಿಂಗ್‌ ಆರಂಭಿಸಿದೆ. ನನ್ನ ಕೈರುಚಿ ಮೆಚ್ಚಿದ ಹಲವರು ದಾವಣಗೆರೆಯ ದೋಸೆ ಹೋಟೆಲ್‌ ಆರಂಭಿಸುವಂತೆ ಪ್ರೋತ್ಸಾಹಿಸಿದರು. ಈ ಭಾಗದಲ್ಲಿ ದಾವಣಗೆರೆಯ ಮಂದಿ ಹೆಚ್ಚಿದ್ದರಿಂದ ಈ ಬೇಡಿಕೆ ಹೆಚ್ಚಾಯಿತು. ಅವರನ್ನೆಲ್ಲ ನಂಬಿ ಹೋಟೆಲ್‌ ಆರಂಭಿಸಿದೆ. ದಿನೇ ದಿನೇ ದೋಸೆಗೆ ಬೇಡಿಕೆ ಹೆಚ್ಚಾಯಿತು. ದಾವಣಗೆರೆ ಮೂಲದವರಷ್ಟೇ ಅಲ್ಲ ವಿವಿಧ ಭಾಗದಿಂದ ಬಂದು ಇಲ್ಲಿ ನೆಲೆಸಿರುವವರು ಬಹುತೇಕರಿಗೆ ಇಲ್ಲಿನ ಬೆಣ್ಣೆ ದೋಸೆ ಅಚ್ಚುಮೆಚ್ಚು’ ಎನ್ನುತ್ತಾರೆ ನಾಗರಾಜ್‌.

‘ಹೋಟೆಲ್‌ ನಿತ್ಯ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 4.30ರಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ. ಪ್ರತಿ ಸೋಮವಾರ ಹೋಟೆಲ್‌ಗೆ ರಜೆ. ಬೆಣ್ಣೆ ದೋಸೆ, ಬೆಣ್ಣೆ ಖಾಲಿ ದೋಸೆ (ಎರಡು), ಬೆಣ್ಣೆ ಮಸಾಲಾ ದೋಸೆ, ಬೆಣ್ಣೆ ಒಪನ್‌ ದೋಸೆ, ಖಾಲಿ ದೋಸೆ (ಎರಡು), ಬೆಣ್ಣೆ ಈರುಳ್ಳಿ ದೋಸೆಯನ್ನು ಸಿದ್ಧಪಡಿಸುತ್ತೇವೆ. ಅದರ ಜತೆಗೆ ತಟ್ಟೆ ಇಡ್ಲಿ, ಉದ್ದಿನವಡೆ, ಜಾಮೂನ್‌, ಕಾಫೀ ಮತ್ತು ಟೀ ಕೂಡ ಲಭ್ಯ. ನಿತ್ಯ ಸಂಜೆ ಬೆಣ್ಣೆ ಪಡ್ಡು ಸಿದ್ಧಪಡಿಸುತ್ತೇವೆ’ ಎಂದು ವಿವರಿಸುತ್ತಾರೆ ಅವರು.

ದೋಸೆ ಹಿಟ್ಟು: ಬೆಣ್ಣೆ ದೋಸೆಯು ಬೆಣ್ಣೆಯಷ್ಟೇ ಮೃದುವಾಗಿರಬೇಕು ಎಂದರೆ ಹಿಟ್ಟು ಸಿದ್ಧಪಡಿಸುವುದೂ ಒಂದು ಕಲೆ. ನಾಳೆಗೆ ಬೇಕಾದ ಹಿಟ್ಟನ್ನು ಇಂದೇ ಸಿದ್ಧಪಡಿಸಿಕೊಳ್ಳಬೇಕು. ಅಂದಿನ ಹಿಟ್ಟು ಅಂದೇ ಖಾಲಿಯಾಗಬೇಕು. ಮರುದಿನಕ್ಕೆ ಅದನ್ನು ಬಳಸಲು ಬರುವುದಿಲ್ಲ ಎನ್ನುತ್ತಾರೆ ಅವರು.

ಒಗ್ಗರಣೆ ಇಲ್ಲದ ಆಲೂಗಡ್ಡೆ ಪಲ್ಯ: ಬೆಣ್ಣೆ ದೋಸೆಯ ರುಚಿಯನ್ನು ಹೆಚ್ಚಿಸುವಲ್ಲಿ ಒಗ್ಗರಣೆ ಇಲ್ಲದ ಆಲೂ ಪಲ್ಯದ ಪಾತ್ರವೂ ಮಹತ್ವದ್ದು. ಬಾಯಿಗೆ ಇಡುತ್ತಿದ್ದಂತೆ ಬೆಣ್ಣೆಯಷ್ಟೇ ವೇಗವಾಗಿ ಈ ಪಲ್ಯವೂ ಕರಗಿ ಹೋಗುತ್ತದೆ. ‘ಆಲೂಗಡ್ಡೆ ಪಲ್ಯಕ್ಕೆ ಬೇಕಾಗುವಷ್ಟು ಈರುಳ್ಳಿಯನ್ನು ಕತ್ತರಿಸಿ, ಉಪ್ಪು ನೀರಿನಲ್ಲಿ ಚೆನ್ನಾಗಿ ಬೇಯಿಸುತ್ತೇವೆ. ನಂತರ ಇನ್ನೊಂದೆಡೆ ಬೆಂದ ಆಲೂಗಡ್ಡೆಯನ್ನು ಚೆನ್ನಾಗಿ ಸ್ಮ್ಯಾಷ್‌ ಮಾಡಿ ಈರುಳ್ಳಿಯೊಡನೆ ಬೆರೆಸುತ್ತೇವೆ. ಈ ಪಲ್ಯಕ್ಕೆ ಎಣ್ಣೆಯಾಗಲಿ, ಒಗ್ಗರಣೆಯನ್ನಾಗಲಿ ಹಾಕುವುದಿಲ್ಲ. ಬೆಣ್ಣೆ ದೋಸೆ ಹೋಟೆಲ್‌ನಲ್ಲಿ ಬೆಣ್ಣೆಗೇ ಆದ್ಯತೆ. ಒಂದು ವೇಳೆ ಪಲ್ಯಕ್ಕೆ ಎಣ್ಣೆ ಹಾಕಿದರೆ, ಅಥವಾ ಒಗ್ಗರಣೆ ಮಾಡಿದರೆ ದೋಸೆಯ ಬೆಣ್ಣೆಯ ಫ್ಲೇವರ್‌ ಹಾಳಾಗುತ್ತದೆ.

ನಂದಿನಿ ಬೆಣ್ಣೆ: ಇಲ್ಲಿನ ಎಲ್ಲ ತಿನಿಸುಗಳಿಗೆ ನಂದಿನಿ ಬೆಣ್ಣೆಯೇ ಬಳಸಲಾಗುತ್ತದೆ. ನಂದಿನಿ ಬೆಣ್ಣೆ ಮನೆಯ ಬೆಣ್ಣೆಯಂತೆಯೇ ಇರುತ್ತದೆ. ಅದಕ್ಕಾಗಿ ಇದನ್ನೇ ಬಳಸುತ್ತೇವೆ.

ಚಟ್ನಿಗೆ ಏಲಕ್ಕಿ, ಲವಂಗ: ಬೆಣ್ಣೆ ದೋಸೆಯ ರುಚಿಯನ್ನು ಕಾಯಿ ಚಟ್ನಿ ಮತ್ತಷ್ಟು ಹೆಚ್ಚಿಸುತ್ತದೆ. ತೆಂಗಿನ ಕಾಯಿಯ ತುರಿ, ಅದರ ಶೇ 10ರಷ್ಟು ಹುರುಗಡ್ಲೆ ಮತ್ತು ಫ್ರೈ ಮಾಡದ ಹಸಿ ಮೆಣಸಿನಕಾಯಿಯನ್ನು ಚಟ್ನಿಗೆ ಹಾಕುತ್ತೇವೆ. ದೋಸೆಗೆ ಬೆಣ್ಣೆ ಬಳಸುವುದರಿಂದ ಯಾರಿಗೂ ಗಂಟಲು ಕೆರೆತ, ಕೆಮ್ಮು ಬಾರದಿರಲೆಂದು ಚಟ್ನಿಗೆ ಏಲಕ್ಕಿ, ಲವಂಗವನ್ನು ಮಿಕ್ಸ್‌ ಮಾಡುತ್ತೇವೆ

ಎಂದು ವಿವರಿಸುತ್ತಾರೆ ಅವರು.

ಪೊರಕೆ ಬಳಸಲ್ಲ: ದೋಸೆ ಹೆಂಚು ಸ್ವಚ್ಛಗೊಳಿಸಲು ನಮ್ಮ ಹೋಟೆಲ್‌ನಲ್ಲಿ ಕಡ್ಡಿ ಪೊರಕೆ ಬಳಸಲ್ಲ. ಬದಲಿಗೆ ಉಕ್ಕಿನ ತಗಡಿನಿಂದ (ಕೆರೆಂಚ್‌) ಹೆಂಚನ್ನು ನಯವಾಗಿ ಕೆರೆದು, ನೀರು ಸಿಡಿಸಿ, ಹತ್ತಿ ಬಟ್ಟೆಯಿಂದ ಹೆಂಚನ್ನು ಒರೆಸಿ ದೋಸೆ ಹಿಟ್ಟನ್ನು ಸುರಿಯುತ್ತೇನೆ ಎಂದು ಹೇಳುತ್ತಾರೆ ನಾಗರಾಜ್‌.

ಹೋಟೆಲ್‌ನಲ್ಲಿ ಏನೆಲ್ಲ ಸಿಗುತ್ತೆ?

ದೋಸೆ ಬೆಲೆ (ರೂ)

ಬೆಣ್ಣೆ ದೋಸೆ 35

ಬೆಣ್ಣೆ ಖಾಲಿ ದೋಸೆ 40

ಬೆಣ್ಣೆ ಮಸಾಲಾ ದೋಸೆ 40

ಬೆಣ್ಣೆ ಒಪನ್‌ ದೋಸೆ 45

ಖಾಲಿ ದೋಸೆ 25

ಬೆಣ್ಣೆ ಈರುಳ್ಳಿ ದೋಸೆ 45

ತಟ್ಟೆ ಇಡ್ಲಿ 15

ಉದ್ದಿನ ವಡೆ 15

ಪಡ್ಡು 30

ದಿನಕ್ಕೆ ಅಂದಾಜು 400 ದೋಸೆ ಇಲ್ಲಿ ಬಿಕರಿಯಾಗುತ್ತವೆ. ವಾರಾಂತ್ಯದ ದಿನಗಳಾದ ಶನಿವಾರ, ಭಾನುವಾರದಂದು ಈ ಸಂಖ್ಯೆ 600 ದಾಟಿರುತ್ತದೆ.

ಹೋಟೆಲ್‌ ವಿಳಾಸ:

ದಾವಣಗೆರೆ ಬೆಣ್ಣೆ ದೋಸೆ, ನಂ 19, 3ನೇ ಮೇನ್‌, ಬಿಇಎಂಎಲ್‌ 5ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು. ಮೊಬೈಲ್‌ ಸಂಖ್ಯೆ 7019805425, 9986982777.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)