ಎರಡನೇ ಪ್ರಾಶಸ್ತ್ಯದಲ್ಲಿ ‘ಕೈ’ ಹಿಡಿದ ಅದೃಷ್ಟ

4

ಎರಡನೇ ಪ್ರಾಶಸ್ತ್ಯದಲ್ಲಿ ‘ಕೈ’ ಹಿಡಿದ ಅದೃಷ್ಟ

Published:
Updated:
ಎರಡನೇ ಪ್ರಾಶಸ್ತ್ಯದಲ್ಲಿ ‘ಕೈ’ ಹಿಡಿದ ಅದೃಷ್ಟ

ಕಲಬುರ್ಗಿ: ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್‌ನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ ಹುಮನಾಬಾದ್‌ ಅಚ್ಚರಿಯ ಗೆಲುವು ಸಾಧಿಸಿದರು.

ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯ ಆರಂಭಿಕ ಎರಡು ಸುತ್ತುಗಳಲ್ಲಿ ಜೆಡಿಎಸ್ ಅಭ್ಯರ್ಥಿ, ಬಳ್ಳಾರಿಯ ಎನ್.ಪ್ರತಾಪ್ ರೆಡ್ಡಿ ಹಾಗೂ ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ, ಹೊಸಪೇಟೆಯ ಕೆ.ಬಿ.ಶ್ರೀನಿವಾಸ್‌ ಮುನ್ನಡೆ ಸಾಧಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಮೂರನೇ ಸ್ಥಾನದಲ್ಲಿದ್ದರು.

ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ ನಿಗದಿತ (24,414) ಮತಗಳನ್ನು ಯಾವೊಬ್ಬ ಅಭ್ಯರ್ಥಿಯೂ ಪಡೆಯಲಿಲ್ಲ. ಹೀಗಾಗಿ ಮಧ್ಯರಾತ್ರಿ 12 ಗಂಟೆಗೆ ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ಆರಂಭಿಸಲಾಯಿತು. ಎಲಿಮಿನೇಷನ್‌ ಸುತ್ತಿನಲ್ಲಿ 3ನೇ ಸ್ಥಾನದಲ್ಲಿದ್ದ ಜೆಡಿಎಸ್‌ ಅಭ್ಯರ್ಥಿಯೂ ಹೊರಹೋದರು.

ನಿಗದಿಪಡಿಸಿದಷ್ಟು ಮತಗಳನ್ನು ಯಾವ ಅಭ್ಯರ್ಥಿಯೂ ಪಡೆಯಲಿಲ್ಲ. ಹೀಗಾಗಿ, ಹೆಚ್ಚು ಮತ ಪಡೆದ (18,768) ಕಾಂಗ್ರೆಸ್‌ ಅಭ್ಯರ್ಥಿಯನ್ನು ವಿಜಯಿ ಎಂದು ಚುನಾವಣಾಧಿಕಾರಿ ಪಂಕಜಕುಮಾರ್‌ ಪಾಂಡೆ ಘೋಷಿಸಿದರು.

ಗೆಲುವು ತಮ್ಮದೇ ಎಂದು ರಾತ್ರಿಯಿಡೀ ಸಂಭ್ರಮದಲ್ಲಿದ್ದ ಬಿಜೆಪಿ ಕಾರ್ಯಕರ್ತರು ತೀವ್ರ ನಿರಾಸೆ ಅನುಭವಿಸಿದರು.

ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ ಸೇರಿ 10 ಅಭ್ಯರ್ಥಿಗಳು ಕಣದಲ್ಲಿದ್ದರು.

1988ರಲ್ಲಿ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು, ಈವರೆಗಿನ ಐದು ಚುನಾವಣೆಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ಅಮರನಾಥ ಪಾಟೀಲ ಅವರು ಸದ್ಯ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಬಿಜೆಪಿ ಅವರಿಗೆ ಟಿಕೆಟ್‌ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿದರು.

ಅಣ್ಣ ಸಚಿವ; ತಮ್ಮ ಪರಿಷತ್‌ ಸದಸ್ಯ: ಹುಮನಾಬಾದ್‌ ಶಾಸಕರೂ ಆಗಿರುವ ಗಣಿ ಮತ್ತು ಭೂವಿಜ್ಞಾನ, ಮುಜರಾಯಿ ಇಲಾಖೆ ಸಚಿವ ರಾಜಶೇಖರ ಬಿ.ಪಾಟೀಲ ಅವರು ಡಾ.ಚಂದ್ರಶೇಖರ ಅವರ ಹಿರಿಯ ಸಹೋದರ. ಇವರ ತಂದೆ ದಿವಂಗತ ಬಸವರಾಜ ಪಾಟೀಲ ಹುಮನಾಬಾದ್ ಅವರೂ ಕೂಡ ಶಾಸಕ, ಸಚಿವರಾಗಿದ್ದರು. ಚಂದ್ರಶೇಖರ ಇದೇ ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದರು.

ಹೆಸರು: ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ್

ಮತಕ್ಷೇತ್ರ: ಈಶಾನ್ಯ ಪದವೀಧರ ಕ್ಷೇತ್ರ

ಜಾತಿ: ವೀರಶೈವ ಲಿಂಗಾಯತ

ವಯಸ್ಸು: 49

ಪಕ್ಷ: ಕಾಂಗ್ರೆಸ್‌

ವಿದ್ಯಾರ್ಹತೆ: ಎಂಬಿಬಿಎಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry