ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಸೀಮಿತ ಕಾಲಾವಕಾಶ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿ
Last Updated 13 ಜೂನ್ 2018, 20:35 IST
ಅಕ್ಷರ ಗಾತ್ರ

ಮುಂಬೈ: ಅಭಿವೃದ್ಧಿ ಹೊಂದಿದ ದೇಶವಾಗಲು ಭಾರತಕ್ಕೆ ಒಂದು ದಶಕದ ಕಾಲಾವಕಾಶ ಇದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಭಾರತವು ಸದ್ಯದ ಜನಸಂಖ್ಯೆ ನಿಯಂತ್ರಣದ ಪ್ರಯೋಜನ ಮತ್ತು ಆರ್ಥಿಕ ಬೆಳವಣಿಗೆಯ ಈ ಅವಕಾಶವನ್ನು 10 ವರ್ಷಗಳಲ್ಲಿ ಸದ್ಬಳಕೆ ಮಾಡಿಕೊಳ್ಳದಿದ್ದರೆ, ಅಭಿವೃದ್ಧಿಶೀಲ ದೇಶದ ಸ್ಥಾನಮಾನದಿಂದ ಅಭಿವೃದ್ಧಿ ಹೊಂದಿದ ದೇಶದ ಸ್ಥಾನಮಾನಕ್ಕೆ ಬಡ್ತಿ  ಪಡೆಯುವುದು ತುಂಬ ಕಠಿಣ ಸವಾಲಾ
ಗಲಿದೆ ಎಂದು ಬ್ಯಾಂಕ್‌ನ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.

ಅಭಿವೃದ್ಧಿ ಹೊಂದಿದ ದೇಶದ ಸ್ಥಾನಮಾನ ಪಡೆಯಲು ಭಾರತಕ್ಕೆ ಒಂದು ದಶಕದ ಸಮಯಾವಕಾಶ ಮಾತ್ರ ಇದೆ. ಇದನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ ಪ್ರವರ್ಧಮಾನಕ್ಕೆ ಬರುವ ಆರ್ಥಿಕತೆಯ ದೇಶಗಳ ಸಾಲಿನಲ್ಲಿಯೇ ಶಾಶ್ವತವಾಗಿ ಉಳಿಯಬೇಕಾಗುತ್ತದೆ. ಯೋಜನೆಗಳ ನೀತಿ ನಿರೂಪಕರ ಪಾಲಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಜನನ ಮತ್ತು ಮರಣ ಪ್ರಮಾಣ ಇಳಿಕೆಯ ಕಾರಣದಿಂದ ಸಮಾಜ ಮತ್ತು ಆರ್ಥಿಕತೆಗೆ ದೊರೆತಿರುವ ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ಈ ಅನುಕೂಲಕರ ಪರಿಸ್ಥಿತಿಯನ್ನು ಅತ್ಯಲ್ಪ ಅವಧಿಯಲ್ಲಿ ಸದ್ಬಳಕೆ ಮಾಡಿಕೊಳ್ಳದಿದ್ದರೆ ಇದು 2030ರ ವೇಳೆಗೆ ದೇಶಿ ಆರ್ಥಿಕತೆಗೆ ಪ್ರತಿಕೂಲವಾಗಿ ಪರಿಣಮಿಸಲಿದೆ.

ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಳ: ಯುವ ಜನರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಹೆಚ್ಚು ಒತ್ತು ನೀಡಬೇಕಾಗಿದೆ. ಜನಸಂಖ್ಯೆ ಪ್ರಮಾಣದಲ್ಲಿನ ಇಳಿಕೆಯ ಪ್ರಯೋಜನಗಳನ್ನು ಪಡೆಯಲು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಹಣ ಹೂಡಿಕೆ ಮಾಡಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ಜನಸಂಖ್ಯೆ ಹೆಚ್ಚಳ ದರವು ಎರಡು ದಶಕಗಳಲ್ಲಿ ಬಹುತೇಕ ಸ್ಥಿರಗೊಂಡಿದೆ. ಜನನ ಪ್ರಮಾಣವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಜನಸಂಖ್ಯೆ ಹೆಚ್ಚಳದಲ್ಲಿನ ನಿಧಾನ ಪ್ರಗತಿಯು ತಂದುಕೊಡುವ ಆದಾಯ ಹೆಚ್ಚಳದಿಂದ ಜನರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳ ಬದಲಿಗೆ ಖಾಸಗಿ ಶಾಲೆಗಳಿಗೆ ಸೇರಿಸಲು ಆದ್ಯತೆ ನೀಡುತ್ತಿದ್ದಾರೆ. ಜನಸಂಖ್ಯೆಯಲ್ಲಿನ ಬಹುಸಂಖ್ಯಾತರು ಈಗಲೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರಿ ಶಾಲೆಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.

ದೇಶದಾದ್ಯಂತ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣ ಸೌಲಭ್ಯ ವಿಸ್ತರಿಸುವ ಅಗತ್ಯ ಈಗ ಹೆಚ್ಚಿದೆ. ಇಂತಹ ಶಾಲೆಗಳ ಶೈಕ್ಷಣಿಕ ಸಾಧನೆ ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ವರದಿಯಲ್ಲಿ ಸೂಚಿಸಲಾಗಿದೆ.

ಖಾಸಗಿಯವರಿಗೆ ನೆರವು ಬೇಡ: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಖಾಸಗಿ ಶಾಲೆಗಳಿಗೆ ಸರ್ಕಾರ ನೀಡುವ ಅನುದಾನದ ನೆರವು ನಿಲ್ಲಿಸಬೇಕು. ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ ವೃದ್ಧಿಸಲು ಆ ಮೊತ್ತವನ್ನು ಬಳಸಿಕೊಳ್ಳಬೇಕು ಎಂದು ಎಸ್‌ಬಿಐ ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.

ಉತ್ತಮ ಕೊಠಡಿ, ಇಂಗ್ಲಿಷ್‌ ಮಾಧ್ಯಮದ ಬೋಧನೆ, ಶಿಕ್ಷಕರಿಗೆ ಉತ್ತಮ ಸಂಬಳ, ಜನಗಣತಿಯಂತಹ ಸೇವೆಗಳಿಗೆ ಅವರನ್ನು ಬಳಸದಿರುವುದು ಮತ್ತಿತರ ಸಲಹೆಗಳನ್ನೂ ನೀಡಲಾಗಿದೆ.

ನೀತಿ ನಿರೂಪಕರ ಪಾಲಿಗೆ ಎಚ್ಚರಿಕೆಯ ಗಂಟೆ

ಸರ್ಕಾರಿ ಶಾಲೆಗಳ ಶಿಕ್ಷಣ ಸೌಲಭ್ಯ ವಿಸ್ತರಣೆಗೆ ಒತ್ತು

ಆರ್‌ಟಿಇ: ಖಾಸಗಿ ಶಾಲೆಗಳಿಗೆ ಸರ್ಕಾರದ ಅನುದಾನ ಬೇಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT