ಅಣೆಕಟ್ಟು ಸುರಕ್ಷತಾ ಮಸೂದೆಗೆ ಕೇಂದ್ರ ಒಪ್ಪಿಗೆ

7
ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

ಅಣೆಕಟ್ಟು ಸುರಕ್ಷತಾ ಮಸೂದೆಗೆ ಕೇಂದ್ರ ಒಪ್ಪಿಗೆ

Published:
Updated:
ಅಣೆಕಟ್ಟು ಸುರಕ್ಷತಾ ಮಸೂದೆಗೆ ಕೇಂದ್ರ ಒಪ್ಪಿಗೆ

ನವದೆಹಲಿ (ಪಿಟಿಐ): ಅಣೆಕಟ್ಟು ಸುರಕ್ಷತಾ ಮಸೂದೆ–2018ಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಮಸೂದೆಯು ಕಾಯ್ದೆಯಾದಲ್ಲಿ, ದೇಶದ ಎಲ್ಲಾ ಅಣೆಕಟ್ಟುಗಳಿಗೆ ಏಕರೀತಿಯ ಭದ್ರತೆಯನ್ನು ಕಲ್ಪಿಸಬೇಕಾಗುತ್ತದೆ.

‘ಅಣೆಕಟ್ಟುಗಳ ಸುರಕ್ಷತೆಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ತಜ್ಞರ ಸಮಿತಿಯೊಂದನ್ನು ರಚಿಸಲು ಮಸೂದೆ ಅವಕಾಶ ಮಾಡಿಕೊಡುತ್ತದೆ. ಆ ಸಮಿತಿಯು ನಿಯಮಾವಳಿಗಳನ್ನು ರೂಪಿಸಲಿದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಧೀನದಲ್ಲಿರುವ ಅಣೆಕಟ್ಟುಗಳ ರಕ್ಷಣೆಗೆ ಆ ನಿಯಮಾವಳಿಗಳನ್ನು ಅನುಸರಿಸಬೇಕಾಗುತ್ತದೆ’ ಎಂದು ಕೇಂದ್ರ ಹಣಕಾಸು ಸಚಿವ ಪೀಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.

‘ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ ರಚನೆಗೂ ಈ ಮಸೂದೆ ಅವಕಾಶ ಮಾಡಿಕೊಡಲಿದೆ. ಸುರಕ್ಷತಾ ನಿಯಮಗಳ ಅನುಷ್ಠಾನದ ಮೇಲ್ವಿಚಾರಣೆಯನ್ನು ಈ ಪ್ರಾಧಿಕಾರ ನಡೆಸಲಿದೆ. ಜತೆಗೆ ಎರಡು ರಾಜ್ಯಗಳಲ್ಲಿ ಹಂಚಿ ಹೋಗಿರುವ ಅಣೆಕಟ್ಟುಗಳಿದ್ದರೆ, ಅದರ ರಕ್ಷಣೆಯ ಜವಾಬ್ದಾರಿ ಯಾರದ್ದು ಎಂಬುದನ್ನೂ ಈ ಪ್ರಾಧಿಕಾರ ನಿರ್ಧರಿಸಲಿದೆ’ ಎಂದು ಅವರು ವಿವರಿಸಿದ್ದಾರೆ. ದೇಶದಲ್ಲಿ 5,200 ಬೃಹತ್ ಅಣೆಕಟ್ಟುಗಳಿವೆ. 450 ಬೃಹತ್ ಅಣೆಕಟ್ಟುಗಳ ನಿರ್ಮಾಣ ಪ್ರಗತಿಯಲ್ಲಿದೆ.

ಎಚ್‌ಡಿಎಫ್‌ಸಿ ಗೆ ₹ 24,000 ಕೋಟಿ ಎಫ್‌ಡಿಐ:  ವಿದೇಶಿ ನೇರ ಬಂಡವಾಳದ (ಎಫ್‌ಡಿಐ) ಮೂಲಕ ₹ 24,000 ಕೋಟಿ ಸಂಗ್ರಹಿಸಲು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಸಂಪುಟ ಒಪ್ಪಿಗೆ ನೀಡಿದೆ. ಬ್ಯಾಂಕ್‌ಗಳು ತಮ್ಮ ಒಟ್ಟು ಬಂಡವಾಳದ ಶೇ 74ರಷ್ಟನ್ನು ಮಾತ್ರ ಎಫ್‌ಡಿಐ ಮೂಲಕ ಸಂಗ್ರಹಿಸಲು ಅವಕಾಶವಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಈಗಾಗಲೇ ಶೇ 72.62ರಷ್ಟು ಎಫ್‌ಡಿಐ ಹೊಂದಿದೆ. ಮತ್ತೆ ಬಂಡವಾಳ ಕ್ರೋಡೀಕರಿಸಲು ಅವಕಾಶ ನೀಡಿರುವುದರಿಂದ ಅದರ ಎಫ್‌ಡಿಐ ಪ್ರಮಾಣ ಶೇ 74ರಷ್ಟು ಆಗಲಿದೆ.

ಪ್ರಗತಿ ಮೈದಾನದಲ್ಲಿ ಹೋಟೆಲ್

ದೆಹಲಿಯ ಪ್ರಗತಿ ಮೈದಾನದಲ್ಲಿ ಖಾಸಗಿ ಹೋಟೆಲ್ ನಿರ್ಮಿಸಲು ಕೇಂದ್ರ ಸಂಪುಟವು ಒಪ್ಪಿಗೆ ನೀಡಿದೆ. ಮೈದಾನದ 3.7 ಎಕರೆಯಷ್ಟು ಜಮೀನನ್ನು 99 ವರ್ಷಗಳವರೆಗೆ ಭೋಗ್ಯಕ್ಕೆ ನೀಡಲಾಗುತ್ತದೆ. ಖಾಸಗಿ ಸಂಸ್ಥೆ ಹೋಟೆಲ್ ನಿರ್ಮಿಸಲಿದೆ. ‌

‌ಭೋಗ್ಯದಿಂದ ಬರುವ ಆದಾಯವನ್ನು ಪ್ರಗತಿ ಮೈದಾನದಲ್ಲಿ ವಸ್ತು ಪ್ರದರ್ಶನ ಕೇಂದ್ರ ನಿರ್ಮಿಸಲು ಬಳಸಲಾಗುತ್ತದೆ. ಪ್ರಗತಿ ಮೈದಾನದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳು ನಡೆಯುತ್ತವೆ. ಹೀಗಾಗಿ ಅದೇ ಸ್ಥಳದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸೇವೆ ನೀಡುವ ಹೋಟೆಲ್‌ ಅವಶ್ಯಕತೆ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ.

* ದೇಶದಲ್ಲಿ ಏಳು ಸಾವಿರಕ್ಕೂ ಹೆಚ್ಚು ಬೃಹತ್ ಮತ್ತು ಸಣ್ಣ ಅಣೆಕಟ್ಟುಗಳಿವೆ. ಅಗತ್ಯ ನಿಯಮಗಳು ಇಲ್ಲದ ಕಾರಣ ಅವುಗಳ ರಕ್ಷಣೆ ದೊಡ್ಡ ಸಮಸ್ಯೆಯಾಗಿದೆ

–ಪೀಯೂಷ್ ಗೋಯಲ್, ಕೇಂದ್ರ ಸಚಿವ

ಅಣೆಕಟ್ಟುಗಳ ಸುರಕ್ಷತೆಗೆ ಏಕರೀತಿಯ ನಿಯಮ–ವ್ಯವಸ್ಥೆ ಜಾರಿಯಾಗಲಿದೆ

ರಾಜ್ಯ ಸರ್ಕಾರಗಳಿಗೆ ಅವುಗಳ ವ್ಯಾಪ್ತಿಯ ಅಣೆಕಟ್ಟುಗಳ ಭದ್ರತೆ ಹೊಣೆ

ಭದ್ರತಾ ವ್ಯವಸ್ಥೆ ಮೇಲ್ವಿಚಾರಣೆಗೆ ರಾಷ್ಟ್ರೀಯ ಮಟ್ಟದ ಪ್ರಾಧಿಕಾರ ರಚನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry