ಖಾತೆ ಮುಖ್ಯವಲ್ಲ; ಕಾಳಜಿ ಮುಖ್ಯ

7

ಖಾತೆ ಮುಖ್ಯವಲ್ಲ; ಕಾಳಜಿ ಮುಖ್ಯ

Published:
Updated:
ಖಾತೆ ಮುಖ್ಯವಲ್ಲ; ಕಾಳಜಿ ಮುಖ್ಯ

ತುಮಕೂರು: ‘ಜನಸೇವೆಗೆ ಕಾಳಜಿ ಮುಖ್ಯವೇ ಹೊರತು ಖಾತೆಯಲ್ಲ’ –ಹೀಗೆಂದವರು ಮಾಜಿ ಸಚಿವ ವೀರಣ್ಣ.

ಮಹತ್ವದ ಮತ್ತು ತೂಕದ ಖಾತೆಗಾಗಿ ಹಗ್ಗ ಜಗ್ಗಾಟ, ಮುಸುಕಿನ ಗುದ್ದಾಟ ನಡೆದಿರುವ ಈಗಿನ ದಿನಮಾನಗಳಲ್ಲಿ ಮೂರು ದಶಕಗಳ ಹಿಂದೆ ತಮಗೆ ಸಿಕ್ಕ ‘ಸಣ್ಣ’ ಖಾತೆಯನ್ನೇ ಅತ್ಯುತ್ತಮವಾಗಿ ನಿರ್ವಹಿಸಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಂದ ಶಹಬ್ಬಾಸ್‌ ಪಡೆದವರು ವೀರಣ್ಣ.

ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ 1983 ಮತ್ತು 85ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಅವರು 85ರಲ್ಲಿ ಹೆಗಡೆ ಸಂಪುಟದಲ್ಲಿ ರಾಜ್ಯ ಸಚಿವರಾದರು. ಆಗ ಅವರಿಗೆ ಸಿಕ್ಕ ಖಾತೆ ಸಣ್ಣ ಉಳಿತಾಯ.

80ರ ದಶಕದಲ್ಲಿ ರಾಜ್ಯ ಬಜೆಟ್‌ನ ಗಾತ್ರ ₹ 500 ಕೋಟಿಯಿಂದ ₹700 ಕೋಟಿಗಳಷ್ಟಿತ್ತು. ಆಗ ವೀರಣ್ಣ ಅವರು ಅಧಿಕಾರಿಗಳನ್ನು ಹುರಿದುಂಬಿಸಿ ಸಣ್ಣ ಉಳಿತಾಯದ ರೂಪದಲ್ಲಿ ನೂರಾರು ಕೋಟಿ ರೂಪಾಯಿ ಠೇವಣಿ ಸಂಗ್ರಹ ಕಾರ್ಯದಲ್ಲಿ ಯಶಸ್ಸು ಸಾಧಿಸಿದರು.

ಅಂಚೆ ಇಲಾಖೆಯ ಉಳಿತಾಯ ಪತ್ರಗಳ ಮಾರಾಟದಲ್ಲಿ 1986– 87ರ ಸಾಲಿನಲ್ಲಿ ಗುರಿ ಮೀರಿದ ಸಾಧನೆಗಾಗಿ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ₹ 11 ಕೋಟಿ ನಗದು ಪುರಸ್ಕಾರ ಲಭಿಸಿತು.

ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ ಜತೆ ಮಾತನಾಡಿದ ವೀರಣ್ಣ ಅವರು, ಆಗಿನ ದಿನಗಳನ್ನು ಮೆಲುಕು ಹಾಕಿದರು.

‘ಆಗ ನೌಕರರಿಗೆ ಸಂಬಳ ಕೊಡಲಾಗದಷ್ಟು ಆರ್ಥಿಕ ಪರಿಸ್ಥಿತಿ ಕೆಟ್ಟಿತ್ತು. ಅಂಚೆ ಉಳಿತಾಯ ಪತ್ರಗಳ ಮೂಲಕ ನಾವು ಎಷ್ಟು ಠೇವಣಿ ಸಂಗ್ರಹಿಸುತ್ತಿದ್ದೇವೆಯೋ ಅದರ ಶೇ 70ರಷ್ಟು ಹಣವನ್ನು ಕೇಂದ್ರ ಸರ್ಕಾರ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ರಾಜ್ಯಕ್ಕೆ ಸಾಲವಾಗಿ ನೀಡುತ್ತಿತ್ತು. ಇದರಿಂದ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಗೆ ನೆರವಾಯಿತು. ಈ ಸಾಧನೆ ಮಾಡಿದ್ದಕ್ಕಾಗಿ ರಾಮಕೃಷ್ಣ ಹೆಗಡೆ ತಮ್ಮ ಬಜೆಟ್‌ ಭಾಷಣದಲ್ಲಿಯೇ ನನ್ನನ್ನು ಪ್ರಶಂಸಿಸಿದರು’ ಎಂದು ಅವರು ಹೇಳಿದರು.

‘ನಾನು ಅತ್ಯಂತ ಬಡ ಕುಟುಂಬದಿಂದ ಬಂದವನು. ಬೇರೆಯವರ ಮನೆಗೆ ಜೀತಕ್ಕೆ ಹೋಗಲಿಲ್ಲ ಎಂದು ನನ್ನ ತಾಯಿ ಉರಿಯುವ ಕೊಳ್ಳಿಯಿಂದ ನನ್ನ ಕಾಲಿಗೆ ತಿವಿದಿದ್ದರು. ಹಟದಿಂದ ಓದಿ, ವಕೀಲನಾದೆ. ಶಾಸಕನಾಗಿ, ಸಚಿವನಾಗಿ ನನಗನಿಸಿದ್ದು ಇಷ್ಟೇ. ಜನರ ಸೇವೆ ಮಾಡಲು ದೇವರು ಈ ಅವಕಾಶ ಕೊಟ್ಟಿದ್ದಾನೆ. ಆ ಬದ್ಧತೆಯಿಂದ ಕೆಲಸ ಮಾಡಿದೆ’ ಎಂದು ಅವರು ನುಡಿದರು.

1989 ಮತ್ತು ನಂತರದ ಮೂರು ಚುನಾವಣೆಗಳಲ್ಲಿ ಅವರು ಸತತ ಸೋಲು ಅನುಭವಿಸಿದರು. ಕ್ಷೇತ್ರ ಪುನರ್‌ವಿಂಗಡಣೆಯಿಂದಾಗಿ 2008ರಲ್ಲಿ ಕೊರಟಗೆರೆ ಮೀಸಲು ಕ್ಷೇತ್ರವಾಗಿದ್ದರಿಂದ ಅವರು ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry