ಕಾರ್ಯಕರ್ತರ ಸಂಭ್ರಮಕ್ಕೆ ಪಾರವಿಲ್ಲ

7

ಕಾರ್ಯಕರ್ತರ ಸಂಭ್ರಮಕ್ಕೆ ಪಾರವಿಲ್ಲ

Published:
Updated:
ಕಾರ್ಯಕರ್ತರ ಸಂಭ್ರಮಕ್ಕೆ ಪಾರವಿಲ್ಲ

ಬೆಂಗಳೂರು: ಬುಧವಾರ ಬಿಸಿಲಿನ ಝಳ ನಿಧಾನಕ್ಕೆ ಏರುತ್ತಿದ್ದಂತೆ, ಮತ ಎಣಿಕೆ ಕೇಂದ್ರದ ಬಳಿ ಗೆಲವು–ಸೋಲಿನ ಲೆಕ್ಕಾಚಾರದ ಕಾವು ಹೆಚ್ಚಾಗುತ್ತಿತ್ತು. ಫಲಿತಾಂಶಕ್ಕಾಗಿ ತುದಿಗಾಲಲ್ಲಿ ನಿಂತಿದ್ದ ಕಾರ್ಯಕರ್ತರೂ ಸಂಭ್ರಮ, ತಳಮಳದಲ್ಲಿ ಮುಳುಗೇಳುತ್ತಿದ್ದರು.

ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಕಂಡುಬಂದ ದೃಶ್ಯಗಳಿವು. ಮೊದಲಿಗೆ ನಡೆದ ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿಗೆ 4 ಹಾಗೂ ಕಾಂಗ್ರೆಸ್‌ಗೆ 1 ಮತ ಲಭಿಸಿತ್ತು. ಅಲ್ಲಿಯವರೆಗೆ ತಣ್ಣಗಿದ್ದ ಆವರಣಕ್ಕೆ ನಿಧಾನವಾಗಿ ಕಾರ್ಯಕರ್ತರು ಜಮಾಯಿಸತೊಡಗಿದರು.

ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಳ್ಳುವ ವೇಳೆಗೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೌಮ್ಯಾ ರೆಡ್ಡಿ ಅವರ ಮುನ್ನಡೆ ವಿಷಯ ಸಂಭ್ರಮಕ್ಕೆ ಕಾರಣವಾಯಿತು. ‘ಗೆಲ್ತಾರೆ, ಗೆಲ್ತಾರೆ ಸೌಮ್ಯಾ ರೆಡ್ಡಿ ಗೆಲ್ತಾರೆ’ ಎಂಬ ಘೋಷಣೆಗಳು ಆಗಲೇ ಮಾರ್ದನಿಸಿದವು.

427 ಮತಗಳ ಮುನ್ನಡೆಯಿಂದ ಪ್ರಾರಂಭವಾದ ಸೌಮ್ಯಾ ಅವರ ಗೆಲುವಿನ ಓಟ ಸಾಕಷ್ಟು ಏರುಪೇರುಗಳನ್ನು ಕಂಡಿತು. ನಾಲ್ಕನೇ ಸುತ್ತಿಗೆ 5 ಸಾವಿರ ತಲುಪಿದ್ದ ಮತಗಳ ಅಂತರ ಆರನೇ ಸುತ್ತಿಗೆ ಮತ್ತೆ ಸಾವಿರಕ್ಕೆ ಇಳಿಯಿತು. ಒಂಬತ್ತನೇ ಸುತ್ತಿನ ವೇಳೆಗೆ 15 ಸಾವಿರ ಮತಗಳ ಭಾರಿ ಮುನ್ನಡೆಯನ್ನು ಪಡೆದರು. ಆದರೆ, ಇದು ಮತ್ತೆ ಇಳಿಕೆ, ಕೇವಲ 2,889 ಮತಗಳ ಅಂತರಗಳಿಂದ ಪ್ರಯಾಸದ ಗೆಲುವು ಸಾಧಿಸಿದರು.

ಅಭ್ಯರ್ಥಿಗಳ ಈ ಮತಗಳ ಅಂತರದ ಹೊಯ್ದಾಟ ಕಾರ್ಯಕರ್ತರ ಸಂಭ್ರಮದ ಏರುಪೇರಿಗೂ ಕಾರಣವಾಗುತ್ತಿತ್ತು. ಮೊದಲಿನಿಂದಲೂ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿದ್ದರಿಂದ ಅವರ ಕಾರ್ಯಕರ್ತರಲ್ಲಿ ತುಸು ಹೆಚ್ಚೇ ಸಂತೋಷ ಮನೆಮಾಡಿತ್ತು. ಇದೆಲ್ಲವನ್ನು ಮೌನವಾಗಿ ವೀಕ್ಷಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಅಂತರ ಕಡಿಮೆಯಾದ ಕ್ಷಣದಲ್ಲಿ ಒಮ್ಮೆ ಜಯಘೋಷ ಕೂಗಿ, ಗಪ್‌ಚುಪ್‌ ಆದರು.

ಮತ ಕೇಂದ್ರದ 200 ಮೀಟರ್‌ ಅಂತರದಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿತ್ತು. ನಡು ರಸ್ತೆಯಲ್ಲಿಯೇ ನಿಂತು ಸಂಭ್ರಮಿಸುತ್ತಿದ್ದ ನೂರಾರು ಕಾರ್ಯಕರ್ತರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಅವರನ್ನು ನಿಭಾಯಿಸಲು ಪೊಲೀಸರು ಹರಸಾಹಸಪಟ್ಟರು. ಸಾಧ್ಯವಾಗದಾಗ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಯಿತು.

ಗಮನಸೆಳೆದ ಘೋಷಣೆಗಳು: ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕುತ್ತಲೇ ತರಹೇವಾರಿ ಘೋಷಣೆಗಳನ್ನು ಕೂಗುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಎಲ್ಲರ ಗಮನ ಸೆಳೆದರು.

ಕನ್ನಡ, ಹಿಂದಿ ಭಾಷೆಯನ್ನು ಮಿಶ್ರಣಗೊಳಿಸಿ ‘ಜೀತೇಗಪ್ಪ ಜೀತೇಗ ಸೌಮ್ಯಾ ರೆಡ್ಡಿ ಜೀತೇಗ’ ಎನ್ನುತ್ತಿದ್ದದ್ದು ಹಲವರ ಮೊಗದಲ್ಲಿ ನಗು ತರಿಸಿತ್ತು. ‘ಗೆದ್ದರು ಗೆದ್ದರು ಸೌಮ್ಯಾ ರೆಡ್ಡಿ ಗೆದ್ದರು’, ‘ಬರ್ತಾರೆ ಬರ್ತಾರೆ ಸೌಮ್ಯಾ ರೆಡ್ಡಿ ಬರ್ತಾರೆ’ ಎಂಬೆಲ್ಲಾ ಘೋಷಣೆಗಳು ಕೇಳಿಬಂದವು.

ರವಿಕೃಷ್ಣಾ ರೆಡ್ಡಿ ಬೇಸರದ ನುಡಿಗಳು!

ಮತಗಳನ್ನು ಕುರಿತು ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ, ‘ಆಘಾತಕಾರಿ ಚುನಾವಣಾ ಫಲಿತಾಂಶದ ಕಾರಣದ (ಸೋತಿದ್ದರ ಬಗ್ಗೆ ಅಲ್ಲ, ಪಡೆದ ನಗಣ್ಯ ಮತಗಳ ವಿಚಾರದಲ್ಲಿ) ಬಿಟಿಎಂ ಬಡಾವಣೆ ಮತ್ತು ಜಯನಗರ ಎರಡೂ ಕ್ಷೇತ್ರದ ಮತದಾರರಲ್ಲಿ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.

‘ಕಳೆದ ಚುನಾವಣೆಯಲ್ಲಿ ನಾನು ಯಾರೆಂದು ಗೊತ್ತಿಲ್ಲದಿದ್ದಾಗಲೇ ಬಿಟಿಎಂ ಕ್ಷೇತ್ರದ ಜನ 6 ಸಾವಿರ ಮತಗಳನ್ನು ನೀಡಿದ್ದರು. ಈ ಬಾರಿ ಅಲ್ಲಿಯೇ ಇನ್ನಷ್ಟು ಪ್ರಯತ್ನಿಸಿದ್ದರೆ, ನಮ್ಮ ಗೌರವ, ಘನತೆ ಉಳಿಯುತ್ತಿತ್ತು. ಜಯನಗರ ಕ್ಷೇತ್ರದಲ್ಲಿ ಇಷ್ಟು ಕಡಿಮೆ ಮತ ಸಿಗುತ್ತದೆ ಎಂದು ಊಹಿಸಿರಲಿಲ್ಲ. ಇದು ನಮ್ಮ ಆಶಾವಾದವನ್ನು ದೊಡ್ಡ ಮಟ್ಟದಲ್ಲಿ ಸೋಲಿಸಿದೆ ಹಾಗೂ ಸಾಯಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ವಾರ್ಡ್‌ವಾರು ಮುನ್ನಡೆ

ವಾರ್ಡ್‌;ಬಿಜೆಪಿ;ಕಾಂಗ್ರೆಸ್‌;ಮುನ್ನಡೆ

ಜೆ.ಪಿ.ನಗರ;8492;4984;3508

ಸಾರಕ್ಕಿ;9097;4490;5607

ಶಾಕಾಂಬರಿ ನಗರ;9637;3555;6087

ಪಟ್ಟಾಭಿರಾಮನಗರ;9538;4282;5256

ಭೈರಸಂದ್ರ;6595;9809;3214

ಜಯನಗರ ಪೂರ್ವ;5523;7777;2254

ಗುರಪ್ಪನ ಪಾಳ್ಯ;2710;19560;16850

****

ಈ ಕ್ಷೇತ್ರದಲ್ಲಿ ಬೇರೆಯವರು ಟಿಕೆಟ್ ಆಕಾಂಕ್ಷಿಗಳಿದ್ದರು. ಹಾಗಾಗಿ ಗೆಲುವು ನನ್ನ ಮಗಳಿಗೆ ಅನಿವಾರ್ಯವಾಗಿತ್ತು. ಅಂತರ ಕಡಿಮೆಯಿದ್ದರೂ ಗೆದ್ದೆವಲ್ಲ

ರಾಮಲಿಂಗಾ ರೆಡ್ಡಿ, ಶಾಸಕ

ಬೆಂಗಳೂರಿನಲ್ಲಿ ಮಹಿಳಾ ಶಾಸಕಿಯರು ಇರಲಿಲ್ಲ. ಮಹಿಳಾ ಸಬಲೀಕರಣದ ಕುರಿತು ಅಭಿವೃದ್ಧಿ ಪರ ಕೆಲಸ ಮಾಡುತ್ತೇನೆ. ಜಯನಗರ ಅಭಿವೃದ್ಧಿಯಷ್ಟೇ ನನ್ನ ಉದ್ದೇಶ

-ಸೌಮ್ಯಾ ರೆಡ್ಡಿ,

 

ಜನರು ಮಾಡುವ ನಿರ್ಣಯವೇ ಅಂತಿಮ. ಸೋಲು ಕಂಡಿದ್ದರೂ ಕಡಿಮೆ ಮತಗಳು ಬಂದಿಲ್ಲ. ತೋಳುಬಲ, ಹಣಬಲ, ಅಧಿಕಾರ ದುರುಪಯೋಗವಿಲ್ಲದೆ ಗೆದ್ದಿದ್ದೇವೆ

–ಬಿ.ಎನ್‌.ಪ್ರಹ್ಲಾದ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry