ಇತಿಹಾಸ ರಚನೆಗೆ ಚಿನ್ನಸ್ವಾಮಿ ಅಂಗಳ ಸಜ್ಜು

7
ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿರುವ ಅಫ್ಗಾನಿಸ್ತಾನ; ಭಾರತ ತಂಡಕ್ಕೆ ರಹಾನೆ ನಾಯಕ

ಇತಿಹಾಸ ರಚನೆಗೆ ಚಿನ್ನಸ್ವಾಮಿ ಅಂಗಳ ಸಜ್ಜು

Published:
Updated:
ಇತಿಹಾಸ ರಚನೆಗೆ ಚಿನ್ನಸ್ವಾಮಿ ಅಂಗಳ ಸಜ್ಜು

ಬೆಂಗಳೂರು: ಜಗತ್ತಿನ ಬಹುತೇಕ ಕ್ರೀಡಾಪ್ರೇಮಿಗಳ ಚಿತ್ತವೆಲ್ಲ ಈಗ ರಷ್ಯಾದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಫುಟ್‌ಬಾಲ್‌ ಟೂರ್ನಿಯತ್ತ ನೆಟ್ಟಿದೆ. ಇತ್ತ ಬೆಂಗಳೂರಿನಲ್ಲಿ ಕ್ರಿಕೆಟ್‌ಪ್ರಿಯರು ‘ಐತಿಹಾಸಿಕ ಪಂದ್ಯ’ವೊಂದಕ್ಕೆ ಸಾಕ್ಷಿಯಾಗಲು ಸಿದ್ಧರಾಗಿದ್ದಾರೆ.

ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಗಾನಿಸ್ತಾನ ತಂಡವು ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದೆ. ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡವನ್ನು ಅಫ್ಗನ್ ಪಡೆ ಎದುರಿಸಲಿದೆ. ಇಲ್ಲಿ ಎರಡೂ ತಂಡಗಳ ಅಂಕಿ ಆಂಶಗಳು ಅಜಗಜಾಂತರ ಅಂತರ ಹೊಂದಿವೆ. ಆದರೆ ಅದಕ್ಕೆ ಇಲ್ಲಿ ಮಹತ್ವ ಕಡಿಮೆ.

ಭಯೋತ್ಪಾದನೆ, ಯುದ್ಧಗಳ  ಹಗೆ–ಹೊಗೆಗಳಿಂದ ದೂರ ಅಫ್ಗನ್ ದೇಶದ ಹೊಸ ಯುವಪಡೆಯನ್ನು  ಶ್ರೇಷ್ಠ ನಾಗರಿಕರನ್ನಾಗಿ ಬೆಳೆಸಲು ಕ್ರಿಕೆಟ್‌ ವೇದಿಕೆಯಾಗಿದೆ. ಅದಕ್ಕೆ ಒತ್ತಾಸೆಯಾಗಿ ಭಾರತ ನಿಂತಿರುವುದು ವಿಶೇಷ.

ಕ್ರಿಕೆಟ್‌ ಮೈದಾನಗಳೇ ಇಲ್ಲದ ದೇಶದಿಂದ ಬಂದಿರುವ ಈ ಆಟಗಾರರು ಈಗಾಗಲೇ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ ಮಾದರಿಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಲೆಗ್‌ಸ್ಪಿನ್ನರ್ ರಶೀದ್ ಖಾನ್, ಚಿಗುರುಮೀಸೆಯ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಲ್ಲಿ ಮಿಂಚುವ ಮೂಲಕ ಇಲ್ಲಿಯ ಕ್ರಿಕೆಟ್‌ಪ್ರೇಮಿಗಳ ಕಣ್ಮಣಿಗಳಾಗಿದ್ದಾರೆ.

(ನೆಟ್ಸ್‌ನಲ್ಲಿ ಕೆ.ಎಲ್. ರಾಹುಲ್ ಅಭ್ಯಾಸ ಪ್ರಜಾವಾಣಿ ಚಿತ್ರ/ ಆರ್. ಶ್ರೀಕಂಠ ಶರ್ಮಾ)

ಯುದ್ಧದ ಭೀಕರತೆಯನ್ನು ಕಂಡು ಬೆಳೆದು, ಕ್ರಿಕೆಟ್‌ನಿಂದ ಹೊಸ ಜೀವನ ಕಂಡುಕೊಂಡಿರುವ ಬ್ಯಾಟ್ಸ್‌ಮನ್‌ ಅಸ್ಗರ್ ಸ್ಥಾನಿಕ್ ಜಾಯ್, ಮೊಹಮ್ಮದ್ ಶಹಜಾದ್, ಅಮಿರ್ ಹಮ್ಜಾ ಸೇರಿದಂತೆ ತಂಡದ ಎಲ್ಲರೂ ಟೆಸ್ಟ್‌ ಕ್ರಿಕೆಟ್‌ ಜಗತ್ತಿಗೆ ಪ್ರವೇಶಿಸುತ್ತಿದ್ದಾರೆ.ವೆಸ್ಟ್‌ ಇಂಡೀಸ್‌ನ ಫಿಲ್ ಸಿಮನ್ಸ್‌ ಅವರ ಮಾರ್ಗದರ್ಶನ ತಂಡಕ್ಕೆ ಇದೆ. ಉತ್ತರಾಖಂಡದ ಡೆಹ್ರಾಡೂನ್‌ ಅಫ್ಗನ್ ತಂಡಕ್ಕೆ ತವರಿನ ಕ್ರೀಡಾಂಗಣವಾಗಿದೆ. ಅದರಿಂದ ಭಾರತದ ವಾತಾವರಣಕ್ಕೆ ಹೊಂದಿಕೊಳ್ಳುವುದು ದೊಡ್ಡ ಸವಾಲೇನಲ್ಲ. ಅದರಿಂದಲೇ ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಪುಟಿಯುತ್ತಿದೆ. ‘ಈ ದಿನಕ್ಕಾಗಿ ಹಲವು ವರ್ಷಗಳಿಂದ ಕಾದಿದ್ದೆ. ನಮ್ಮ ಪಾಲಿಗೆ ಇದು ಸುವರ್ಣ ಕಾಲ. ನಮ್ಮ ಸಾಮರ್ಥ್ಯ ಮೀರಿ ಆಡುತ್ತೇವೆ. ಗೆಲ್ಲುವ ಹುಮ್ಮಸ್ಸು ನಮ್ಮಲ್ಲಿದೆ’ ಎಂದು ನಾಯಕ ಅಸ್ಗರ್ ಹೇಳುತ್ತಾರೆ.

ಮುಂಗಾರು ಮಳೆಯಲ್ಲಿ ಮಿಂದಿ ರುವ ಅಂಗಳದಲ್ಲಿ ತಮ್ಮ  ಸ್ಪಿನ್ನರ್‌ಗಳ ಮೋಡಿ ನಡೆಯಲಿದೆ ಎಂಬ ವಿಶ್ವಾಸ ಅವರಲ್ಲಿದೆ. ಆತಿಥೇಯ ತಂಡದ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್, ಮುರಳಿ ವಿಜಯ್, ಕೆ.ಎಲ್. ರಾಹುಲ್, ರಹಾನೆ, ಚೇತೇಶ್ವರ್ ಪೂಜಾರ, ದಿನೇಶ್ ಕಾರ್ತಿಕ್ ಅವರನ್ನು ಕಟ್ಟಿಹಾಕುವುದು ಸುಲಭದ ಮಾತಲ್ಲ. ಮಧ್ಯಮವೇಗಿಗಳಾದ ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ, ಸ್ಪಿನ್ನರ್‌ಗಳಾದ ಆರ್. ಅಶ್ವಿನ್, ಕುಲದೀಪ್ ಯಾದವ್, ರವೀಂದ್ರ ಜಡೇಜ ಅವರ ದಾಳಿಯನ್ನು ಮೆಟ್ಟಿ ನಿಲ್ಲುವ ಸವಾಲು ಕೂಡ ಪ್ರವಾಸಿ ತಂಡದ ಮುಂದಿದೆ.

ಪಂದ್ಯದ ಫಲಿತಾಂಶ ಏನೇ ಆದರೂ, ಅಫ್ಗನ್ ತಂಡಕ್ಕೆ ಮಾತ್ರ ಇದೊಂದು ಹೊಸ ಅನುಭವ ಮತ್ತು ಪಾಠವಾಗಲಿದೆ. ಜೊತೆಗೆ ತಂಡದ ಭವಿಷ್ಯದ ಹಾದಿಗೆ ದೀವಟಿಗೆಯೂ ಆಗುವ ನಿರೀಕ್ಷೆ ಇದೆ.

ನಾಲ್ಕನೇ ತಂಡ ಅಫ್ಗನ್

ಐಸಿಸಿಯಿಂದ ಟೆಸ್ಟ್ ಮಾನ್ಯತೆ ಪಡೆದ ನಂತರ ಭಾರತದ ಎದುರು ತನ್ನ ಚೊಚ್ಚಲ ಪಂದ್ಯ ಆಡುವ ಅವಕಾಶ ಪಡೆದ ನಾಲ್ಕನೇ ತಂಡ ಅಫ್ಗಾನಿಸ್ತಾನ.

1982–83ರಲ್ಲಿ ಶ್ರೀಲಂಕಾ ತಂಡವು ಚೆನ್ನೈನಲ್ಲಿ ಭಾರತದ ಎದುರು ಆಡಿತ್ತು.  ಪಂದ್ಯವು ಡ್ರಾ ಆಗಿತ್ತು. !992–93ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ತಂಡವು ತನ್ನ ಮೊದಲ ಟೆಸ್ಟ್‌ ಪಂದ್ಯವನ್ನು ಭಾರತದ ಎದುರು ಆಡಿತ್ತು. ಆ ಪಂದ್ಯವೂ ಡ್ರಾ ಆಗಿತ್ತು.  2000ನೇ ಇಸವಿಯಲ್ಲಿ  ಬಾಂಗ್ಲಾ ದೇಶ ತಂಡವೂ ತನ್ನ ಮೊದಲ ಪಂದ್ಯವನ್ನು ಢಾಕಾದಲ್ಲಿ ಆಡಿತ್ತು.

22 ವರ್ಷಗಳ ನಿಷೇಧ ಆನುಭವಿಸಿದ್ದ ದಕ್ಷಿಣ ಆಫ್ರಿಕಾ ತಂಡವು 1992–93ರಲ್ಲಿ ಮರಳಿ ಟೆಸ್ಟ್‌ ಮಾನ್ಯತೆ ಪಡೆದಿತ್ತು. ಆಗ ತನ್ನ ಮೊದಲ ಪಂದ್ಯವನ್ನು ಭಾರತದ ಎದುರು ಆಡಿತ್ತು.

ತಂಡಗಳು ಇಂತಿವೆ

ಭಾರತ: ಅಜಿಂಕ್ಯ ರಹಾನೆ (ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಕರುಣ್ ನಾಯರ್, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ರವೀಂದ್ರ ಜಡೇಜ, ಇಶಾಂತ್ ಶರ್ಮಾ, ಉಮೇಶ್ ಯಾದವ್, ರವಿಶಾಸ್ತ್ರಿ (ಮುಖ್ಯ ಕೋಚ್), ಭರತ್ ಅರುಣ್ (ಬೌಲಿಂಗ್ ಕೋಚ್), ಸಂಜಯ್ ಬಂಗಾರ್ (ಬ್ಯಾಟಿಂಗ್ ಕೋಚ್).

ಅಫ್ಗಾನಿಸ್ತಾನ: ಅಸ್ಗರ್ ಸ್ಥಾನಿಕಜಾಯ್ (ನಾಯಕ), ಮೊಹಮ್ಮದ್ ಶೆಹಜಾದ್, ಜಾವೇದ್ ಅಹಮದಿ, ರೆಹಮತ್ ಶಾ, ನಾಸೀರ್ ಜಮಾಲ್, ಹಶಮುತ್‌ ಉಲ್ಲಾ ಶಾಹೀದಿ, ಮೊಹಮ್ಮದ್ ನಬಿ, ಅಫ್ಸರ್ ಝಜಾಯ್ (ವಿಕೆಟ್‌ಕೀಪರ್), ರಶೀದ್ ಖಾನ್, ಅಮಿರ್ ಹಮ್ಜಾ, ಜಹೀರ್ ಖಾನ್, ಯಾಮಿನ್ ಅಹಮದ್‌ಜಾಯ್, ವಫಾದಾರ್, ಮುಜೀಬ್ ಉರ್ ರೆಹಮಾನ್,  ಫಿಲ್ ಸಿಮನ್ಸ್‌ (ಮುಖ್ಯ ಕೋಚ್).

ಪಂದ್ಯ ಆರಂಭ: ಬೆಳಿಗ್ಗೆ 9.30

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

* ಅಫ್ಗಾನ್ ತಂಡವು ಐತಿಹಾಸಿಕ ಪಂದ್ಯ ಆಡುತ್ತಿದೆ. ಆ ತಂಡದಲ್ಲಿ ಉತ್ತಮ ಆಟಗಾರರು ಇದ್ದಾರೆ. ಆದ್ದರಿಂದ ಅವರನ್ನು ಹಗುರವಾಗಿ ಪರಿಗಣಿಸಿಲ್ಲ.

-ಅಜಿಂಕ್ಯ ರಹಾನೆ, ಭಾರತ ತಂಡದ ನಾಯಕ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತಂಡದಲ್ಲಿ ಇಲ್ಲ

ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಆಕರ್ಷಣೆ

ಬೆಂಗಳೂರಿನಲ್ಲಿ ಮಳೆ ಸುರಿಯುವ ನಿರೀಕ್ಷೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry